ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ರೈಲು ಆರಂಭವಾಗಬೇಕು ಎನ್ನುವ ನಮ್ಮ ಹಲವು ವರ್ಷಗಳ ಬೇಡಿಕೆ ಕೊನೆಗೆ ಈಡೇರಿದ್ದು ನಿಮಗೆಲ್ಲಾ ಗೊತ್ತೆ ಇದೆ. ಸಾಮಾನ್ಯವಾಗಿ ರೈಲು ಎಂದ ಕೂಡಲೇ ಅದು ನಮ್ಮ ಖಾಸಗಿ ಆಸ್ತಿ ಎಂದು ಕೇರಳದ ರಾಜಕಾರಣಿಗಳು ಅಂದುಕೊಂಡಿದ್ದಾರೆ. ಆದ್ದರಿಂದ ಯಾವುದೇ ರೈಲು ಭಾರತದ ಯಾವುದೇ ಭಾಗದಿಂದ ಆರಂಭವಾದರೂ ಅದು ಒಮ್ಮೆ ಕೇರಳಕ್ಕೆ ಬಂದು ಹೋಗಬೇಕೆನ್ನುವುದು ಕೇರಳಿಗರ ಲಾಬಿ. ನಾವು ಬೆಂಗಳೂರು-ಮಂಗಳೂರು ರೈಲು ಆರಂಭವಾದಾಗ ಆ ರೈಲು ಹೇಗೂ ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ ಬಂದು ತಲುಪುತ್ತದೆ. ನಂತರ ಮತ್ತೆ ಇಳಿ ಸಂಜೆ ಆ ರೈಲು ಹೊರಡುವುದರಿಂದ ಅದರ ನಡುವೆ ಮಂಗಳೂರಿನಿಂದ ಕಾರವಾರಕ್ಕೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮತ್ತು ಬೆಂಗಳೂರಿನಲ್ಲಿ ಕಾರವಾರದಿಂದ ಮಂಗಳೂರಿನ ತನಕ ಸಾವಿರಾರು ಜನ ಉದ್ಯೋಗ ಮಾಡಿಕೊಂಡಿರುವುದರಿಂದ ಅಂತವರಿಗೆ ಬೆಂಗಳೂರಿನಿಂದ ನೇರವಾಗಿ ತಮ್ಮ ಊರಿಗೆ ಬರಲು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಆ ರೈಲನ್ನು ಯಶವಂತಪುರದಿಂದ ಮಂಗಳೂರು ಮಾರ್ಗವಾಗಿ ಕಾರವಾರದ ತನಕ ಹೋಗಲು ಪಶ್ಚಿಮ ಕರಾವಳಿ ಯಾತ್ರಿಕರ ಸಂಘದಿಂದ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆ ಮೂಲಕ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತಾಂತ್ರಿಕ ಒಪ್ಪಿಗೆ ಕೂಡ ಸಿಕ್ಕಿತ್ತು. ಆದರೆ ಆ ರೈಲನ್ನು ಕಣ್ಣೂರಿಗೆ ಕರೆದುಕೊಂಡು ಹೋಗಲು ತುದಿಗಾಲಲ್ಲಿ ನಿಂತಿದ್ದ ಆಗಿನ ರೈಲ್ವೆ ರಾಜ್ಯ ಸಹಾಯಕ ಸಚಿವ ಇ ಅಹ್ಮದ್ ಅವರು ಒಂದು ವೇಳೆ ಆ ರೈಲು ನೇರವಾಗಿ ಕಾರವಾರಕ್ಕೆ ಹೋದರೆ ತಮ್ಮ ಮರ್ಯಾದೆಗೆ ದಕ್ಕೆ ಆಗುತ್ತೆ ಎನ್ನುವ ಕಾರಣಕ್ಕೆ ಎಂಟು ಬೋಗಿ ಕಾರವಾರಕ್ಕೆ ಹೋಗಲಿ, ನಾಲ್ಕು ಬೋಗಿ ಕಣ್ಣೂರಿಗೆ ಹೋಗಲಿ ಎಂದು ನಿಯಮ ಮಾಡಿಸಿಕೊಂಡು ಬಂದರು. ಇದರಿಂದ ಮಂಗಳೂರಿಗೆ ಬರುವ ಯಶವಂತಪುರ ಟ್ರೇನ್ ಬೋಗಿ ಬೇರ್ಪಡುವಿಕೆ, ಇಂಜಿನ್ ಬದಲಾವಣೆ ಸಹಿತ ಅನೇಕ ತಾಂತ್ರಿಕ ಬದಲಾವಣೆಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ತುಂಬಾ ಸಮಯ ಕಳೆಯಬೇಕಾಗುತ್ತಿತ್ತು. ಅದರಿಂದ ಅದು ಕಾರವಾರ ತಲುಪುವಾಗ ಸಾಕಷ್ಟು ತಡವಾಗುತ್ತಿತ್ತು. ಆದರೆ ಇವತ್ತಿನ ವಿಶೇಷ ಎಂದರೆ ಇನ್ನು ಮುಂದೆ ಈ ರೈಲು ಮಂಗಳೂರಿನಿಂದ ಮುಂದೆ ಹೋಗಲ್ಲ.
ಅದೇಗೆ ಸಾಧ್ಯ? ಹೌದು, ಯಶವಂತಪುರದಿಂದ ಮಂಗಳೂರಿಗೆ ಬರುವ ರೈಲು ಇನ್ನು ಮುಂದೆ ಕಾರವಾರಕ್ಕೆ ಹೋಗುವುದಿಲ್ಲ. ಹಾಗಾದರೆ ಬೆಂಗಳೂರಿನಿಂದ ಕಾರವಾರದ ತನಕ ಹೋಗುವ ಪ್ರಯಾಣಿಕರು ಇನ್ನು ಮುಂದೆ ಯಶವಂತಪುರದಿಂದ ವಾಸ್ಕೋಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಬೇಕು. ಆದರೆ ಸಮಸ್ಯೆ ಎಂದರೆ ಯಶವಂತಪುರದಿಂದ ವಾಸ್ಕೋಗೆ ಹೋಗುವ ರೈಲು ಮಂಗಳೂರಿನ ಒಳಗೆ ಬರುವುದೇ ಇಲ್ಲ. ಅದು ನೇರವಾಗಿ ಪಡೀಲಿನ ಮೂಲಕ ಸುರತ್ಕಲ್ ಗೆ ಹೋಗಿ ಅಲ್ಲಿಂದ ವಾಸ್ಕೋಗೆ ಹೋಗುತ್ತದೆ. ಇದರಿಂದ ಮಂಗಳೂರಿನ ಜನರಿಗೆ ಆಗಲಿರುವ ಸಮಸ್ಯೆ ಏನು? ಇಲ್ಲಿಯ ತನಕ ಮಂಗಳೂರು ಸಹಿತ ಕರಾವಳಿಯ ಭಾಗದ ಜನರಿಗೆ ವಾಸ್ಕೋಗೆ ಹೋಗಲು ಯಾವುದೇ ರೈಲು ಸೌಲಭ್ಯ ಇರಲಿಲ್ಲ. ಆದ್ದರಿಂದ ಈ ಹೊಸ ರೈಲು ಬಂದಾಗ ಮಂಗಳೂರು ನಗರದ ಜನರಿಗೆ ಒಂದು ಖುಷಿ ಇತ್ತು. ಆದರೆ ಮಂಗಳೂರಿನಿಂದ ಹನ್ನೆರಡು ಕಿ.ಮೀ ದೂರ ಇರುವ ಸುರತ್ಕಲ್ ಗೆ ನಗರದವರು ಅವಲಂಬಿತವಾಗಬೇಕಾಗುತ್ತದೆ. ಅಷ್ಟೇ ಅಲ್ಲ ಒಂದು ವೇಳೆ ಜನರು ಆ ರೈಲಿನಲ್ಲಿ ಪ್ರಯಾಣಿಸಿದರೂ ಅದು ಸುರತ್ಕಲ್ ಗೆ ಬರುವುದು ಬೆಳಿಗ್ಗೆ 4 ಗಂಟೆಗೆ. ಟ್ಯಾಕ್ಸಿಯನ್ನು ನಂಬಿದರೆ ಯಶವಂತಪುರದಿಂದ ಸುರತ್ಕಲ್ ಗೆ ಬರಲು ಖರ್ಚಾಗುವುದಕ್ಕಿಂತ ಡಬ್ಬಲ್ ಬಾಡಿಗೆ ಬೀಳಲಿದೆ.
ಇನ್ನು ಯಶವಂತಪುರ- ಕಾರವಾರ ರೈಲು ರದ್ದಾದ ವಿಷಯ ತೆಗೆದುಕೊಳ್ಳೋಣ. ಯಾವುದೇ ರೈಲನ್ನು ಹಾಗೆ ಮನಸ್ಸು ಬಂದಂತೆ ರದ್ದು ಮಾಡಲು ರೈಲ್ವೆ ಸಚಿವರಿಗೂ ಅಧಿಕಾರವಿಲ್ಲ. ಯಾವುದೇ ಒಂದು ರೈಲನ್ನು ರದ್ದು ಮಾಡುವ ಮೊದಲು ಅದಕ್ಕೆ ಕೆಲವು ಪ್ರಕ್ರಿಯೆಗಳಿವೆ. ಮೊದಲನೇಯದಾಗಿ ಸದ್ರಿ ರೈಲು ವರ್ಷದಲ್ಲಿ 30%ಗಿಂತ ಕಡಿಮೆ ಆದಾಯವನ್ನು ವರ್ಷವೀಡಿ ಮಾಡುತ್ತಾ ಇದ್ದರೆ ರೈಲ್ವೆ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಇನ್ನು ವರ್ಷದ ಕೆಲವು ದಿನ ಮಾತ್ರ ಉತ್ತಮ ಆದಾಯ ಗಳಿಸುತ್ತಿದ್ದು, ಉಳಿದ ಸಮಯ ಕನಿಷ್ಟ 6 ತಿಂಗಳು 30% ಗಿಂತಲೂ ಕಡಿಮೆ ಆದಾಯದಲ್ಲಿ ಇದ್ದರೆ ಆಗ ಆ ಬಗ್ಗೆ ಯೋಚಿಸಬಹುದು. ಇನ್ನು ರದ್ದು ಮಾಡುವ ಮೊದಲು ಆ ರೈಲಿಗೆ ಬೇರೆ ಯಾವುದೇ ಅನುಕೂಲಕರ ಸಮಯ ನೀಡಿ ಆದಾಯ ಹೆಚ್ಚಾಗುತ್ತಾ ಎನ್ನುವುದನ್ನು ಪರಿಶೀಲಿಸಬಹುದು. ಉದಾಹರಣೆಗೆ ಕೆಲವು ರೈಲುಗಳ ಸಮಯ ಬದಲಾವಣೆಯಿಂದ ಅವು ಮತ್ತೆ ಲಾಭದತ್ತ ಮುಖ ಮಾಡಿ ಅಸಂಖ್ಯಾತ ಉದಾಹರಣೆಗಳಿವೆ. ಇದು ಯಾವುದೇ ಇಲ್ಲದೆ ಒಂದು ರೈಲು ರದ್ದು, ಇನ್ನೊಂದು ಮಂಗಳೂರು ಒಳಗೆ ಬರುವುದೇ ಇಲ್ಲ. ಹೀಗೆ ಮಂಗಳೂರಿನವರಿಗೆ ಅನ್ಯಾಯ ಮಾಡಿ ಯಶವಂತಪುರದಲ್ಲಿ ನಿಂತು ಫೋಸ್ ಕೊಟ್ಟರೆ ಆಗುತ್ತಾ ಎಂದು ಫೋಟೋಗೆ ನಿಂತವರು ಹೇಳಬೇಕು!
Leave A Reply