ಸಂಜನಾ ಸಂಗಕ್ಕೆ ಬಿದ್ದ ಜಮೀರ್ ಯಾರಿಗೆಲ್ಲಾ ಆಸ್ತಿ ಬರೆದುಕೊಟ್ಟಿದ್ದಾರೋ!!
ಕರ್ನಾಟಕದಲ್ಲಿ ಯಾವುದೇ ವಿವಾದ ಆದರೂ ಅದರಲ್ಲಿ ಜಮೀರ್ ಅಹ್ಮದ್ ಎನ್ನುವ ಹಾಲಿ ಶಾಸಕ ಹಾಗೂ ಮಾಜಿ ಸಚಿವರ ಹೆಸರು ಕೇಳಿ ಬರುವುದು ಪಕ್ಕಾ. ಪಾದರಾಯನಪುರ, ಕೆಜೆ ಹಳ್ಳಿ, ಡಿಜೆಹಳ್ಳಿ ಮತ್ತು ಈಗ ಸಂಜನಾ ಗೆಳೆತನದ ತನಕ ಅದು ಹರಿದಾಡಿದೆ. ನನಗೆ ಸಂಜನಾ ಗೊತ್ತೆ ಇಲ್ಲ ಎಂದು ಅವರು, ನನಗೆ ಜಮೀರ್ ಸರ್ ದೊಡ್ಡ ಶಾಸಕರು ಎಂದು ಮಾತ್ರ ಗೊತ್ತು ಎಂದು ಇವಳು ಬೇರೆ ಬೇರೆ ಹೇಳಿಕೆ ಕೊಟ್ಟು ಶುದ್ಧ ಅಮಾಯಕರಂತೆ ತೋರಿಸಿಬಿಟ್ಟಿದ್ದಾರೆ. ನಾನು ಸಂಜನಾ ಒಟ್ಟಿಗೆ ಶ್ರೀಲಂಕಾಕ್ಕೆ ಹೋದದ್ದು ಗೊತ್ತಾದರೆ ಆಸ್ತಿಯೀಡಿ ಸರಕಾರಕ್ಕೆ ಬರೆದುಕೊಡುತ್ತೇನೆ ಎಂದು ಜಮೀರ್ ಮೀಡಿಯಾ ಮುಂದೆ ಹೇಳಿದ್ದಾರೆ. ಒಬ್ಬ ರಂಗುರಂಗಿನ ರಾಜಕಾರಣಿ ಮತ್ತು ಗಂಡ-ಹೆಂಡತಿ ಎನ್ನುವಂತಹ ಕುಟುಂಬಸ್ಥರು ಒಟ್ಟಿಗೆ ನೋಡಲು ಸಾಧ್ಯವಾಗದ ಸಿನೆಮಾ ಮಾಡಿದ ಸಂಜನಾ ಅಕ್ಕಪಕ್ಕದ ಸೀಟಿನಲ್ಲಿ ಕುಳಿತು ಬೆಂಗಳೂರಿನಿಂದ ಶ್ರೀಲಂಕಾಕ್ಕೆ ಹಾರಿದ್ದಾರೆ ಎಂದು ಯಾವ ವ್ಯಕ್ತಿ ಕೂಡ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಜಮೀರ್ ಆಪ್ತ ಸಹಾಯಕರೇ ವಿಮಾನ ಟಿಕೆಟ್ ಬುಕ್ ಮಾಡುವಾಗ ಎರಡು ಟಿಕೆಟ್ ಬುಕ್ ಮಾಡಿ ಒಂದು ಜಮೀರ್ ಅಹ್ಮದ್ ಮತ್ತು ಇನ್ನೊಂದು ಸಂಜನಾ ಎಂದು ಹೇಳಿದರೂ ಟಿಕೆಟ್ ಬುಕ್ ಮಾಡುವವ “ಬೇಡಾ ಸರ್, ರಿಸ್ಕ್ ಯಾಕೆ, ಬೇರೆ ಬೇರೆ ಫ್ಲೈಟ್ ಬುಕ್ ಮಾಡುತ್ತೇನೆ” ಎಂದೇ ಹೇಳಿರುತ್ತಾನೆ. ಇದನ್ನೆಲ್ಲಾ ಆಪ್ತ ಸಹಾಯಕರಿಂದ ಕೇಳಿ ತಿಳಿದುಕೊಂಡ ಜಮೀರ್ ನಾವು ಒಟ್ಟಿಗೆ ಹೋಗಿಯೇ ಇಲ್ಲ, ಸಾಬೀತಾದರೆ ಆಸ್ತಿ ಬರೆದುಕೊಡುತ್ತೇನೆ ಎಂದು ಧೈರ್ಯದಿಂದ ಹೇಳುತ್ತಿರುವುದು. ಇಂತವರು ತಮ್ಮ ಲೆಕ್ಕವಿಲ್ಲದಷ್ಟು ಆಸ್ತಿಯಲ್ಲಿ ದೊಡ್ಡಪಾಲುಗಳನ್ನು ತಮಗೆ ಖುಷಿ ಕೊಟ್ಟವರಿಗೆ ಉದಾರವಾಗಿ ಬರೆದುಕೊಟ್ಟಿರುವುದರಿಂದ ಇವತ್ತು ಅನೇಕರು ಬೆಂಗಳೂರಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿರುವುದು.
ಇನ್ನು ಸಂಜನಾಳ ಜೊತೆ ಗೆಳೆತನ ಇರುವುದು ಜಮೀರ್ ಮಾಡಿರುವ ದೊಡ್ಡ ತಪ್ಪು ಅಲ್ಲವೇ ಅಲ್ಲ. ಅನೇಕ ರಾಜಕಾರಣಿಗಳು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಸಿನೆಮಾ ನಟಿಯರೊಡನೆ “ಚೆನ್ನಾಗಿ” ಇದ್ದದ್ದನ್ನು ಜೆ.ಎಚ್.ಪಟೇಲ್ ರ ಕಾಲದಿಂದ ಜಮೀರ್ ತನಕ ಕರ್ನಾಟಕ ಇತಿಹಾಸ ಹೇಳುತ್ತದೆ. ಇಲ್ಲಿ ಅವರಿಬ್ಬರು ಗೆಳೆಯರು ಎನ್ನುವುದು ವಿವಾದವೇ ಅಲ್ಲ. ಇಲ್ಲಿರುವ ಪ್ರಶ್ನೆ ಜಮೀರ್ ತಾನು ಶ್ರೀಲಂಕಾದ ಕ್ಯಾಸಿನೊದಲ್ಲಿ ಒಬ್ಬ ಸಾಮಾನ್ಯ ಶ್ರೀಮಂತ ಕೂಡ ವ್ಯಯಿಸಲು ಹಿಂದೆ ಮುಂದೆ ನೋಡುವಷ್ಟು ಹಣವನ್ನು ಉಡಾಯಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪ. ಒಂದು ವೇಳೆ ಹೌದಾದರೆ ಆ ಹಣ ಇಲ್ಲಿಂದ ಅಲ್ಲಿಗೆ ಹೇಗೆ, ಯಾವ ದಾರಿಯಲ್ಲಿ ಹೋಯಿತು ಎನ್ನುವುದೇ ಈಗ ಇರುವ ಪ್ರಶ್ನೆ. ಇದು ED ತನಿಖೆಗೆ ಒಳಪಡುವ ವಿಷಯ. ಈ ಬಗ್ಗೆ ತನಿಖೆಯಾಗಬೇಕು. ಇನ್ನು ಶ್ರೀಲಂಕಾದಲ್ಲಿ ತಾವು ಹೋಗಿರುವ ಕ್ಯಾಸಿನೋ ಗೆಳೆಯ ಫಾಜಿಲ್ ಅವರದ್ದು, ಆದರೆ ಕಳೆದ ನಾಲ್ಕು ವರ್ಷಗಳಿಂದ ತಮಗೂ ಅವರಿಗೂ ಲಿಂಕ್ ಇಲ್ಲ ಎನ್ನುವುದು ಜಮೀರ್ ವಾದ. ಜಮೀರ್ ಲಿಂಕ್ ಇಟ್ಟುಕೊಂಡರೂ ತಮ್ಮ ರೆಗ್ಯೂಲರ್ ಫೋನ್ ನಿಂದ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ಆ ಲಿಂಕ್ ಸಿಗಲು ಸಾಕಷ್ಟು ತನಿಖೆ ನಡೆಸಬೇಕಾಗುತ್ತದೆ. ಇನ್ನು ತಾವು ಅಮಾಯಕ ಎಂದು ಸಾಬೀತಾದರೆ ಸಂಬರಗಿಯವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಜಮೀರ್ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಳಿದ್ದಾರೆ. ಇಲ್ಲಿ ಯಡಿಯೂರಪ್ಪನವರನ್ನು ಅಥವಾ ರಾಜ್ಯ ಸರಕಾರವನ್ನು ಎಳೆಯುವ ವಿಷಯ ಯಾಕೆ? ಇದು ಜಮೀರ್ ಹಾಗೂ ಸಂಬರಗಿ ನಡುವಿನ ವಿಷಯ. ಇದರಲ್ಲಿ ರಾಜ್ಯ ಸರಕಾರದ ಪಾತ್ರ ಇರುವುದಿಲ್ಲ. ಒಂದು ವೇಳೆ ಜಮೀರ್ ED ಸಂಸ್ಥೆಯ ಕಣ್ಣು ತಪ್ಪಿಸಿ, ವಂಚಿಸಿ ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಸಾಬೀತಾದರೆ ಅದರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಅಸ್ತ್ರ ಸಿಗುತ್ತೆ ಬಿಟ್ಟರೆ ಬೇರೆ ಏನೂ ಇಲ್ಲ. ಜಮೀರ್ ಒಂದಿಷ್ಟು ದಿನ ವಿಚಾರಣೆಗೆ ಓಡಾಡಬೇಕಾಗುತ್ತದೆ. ಅದರೊಂದಿಗೆ ಕ್ಯಾಸಿನೋದಲ್ಲಿ ಡ್ರಗ್ಸ್ ಯಾರೆಲ್ಲಾ ಸೇವನೆ ಮಾಡಿದ್ದಾರೆ ಎನ್ನುವ ಬಗ್ಗೆ ಒಂದು ಸ್ಟ್ರಾಂಗ್ ಸಾಕ್ಷಿ ಕೂಡ ಸಿಸಿಬಿಗೆ ಸಿಕ್ಕ ಹಾಗೆ ಆಗುತ್ತದೆ. ಆದರೆ ತಾನು ಸಿಕ್ಕಿ ಬೀಳಲಿದ್ದೇನೆ ಎನ್ನುವ ಸುಳಿವು ಸಿಕ್ಕಿರುವುದರಿಂದ ಜಮೀರ್ ಈಗಲೇ ತಾವು ಅಲ್ಪಸಂಖ್ಯಾತ ಎಂದು ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲು ಶುರು ಮಾಡಿದ್ದಾರೆ. ಇಲ್ಲಿ ನಾನು ಕೇಳುವುದು ಮಾಡುವುದೆಲ್ಲಾ ಮಾಡಿ ಸಿಕ್ಕಿ ಬೀಳುವಾಗ ಅಲ್ಪಸಂಖ್ಯಾತ ಎನ್ನುವ ಕಾರ್ಡ್ ಕೆಲವರು ತೆಗೆಯುತ್ತಾರೆ. ಒಂದು ವೇಳೆ ಅಲ್ಪಸಂಖ್ಯಾತ ಎನ್ನುವುದಕ್ಕೆ ಟಾರ್ಗೆಟ್ ಮಾಡುವುದಾದರೆ ಆರೋಪ ಬಂದ ಕೂಡಲೇ ಸಿಸಿಬಿಯವರು ಎತ್ತಾಕಿಕೊಂಡು ಹೋಗುತ್ತಿದ್ದರು. ಹಾಗೇ ಮಾಡಲಿಲ್ಲ. ಸೂಕ್ತ ಸಾಕ್ಷ್ಯಗಳನ್ನು ಒಟ್ಟು ಮಾಡುತ್ತಿದ್ದಾರೆ. ಇನ್ನು ಜಮೀರ್ ಮಾತುಗಳನ್ನು ಸೀರಿಯಸ್ ತೆಗೆದುಕೊಳ್ಳುವುದನ್ನು ಅವರದ್ದೇ ಪಕ್ಷದವರು ಬಿಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆದರೆ ಅವರ ಮನೆ ವಾಚ್ ಮೆನ್ ಆಗುತ್ತೇನೆ ಎಂದದ್ದು ಇದೇ ಜಮೀರ್. ಬಿಎಸ್ ವೈ ಸಿಎಂ ಆದರು. ಜಮೀರ್ ವಾಚ್ ಮೆನ್ ಆಗಿಲ್ಲ. ಆದರೆ ಈ ಬಾರಿ ED ಕೈಗೆ ಸಿಕ್ಕಿದರೆ ಸೆಪ್ಟೆಂಬರ್ ಕೊನೆಯ ವಾರದ ವಿಧಾನಸಭಾ ಅಧಿವೇಶನದಲ್ಲಿ ಜಮೀರ್ ಅವರು ಇರಲ್ಲ. ತಿಹಾರ್ ಇರುವ ದೆಹಲಿಗೆ ಹೋಗಬೇಕಾಗಬಹುದು!!
Leave A Reply