ಮುಂದುವರಿದ ಕೆಂಪು ಉಗ್ರರ ಬೇಟಿ, ಮಾವೋವಾದಿ ಮುಖಂಡ ಸೇರಿ ಮೂವರ ಉಡೀಸ್!
ರಾಯಪುರ: ಇತ್ತೀಚೆಗೆ ಛತ್ತೀಸ್ ಗಡದಲ್ಲಿ ಕೆಂಪು ಉಗ್ರರು ಅರ್ಥಾತ್ ಮಾವೋವಾದಿಗಳ ಉಪಟಳ ಜಾಸ್ತಿಯಾಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಹಲವು ಮಾವೋವಾದಿಗಳನ್ನು ಹತ್ಯೆ ಮಾಡುವ ಮೂಲಕ ತಕ್ಕ ಪಾಠ ಕಲಿಸಿದ್ದರು.
ಈಗ ಮತ್ತೆ ಛತ್ತೀಸ್ ಗಡದಲ್ಲಿ ಭಾರತೀಯ ಭದ್ರತಾಪಡೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು, ರಜ್ಞಾಂಡ್ ಗಾಂವ್ ನ ಬೊರ್ತಾಲಾವ್ ಎಂಬ ಪ್ರದೇಶದಲ್ಲಿ ಮಾವೋವಾದಿಗಳ ಡೆಪ್ಯೂಟಿ ಕಮಾಂಡೋ ಹಾಗೂ ಆತನ ಇಬ್ಬರು ಬೆಂಬಲಿಗರನ್ನು ಹೊಡೆದುರುಳಿಸಲಾಗಿದೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಗುಡ್ಡಗಾಡು ಪ್ರದೇಶದಲ್ಲಿ ಗಸ್ತು ತಿರುಗುವಾಗ ಉಪಟಳ ಆರಂಭಿಸಿದ್ದ ಮಾವೋವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಕೆರಳಿದ ಪೊಲೀಸರು ಇಡೀ ಬೆಟ್ಟದಲ್ಲಿ ಕಾರ್ಯಾಚರಣೆ ಕೈಗೊಂಡು ಯಶಸ್ವಿಯಾಗಿದ್ದು, ಮೂವರು ಮಾವೋವಾದಿಗಳನ್ನು ಹೊಡೆದುಹಾಕಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.
ಈ ಮೂವರು ಮಾವೋವಾದಿಗಳಲ್ಲಿ ಒಬ್ಬ ಡರ್ರೆಕಾಸಾ ಪ್ರದೇಶದ ಡೆಪ್ಯೂಟಿ ಕಮಾಂಡರ್ ಆಗಿದ್ದು, ಆತನನ್ನು ಆಜಾದ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮಾವೋವಾದಿಗಳ ತಂಡದ ಬೆಂಬಲಿಗರಾಗಿದ್ದು, ಮಾವೋವಾದಿಗಳಿಗೆ ಅವಶ್ಯಕವಾಗಿರುವ ವಿವಿಧ ವಸ್ತುಗಳನ್ನು ಸರಬರಾಜು ಮಾಡುವುದು ಇವರ ಕಾರ್ಯವಾಗಿತ್ತು ಎಂದು ಪ್ರಶಾಂತ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಛತ್ತೀಸ್ ಗಡ ಕಾಡಿನಲ್ಲಿ ಅವಿತು ಜನಸಾಮಾನ್ಯ ಬದುಕಿನೊಂದಿಗೆ ಆಟವಾಡುವ ಮಾವೋವಾದಿಗಳಿಗೆ ಭಾರತೀಯ ಭದ್ರತಾ ಸಿಬ್ಬಂದಿ ಸರಿಯಾಗಿಯೇ ಪಾಠ ಕಲಿಸುತ್ತಿದ್ದು, ಗುಂಡಿಕ್ಕಿ ಕೊಲ್ಲುತ್ತಿದೆ. ಛತ್ತೀಸ್ ಗಡದ ಇಡೀ ಮಾವೋವಾದಿಗಳ ಸಂತತಿಯೇ ನಾಶವಾಗಲಿ ಎಂಬುದೇ ನಮ್ಮ ಆಶಯ.
Leave A Reply