ನರೇಂದ್ರ ನಾಯಕ್ ಹಾಗೂ ಅವರಿಗೆ ಕುಮ್ಮಕ್ಕು ಕೊಡುವವರು ನನ್ನ ತೇಜೋವಧೆ ನಿಲ್ಲಿಸಬೇಕು….
ಸಾಮಾನ್ಯವಾಗಿ ನಾನು ಸುದ್ದಿಗೋಷ್ಟಿ ಮಾಡುವುದಿಲ್ಲ. ಏನಾದರೂ ವಿವಾದದ ವಿಷಯಗಳು ಇದ್ದರೆ ಚಾನೆಲ್ ನ ವರದಿಗಾರ ಮಿತ್ರರು ಕರೆ ಮಾಡಿ ಇಂತಿಂತಹ ವಿಷಯಗಳಲ್ಲಿ ಮಾತನಾಡಬಹುದಾ ಎಂದು ಕೇಳುತ್ತಾರೆ. ನನಗೆ ಗೊತ್ತಿರುವ ಸಬ್ಜೆಕ್ಟ್ ಆದರೆ ಆಯಿತು ಎನ್ನುತ್ತೇನೆ. ಅವರು ಬಂದು ನನ್ನ ಬೈಟ್ ತೆಗೆದುಕೊಂಡು ಹೋಗುತ್ತಾರೆ. ಕೆಲವು ವಿಷಯಗಳ ಮೇಲೆ ವಿಶೇಷ ಸುದ್ದಿಗಳನ್ನು ಬರೆಯುವಾಗ ಮಾಹಿತಿ ಅಗತ್ಯ ಬಿದ್ದರೆ ಪತ್ರಿಕಾ ಮಿತ್ರರು ಫೋನ್ ಮಾಡಿ ಮಾಹಿತಿ ಕೇಳುವುದು, ದಾಖಲೆ ತೆಗೆದುಕೊಂಡು ಹೋಗುವುದು ನಡೆದೇ ಇರುತ್ತದೆ. ಆದ್ದರಿಂದ ನಾನಾಗಿಯೇ ಸುದ್ದಿಗೋಷ್ಟಿ ಮಾಡುವ ಅಗತ್ಯ ಬೀಳುವುದು ಅಪರೂಪದಲ್ಲಿ ಅಪರೂಪ. ಆದರೆ ಈ ಬಾರಿ ಮಾಡಲೇಬೇಕಾದ ಅನಿವಾರ್ಯತೆ ಬಂತು. ಒಬ್ಬ ವ್ಯಕ್ತಿ ಯಾವುದೋ ಕೇಸಿನಲ್ಲಿ ನೀವು ಇಲ್ಲ ಎಂದು ಗೊತ್ತಿದ್ದ ಮೇಲೆಯೂ ನಿಮ್ಮ ಮೇಲೆ ಆರೋಪ ಮಾಡುತ್ತಾ ನಿಮ್ಮನ್ನು ಅನಾವಶ್ಯಕವಾಗಿ ಕೆಣಕುತ್ತಾ ಇರುವಾಗ ಅದಕ್ಕೆ ಸಾಕ್ಷ್ಯಾಧಾರಗಳ ಸಹಿತ ಉತ್ತರ ಕೊಡುವುದು ಅನಿವಾರ್ಯವಾಗುತ್ತದೆ. ಹಾಗೆ ಮೊನ್ನೆ ಸೋಮವಾರ ಬೆಳಿಗ್ಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಮಾಡಿದೆ. ವಿಷಯ ಇದ್ದದ್ದು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ನನ್ನನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಎಳೆದದ್ದು.
ಕೊಡಿಯಾಲ್ ಬೈಲ್ ಸ್ಟರ್ಲಿಂಗ್ ಚೆಂಬರ್ಸ್ ಪಕ್ಕದ ರಸ್ತೆಯ ನಿವಾಸಿ ವಿನಾಯಕ ಬಾಳಿಗಾ ನನ್ನ ಸ್ನೇಹಿತರು. ಅವರಿಗೆ ಆರ್ ಟಿ ಐ ನಲ್ಲಿ ಏನಾದರೂ ಮಾಹಿತಿ ತೆಗೆಯಬೇಕು ಎಂದು ಅನಿಸಿದಾಗ ನನ್ನ ಬಳಿ ಬಂದು ಚರ್ಚಿಸುತ್ತಿದ್ದರು. ಅವರು ಆರಂಭದಲ್ಲಿ ಮಾಹಿತಿ ಹಕ್ಕಿಗೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ನನ್ನಿಂದಲೇ ತಿಳಿದುಕೊಂಡಿದ್ದರು. ನಂತರ ಹಲವು ಸಂಘಸಂಸ್ಥೆಗಳ ವಿರುದ್ಧ ಅವರು ಮಾಹಿತಿ ಹಕ್ಕನ್ನು ಚಲಾಯಿಸಿದ್ದರು. 2016, ಮಾರ್ಚ್ 21 ರಂದು ಬೆಳಿಗ್ಗೆ ಅವರ ಕೊಲೆಯಾಗಿದೆ. ನನಗೆ ಈ ಬಗ್ಗೆ ತುಂಬಾ ಬೇಸರವಿದೆ.
ಮೊನ್ನೆ ಮಾರ್ಚ್ 21, 2018 ಕ್ಕೆ ವಿನಾಯಕ ಬಾಳಿಗಾ ಅವರ ಕೊಲೆಯಾಗಿ ಎರಡು ವರ್ಷಗಳಾಗಿವೆ. ಪೊಲೀಸರು ಈಗಾಗಲೇ ಏಳು ಮಂದಿಯನ್ನು ಆರೋಪಿಗಳೆಂದು ಗುರುತಿಸಿ ಬಂಧಿಸಿದ್ದಾರೆ. ಆರೋಪಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿ ಕಾನೂನು ಪ್ರಕ್ರಿಯೆ ಅಡಿಯಲ್ಲಿ ಜಾಮೀನು ನೀಡಿದೆ. ಪೊಲೀಸ್ ಇಲಾಖೆಪ್ರಕರಣದ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು (ಚಾರ್ಜ್ ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರ ಕೆಲವು ತಿಂಗಳ ಬಳಿ ಪೊಲೀಸ್ ಅಧಿಕಾರಿಗಳು ಪೂರಕ ದೋಷಾರೋಪಣ ಪಟ್ಟಿ ( ಹೆಚ್ಚುವರಿ ಚಾರ್ಜ್ ಶೀಟ್) ಕೂಡ ಸಲ್ಲಿಸಿದ್ದಾರೆ.
ವಿಚಾರವಾದಿ ಪ್ರೋ| ನರೇಂದ್ರ ನಾಯಕ್ ನೇತೃತ್ವದಲ್ಲಿ ಮತ್ತು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ವಿನಾಯಕ ಬಾಳಿಗಾ ಮನೆಯವರು ಆಗ ಪೊಲೀಸ್ ಕಮೀಷನರ್ ಆಗಿದ್ದ ಚಂದ್ರಶೇಖರ್ ಅವರನ್ನು ಭೇಟಿಯಾಗಿ ಸಮರ್ಪಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹೂಗುಚ್ಚ ಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ. ಅದರ ನಂತರ ವಿನಾಯಕ ಬಾಳಿಗಾ ಮನೆಯವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರನ್ನು ಯಾರದ್ದೋ ಕುಮ್ಮಕ್ಕಿನ ಮೇಲೆ ದುರುದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ. ಅದನ್ನು ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಗಮನಿಸಿದ್ದಾರೆ. ನನ್ನನ್ನು ಕೂಡ ಈ ಪ್ರಕರಣದಲ್ಲಿ ಸಿಲುಕಿಸಿ ತೇಜೊವಧೆ ಮಾಡುವ ಪ್ರಯತ್ನ ನಡೆದಿದೆ.
ನರೇಶ್ ಶೆಣೈ ಮತ್ತು ನನ್ನ ಗೆಳೆತನ ನಿನ್ನೆ ಮೊನ್ನೆಯದ್ದಲ್ಲ…
ನನಗೂ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನರೇಶ್ ಶೆಣೈ ಅವರಿಗೂ ಸುಮರು 25 ವರ್ಷಗಳ ಸ್ನೇಹ. ಒಬ್ಬ ವ್ಯಕ್ತಿಯ ಮೇಲೆ ಆರೋಪ ಬಂತು ಎಂದ ಕೂಡಲೇ ಆತನ ಗೆಳೆಯ/ಹಿತೈಷಿ ಕೂಡ ಆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳುವುದು ಎಷ್ಟು ಸರಿ? ನರೇಂದ್ರ ನಾಯಕ್ ಒಬ್ಬರು ವಿಚಾರವಾದಿ ಎಂದು ಕರೆಯಲ್ಪಡುವವರು. ಅವರು ಪ್ರೋಫೆಸರ್ ಕೂಡ. ಅವರು ಹೀಗೆ ಪೂರ್ವಾಗ್ರಹ ಪೀಡಿತರಾಗಿ ಯಾರದ್ದೋ ಮತ್ಸರದ ಮಾತಿಗೆ ಬಲಿಯಾಗಿ ನನ್ನ ಹೆಸರನ್ನು ಕೂಡ ಈ ಪ್ರಕರಣದಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಅಷ್ಟು ವಿಚಾರವಂತರಾಗಿ, ವಿದ್ಯಾವಂತರಾಗಿ ಹೀಗೆ ಇದ್ದ ಹೋದ ಕಡೆ ನನ್ನ ಬಗ್ಗೆ ಕೀಳಾಗಿ ಮಾತನಾಡಿ ನನಗೂ ಈ ಪ್ರಕರಣಕ್ಕೂ ಸಂಬಂಧ ಇದೆ ಎಂದು ಹೇಳುವುದು ಸರಿಯಾ ಎಂದು ಅವರು ಯೋಚಿಸಬೇಕು.
ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ವಿಷಯದಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಪ್ರಕರಣಗಳು ಕರ್ನಾಟಕದ ಉಚ್ಚನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಇವೆ. ಈ ದೇವಸ್ಥಾನದಲ್ಲಿ ನಾನು ಕೂಡ ಒಬ್ಬ ಟ್ರಸ್ಟಿ ಮತ್ತು ಅದರ ಬಗ್ಗೆ ವರದರಾಯ ಪ್ರಭು ಸುಳ್ಳುದಾವೆ ಮಾಡಿರುತ್ತಾರೆ. ಈ ದೇವಸ್ಥಾನಕ್ಕೂ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ವಿನಾಯಕ ಬಾಳಿಗಾ ವಿಠೋಭ ದೇವಸ್ಥಾನದ ವಿಷಯದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ದೂರು ದಾಖಲಿಸಿಲ್ಲ.
ಮನಸ್ಸು ಬಂದಾಗ ಆರೋಪ ಮಾಡುವುದು ಚಾಳಿಯಾಗಬಾರದು…
ಹಿಂದೊಮ್ಮೆ ನರೇಂದ್ರ ನಾಯಕ್ ಹಾಗೂ ನಾನು ಮಂಗಳೂರಿನ ಸ್ಥಳೀಯ ವಾಹಿನಿಯೊಂದರಲ್ಲಿ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ನೇರಪ್ರಸಾರದಲ್ಲಿ ಪ್ಯಾನಲ್ ಡಿಸ್ಕಷನ್ ನಲ್ಲಿ ಭಾಗವಹಿಸಿದ್ದೆವು. ಜನರ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸಿದ್ದೇವೆ. ಆವತ್ತು ನರೇಂದ್ರ ನಾಯಕ್ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ವೈಯಕ್ತಿಕ ಆರೋಪವನ್ನು ಹೊರಿಸಿಲ್ಲ. ಅದೆಲ್ಲ ಆಗಿ ಈಗ ಏಕಾಏಕಿ ನನ್ನನ್ನು ಈ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನ ಮಾಡಿರುವುದರ ಹಿಂದೆ ಯಾವ ದುರುದ್ದೇಶ ಇದೆಯೋ ಅರ್ಥವಾಗುತ್ತಿಲ್ಲ.
ಮೊನ್ನೆ ಮಾರ್ಚ್ 21 ರಂದು ವಿನಾಯಕ ಬಾಳಿಗಾ ಕೊಲೆಯಾದ ದಿನದ ಎರಡನೇ ವರ್ಷದ ಪ್ರತಿಭಟನಾ ಸಭೆಯಲ್ಲಿ ನರೇಂದ್ರ ನಾಯಕ್ ಅವರು ವಿಠೋಭ ದೇವಸ್ಥಾನವನ್ನು ಈ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ದೇವರೇ ಇಲ್ಲ ಎನ್ನುವ ನಾಸ್ತಿಕವಾದಿ ನರೇಂದ್ರ ನಾಯಕ್ ವಿಠೋಭ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿ ಪ್ರವೇಶಿಸಿದಾಗ ದೇವಳದ ಸಿಬ್ಬಂದಿ ಚಪ್ಪಲಿ ಹೊರಗಿಟ್ಟು ಬನ್ನಿ ಎಂದು ಹೇಳಿದ್ದರು. ದೇವಸ್ಥಾನದ ವಿವಿಧ ಫೋಟೋಗಳನ್ನು ತೆಗೆದು ನರೇಂದ್ರ ನಾಯಕ್ ಅಲ್ಲಿಂದ ತೆರಳಿದ್ದಾರೆ.
ನರೇಂದ್ರ ನಾಯಕ್ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನನ್ನನ್ನು ಅನಾವಶ್ಯಕವಾಗಿ ಎಳೆದು ತರುವ ಪ್ರಯತ್ನ ನಿಲ್ಲಿಸಬೇಕು. ಇಲ್ಲದಿದ್ದರೆ ನರೇಂದ್ರ ನಾಯಕ್ ಹೇಳುವ ಶೈಲಿಯಲ್ಲಿಯೇ ಪ್ರತ್ಯುತ್ತರ ಕೊಡುವುದು ನನಗೆ ಗೊತ್ತು. ವಿನಾಯಕ ಬಾಳಿಗಾ ಅವರ ಹತ್ಯೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎನ್ನುವುದರಲ್ಲಿ ನನಗೆ ಯಾವ ಆಕ್ಷೇಪವೂ ಇಲ್ಲ. ವಿನಾಯಕ ಬಾಳಿಗಾ ಕುಟುಂಬದವರಿಗೆ ನ್ಯಾಯ ದೊರಕಿಸಲು ನರೇಂದ್ರ ನಾಯಕ್ ಎಷ್ಟು ಬೇಕಾದರೂ ನ್ಯಾಯಯುತ ಹೋರಾಟ ಮಾಡಲಿ. ಹಾಗಂತ ಅವರಿಗೆ ಮನಸ್ಸು ಬಂದವರ ಹೆಸರು ತೆಗೆದು ಆರೋಪಿಯಂತೆ ಚಿತ್ರಿಸುವುದಕ್ಕೆ ನನ್ನ ವಿರೋಧವಿದೆ.
Leave A Reply