ಎರಡೂವರೆ-ಮೂರು ಲಕ್ಷ ಅಂತರದಲ್ಲಿ ಸೋಲಲು ದ.ಕ ಕಾಂಗ್ರೆಸ್ ಮಾನಸಿಕವಾಗಿ ರೆಡಿಯಾಗಿ!!
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯದಲ್ಲಿ ಮಾದರಿ ಎನಿಸಿಕೊಂಡಿದೆ. ತಿಳುವಳಿಕೆ ಇಲ್ಲದವರು ಯಾರು ಎನ್ನುವುದನ್ನು ಕುಮಾರಸ್ವಾಮಿ ಲೆಕ್ಕ ಹಾಕುವುದು ಮಾತ್ರ ಬಾಕಿ. ಪುನರಚಿತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಸೋಲುತ್ತಾರೆ ಎನ್ನುವುದು ಮೇಲ್ನೋಟಕ್ಕೆ ಸದ್ಯ ಸಿಗುತ್ತಿರುವ ಮಾಹಿತಿ. ಸರಾಸರಿ ಎಂಭತ್ತು ಶೇಕಡಾ ಮತದಾನವನ್ನು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಾಖಲಿಸುವ ಮೂಲಕ ಸೋಲು-ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದೆ. ಅಷ್ಟಕ್ಕೂ ಈ ಬಾರಿ ಈ ಪ್ರಮಾಣದಲ್ಲಿ ಮತದಾನ ಆಗಲು ಕಾರಣವೇನು? ಮೊದಲನೇಯದಾಗಿ ಕಳೆದ ಬಾರಿ ಜನ ಯುಪಿಎಯ ದುರಾಡಳಿತದ ಪರಿಣಾಮವಾಗಿ ಬದಲಾವಣೆ ಬೇಕೆಂದು ಬಯಸಿ ಮತ ಚಲಾಯಿಸಿದ್ದರು. ಈ ಬಾರಿ ಮೋದಿ ಯಾವುದೇ ಕಾರಣಕ್ಕೂ ಸೋಲಲೇ ಬಾರದು ಎನ್ನುವ ಕಾರಣಕ್ಕೆ ಮತ ಚಲಾಯಿಸಿದ್ದಾರೆ. ಅದು ಒಬ್ಬ ನಾಯಕ ಉಳಿಸಿಕೊಂಡಿರುವ ಇಮೇಜ್. 15 ಲಕ್ಷ ತರಲಿಲ್ಲ ಎನ್ನುವುದರಿಂದ ಹಿಡಿದು ಪಂಪ್ವೆಲ್ ಪ್ಲೈ ಒವರ್ ತನಕ ವಿರೋಧಿಗಳು ಎಸೆದ ಪ್ರತಿಯೊಂದು ಇಟ್ಟಿಗೆಯೂ ಮೋದಿ, ನಳಿನ್ ಹತ್ತಿರಕ್ಕೂ ಹೋಗಿಲ್ಲ ಎನ್ನುವುದು ಇವತ್ತು ನಡೆದ ಮತದಾನದ ಮೂಲಕ ಸ್ಪಷ್ಟವಾಗಿದೆ. ಮುಖ್ಯವಾಗಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಮೋದಿಯವರು ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಿರುವುದು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು, ನಮ್ಮ ಸೈನಿಕರ ಬಲಿದಾನಕ್ಕೆ ಪ್ರತೀಕಾರ ತೀರಿಸಲೇಬೇಕು ಎಂದು ಯಾವಾಗ ಜನ ತಮ್ಮ ತಮ್ಮಲ್ಲಿ ಮಾತನಾಡಲು ಶುರು ಮಾಡಿಕೊಂಡರೋ ಅಲ್ಲಿ ಮೋದಿ ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಒಂದು ಸರಿಹೊತ್ತಿನಲ್ಲಿ ಜನ ನಿದ್ರೆಯಿಂದ ಏಳುತ್ತಿರುವಾಗಲೇ ಟಿವಿಗಳಲ್ಲಿ ಭಯೋತ್ಪಾದಕರ ಮೇಲೆ ಸಾವಿನ ನರ್ತನದ ಸುದ್ದಿಗಳು ಬ್ರೇಕಿಂಗ್ ಆಗಿ ಮೂಡಿಬರುತ್ತಿದ್ದವು. ಜನ ಮೋದಿಯವರಿಗೆ ಮನಸ್ಸಿನಲ್ಲಿಯೇ ಉಘೇ ಉಘೇ ಎಂದರು. ಅದರ ಹಿಂದೆ ಒಂದಿಷ್ಟು ಹೋಗೋಣ. ಶ್ರೀಮಂತರು ಹಣದ ಹೊಳೆಯಲ್ಲಿ ತೇಲುತ್ತಿರುವಾಗ ಜನಸಾಮಾನ್ಯರಿಗೆ ಅಗರ್ಭ ಶ್ರೀಮಂತರು ಹೇಗೆ ಇಷ್ಟು ಹಣ ಮಾಡಿದ್ದಾರೆ. ತೆರಿಗೆಯ ಹಣವನ್ನು ಎಷ್ಟು ಹಿಡಿಸಿದ್ದಾರೋ ಎಂದು ಅನಿಸುತ್ತಿತ್ತು. ಒಂದು ಸರಿಹೊತ್ತಿನಲ್ಲಿ ಮೋದಿಯವರು ಮಧ್ಯರಾತ್ರಿಯಿಂದ ಐನೂರು, ಸಾವಿರದ ನೋಟು ಬ್ಯಾನ್ ಎಂದರು. ಕೆಳವರ್ಗದ ನಾಗರಿಕರು ಮತ್ತೊಮ್ಮೆ ಮೋದಿಗೆ ಜೈ ಎಂದರು. ಉದ್ಯಮಿಗಳು, ವ್ಯಾಪಾರಿಗಳು ಸರಕಾರಕ್ಕೆ ತೆರಿಗೆಯನ್ನು ತಪ್ಪಿಸುತ್ತಲೇ ತಮ್ಮ ಉದ್ಯಮವನ್ನು ಬೆಳೆಸುತ್ತಿದ್ದರು. ತೆರಿಗೆ ಪಾವತಿಸುವವರ ಸಂಖ್ಯೆ ಇಡೀ ರಾಷ್ಟ್ರದಲ್ಲಿ ಬೆರಳಲ್ಲಿ ಲೆಕ್ಕ ಮಾಡುವುದಕ್ಕಿಂತ ಕಡಿಮೆ ಇತ್ತು. ಇದರಿಂದ ದೇಶದ ಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆಯನ್ನು ಮೋದಿ ಜನರ ಮುಂದೆ ಇಟ್ಟರು. ಜನ ನೀವೆ ಪರಿಹಾರ ಕೊಡಿ ಎಂದು ಮೋದಿಯವರತ್ತ ನೋಡಿದರು. ಮೋದಿಯವರು ಜಿಎಸ್ ಟಿ ತರುತ್ತೇನೆ ಎಂದರು. ತೆರಿಗೆ ಸರಿಯಾಗಿ ಪಾವತಿಯೂ ಆಗುವಂತಾಯಿತು, ದೇಶದ ಅಭಿವೃದ್ಧಿಗೂ ಈ ಹಣ ಬಳಕೆಯಾಗುವಂತೆ ಆಯಿತು. ಇನ್ನು ಮೋದಿ ವಿಶ್ವದ ಅನೇಕ ರಾಷ್ಟ್ರಗಳ ಕಣ್ಣಿನಲ್ಲಿ ಭಾರತದ ಇಮೇಜನ್ನು ಎತ್ತಿಹಿಡಿದರು. ಹೀಗೆ ಬರೆಯುತ್ತಾ ಹೋದರೆ ಮೋದಿಯವರ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಂತ ಮೋದಿ ಐದು ವರ್ಷಗಳಲ್ಲಿ ಎಲ್ಲವನ್ನು ಮಾಡಿದ್ದಾರಾ? ಸಾಧ್ಯವೇ ಇಲ್ಲ. ಆದರೆ ತಳಪಾಯ ಬಿದ್ದಿದೆ. ಇನ್ನು ಅದರ ಮೇಲೆ ಮೊದಲ ಮಹಡಿ ಕಟ್ಟುವುದು. ಅದಕ್ಕಾಗಿ ಜನ ತಮ್ಮ ಮತಗಳ ಮೂಲಕ ಮೋದಿಯವರ ಕಾರ್ಯಕ್ಕೆ ಜೈ ಎಂದಿದ್ದಾರೆ. ಮೋದಿ ಮತ್ತೆ ಮುಂಡಾಸು ಕಟ್ಟಿ ದೇಶದ ಕಾಯಕಕ್ಕೆ ಮುಂದಾಗಲಿದ್ದಾರೆ.
ಮಿಥುನ್ ಕಥೆ ಏನು…
ಹಾಗಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನಾಗಬಹುದು. ಸಂಶಯವೇ ಇಲ್ಲ. ನನ್ನ ಪ್ರಕಾರ ಈ ಬಾರಿಯ ಮತದಾನದ ಶೇಕಡಾವಾರು ನೋಡಿದಾಗ ಎರಡೂವರೆ ಲಕ್ಷದಿಂದ ಮೂರು ಲಕ್ಷದ ಒಳಗಿನ ಅಂತರದಲ್ಲಿ ನಳಿನ್ ಕುಮಾರ್ ಕಟೀಲ್ ಗೆಲ್ಲಲಿದ್ದಾರೆ. ಹದಿನೇಳು ಲಕ್ಷದ ಮತದಾರರಲ್ಲಿ 80 ಶೇಕಡಾ ಮತದಾನ ಎಂದರೆ ಎರಡೂವರೆ ಲಕ್ಷದ ಅಂತರ ದೊಡ್ಡದಲ್ಲ. ಕಳೆದ ಬಾರಿ ಗೆದ್ದದ್ದು ಒಂದು ಲಕ್ಷದ ನಲ್ವತ್ತೇರಡು ಸಾವಿರದ ಅಂತರ. ಅದರ ಹಿಂದಿನ ಬಾರಿ ನಲ್ವತ್ತು ಸಾವಿರದ ಮತಗಳ ಅಂತರ. ಈ ಬಾರಿ ಆ ಎರಡೂ ಅಂತರಗಳನ್ನು ಸೇರಿಸಿ ಇನ್ನೊಂದೈವತ್ತು ಸಾವಿರ ಹೆಚ್ಚಿಗೆನೆ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿಯಾದರೂ ಜನಾರ್ಧನ ಪೂಜಾರಿಯವರಿಗೆ ಒಂದು ಅವಕಾಶ ಕೊಡೋಣ ಎನ್ನುವ ಕನಿಷ್ಟ ಅನುಕಂಪವಾದರೂ ಇತ್ತು. ಆದರೆ ಕೊನೆಯ ಕ್ಷಣಕ್ಕೆ ಮೋದಿ ಪ್ರಧಾನಿಯಾಗಬೇಕು ಎನ್ನುವ ದೃಷ್ಟಿಯಿಂದ ಚುನಾವಣೆ ಏಕಪಕ್ಷೀಯವಾಗಿ ಹೋಗಿತ್ತು. ಆದರೆ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯ ಪರವಾಗಿ ಅವರ ಪಕ್ಷದವರೇ ಬೆವರು ಸುರಿಸಿಲ್ಲ. ದಡ ಸೇರಿಸಬೇಕಿದ್ದ ಯುಟಿ ಖಾದರ್ ಉಳ್ಳಾಲದಲ್ಲಿ ಎಸ್ ಡಿಪಿಐಯವರನ್ನು ಬೈಯುತ್ತಾ ಓಡಾಡಿಕೊಂಡರು. ಇದು ಸಹಜವಾಗಿ ಮುಸ್ಲಿಮರ ಕೋಪಕ್ಕೆ ಕಾರಣವಾಯಿತು. ಅಲ್ಲಿನ ಹಿಂದೂ ಜನರಿಗೆ ಖಾದರ್ ಮೇಲೆಯಾದರೂ ಒಂದಿಷ್ಟು ಪ್ರೀತಿ ಇದೆ. ಹಿಂದೂಗಳ ಕಾರ್ಯಕ್ರಮಕ್ಕೆ ಬರುತ್ತಾರೆ. ಸತ್ಯನಾರಾಯಣ ಪೂಜೆಯಿಂದ ಮಗುವಿನ ತೊಟ್ಟಿಲು ಶಾಸ್ತ್ರದ ನಂತರ ಎಲ್ಲದಕ್ಕೂ ಬರುತ್ತಾರೆ ಎನ್ನುವ ಕಾರಣಕ್ಕಾದರೂ ಹಿಂದೂಗಳು ಖಾದರ್ ಗೆ ವೋಟ್ ಹಾಕುತ್ತಾರೆ. ಆದರೆ ಲೋಕಸಭಾ ವಿಷಯಕ್ಕೆ ಬಂದಾಗ ಅವರಿಗೆ ಅಲ್ಲಿ ಸೆಂಟಿಮೆಂಟ್ ಇಲ್ಲ.
ಯಾರು ಮಿಥುನ್ ಪರ-ವಿರುದ್ಧ…
ಇನ್ನು ಮಂಗಳೂರು ನಗರ ದಕ್ಷಿಣದ ಮಾಜಿ ಶಾಸಕರ ಪರಿಸ್ಥಿತಿ ಹೇಗಿದೆ ಎಂದರೆ ಅವರದ್ದೇ ಕ್ಷೇತ್ರದಲ್ಲಿ ಶತ್ರುಷ್ನ ಸಿನ್ನಾ ಕಾರ್ಯಕ್ರಮ ಇದ್ದಾಗ ಅವರಿಗೆ ನೂರು ಜನರನ್ನು ಸೇರಿಸಲು ಆಗಲಿಲ್ಲ. ಅದು ಅವರಿಗೆ ದೊಡ್ಡ ಹಿನ್ನಡೆ. ಇನ್ನು ಬಾವ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ತಮ್ಮ ಸಾಧನೆ ಹೇಳಲು ಸುದ್ದಿಗೋಷ್ಟಿ ಬಳಸಿಕೊಂಡರೇ ವಿನ: ಮಿಥುನ್ ಅವರಿಗೆ ನೆನಪೇ ಆಗಲಿಲ್ಲ. ಇನ್ನು ಅಭಯರು ಶಾಸಕ ಚುನಾವಣೆಯ ಸಂದರ್ಭದಲ್ಲಿ ಮಿಥುನ್ ಗೆ ಕೈಕೊಟ್ಟ ಕಾರಣದಿಂದ ಸಣ್ಣ ರೈಯನ್ನು ಕರೆದುಕೊಂಡು ಕೆಲವು ದೇವಸ್ಥಾನ, ಚರ್ಚ್, ಮಸೀದಿಗೆ ಹೋದರು ಬಿಟ್ಟರೆ ಮಿಥುನ್ ಇತ್ತ ಬಂದಂತೆ ಅವರು ಮನೆಯ ಎಸಿ ಕೋಣೆ ಸೇರಿಕೊಂಡರು. ವಸಂತ ಬಂಗೇರ ಅವರು ಬಹಿರಂಗ ಸಭೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಐವನ್ ಡಿಸೋಜಾ ಅವರಿಗೆ ಮತ ನೀಡಿ ಎಂದು ಹೇಳಿದ್ದೇ ಟ್ರೋಲ್ ಗೆ ಒಳಗಾಯಿತು. ಅವರು ರಂಜನ್ ಗೌಡ ಅವರನ್ನು ಪಕ್ಷಕ್ಕೆ ಸೇರಿಸಲು ಒಂದೆರಡು ಬಾರಿ ಗಂಗಾಧರ ಗೌಡರಿಗೆ ಫೋನ್ ಮಾಡಿದ್ದೇ ಅವರ ಸಾಧನೆ. ಇನ್ನು ರಘು ಸುಳ್ಯಕ್ಕೆ ಬಂದರೋ ಇಲ್ಲವೋ. ಶಕುಂತಳಾ ಶೆಟ್ಟಿ ಪುರಭವನದಲ್ಲಿ ಮಿಥುನ್ ನಾಮಪತ್ರ ಸಲ್ಲಿಸುವ ಮೊದಲು ಕಾಣಿಸಿಕೊಂಡದ್ದೇ ದೊಡ್ಡದು. ರಮಾನಾಥ್ ರೈ ಅವರು ಮಿಥುನ್ ಭಾಷಣ ಮಾಡುವಾಗ ಹಿಂದೆ ನಿಂತು ತಲೆ ಕೆರೆದುಕೊಂಡು ಇವನಿಗೆ ಯಾರು ಮತ ಕೊಡುತ್ತಾರೆ ಎನ್ನುವಂತೆ ತೋರುತ್ತಿದ್ದರು. ಇದ್ದದ್ದರಲ್ಲಿ ಸ್ವಲ್ಪ ಹೋರಾಟ ಮಾಡಿದ್ದು ಐವನ್ ಡಿಸೋಜಾ. ಈ ಮೂಲಕ ಮಿಥುನ್ ಸೋತರೂ ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಚುನಾವಣೆ ಬಂದಾಗ ಟಿಕೆಟಿಗೆ ಅಡ್ಡ ಬರಬಾರದು ಎನ್ನುವ ಅಲಿಖಿತ ಒಪ್ಪಂದ ಐವನ್-ಮಿಥುನ್ ನಡುವೆ ಆದಂತೆ ಕಾಣುತ್ತಿದೆ!
Leave A Reply