ಕೇಂದ್ರ ಸಚಿವ ಸದಾನಂದ ಗೌಡರು ಆವತ್ತು ಮಂಗಳೂರಿಗರಿಗೆ ಮಾಡಿದ ಅನ್ಯಾಯ?
ಸದಾನಂದ ಗೌಡರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಗರು ತುಂಬಾ ಖುಷಿ ಪಡುತ್ತಿದ್ದಾರೆ. ನನಗೆ ಅವರಿಗೆ ಮಂತ್ರಿಗಿರಿ ಸಿಗಲಿ ಅಥವಾ ಭವಿಷ್ಯದಲ್ಲಿ ಪ್ರಧಾನಿ ಹುದ್ದೆಯೇ ಸಿಗಲಿ ಯಾವುದೇ ಬೇಸರವಿಲ್ಲ. ಆದರೆ ದಕ್ಷಿಣ ಕನ್ನಡದಲ್ಲಿ ಚುನಾವಣೆಗೆ ನಿಲ್ಲಲಾಗದೇ ಬೆಂಗಳೂರಿನಲ್ಲಿ ನಿಂತು ಮನೆಗೆ ಮಾರಿ ಊರಿಗೆ ಉಪಕಾರಿಯಾಗಿರುವ ಸದಾನಂದ ಗೌಡರು ಯಾವ ರೀತಿಯಲ್ಲಿ ಮಂಗಳೂರಿಗೆ ಅನ್ಯಾಯ ಎಸಗಿದ್ದಾರೆ ಎನ್ನುವುದರ ಅನೇಕ ಉದಾಹರಣೆಗಳಲ್ಲಿ ಒಂದನ್ನು ಇವತ್ತು ಹೇಳುತ್ತಿದ್ದೇನೆ.
ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಂಗಳೂರನ್ನು ನೈರುತ್ಯ ರೈಲ್ವೆ ಇಲಾಖೆಗೆ ಸೇರಿಸಬೇಕೆಂದು ತಾವು ಪ್ರಧಾನಿಯಾಗಿದ್ದಾಗ ಸೂಚನೆ ನೀಡಿದ್ದರು. ಅದು ಕಡತಗಳಲ್ಲಿ ಸೇರಿ ಹಾಗೆಯೇ ಉಳಿದಿತ್ತು. ಅದನ್ನು ನಂತರ ಬಂದ ಯಾವ ರೈಲ್ವೆ ಸಚಿವರು ಜಾರಿಗೆ ತಂದಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಇದರ ಹಿಂದಿದ್ದ ಕೇರಳ ಲಾಬಿ. ವಿಷಯ ಏನೆಂದರೆ ಮಂಗಳೂರಿನ ನೇತ್ರಾವತಿ ಸೇತುವೆ ಅಥವಾ ಉಳ್ಳಾಲ ಬ್ರಿಡ್ಜ್ ಕೊಂಕಣ ರೈಲ್ವೆ ನಿಗಮದ ಅಡಿಯಲ್ಲಿ ಬರುತ್ತಿತ್ತು. ಆದರೆ ದಕ್ಷಿಣ ರೈಲ್ವೆಯವರು ಏನು ಮಾಡಿದರು ಎಂದರೆ ತೋಕೋರುವರೆಗಿನ ಪ್ರದೇಶವನ್ನು ತಮ್ಮ ವಲಯದ ಒಳಗೆ ಸೇರಿಸಿಕೊಂಡರು. ಇದು ಓದುವಾಗ ತುಂಬಾ ಚಿಕ್ಕ ವಿಷಯ ಎನ್ನುವಂತೆ ಕಾಣಬಹುದು. ಉಳ್ಳಾಲ ಬ್ರೀಡ್ಜ್ ನಿಂದ ತೋಕೋರು ಏನು ಮಹಾ ದೂರ ಇದೆ. ಅದರಲ್ಲಿ ನಾವು ಕಳೆದುಕೊಳ್ಳುವುದು ಏನಿದೆ ಎಂದು ಅನಿಸಬಹುದು. ಆದರೆ ವಿಷಯ ಏನೆಂದರೆ ಅಷ್ಟೆ ಕಡಿಮೆ ಪ್ರದೇಶದಲ್ಲಿ ಮೂರು ಬಂಗಾರದ ಮೊಟ್ಟೆ ಇಡುವ ಕೋಳಿಗಳು ಕುಳಿತು ತಿಂಗಳಿಗೆ ನಾಲ್ಕು ಕೋಟಿ ಬೆಲೆ ಬಾಳುವ ಮೊಟ್ಟೆಗಳನ್ನು ಇಡುತ್ತಿವೆ. ಆ ಮೊಟ್ಟೆಗಳನ್ನು ನಮಗೆ ಗೊತ್ತಿಲ್ಲದೇ ಕೇರಳದ ಲಾಬಿ ಹೊತ್ತೊಯ್ಯುತ್ತಿದೆ. ನಾವು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿ ಸದಾನಂದ ಗೌಡರು ನಮ್ಮವರು, ಅವರಿಗೆ ಮಿನಿಷ್ಟರ್ ಮಾಡಿದ್ರೆ ನಮಗೆ ಮಾಡಿದ ಹಾಗೆ ಎಂದು ಅವರ ಹಾಗೆ ಮೂವತ್ತೆರಡು ಹಲ್ಲು ಬಿಟ್ಟು ಬಿಜೆಪಿ ಕಚೇರಿಯಲ್ಲಿ ಕುಳಿತು ನಗುತ್ತೇವೆ.
ಈಗ ಕೇರಳ ಲಾಬಿಗೂ, ವಾಜಪೇಯಿಯವರ ಸೂಚನೆಗೂ, ಸದಾನಂದ ಗೌಡರ ನಿಷ್ಕ್ರಿಯತೆಗೂ ಏನು ಸಂಬಂಧ ಎಂದು ನಿಮಗೆ ಅನಿಸುತ್ತದೆ.
ಮೊದಲನೇಯದಾಗಿ ಸದಾನಂದ ಗೌಡರು ರೈಲ್ವೆ ಸಚಿವರಾದ ನಂತರ ಅವರ ಮುಂದೆ ಕಡತ ತಂದು ಇಟ್ಟ ರೈಲ್ವೆ ಅಧಿಕಾರಿಯೊಬ್ಬರು ” ಸಾಹೇಬ್, ನೀವು ಮನಸ್ಸು ಮಾಡಿದರೆ ಒಂದು ಸಹಿ ಹಾಕುವ ಮೂಲಕ ಮಂಗಳೂರನ್ನು ನೈರುತ್ಯ ಇಲಾಖೆಗೆ ಸೇರಿಸುವ ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ನಿಮ್ಮ ಅವಧಿಯಲ್ಲಿ ವಿಶ್ವ ದರ್ಜೆ ಏರಿಸಲು ಅವಕಾಶವಿದೆ. ನೀವೂ ಹೇಗೂ ದಕ್ಷಿಣ ಕನ್ನಡ ಜಿಲ್ಲೆಯವರು. ಇಲ್ಲಿಯ ತನಕ ಬಂದ ಯಾವುದೇ ಸಚಿವರು ಅಟಲ್ ಜೀ ಮಾಡಿಟ್ಟು ಹೋದ ಆ ಕೆಲಸವನ್ನು ಅನುಷ್ಟಾನಗೊಳಿಸಿರಲಿಲ್ಲ. ನೀವು ಮಾಡಿದರೆ ಕೇರಳದ ಲಾಬಿಯನ್ನು ಕೊನೆಗೊಳಿಸಿ ಮಂಗಳೂರು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯನ್ನು ಆರಂಭಿಸಬಹುದು. ಈ ಮೂಲಕ ತಿಂಗಳಿಗೆ ಕೇರಳಕ್ಕೆ ಸೋರಿ ಹೋಗುತ್ತಿರುವ ಕೋಟ್ಯಾಂತರ ರೂಪಾಯಿಯನ್ನು ಇಲ್ಲಿಯೇ ಉಳಿಸಬಹುದು ಎಂದು ಹೇಳಿದರು. ಆದರೆ ಡಿವಿ ಸದಾನಂದ ಗೌಡರು ಅದನ್ನು ಮಾಡಲೇ ಇಲ್ಲ. ಮಂಗಳೂರನ್ನು ಡಿವಿಝನ್ ಮಾಡಲಾಗದ ಡಿವಿ ಕೊನೆಗೆ ಇದನ್ನು ಕೂಡ ಮಾಡದೇ ಬೆಂಗಳೂರು ವಿಮಾನ ಹತ್ತಿದ್ದರು. ಅವರು ಇಲ್ಲಿ ಮಾಡಿದ್ದು ಸ್ವಂತ ಆಸ್ತಿ ಮಾತ್ರ. ಅಷ್ಟಕ್ಕೂ ಆ ಮೂರು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಎಂಸಿಎಫ್, ಎಂಆರ್ ಪಿಎಲ್ ಮತ್ತು ಎನ್ ಎಂಪಿಟಿ!!!
Leave A Reply