ಜಾತಿ ಲೆಕ್ಕಾಚಾರದಲ್ಲಿ ಕುತೂಹಲ ಉಳಿಸಿದೆ ಮೂಲ್ಕಿ-ಮೂಡಬಿದ್ರೆ!
ಸದ್ಯ ಮೂಡಬಿದ್ರೆ ಕಾವ್ಯಾಳ ವಿಷಯದಲ್ಲಿ ಚರ್ಚೆಯಲ್ಲಿದೆ. ಅದರೊಂದಿಗೆ ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಎಪ್ರಿಲ್ ಒಳಗೆ ನಡೆಯುವ ಸಾವರ್ತಿಕ ಚುನಾವಣೆಯ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರ ಕೂಡ ಈ ಮೂಲ್ಕಿ-ಮೂಡಬಿದ್ರೆ ಕ್ಷೇತ್ರ.
ಯಾಕೆ ಈ ಕ್ಷೇತ್ರವೇ ಹೆಚ್ಚು ಸುದ್ದಿ?
ರಾಜಕಾರಣದಲ್ಲಿ ಒಂದು ಮಾತಿದೆ. ಒಮ್ಮೆ ಶಾಸಕ, ಸಚಿವ, ಸಂಸದನಾದವ ತನ್ನ ಕೊನೆ ಉಸಿರಿರುವರೆಗೂ ಆ ಪೋಸ್ಟಿನಿಂದ ಕೆಳಗಿಳಿಯಲು ಬಯಸುವುದಿಲ್ಲ. ತನಗೆ ನಡೆಯಲು ಆಗುವುದಿಲ್ಲವೆಂದು ಗೊತ್ತಿದ್ದರೂ ಸೋಲುವ ತನಕ ಸ್ಪರ್ಧೆ ಕೊಡಲು ಯಾವ ಜನಪ್ರತಿನಿಧಿ ಕೂಡ ಹಿಂಜರಿಯುವುದಿಲ್ಲ. ಆದರೆ ಮೂಡಬಿದ್ರೆಯಲ್ಲಿ ಈ ಬಾರಿ ಏನಾಗಿದೆ ಎಂದರೆ ಈ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಸಿಟ್ಟಿಂಗ್ ಎಂ ಎಲ್ ಎ ಕೆ ಅಭಯಚಂದ್ರ ಜೈನ್ ಅವರು ತಾನು ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಆಪ್ತರೊಂದಿಗೆ ವಿಷಯ ಹಂಚಿಕೊಂಡಿದ್ದಾರೆ. ಯಾವಾಗ ಅಭಯರು ತಾನು ಮುಂದಿನ ಬಾರಿ ಅಭ್ಯರ್ಥಿ ಅಲ್ಲ ಎಂದು ಸಾರಿದರೋ, ಕಾಂಗ್ರೆಸ್ ಇಲ್ಲಿಯ ತನಕ ಸೋಲದೆ ಇರುವ ಜಿಲ್ಲೆಯ ಏಕೈಕ ಕ್ಷೇತ್ರದಲ್ಲಿ ನಿಲ್ಲಲು ಕಾಂಗ್ರೆಸ್ಸಿನಿಂದ ಒಂದಿಷ್ಟು ಮಂದಿ ತಯಾರಾದದ್ದು ಸುಳ್ಳಲ್ಲ. ಆದರೆ ಏನಾಯಿತು ಎಂದರೆ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿರುವ, ಆರ್ತಿಕವಾಗಿಯೂ ಸಬಲರಾಗಿರುವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಿಥುನ್ ರೈ ಅವರು ಅಭಯಚಂದ್ರರ ಒಲವನ್ನು ಗಳಿಸಿ ಆ ಕ್ಷೇತ್ರದಲ್ಲಿ ನಿಲ್ಲುವ ಮನಸ್ಸು ಮಾಡಿದರು. ಅದಕ್ಕೆ ಆಂತರಿಕವಾಗಿ ಅಭಯಚಂದ್ರ ಜೈನ್ ಒಕೆ ಎಂದ ಕಾರಣ ಮಿಥುನ್ ರೈ ಮೂಲ್ಕಿ-ಮೂಡಬಿದ್ರೆಯಲ್ಲಿ ಓಡಾಟ ಆರಂಭಿಸಿದರು. ಮುಂದಿನ ಬಾರಿ ಪ್ರಶಾಂತ್ ಪೂಜಾರಿ ಹತ್ಯೆ, ಅಕ್ರಮ ದನ ಸಾಗಾಟ ವಿಷಯಗಳೆ ಹೆಚ್ಚು ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಮಿಥುನ್ ರೈ ಅಲ್ಲಿ ಗೋದಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಂಗ್ರೆಸ್ ಕೂಡ ಹಿಂದೂಗಳ ಪರವಾಗಿರುವ ಪಕ್ಷ ಎಂದು ತೋರಿಸುವ ಪ್ರಯತ್ನ ಮಾಡಿದರು. ಅಲ್ಲಿ ಯಾವುದೇ ಧರ್ಮ, ಜಾತಿ, ಸಂಘಟನೆಯ ಕಾರ್ಯಕ್ರಮ ಇದ್ದರೆ ಮಿಥುನ್ ರೈ ಮುಖ್ಯ ಅತಿಥಿಯಾಗುವುದು ಕಾಯಂ ಆಯಿತು.
ಆದರೆ ಕಳೆದ ಮೂರ್ನಾಕು ತಿಂಗಳುಗಳಿಂದ ಅಲ್ಲಿ ಮತ್ತೊಂದು ಬದಲಾವಣೆ ಕಂಡುಬಂದಿದೆ. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ತಾನು ಕೂಡ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದಾಗಿ ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಅನೇಕ ಕಾರ್ಯಕ್ರಮಗಳನ್ನು ಅಲ್ಲಿ ಹಮ್ಮಿಕೊಂಡಿದ್ದಾರೆ. ಮೂಡಬಿದ್ರೆಯ ಕ್ರೈಸ್ತರು ತಾನು ಅಲ್ಲಿಂದ ಸ್ಪರ್ಧಿಸಬೇಕು ಎಂದು ಬಯಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಸಿದ್ಧರಾಮಯ್ಯನವರ ನೇರ ಆರ್ಶೀವಾದದ ಅಡಿಯಲ್ಲಿ ಬರುವ ಐವನ್ ಡಿಸೋಜಾ ಈಗಾಗಲೇ ತಾನು ವಿಧಾನಪರಿಷತ್ ಗೆ ಆಯ್ಕೆಯಾಗಿರುವ ಮೊದಲ ಅವಧಿಯಲ್ಲಿಯೇ ಮುಖ್ಯ ಸಚೇತಕ ಸ್ಥಾನವನ್ನು ಕೂಡ ಸಂಪಾದಿಸಿ ಗೂಟದ ಕಾರು ಪಡೆದುಕೊಂಡಿರುವುದು ಅವರ ರಾಜಕೀಯ ಸಾಮರ್ಥಕ್ಕೆ ಹಿಡಿದ ಕೈಗನ್ನಡಿ.
ಆದರೆ ಕೊನೆಗೆ ಉಳಿಯುವುದು ಕಾಂಗ್ರೆಸ್ ಜಾತಿ, ಧರ್ಮದ ಲೆಕ್ಕಾಚಾರದಲ್ಲಿ ಹೋದರೆ ಮಿಥುನ್ ರೈ, ಐವನ್ ಡಿಸೋಜಾ ಇಬ್ಬರಿಗೂ ಟಿಕೇಟ್ ಸಿಗುವುದಿಲ್ಲ. ಹೇಗೆಂದರೆ ಮಿಥುನ್ ಬಂಟ ಸಮುದಾಯದವರು. ಜಿಲ್ಲೆಯಲ್ಲಿ ಮುಂದಿನ ಬಾರಿ ರಮಾನಾಥ ರೈ, ಶಕುಂತಳಾ ಶೆಟ್ಟಿ ಅಭ್ಯರ್ಥಿಗಳಾದರೆ ಮತ್ತೊರ್ವ ಬಂಟರಿಗೆ ಟಿಕೆಟ್ ಸಿಗುವುದು ಕಷ್ಟ. ಹಾಗೆ ಎಂಟರಲ್ಲಿ ಒಂದು ಸ್ಥಾನದಲ್ಲಿ ಸಿಟ್ಟಿಂಗ್ ಶಾಸಕ ಜೆ ಆರ್ ಲೋಬೋ ಅವರಿಗೆ ಟಿಕೆಟ್ ಕೊಟ್ಟರೆ ಇನ್ನೊರ್ವ ಕ್ರೈಸ್ತರಿಗೆ ಟಿಕೆಟ್ ಡೌಟ್. ಆದ್ದರಿಂದ ಕೊನೆಯಲ್ಲಿ ಇಬ್ಬರ ಜಗಳ ಜೈನರಿಗೆ ಟಿಕೆಟ್ ಉಳಿಯುತ್ತಾ ಎನ್ನುವುದು ಸದ್ಯದ ಕುತೂಹಲ.
Leave A Reply