ಬಜೆಟ್ ಹಣ ಬಿಡುಗಡೆಗೆ ಪರ್ಸೆಂಟೇಜ್ ಕೇಳಿದ ವಿಚಾರ ಬಯಲು
ಮಂಗಳೂರು: ಸರಕಾರಿ ಯೋಜನೆಗಳಿಗೆ ಪರ್ಸೆಂಟೇಜ್ ನೀಡದಿದ್ದರೆ ಕೆಲಸಗಳೇ ಮುಂದೆ ಸಾಗಲ್ಲ ಎನ್ನುವುದು ಜನರಲ್ಲಿರುವ ಸಾಮಾನ್ಯ ಅಭಿಪ್ರಾಯ. ಯೋಜನೆಗಳ ಹಣದಲ್ಲಿ ಇಂತಿಷ್ಟು ಪರ್ಸೆಂಟ್ ಶಾಸಕರಿಗೆ, ಅಧಿಕಾರಿಗಳಿಗೆ ಹೋಗೇ ಹೋಗುತ್ತೆ ಅನ್ನೋದು ಜನರ ಅನಿಸಿಕೆ. ಈಗ ಬಜೆಟ್ ಹಣ ಬಿಡುಗಡೆ ಮಾಡೋದಕ್ಕೂ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ವಿಚಾರ ಬಯಲಾಗಿದೆ.
ಮಂಗಳೂರಿನಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸ್ವತಃ ಶಾಸಕರ ಎದುರಲ್ಲೇ ಈ ವಿಚಾರ ಬಾಯ್ಬಿಟ್ಟಿದ್ದು, ಬಜೆಟ್ ಹಣ ಬಿಡುಗಡೆ ಆಗಬೇಕಿದ್ದರೆ ಹಣಕಾಸು ಇಲಾಖೆಗೆ ಲಂಚ ಕೊಡಬೇಕು ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಓಗಳಲ್ಲಿ ತಾಪಂ ಇಓ ಸದಾನಂದ, ಈ ಬಗ್ಗೆ ಲಂಚದ ಬೇಡಿಕೆ ಇಟ್ಟಿದ್ದರು. ಆದರೆ, ಪಿಡಿಓಗಳು ಒಟ್ಟು ಸೇರಿ ಕಾರ್ಯ ನಿರ್ವಹಣಾಧಿಕಾರಿ ಕಚೇರಿಗೆ ಆಗಮಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಈ ಬಗ್ಗೆ ತಾಲೂಕು ಪಂಚಾಯತ್ ಇಓ ಬಳಿ ಪ್ರಶ್ನಿಸಿದಾಗ, ಸ್ವತಃ ಅಧಿಕಾರಿ ಹಣಕಾಸು ಇಲಾಖೆಗೆ ಸಂದಾಯ ಮಾಡಬೇಕಿರುವುದನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಶಾಸಕರು ಹೊಸಬರಾಗಿದ್ದರಿಂದ ನಿಮಗೆ ಇದೆಲ್ಲ ಅರ್ಥ ಆಗಲ್ಲ ಅನ್ನುವ ಹಾರಿಕೆಯ ಮಾತನ್ನೂ ಆಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿ ನಡೆದ ಮಾತುಕತೆ ಎಲ್ಲವೂ ಮೊಬೈಲ್ ನಲ್ಲಿ ಸೆರೆಯಾಗಿದ್ದು, ರಾಜ್ಯದ ಹಣಕಾಸು ಇಲಾಖೆಯಿಂದಲೇ ಮಾಮೂಲಿ ಕಲೆಕ್ಷನ್ ಮಾಡ್ತಾರೆ ಅನ್ನೋದಕ್ಕೆ ದಾಖಲೆಯಾಗಿ ಪರಿಣಮಿಸಿದೆ.
Leave A Reply