ಕೇರಳ, ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ; ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ ಕರಾವಳಿ ಬೀಚ್ ಗಳು
ಮಂಗಳೂರು: ಕೇರಳ, ಕೊಡಗಿನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಪರಿಣಾಮ ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೇರಳ ಮತ್ತು ಮಡಿಕೇರಿಯಲ್ಲಿ ಉಂಟಾದ ಜಲಪ್ರಳಯದ ಪರಿಣಾಮ ಶೇಕಡ. 80 ರಷ್ಟು ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಅಂದಾಜಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಸ್ಥಳೀಯರು ಸೇರಿದಂತೆ ರಾಜ್ಯ, ಹೊರರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಬೀಚ್ ಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ. ಮಳೆಗಾಲದಲ್ಲಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮಲ್ಪೆ, ಪಣಂಬೂರು ಬೀಚ್ ಗಳು ಜನರಿಲ್ಲದೆ ಈಗ ಬಿಕೋ ಎನ್ನುತ್ತಿವೆ. ಕಳೆದ ಕೆಲವು ದಿನಗಳಿಂದ ಸುರಿದ ಮಹಾಮಳೆ ಜೊತೆಗೆ ಗಾಳಿಯ ಅಬ್ಬರದ ಹಿನ್ನಲೆಯಲ್ಲಿ ಸ್ಥಳೀಯರು ಕೂಡ ಬೀಚ್ ಕಡೆ ಮುಖ ಮಾಡುತ್ತಿಲ್ಲ. ಮಳೆಗಾಲದ ಸಂದರ್ಭದಲ್ಲಿ ದಿನನಿತ್ಯ ಸುಮಾರು 2 ಸಾವಿರಕ್ಕೂ ಅಧಿಕ ಬರುತ್ತಿದ್ದ ಬೀಚ್ ಗಳಲ್ಲಿ ಕಳೆದ ಭಾನುವಾರು ಕೇವಲ 150 ರಿಂದ 200 ರಷ್ಟು ಮಂದಿ ಮಾತ್ರ ಬೀಚ್ ನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದೆ.
ಮಂಗಳೂರಿನ ಪಣಂಬೂರು ಬೀಚ್, ಉಳ್ಳಾಲ ಸೋಮೇಶ್ವರ ಬೀಚ್ ಸೇರಿದಂತೆ ಉಡುಪಿಯ ಮಲ್ಪೆ ಬೀಚ್, ಸೈಂಟ್ ಮೇರಿಸ್, ಮರವಂತೆ, ಮುರುಡೇಶ್ವರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಕೇರಳದ ರಾಜ್ಯದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರು ಬರುವುದು ಕಷ್ಟಸಾಧ್ಯ ಅದರಲ್ಲೂ ಸೈಂಟ್ ಮೇರಿಸ್ ದ್ವೀಪಕ್ಕೆ ಮತ್ತು ಮಲ್ಪೆ ಬೀಚ್ ಹಾಗೂ ಪಣಂಬೂರು ಬೀಚ್ ಗಳಿಗೆ ಬರುವ ಪ್ರವಾಸಿಗರಲ್ಲಿ ಕೇರಳದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಕೇರಳ ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಹಿನ್ನಲೆಯಲ್ಲಿ ಇನ್ನು ಕೆಲವು ತಿಂಗಳು ಕೇರಳ ಪ್ರವಾಸಿಗರು ಆಗಮಿಸುವುದು ಕಷ್ಟ ಸಾಧ್ಯ ಎಂದು ಹೇಳಲಾಗಿದೆ. ಸಣ್ಣ ಅಂಗಡಿಗಳು ತೆಗೆದಿರುತ್ತವೆ ಜಲಪ್ರವಾಹದ ಪರಿಣಾಮ ಪ್ರವಾಸಿಗರನ್ನೇ ನಂಬಿರುವ ಹೋಟೆಲ್ ಹಾಗೂ ಲಾಡ್ಜ್ ಉದ್ಯಮಕ್ಕೂ ಕೇರಳ ಹಾಗೂ ಮಡಿಕೇರಿಯ ಜಲಪ್ರಳಯದ ಬಿಸಿ ತಟ್ಟಿದೆ. ಪ್ರವಾಸಿಗರು ಬರದ ಹಿನ್ನಲೆಯಲ್ಲಿ ಬೀಚ್ ಪರಿಸರದಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಅಂಗಡಿಗಳು ಬಾಗಿಲು ಹಾಕಿವೆ. ಅದರಲ್ಲಿ ಕೆಲವೊಂದು ಸಣ್ಣ ಅಂಗಡಿಗಳು ಮಾತ್ರ ಸಂಜೆಯ ಸಮಯದಲ್ಲಿ ಬಾಗಿಲು ತೆರೆದು ಪ್ರವಾಸಿಗರಿಗಾಗಿ ಕಾದು ಕುಳಿತಿರುತ್ತಾರೆ.
Leave A Reply