ರಾಜೀವ್ ಗಾಂಧಿ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು, 6 ಶಂಕಿತರ ವಶ
ಹೈದರಾಬಾದ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಮಾದರಿಯಲ್ಲಿಯೇ ನರೇಂದ್ರ ಮೋದಿ ಅವರನ್ನು ಕೊಲ್ಲಲು ಸಂಚು ನಡೆಸಿದ್ದ ಕೆಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತೆಲಂಗಾಣ, ಆಂದ್ರಪ್ರದೇಶದ ಕ್ರಾಂತಿಕಾರಿ ಕವಿ ಪಿ.ವರವರರಾವ್ ಅವರನ್ನು ಸೇರಿಸಿ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿರುವ ವಿಶೇಷ ಪೊಲೀಸರು ಆರೋಪಿಗಳ ಸತತ ವಿಚಾರಣೆ ನಡೆಸುತ್ತಿದ್ದಾರೆ.
ವಶಕ್ಕೆ ಪಡೆದಿರುವ ಎಲ್ಲರಿಗೂ ನಿಷೇಧಿತ ಮಾವೋವಾದಿ ಸಂಘಟನೆಗಳ ನಂಟಿದ್ದು, ಕವಿ ವರವರರಾವ್ ಅವರ ಪುತ್ರ ಆಂಧ್ರಪ್ರದೇಶ, ಗೋವಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಕೆಲವರಿಗೆ ‘ಮೋದಿ ಹತ್ಯೆಗೆ ಆರ್ಥಿಕ ನೆರವು ಬೇಕು’ ಎಂದು ಸಂದೇಶ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ಕ್ರಾಂತಿಕಾರಿ ಕವಿಯ ಬಂಧನ; ಪುಣೆಯಿಂದ ಇಂದು ಬೆಳ್ಳಂಬೆಳಿಗ್ಗೆ ಆಗಮಿಸಿದ ವಿಶೇಷ ಪೊಲೀಸರು, ಹೈದರಾಬಾದ್‌ನಲ್ಲಿರುವ ವರವರರಾವ್ ಅವರ ಮನೆ ಮೇಲೆ ದಾಳಿ ನಡೆಸಿ ಎಲ್ಲ ಸಂಪರ್ಕಗಳನ್ನು ಕಡಿದು, ಸತತ ಎಂಟು ಗಂಟೆಗಳ ಕಾಲ ಮನೆ ಸದಸ್ಯರ ವಿಚಾರಣೆ ನಡೆಸಿ ವರವರರಾವ್ ಅವರನ್ನು ಬಂಧಿಸಿದ್ದಾರೆ.
ಇಬ್ಬರು ಪತ್ರಕರ್ತರು, ಒಬ್ಬ ಪ್ರೊಫೆಸರ್ ವಶಕ್ಕೆ; ವರವರರಾವ್ ಜೊತೆಗೆ ಇನ್ನೂ ಏಳು ಜನರನ್ನು ಮೋದಿ ಹತ್ಯೆ ಸಂಚು ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಇಬ್ಬರು ಪತ್ರಕರ್ತರು, ಇಎಫ್‌ಎಲ್‌ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಇದ್ದಾರೆ ಎನ್ನಲಾಗಿದೆ. ವರವರರಾವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬ್ಯಾಂಕ್ ಖಾತೆ, ಇ-ಮೇಲ್ ತನಿಖೆ; ವರವರರಾವ್ ಅವರ ಬ್ಯಾಂಕ್ ಖಾತೆ, ಇ-ಮೇಲ್ ಸೇರಿ ಎಲ್ಲವನ್ನೂ ತನಿಖೆಗೆ ಒಳಪಡಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಅಷ್ಟೆ ಕೊರೆಗಾಂವ್ ಗಲಭೆ ತನಿಖೆ ವೇಳೆಯಲ್ಲಿ ಮೋದಿ ಅವರನ್ನು ರಾಜೀವ್ ಮಾದರಿಯಲ್ಲಿ ಹತ್ಯೆ ಮಾಡಬೇಕು ಎಂದು ಬರೆದಿದ್ದ ಪತ್ರವೊಂದು ಪೊಲೀಸರಿಗೆ ದೊರೆತಿತ್ತು. ಹಾಗಾಗಿ ಮೋದಿ ಅವರಿಗೆ ಗರಿಷ್ಟ ಭದ್ರತೆ ನೀಡಲಾಗುತ್ತಿದೆ.
ಆತ್ಮಹತ್ಯೆ ಬಾಂಬ್ ಸ್ಫೋಟಿಸಲು ಸಂಚು; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಮಾನವ ಬಾಂಬ್ ಮೂಲಕ ಎಲ್‌ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಅದೇ ಮಾದರಿಯಲ್ಲಿ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ.
ಬೇರೆ ರಾಜ್ಯಗಳಿಗೂ ಪೊಲೀಸರ ಭೇಟಿ; ವರವರರಾವ್ ಅವರು ನೆರವು ಬೇಡಿದ್ದ ವ್ಯಕ್ತಿಗಳನ್ನೂ ವಿಶೇಷ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜಾರ್ಖಂಡ್, ಗೋವಾ, ಆಂಧ್ರಪ್ರದೇಶ, ದೆಹಲಿಗಳಿಗೂ ವಿಶೇಷ ಪೊಲೀಸ್ ದಳ ಭೇಟಿ ನೀಡಿ ಈಗಾಗಲೇ ತನಿಖೆ ಆರಂಭಿಸಿದೆ.
Leave A Reply