ಫಸ್ಟ್ ನ್ಯೂರೋದ ಬಗ್ಗೆ ತನಿಖೆ ಮಾಡಲು ಕಾಂಗ್ರೆಸ್, ಬಿಜೆಪಿ ಆಗ್ರಹಿಸಲಿ!!
ಫಸ್ಟ್ ನ್ಯೂರೋ ಆಸ್ಪತ್ರೆಯ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವಿವಿಧ ಸ್ಟೋರಿಗಳು ಬರುತ್ತಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಭಾನುವಾರ ಕಾರವಾರದಿಂದ ವರದಿ ಮಾಡುತ್ತಿದ್ದ ಸುವರ್ಣ ಟಿವಿ ವಾಹಿನಿಯ ವರದಿಗಾರರು ಕೂಡ ಆ ಭಾಗದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕಿತರಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಇದೆ ಎಂದು ವಿಶ್ಲೇಷಿಸುತ್ತಿದ್ದರು. ಬಹುಶ: ಫಸ್ಟ್ ನ್ಯೂರೋ ಆಸ್ಪತ್ರೆಯ ನೇರ ಸಂಪರ್ಕ ಮತ್ತು ಮೊದಲ ಸಂಪರ್ಕ ಮತ್ತು ದ್ವೀತಿಯ ಸಂಪರ್ಕ ಎಲ್ಲಾ ಸೇರಿ ಈಗಾಗಲೇ ಕರಾವಳಿಯಲ್ಲಿ 45 ಸೋಂಕಿತರು (ಭಟ್ಕಳ ಸೇರಿ) ಆಗಬಹುದೆಂದು ವಾಹಿನಿಯ ವರದಿಗಾರರು ಹೇಳುತ್ತಿದ್ದರು. ನಾನು ಶನಿವಾರ ಇಳಿಸಂಜೆಯಲ್ಲಿ ಮಂಗಳೂರಿನ ನಮ್ಮ ಕುಡ್ಲ ವಾಹಿನಿಯಲ್ಲಿ ಇದೇ ವಿಷಯದ ಮೇಲೆ ಚರ್ಚೆಗೆ ಕುಳಿತಿದ್ದೆ. ಆಸ್ಪತ್ರೆಯ ಪರವಾಗಿ ಡಾ.ಸ್ಕಂದ ಎನ್ನುವವರು ಇದ್ದರು.
ಆಸ್ಪತ್ರೆಯವರು ಬಂಟ್ವಾಳ ಮೂಲದ ವೃದ್ಧೆಯೊಬ್ಬರನ್ನು 35 ದಿನಗಳಿಂದ ಚಿಕಿತ್ಸೆ ಮಾಡುತ್ತಿದ್ದರಲ್ಲ, ಅವರನ್ನು ಒಂದು ದಿನ ಅಚಾನಕ್ ಆಗಿ ತಮ್ಮ ಆಸ್ಪತ್ರೆಯಿಂದ ವೆನ್ ಲಾಕ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿದ್ದರು. ಹಾಗೆ ಯಾಕೆ ಮಾಡಿದ್ರಿ ಎಂದು ಕೇಳಿದೆ. ಅದು ನಮಗೆ ಆಸ್ಪತ್ರೆಯಲ್ಲಿ ಆ ರೋಗಿಯ ಎಕ್ಸರೇ ನೋಡುವಾಗ ಗೊತ್ತಾಯಿತು ಎಂದರು. ಅದಕ್ಕೆ ನಾನು ಹೇಳಿದೆ. ಒಂದು ಎಕ್ಸರೇ ನೋಡುವಾಗ ಆ ವ್ಯಕ್ತಿ ಕೋವಿಡ್ 19 ಸೊಂಕೀತ ಎಂದು ಗೊತ್ತಾಗುವುದಾದರೆ ಗಂಟಲದ್ರವ ಪರೀಕ್ಷೆಗೆ ಆಗುವ 3659 ರೂಪಾಯಿ ಖರ್ಚು ಉಳಿಯುತ್ತದೆಯಲ್ಲ. ಎಕ್ಸರೇಯನ್ನು ತುಂಬಾ ಕಡಿಮೆಯಲ್ಲಿ ಮಾಡಬಹುದಲ್ಲ ಎಂದೆ. ಆಗ ತಕ್ಷಣ ಅವರು ಎಕ್ಸರೇಯಲ್ಲಿ ಗೊತ್ತಾಗುತ್ತದೆ ಎಂದು ಹೇಳಿಲ್ಲ. ಸಂಶಯ ಬಂದಿತ್ತು ಎಂದಿದ್ದೆ ಎಂದು ವಾದ ತಿರುಗಿಸಿದರು.
ಎಲ್ಲದಕ್ಕೂ ನಮ್ಮ ಆಸ್ಪತ್ರೆಯನ್ನು ದೂರಬೇಡಿ ಎಂದು ಎನ್ನುವುದು ಅವರ ಒಂದೇ ವಾದ. ಅದಕ್ಕೆ ನಾನು ಹೇಳಿದೆ. ನಿಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಒಳರೋಗಿಗಳ ಮತ್ತು ಹೊರರೋಗಿಗಳ ನೈಜ ಪಟ್ಟಿಯನ್ನು ನೀವು ಕೊಡಬೇಕು. ನೀವು ಸರಿಯಾದ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕೊಟ್ಟಿಲ್ಲ. ಕೊಟ್ಟಿದ್ದರೆ ಇಷ್ಟೆಲ್ಲ ಪ್ರಾಬ್ಲಂ ಆಗುತ್ತಿರಲಿಲ್ಲ ಎಂದು ಹೇಳಿದೆ. ಅದಕ್ಕೆ ಅವರು ಕೊಟ್ಟಿದ್ದೇವೆ ಎಂದು ವಾದಿಸಿದರು. ನೀವು ಭಟ್ಕಳದ ರೋಗಿಗಳು ನಿಮ್ಮಿಂದ ಚಿಕಿತ್ಸೆ ಪಡೆದುಕೊಂಡು ಹೋಗಿರುವ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕೊಟ್ಟಿಲ್ಲ ಎನ್ನುವ ಮಾಹಿತಿ ಇದೆ ಎಂದೆ. ಅದಕ್ಕೆ ಅವರು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಅದನ್ನು ಪರೀಕ್ಷಿಸೋಣ, ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನೋಡುತ್ತೇನೆ ಎಂದು ಹೇಳಿದ್ದೇನೆ.
ಪ್ರಾರಂಭದಲ್ಲಿ 13 ದಿನ ತನಕ ನಮ್ಮ ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಯಾವುದೂ ದಾಖಲಾಗಿರಲಿಲ್ಲ. ಫಸ್ಟ್ ನ್ಯೂರೋ ಸಂಪರ್ಕದಿಂದ ಒಂದೊಂದಾಗಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೊರಗೆ ಬರುತ್ತಿದ್ದ ಹಾಗೆ ನಮ್ಮಲ್ಲಿ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಎಲ್ಲರಿಗೂ ಗೊತ್ತು. ಹಾಗಾದರೆ ಮೊದಲಿಗೆ ಕೋವಿಡ್ 19 ಫಸ್ಟ್ ನ್ಯೂರೋಗೆ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ ಯಾಕೆ ಯಾರೂ ಉತ್ತರ ಕಂಡುಹಿಡಿಯುತ್ತಿಲ್ಲ? ಆಸ್ಪತ್ರೆಯ ಪರವಾಗಿ ಕುಳಿತಿದ್ದ ವೈದ್ಯರ ಬಳಿ ಕೂಡ ಅದಕ್ಕೆ ಉತ್ತರ ಇರಲಿಲ್ಲ.
ಮೊದಲಿಗೆ ಬಂಟ್ವಾಳದ ವೃದ್ಧೆಗೆ ಬಂತು. ಅವರಿಗೆ ಆ ಕಾಯಿಲೆ ಬರುವ 35 ದಿನಗಳ ಮೊದಲಿನಿಂದಲೇ ಆ ಮಹಿಳೆ ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಂತರ ಅವರಿಗೆ ಬಂದಿದೆ ಎಂದು ನಿಮಗೆ ಸಂಶಯ ಬಂದ ಕೂಡಲೇ ನೀವು ಅವರನ್ನು ಕಳುಹಿಸಿದ್ದೀರಿ. ಅವರನ್ನು ನಿಮ್ಮ ಆಸ್ಪತ್ರೆಯಲ್ಲಿ ನೋಡಲು ಆಗಾಗ ಬರುತ್ತಿದ್ದ ಅವರ ಸೊಸೆಗೂ ಆ ಕಾಯಿಲೆ ಬಂದಿತ್ತು. ದುರಾದೃಷ್ಟವಶಾತ್ ಇಬ್ಬರೂ ತೀರಿಕೊಂಡರು. ಅದರ ನಂತರ ನಿಮ್ಮ ಆಸ್ಪತ್ರೆಯ ಸ್ಟಾಫ್ ಗೆ ಕೂಡ ಬಂದಿದೆ. ಇದೆಲ್ಲ ಎಲ್ಲಿಂದ ಬಂತು? ಆಸ್ಪತ್ರೆಯವರು ಈ ಬಗ್ಗೆ ಆಂತರಿಕ ತನಿಖೆ ಮಾಡಿ ವಸ್ತುಸ್ಥಿತಿ ಹೇಳಲಿ. ಯಾಕೆಂದರೆ ಅವರಿಗೆ ಗೊತ್ತಿರುತ್ತೆ. ತಮ್ಮ ಆಸ್ಪತ್ರೆಗೆ ಯಾವ ಕೇರಳದ ರೋಗಿಗಳು ಇದ್ದರು. ಅವರನ್ನು ನೋಡಿಕೊಳ್ಳಲು ಯಾರು ಬರುತ್ತಿದ್ದರು? ಈಗ ಏನಾಗಿದೆ ಎಂದರೆ ಆಸ್ಪತ್ರೆಗಳಿಗೆ ಪ್ರಭಾವಿ ವ್ಯಕ್ತಿಗಳ ಕೃಪಾಕಟಾಕ್ಷ ಇರುವ ತನಕ ಏನು ಕ್ರಮ ಆಗಲ್ಲ ಎನ್ನುವ ಅಭಿಪ್ರಾಯ ಎಲ್ಲರಲ್ಲಿಯೂ ಮೂಡುತ್ತಿದೆ. ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ತನಿಖೆ ಮಾಡಲು ಆದೇಶಿಸಿದ್ದಾರೆ ಎನ್ನುವುದು ಬಿಟ್ಟರೆ ಅದರಿಂದ ಸತ್ಯಾಂಶ ಹೊರಗೆ ಬರಬೇಕಾದರೆ ವಿಪಕ್ಷ ಕಾಂಗ್ರೆಸ್ ಕೂಡ ಈ ಕುರಿತು ಆಗ್ರಹಿಸಬೇಕು. ಆದರೆ ಅವರು ಹೊರರಾಜ್ಯದ ಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುವುದರಲ್ಲಿಯೇ ಬಿಝಿಯಾಗಿರುವುದರಿಂದ ಅವರಿಗೆ ಈ ಬಗ್ಗೆ ಪುರುಸೊತ್ತು ಇಲ್ಲ. ಇನ್ನು ಆಶ್ಚರ್ಯ ಎಂದರೆ ಜಿಲ್ಲಾಡಳಿತ ಮಾಡುವ ಕಾರುಬಾರು ನೋಡಿ, “ಯಾವ ಆಸ್ಪತ್ರೆ ಇವತ್ತು ಕರಾವಳಿಯಲ್ಲಿ ಕೊರೊನಾದ ಅಡ್ಡೆಯಾಗುತ್ತಿದೆ” ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆಯೋ ಅದೇ ಆಸ್ಪತ್ರೆಯ ಮಾಲೀಕರನ್ನು ನೋಡಲ್ ಆಫೀಸರ್ ಆಗಿ ನೇಮಿಸಿದ್ದಾರೆ!!
Leave A Reply