ಇಷ್ಟೆಲ್ಲ ಆದರೂ ಮೋದಿಯೇ ಮುಂದಿನ ಪ್ರಧಾನಿ ಎನ್ನುತ್ತಾರಲ್ಲ!
2019 ಕ್ಕೆ ಪ್ರಧಾನಿಯಾಗಿ ನಿಮ್ಮ ಆಯ್ಕೆ ಯಾರು ಎನ್ನುವುದರ ಬಗ್ಗೆ ಹಲವಾರು ಮೀಡಿಯಾಗಳು ಸಮೀಕ್ಷೆ ನಡೆಸಿವೆ. ಎಲ್ಲಾ ಕಡೆ ನರೇಂದ್ರ ಮೋದಿಯವರೇ ನಮ್ಮ ಮುಂದಿನ ಪ್ರಧಾನಿ ಆಗಬೇಕು ಎಂದು ಜನ ಹೇಳಿದ್ದಾರೆ. ಸುಮಾರು 71 ಶೇಕಡಾಗಿಂತಲೂ ಹೆಚ್ಚು ಜನ ಮೋದಿಯವರನ್ನು ಮುಂದಿನ ಪ್ರಧಾನಿಯಾಗಿ ಮತ್ತೊಮ್ಮೆ ನೋಡಲು ಬಯಸಿದ್ದಾರೆ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ 25% ವನ್ನು ದಾಟಿಲ್ಲ. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಮಾಯಾವತಿ, ಮುಲಾಯಂ ಸಿಂಗ್ ಯಾದವ್ ಎಲ್ಲರಿಗೂ ಸಿಕ್ಕಿದ್ದು ಚಿಲ್ಲರೆ ಶೇಕಡಾ. ಪ್ರಧಾನ ಮಂತ್ರಿಯಾಗಿ ಮೋದಿ ಈಗಾಗಲೇ ನಾಲ್ಕು ವರ್ಷ ಮುಗಿಸಿ ವಾರದ ಮೇಲೆ ಆಗಿದೆ. ಇನ್ನೇನಿದ್ದರೂ ಚುನಾವಣಾ ವರ್ಷ. ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದಾಗ ಯಾರು ಪ್ರಧಾನ ಮಂತ್ರಿ ಎನ್ನುವ ಬಗ್ಗೆ ಯಾರಿಗೂ ಗೊಂದಲ ಇಲ್ಲ. ಅದೇ ಯುಪಿಎ ಹೆಸರಿನಲ್ಲಿರುವ ದ್ವೀತಿಯನೋ ಅಥವಾ ತೃತೀಯನೋ ರಂಗ ಅಧಿಕಾರಕ್ಕೆ ಬಂದರೆ ಯಾರು ಪ್ರಧಾನಿಯಾಗುತ್ತಾರೆ ಎನ್ನುವುದು ಚುನಾವಣೆ ಮುಗಿದ ಬಳಿಕವೂ ನಿರ್ಧಾರವಾಗಲಿಕ್ಕಿಲ್ಲ. ಯಾಕೆಂದರೆ ಹಿಂದೆ ಅಂದರೆ 2014 ರ ಮೊದಲು ಎನ್ ಡಿಎ ವಿಪಕ್ಷದಲ್ಲಿತ್ತು. ಆಗ ಯುಪಿಎ ಎರಡನೇ ಇನ್ನಿಂಗ್ಸ್ ಆಡುತ್ತಿತ್ತು. ಈ ಎರಡರಲ್ಲಿ ಸೇರಲು ಮನಸ್ಸಿಲ್ಲದ ಪಕ್ಷಗಳು ತೃತೀಯ ರಂಗ ಸ್ಥಾಪಿಸುವ ಉದ್ದೇಶದಲ್ಲಿದ್ದವು. ಆದರೆ 2014 ರಲ್ಲಿ ಬೀಸಿದ ಮೋದಿ ಎನ್ನುವ ಸುನಾಮಿಗೆ ಯುಪಿಎ, ತೃತೀಯ ರಂಗ ಕೊಚ್ಚಿಕೊಂಡು ಹೋಗಿದ್ದವು. ಆದ್ದರಿಂದ ಈಗ ಏನಿದ್ದರೂ ದ್ವೀತಿಯ ಮತ್ತು ತೃತೀಯ ಸೇರಿ ಒಂದೇ ರಂಗ. ಒಂದೇ ವೇದಿಕೆ. ಎಲ್ಲರೂ ಒಡಹುಟ್ಟಿದವರಂತೆ ಕೈ ಕೈ ಹಿಡಿದು (ಸ್ವ) “ಅಭಿವೃದ್ಧಿ”ಗಾಗಿ ಹೋರಾಡಲು ತೀರ್ಮಾನಿಸಿದ್ದಾರೆ.
ಮೋದಿಗೆ ಪೆಟ್ರೋಲ್, ಡಿಸೀಲ್ ಬೆಲೆ ಬಗ್ಗೆ ಅರಿವಿದೆ
ಉತ್ತರ ಪ್ರದೇಶದಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿನ ನಂತರ ಭಾರತೀಯ ಜನತಾ ಪಾರ್ಟಿಯ ಕಥೆ ಮುಗಿಯಿತು ಎಂದು ಹೇಳಿದವರೇ ಹೆಚ್ಚು. ಆದರೆ ಜನ ಮಾತ್ರ ಮುಂದೆಯೂ ಮೋದಿಯವರೇ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ತೀರ್ಮಾನಿಸಿದ್ದಾರೆ ಎಂದರೆ ಆ ಪುಣ್ಯಾತ್ಮನ ಸಾಮರ್ತ್ಯ ಎಂತಹುದು ಎಂದು ನೀವು ಲೆಕ್ಕ ಹಾಕಬಹುದು. ರಾಜಕೀಯ ಪಂಡಿತರು ಪೆಟ್ರೋಲ್, ಡಿಸೀಲ್ ಬೆಲೆ ನಿತ್ಯ ಹೆಚ್ಚಳವಾಗಿರುವುದು ಬಿಜೆಪಿಗೆ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ ಎನ್ನುತ್ತಾರೆ. ಇದು ಬಿಜೆಪಿಯ ಉನ್ನತ ನಾಯಕರಿಗೂ ಗೊತ್ತಿದೆ. ಇನ್ನು ಉಳಿದಿರುವ ಹನ್ನೊಂದು ತಿಂಗಳಲ್ಲಿ ಪೆಟ್ರೋಲ್, ಡಿಸೀಲ್ ಬೆಲೆ ಜಿಎಸ್ ಟಿ ಒಳಗೆ ತಂದು ಗಣನೀಯವಾಗಿ ಇಳಿಸಿದ್ದಲ್ಲಿ ನಂತರ ನರೇಂದ್ರ ಮೋದಿಯವರ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವುದು ಸಾಧ್ಯವೇ ಇಲ್ಲ. ಕೆಲವು ಸಮಯದ ಹಿಂದೆ ತೊಗರಿಬೇಳೆ ಕೆಜಿಗೆ 200 ರೂಪಾಯಿಗಳ ತನಕ ತಲುಪಿತ್ತು. ಆಗ ಕಾಂಗ್ರೆಸ್ಸಿನವರು ಮೀಡಿಯಾಗಳಲ್ಲಿ ಮಾತನಾಡಿದ್ದೇ ಮಾತನಾಡಿದ್ದು. ಟಿವಿ ಪ್ಯಾನೆಲ್ ಗಳಲ್ಲಿ ಬಿಜೆಪಿ ಮುಖಂಡರಿಗೆ ಕೇಂದ್ರ ಸರಕಾರದ ಪರವಾಗಿ ಮಾತನಾಡಿ ಜಯಿಸುವುದೇ ಸವಾಲಿನ ವಿಷಯವಾಗಿತ್ತು. ಆದರೆ ಪ್ಯಾನಲ್ ಗಳಲ್ಲಿ ಕುಳಿತಿರುತ್ತಿದ್ದ ಬಿಜೆಪಿ ವಕ್ತಾರರಿಗೆ ಒಂದು ವಿಷಯ ಗ್ಯಾರಂಟಿ ಇರುತ್ತಿತ್ತು. ಮೋದಿ ಏನಾದರೂ ಮಾಡುತ್ತಾರೆ. ಹಾಗೆ ಆಯಿತು. ಈಗ ತೊಗರಿಬೇಳೆ ಕಿಲೋಗೆ 70 ರೂಪಾಯಿಗೆ ಸಿಗುತ್ತದೆ. ಯಾವ ಕಾಂಗ್ರೆಸ್ಸಿಗ ಕೂಡ ಮಾತನಾಡುವುದಿಲ್ಲ. ಹಿಂದೊಮ್ಮೆ ಸಕ್ಕರೆ ಬೆಲೆ ಕೂಡ ವಿಪರೀತ ಮಟ್ಟಕ್ಕೆ ಏರಿತ್ತು. ಈಗ ಸಕ್ಕರೆ ಕಿಲೋಗೆ 28 ಕ್ಕೆ ಸಿಗುತ್ತದೆ. ಆವತ್ತು ತೊಗರಿಬೇಳೆ, ಸಕ್ಕರೆ ಬೆಲೆ ವಿಪರೀತ ಹೆಚ್ಚಾದಾಗ ಮೋದಿ ಸರಕಾರ ಮುಂದೆ ಬರಲ್ಲ ಎಂದೇ ಎಲ್ಲ ಹೇಳುತ್ತಿದ್ದರು. ಆದರೆ ಇವತ್ತು ಪೆಟ್ರೋಲ್, ಡಿಸೀಲ್ ಬೆಲೆ ತೋರಿಸಿ ಮೋದಿ ಬರಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ಸಿಗರು. ರೈತರಿಗೆ ಬೆಂಬಲ ಬೆಲೆ ಜಾಸ್ತಿ ಮಾಡಿದಾಗ ಕೆಲವು ಉತ್ಪನ್ನಗಳಿಗೆ ಚಿಲ್ಲರೆಯಷ್ಟು ಜಾಸ್ತಿ ಆಗಿಯೇ ಆಗುತ್ತದೆ. ಅದನ್ನು ತಪ್ಪು ಎನ್ನುವ ವಿಪಕ್ಷಗಳಿಗೆ ಏನು ಹೇಳುವುದು ಅಲ್ವಾ?
ಪಾಕಿಗಳಿಗೆ ಮೋದಿ ನಡೆ ಅರ್ಥವಾಗಿರಲೇ ಇಲ್ಲ
ಈಗ ಮುಸ್ಲಿಮರಿಗೆ ಉಪವಾಸದ ಸಮಯ. ಪಾಕಿಸ್ತಾನದ ಗಡಿಯಲ್ಲಿ ರಮಾಝಾನ್ ತಿಂಗಳು ಮುಗಿಯುವ ತನಕ ನಾವು ಗುಂಡು ಹಾರಿಸುವುದಿಲ್ಲ ಎಂದರು ಮೋದಿ. ಒಂದು ವೇಳೆ ಆ ಕಡೆಯಿಂದ ದಾಳಿ ಪ್ರಾರಂಭವಾದ್ದಲ್ಲಿ ಕೈ ಕಟ್ಟಿ ಕೂರುವುದಿಲ್ಲ ಎಂದು ಕೂಡ ಮೋದಿ ಹೇಳಿದ್ದರು. ಇದನ್ನೇ ಹಿಡಿದುಕೊಂಡು ವಿಪಕ್ಷಗಳು ಮೋದಿ ಮೇಲೆ ಮುಗಿಬಿದ್ದವು. ನೀವು ಪಾಕಿಸ್ತಾನದೊಂದಿಗೆ ಮೃಧುತ್ವ ಹೊಂದಿದ್ದೀರಿ ಎಂದು ಆರೋಪಿಸಿದವು. ಆದರೆ ವಿಷಯ ಏನೆಂದರೆ ಮೋದಿ ತಮ್ಮ ನಡೆಯ ಮೂಲಕ ಪ್ರಪಂಚಕ್ಕೆ ಒಂದು ಸಂದೇಶ ಕಳುಹಿಸಿದ್ದರು. ಕಾಲು ಕೆರೆದು ಜಗಳಕ್ಕೆ ಬರುವುದು ಯಾರು ಎಂದು ತೋರಿಸಿದ್ದರು. ನಾವು ಶಾಂತಿಪ್ರಿಯ ಎಂದು ಸಾರಿದ್ದರು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ದಪ್ಪ ಚರ್ಮದ ಪಾಕಿಸ್ತಾನಿ ಸೇನೆ ಬೆಂಬಲಿತ ಗಡ್ಡಧಾರಿಗಳು ನಮ್ಮ ದೇಶದ ಮೇಲೆ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದರು. ಭಾರತ ಕೊಟ್ಟ ಉತ್ತರ ಪಾಕಿಗಳ ಬಾಯಿ ಮುಚ್ಚಿಸಿದೆ. ಆದರೆ ಈ ಘಟನೆಯಿಂದ ಭಾರತದ ವರ್ಚಸ್ಸು ಹೆಚ್ಚಿದೆ. ಸುಮ್ಮ ಸುಮ್ಮನೆ ಸಂಘರ್ಷಕ್ಕೆ ಬರುವುದು ಯಾರು ಎಂದು ಜಗತ್ತು ತಿಳಿದುಕೊಂಡಿದೆ. ಮೋದಿಯವರ ಇಂತಹ ತಂತ್ರಗಳಿಗೆ ಶಹಬ್ಬಾಸ್ ಹೇಳುವ ಬದಲು ಕಾಂಗ್ರೆಸ್ಸಿಗರು ಮಾಡಿದ ಟೀಕೆಯಿಂದ ನಷ್ಟವಾದದ್ದು ಕಾಂಗ್ರೆಸ್ಸಿಗೆ ಮಾತ್ರ. ಮೋದಿಯವರ ಜನಪ್ರಿಯತೆ ಮಾತ್ರ ಇಂಡೋನೇಶಿಯಾದಂತಹ ಪರಮ ಕರ್ಮಠ ಮುಸಲ್ಮಾನ ರಾಷ್ಟ್ರಗಳಲ್ಲಿಯೂ ಗಗನದೆತ್ತರಕ್ಕೆ ಏರುತ್ತಿದೆ. ಅಲ್ಲಿ ಜನ ವಂದೇ ಮಾತರಂ ಹಾಡಿ ಮೋದಿಯವರನ್ನು ಸ್ವಾಗತಿಸಿದ್ದಾರೆ. ಇಲ್ಲಿ ಕೆಲವು ಚಿಲ್ಲರೆ ಪಕ್ಷಗಳು ಮೋದಿಯವರನ್ನು ಟೀಕಿಸುತ್ತಾ ಮಾಧ್ಯಮಗಳಲ್ಲಿ ತಮ್ಮ ಇರುವಿಕೆಯನ್ನು ತೋರಿಸುತ್ತಿವೆ!
Leave A Reply