ಎಮ್ಮೆಕೆರೆಯಲ್ಲಿ ಈಜುಕೊಳ ಮಾಡುವುದಕ್ಕಿಂತ ಕೆರೆ ನಿರ್ಮಿಸುವುದೇ ಒಳ್ಳೆಯದು!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಎನ್ನುವ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ವಿಷಯ ನಿಮಗೆ ಈ ಮೊದಲೇ ಹೇಳಿದ್ದೇನೆ. ಈಗ ಸಿಕ್ಕಿರುವ ಮಾಹಿತಿಯಂತೆ ಇಲ್ಲಿಯವರೆಗೆ ಈ ಹೆಸರಿನಲ್ಲಿ ಸಂಗ್ರಹವಾಗಿರುವ ಹಣ ಸುಮಾರು ಹದಿನೇಳುವರೆ ಕೋಟಿ ರೂಪಾಯಿ. ಈ ಹಣವನ್ನು ಸಮರ್ಥವಾಗಿ ಬಳಸಿದ್ದರೆ ಇಲ್ಲಿಯವರೆಗೆ ಮಂಗಳೂರಿನ ಅನೇಕ ಸಣ್ಣ ದೊಡ್ಡ ಕೆರೆಗಳನ್ನು ಅಭಿವೃದ್ಧಿಗೊಳಿಸಬಹುದಿತ್ತು. ಆದರೆ ಮೂಡಾದವರು ಏನು ಮಾಡುತ್ತಿದ್ದಾರೆ ಎಂದರೆ ಆ ಹಣ ತೆಗೆದಿಟ್ಟು ಅದು ಮೊಟ್ಟೆ ಹಾಕುತ್ತಾ ಎಂದು ಕಾಯುತ್ತಿದ್ದಾರೆನೋ ಎಂದು ಅನಿಸುತ್ತದೆ. ಏಕೆಂದರೆ ಇಲ್ಲಿಯ ತನಕ ಆ ಹಣದಲ್ಲಿ ಖರ್ಚಾದದ್ದು ಒಂದು ಕೋಟಿ ಮಾತ್ರ. ಸದ್ಯ ಸುಮಾರು ಮೂರು ಕೋಟಿಯ ಕಾಮಗಾರಿಗಳನ್ನು ನಡೆಸಲು ತಯಾರಿ ನಡೆಯುತ್ತಿದೆ.
ಶುಲ್ಕ ಇನ್ ಕಮಿಂಗ್ ಅಭಿವೃದ್ಧಿಗೆ ಖರ್ಚು ಔಟ್ ಗೋಯಿಂಗ್ ಆಗಬೇಕಿತ್ತು…
ಸರಿಯಾಗಿ ನೋಡಿದರೆ ಕೆರೆ ಅಭಿವೃದ್ಧಿ ಶುಲ್ಕ ಎನ್ನುವ ವಿಷಯ ತಪ್ಪಲ್ಲ. ಆದರೆ ಇವರು ಕೇವಲ ಶುಲ್ಕವನ್ನು ಇನ್ ಕಮಿಂಗ್ ಮಾಡಿ ಅದನ್ನು ಯಾಕೆ ಸಂಗ್ರಹ ಮಾಡಲಾಗುತ್ತಿದೆಯೋ ಅದಕ್ಕೆ ಬಳಸದೇ ಇದ್ದದ್ದು ಮಾತ್ರ ದೊಡ್ಡ ತಪ್ಪು. ಒಂದು ವೇಳೆ ನೀವು ಬಿಲ್ಡರ್ ಆಗಿದ್ದರೆ ನೀವು ಯಾವುದಾದರೂ ಲೇಔಟ್ ಮಾಡಲು ಸಿದ್ಧತೆ ನಡೆಸಿದ್ದರೆ ಆಗ ಸಹಜವಾಗಿ ನೀವು ಒಂದಿಷ್ಟು ಏಕರೆ ಜಾಗವನ್ನು ಖರೀದಿಸಬೇಕಾಗುತ್ತದೆ. ಆಗ ಆ ಭೂಮಿಯಲ್ಲಿ ಸಣ್ಣಪುಟ್ಟ ಕೆರೆಗಳು ಇದ್ದಿರುವ ಸಾಧ್ಯತೆ ಇದೆ. ಕೆಲವು ಬಾವಿಗಳಂತೂ ಇದ್ದೇ ಇರುತ್ತವೆ. ಮಂಗಳೂರಿನಂತಹ ಬೆಳೆಯುತ್ತಿರುವ ಊರಿನಲ್ಲಿ ಪ್ರತಿ ವರ್ಷ ಕೆರೆ ಅಥವಾ ಬಾವಿಗಳು ಹೆಚ್ಚಾಗುವುದಿಲ್ಲ. ಆದರೆ ಪ್ರತಿ ಏರಿಯಾದಲ್ಲಿ ನಾಯಿಕೊಡೆಗಳಂತೆ ಬಿಲ್ಡರ್ ಗಳು ಹೆಚ್ಚಾಗುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಇದ್ದ ಬಾವಿ, ಕೆರೆಗಳು ಎಷ್ಟು ಮತ್ತು ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿದ್ದ ಬಿಲ್ಡರ್ ಗಳೆಷ್ಟು ಮತ್ತು ಈಗ ಇರುವ ಕೆರೆ, ಬಾವಿಗಳು ಮತ್ತು ಬಿಲ್ಡರ್ ಗಳು ಎಷ್ಟು ಎನ್ನುವುದನ್ನು ಲೆಕ್ಕ ಹಾಕಿದರೆ ನಿಮಗೆ ನಮ್ಮ ಊರಿನ ವಾಸ್ತವ ಗೊತ್ತಾಗುತ್ತದೆ. ಪ್ರತಿ ಬಿಲ್ಡರ್ ತಾನು ಕಟ್ಟುತ್ತಿರುವ ವಸತಿ ಸಮುಚ್ಚಯ ಅಸ್ತಿತ್ವಕ್ಕೆ ತರುವಾಗ ಮಣ್ಣು ಹಾಕಿ ಮುಚ್ಚುವ ಬಾವಿಗಳೆಷ್ಟು, ಕೆರೆಗಳೆಷ್ಟು ಎಂದು ನೋಡಿದರೆ ಹೊಟ್ಟೆ ಉರಿಯುತ್ತದೆ. ಯಾಕೆಂದರೆ ಒಂದೊಂದು ಕೆರೆ, ಬಾವಿಯನ್ನು ಮುಚ್ಚಿದಂತೆಲ್ಲ ನಮ್ಮ ಪರಿಸರದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ಬಿಲ್ಡರ್ ಗಳು ಕೆರೆ, ಬಾವಿ ಮಣ್ಣು ಹಾಕಿ ಮುಚ್ಚುತ್ತಾ ಇರ್ಲಿ, ನಮಗೇನು ಎಂದು ನಾವು ನೀವು ಸುಮ್ಮನೆ ಕಣ್ಣುಮುಚ್ಚಿ ಕುಳಿತರೆ ಭವಿಷ್ಯದಲ್ಲಿ ಒಂದು ದಿನ ನಾವು ಒಂದೊಂದು ನೀರಿನ ಹನಿಗಳಿಗೂ ಹಾಹಾಕಾರ ತೆಗೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿ ಒಂದು ಕೆರೆ, ಬಾವಿ ಮುಚ್ಚಿದರೆ ಬೇರೆಡೆ ಕೆರೆ, ಬಾವಿಯನ್ನು ನಿರ್ಮಿಸುವುದು ಅಥವಾ ಅಭಿವೃದ್ಧಿ ಮಾಡಬೇಕೆನ್ನುವುದು ಸರಕಾರದ ಉತ್ತಮ ಚಿಂತನೆ. ಆದರೆ ನಮ್ಮ ಮೂಡಾ ಆ ನಿಟ್ಟಿನಲ್ಲಿ ತೆಗೆದುಕೊಂಡಿರುವ ಆಮೆಗತಿ ಮಾತ್ರ ಚಿಂತನಾರ್ಹ.
ಎಮ್ಮೆಕೆರೆಯಲ್ಲಿ ಕೆರೆ ನಿರ್ಮಿಸಲಿ…
ಈಗ ವಿಷಯ ಇರುವುದು ಮಂಗಳೂರಿನ ಪ್ರಖ್ಯಾತ ಕೆರೆಗಳಲ್ಲಿ ಒಂದಾಗಿರುವ ಎಮ್ಮೆಕೆರೆಯ ಪರಿಸ್ಥಿತಿ. ಎಮ್ಮೆಕೆರೆ ಒಂದು ಕಾಲದಲ್ಲಿ ಅಕ್ಕಪಕ್ಕದ ಏರಿಯಾಗಳಿಗೆ ಶುದ್ಧವಾದ ನೀರನ್ನು ಒದಗಿಸುತ್ತಿದ್ದ ಕೆರೆ. ಕಾಲಕ್ರಮೇಣ ಇತರ ಕೆರೆಗಳಂತೆ ಇದರ ಮೇಲೆ ಯಾರದ್ದೋ ಕಣ್ಣು ಬಿದ್ದು ಈಗ ಎಮ್ಮೆನೂ ಇಲ್ಲ, ಕೆರೆನೂ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಈಗ ಆ ಪ್ರದೇಶದಲ್ಲಿ ಮಣ್ಣು ಹಾಕಿ ಅಲ್ಲಿ ಸಾರ್ವಜನಿಕ ಈಜುಕೊಳ ಮಾಡುವ ಪ್ರಸ್ತಾಪ ಇದೆ. ನಾನು ಹೇಳುವುದೇನೆಂದರೆ ಅಲ್ಲಿ ಸ್ವಿಮ್ಮಿಂಗ್ ಫೂಲ್ ಮಾಡುವುದಕ್ಕಿಂತ ಮೊದಲಿದ್ದ ಹಾಗೆ ಕೆರೆಯನ್ನು ಅಭಿವೃದ್ಧಿ ಮಾಡುವುದೇ ತುಂಬಾ ಒಳ್ಳೆಯದು. ಇದರಿಂದ ನಿಸ್ಸಂದೇಹವಾಗಿ ಅಂತರ್ಜಲ ಮಟ್ಟ ಏರುತ್ತದೆ. ಅಲ್ಲಿಯೇ ಒಂದು ಸಣ್ಣ ನೀರು ಶುದ್ಧಿಕರಣ ಘಟಕ ನಿರ್ಮಿಸಿದರೆ ಆ ಕೆರೆಯ ನೀರನ್ನು ಶುದ್ಧಿ ಮಾಡಿ ಅಕ್ಕಪಕ್ಕದ ಮೂರ್ನಾಕು ವಾರ್ಡುಗಳಿಗೆ ಪೂರೈಕೆ ಮಾಡಿದರೆ ಇನ್ನೂ ಒಳ್ಳೆಯದು. ಒಂದು ವೇಳೆ ತುಂಬೆಯಿಂದ ಬರುವ ನೀರು ಪೂರೈಕೆಯಲ್ಲಿ ಹೆಚ್ಚು ಕಡಿಮೆಯಾದರೆ ಇಂತಹ ಕೆರೆಗಳೇ ಆಪತ್ಭಾಂದವವಾಗಿ ನಮಗೆ ನೆರವಿಗೆ ಬರುತ್ತವೆ. ಒಟ್ಟಿನಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಸಮರ್ಪಕವಾಗಿ ಉಪಯೋಗಕ್ಕೆ ಬರಲಿ ಎನ್ನುವುದೇ ಆಶಯ.
Leave A Reply