ಕೊಡಗು ನೆರೆ: 10 ಲಕ್ಷ ರೂ. ದೇಣಿಗೆ ನೀಡಿದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು
ಉಡುಪಿ: ಮಹಾ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಹಾಗೂ ಸುಳ್ಯದಲ್ಲಿ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್ ವತಿಯಿಂದ ಶ್ರೀ ವಿಶ್ವೇಶತೀರ್ಥರು 10 ಲಕ್ಷ ರೂ.ಗಳ ದೇಣಿಗೆ ಘೋಷಿಸಿ ಮುಂದೆ ಇನ್ನಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಚಾರ್ತುಮಾಸ್ಯದಲ್ಲಿರುವ ಪೇಜಾವರ ಶ್ರೀಗಳು ಪ್ರತಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕನ್ನಡ ನಾಡಿನ ಅತ್ಯಂತ ರಮಣೀಯ ಸ್ಥಳವಾದ ಕೊಡಗು ಮತ್ತು ಸುಳ್ಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಜನರು ಅನುಭವಿಸುತ್ತಿರುವ ನೋವು ಅವರ್ಣನೀಯ.
ಈ ಸಂದರ್ಭದಲ್ಲಿ ಅವರಿಗೆ ಸ್ಪಂದಿಸುವುದು ಅವಶ್ಯವಿದ್ದು, ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಮಠದ ಟ್ರಸ್ಟ್ ನಿಂದ ಸದ್ಯಕ್ಕೆ ಹತ್ತು ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದೇನೆ. ಚಾರ್ತುಮಾಸ್ಯವಾದ್ದರಿಂದ ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಚಾರ್ತುಮಾಸ್ಯ ಮುಗಿದ ಕೂಡಲೇ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿ ಜನತೆಗೆ ವಿಶೇಷ ಸಹಾಯದ ಜೊತೆಗೆ ಮಠದ ಟ್ರಸ್ಟ್ ನಿಂದ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುತ್ತೇವೆ. ಅಲ್ಲಿಯ ಜನತೆಗೆ ನೇರವಾಗಿ ತಲುಪುವಂತೆ ಪರಿಹಾರ ಕಾರ್ಯವನ್ನು ನಡೆಸಲಾಗುವುದೆಂದು ಶ್ರೀಗಳು ತಿಳಿಸಿದ್ದಾರೆ.
Leave A Reply