ಲ್ಯಾಬ್ ವರದಿಯಿಂದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಬೆರೆತಿದೆಯಾ ಗೊತ್ತಾಗಲಿದೆ!
ಹೆಜಮಾಡಿ ಸಹಕಾರಿ ಸೇವಾ ಸಂಘದ ಗೋಡೌನ್ ಗೆ ಬಂದದ್ದು 101 ಅಕ್ಕಿ ಗೋಣಿಗಳು. ಎಲ್ಲವನ್ನು ಲಾರಿಯಂದ ಅನ್ ಲೋಡ್ ಮಾಡಿದ ನಂತರ ಒಳಗಿಟ್ಟು ಬೀಗ ಹಾಕಬೇಕು ಎನ್ನುವಷ್ಟರಲ್ಲಿ ಲಾರಿಯಿಂದ ಕೆಳಗೆ ಬಿದ್ದಿದ್ದ ಒಂದಿಷ್ಟು ಅಕ್ಕಿಯನ್ನು ಗುಡಿಸಿ ಲಾರಿಯ ಸಿಬ್ಬಂದಿ ಒಳಗೆ ಇಡುತ್ತಿದ್ದಂತೆ ಅದರಲ್ಲಿ ಕೆಲವು ಅಕ್ಕಿಯ ಕಾಳಿನ ತರಹದ್ದೇ ಆದರೆ ಅಕ್ಕಿಯಲ್ಲದ ಕಾಳುಗಳನ್ನು ನೋಡಿದ್ದಾನೆ. ಅದನ್ನು ಮುಟ್ಟಿ ನೋಡಿದಾಗ ಅವು ಪ್ಲಾಸ್ಟಿಕ್ ಅಕ್ಕಿ. ಅವು ಇತರ ನೈಜ ಅಕ್ಕಿಕಾಳುಗಳೊಂದಿಗೆ ಬೆರೆತು ಹೋದರೆ ಸಾಮಾನ್ಯ ಕಣ್ಣಿಗೆ ಗೊತ್ತಾಗುವುದಿಲ್ಲ.
ಸುಮಾರು ನಾಲ್ಕೈದು ಕೆಜಿ ಅಕ್ಕಿಯೊಂದಿಗೆ ಈ ಹದಿನೆಂಟು ಇಪ್ಪತ್ತು ಪ್ಲಾಸ್ಟಿಕ್ ಅಕ್ಕಿಕಾಳನ್ನು ನೋಡಿದಾಗ ಹೆಜಮಾಡಿ ಸಹಕಾರಿ ಸೇವಾ ಸಂಘದವರು ಹೌಹಾರಿದ್ದಾರೆ. ಅವರು ತಕ್ಷಣ ತಮ್ಮ ಪ್ರಧಾನ ಕಚೇರಿ ಪಡುಬಿದ್ರೆ ಸಹಕಾರಿ ಸೇವಾ ಸಂಘಕ್ಕೆ ಹೋಗಿ ಅಲ್ಲಿ ಮುಖ್ಯಸ್ಥರಿಗೆ ತೋರಿಸಿದ್ದಾರೆ. ಇವರು ಮಾತನಾಡುತ್ತಿದ್ದಂತೆ ಕರಾವಳಿಯ ಪ್ರಖ್ಯಾತ ಪತ್ರಿಕೆಯೊಂದರ ಸ್ಥಳೀಯ ವರದಿಗಾರರು ಯಾವುದೋ ಕೆಲಸಕ್ಕೆ ಅಲ್ಲಿ ಬಂದವರು ಈ ಪ್ಲಾಸ್ಟಿಕ್ ಅಕ್ಕಿಕಾಳನ್ನು ನೋಡಿದ್ದಾರೆ. ತಮಗೆ ಎಕ್ಸಕ್ಲೂಸಿವ್ ಸ್ಟೋರಿ ಸಿಕ್ಕಿತು ಎಂದು ತಮ್ಮ ಜನಪ್ರಿಯ ಪತ್ರಿಕೆಯಲ್ಲಿ ಬರುವಂತೆ ಬರೆದು ಕಳುಹಿಸಿದ್ದಾರೆ. ಮರುದಿನ ಹೆಜಮಾಡಿಯಲ್ಲಿ ಪತ್ತೆ ಆಯಿತು ಪ್ಲಾಸ್ಟಿಕ್ ಅಕ್ಕಿ ಎಂದು ವಿಷಯ ಪ್ರಚಾರವಾಗಿದೆ. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆಯ ಕಥೆಯನ್ನು ಹಿಂದೆ ಎಲ್ಲೋ ಕೇಳಿದ ಜನರಿಗೆ ಉಡುಪಿ ಜಿಲ್ಲೆಯಲ್ಲಿಯೇ ಇದು ಪತ್ತೆಯಾದದ್ದು ಕೇಳಿ ಆತಂಕಕ್ಕೆ ಕಾರಣವಾಗಿದೆ. ಅವರು ಹೆಜಮಾಡಿ, ಪಡುಬಿದ್ರೆ ಸಹಕಾರಿ ಸೇವಾ ಸಂಘದವರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಅನೇಕ ಮಾಧ್ಯಮಗಳು ಹೆಜಮಾಡಿ ಕಚೇರಿಗೆ ದೌಡಾಯಿಸಿವೆ. ಅಲ್ಲಿ ಹೋಗಿ ನೋಡಿದ ವರದಿಗಾರರು ಪ್ಲಾಸ್ಟಿಕ್ ಅಕ್ಕಿಯನ್ನು ನೀರಿನ
ಗ್ಲಾಸಿನಲ್ಲಿ ಹಾಕಿದಾಗ ಅದು ತೇಲುತ್ತಾ ನಿಂತಿದೆ. ಅದರಿಂದ ಅದು ಪ್ಲಾಸ್ಟಿಕ್ ಅಕ್ಕಿ ಎಂದು ಗೊತ್ತಾಗಿದೆ. ಆದರೆ ಮುಂದೇನು?
ವಿಷಯವನ್ನು ಉಡುಪಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಆಹಾರ ಸುರಕ್ಷಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಫುಡ್ ಇನ್ಸಪೆಕ್ಟರ್ ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿ ಸಿಕ್ಕಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಸಂಗ್ರಹಿಸಿ ಉಡುಪಿ ಆಹಾರ ಸುರಕ್ಷತೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ಅಲ್ಲಿ ಬಂದಿರುವ 101 ಅಕ್ಕಿ ಮೂಟೆಗಳ ಕಥೆ ಏನು ಎಂದು ಎಲ್ಲರಿಗೂ ಚಿಂತೆಯಾಗಿದೆ. ಸುಮಾರು 10 ಅಕ್ಕಿ ಮೂಟೆಗಳಿಗೆ ತೂತು ಕೊರೆದು ಅಕ್ಕಿಯನ್ನು ಒಂದಿಷ್ಟು ತೆಗೆದು ನೋಡಿದಾಗ ಪ್ಲಾಸ್ಟಿಕ್ ಅಕ್ಕಿಯ ಯಾವ ಕುರುಹುಗಳು ಕೂಡ ಕಂಡುಬಂದಿಲ್ಲ.ಪ್ರಯೋಗಾಲಯದಿಂದ ಅಂತಿಮ ವರದಿ ಬರುವ ತನಕ ಆ ಅಕ್ಕಿಯನ್ನು ಯಾರಿಗೂ ಹಂಚದಿರಲು ಹೆಜಮಾಡಿ ಸಹಕಾರ ಸೇವಾ ಸಂಘಕ್ಕೆ ಆಹಾರ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದೆಲ್ಲಾ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಗೆ ಕೆಟ್ಟ ಹೆಸರು ತರಲು ಪ್ರಯತ್ನ ಎಂದು ಕೆಲವು ಸಾಮಾಜಿಕ ಕಾರ್ಯಕತ್ತರು ಹೇಳಿಕೆ ನೀಡಿದ್ದಾರೆ. ತಾವು ಯಾವ ತನಿಖೆಗೂ ಸಿದ್ಧ ಎಂದು ಪಡುಬಿದ್ರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್ ಹಾಗೂ ನಿರ್ದೇಶಕ ಗಿರೀಶ್ ಫಲಿಮಾರ್ ಹೇಳಿದ್ದಾರೆ. ಕೊನೆಯದಾಗಿ ಇವರು ಹೇಳುವುದೇನೆಂದರೆ ಅಕ್ಕಿಯ ಮೂಟೆಗಳು ಬಂದ ಲಾರಿಯಲ್ಲಿ ಅದರ ಮೊದಲು ಪ್ಲಾಸ್ಟಿಕ್ ವಸ್ತುಗಳನ್ನು ಸಾಗಿಸಲಾಗಿತ್ತು. ಆ ಸಂದರ್ಭದಲ್ಲಿ ಲಾರಿಯಲ್ಲಿ ಅಲ್ಲಲ್ಲಿ ಸೋರಿ ಹೋಗಿದ್ದ ಪ್ಲಾಸ್ಟಿಕ್ ಗುಡಿಸುವಾಗ ಸಿಕ್ಕಿ ಅಕ್ಕಿಯೊಂದಿಗೆ ಅದು ಮಿಶ್ರಣವಾಗಿದೆ. ಆದರೆ ವದಂತಿಯನ್ನು ಜನ ನಂಬಿ ಹೆದರಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ವಾಸ್ತವ ಏನು ಎಂದು ತಿಳಿಯಲು ಆಹಾರ ಸುರಕ್ಷತಾ ಲ್ಯಾಬ್ ವರದಿಯನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
Leave A Reply