ಕಿಶೋರ್, ತರುಣ್ ಬಾಯಿಬಿಟ್ಟವರ ಬಗ್ಗೆ ಸಿಸಿಬಿ ಪೊಲೀಸರ ನಿಗೂಢ ಮೌನ!!
ಡ್ರಗ್ಸ್ ಕೇಸ್ ಬಗ್ಗೆ ರಾಜ್ಯದ ರಾಜಧಾನಿಯ ಸಿಸಿಬಿ ಪೊಲೀಸರು ಏನು ಪ್ರಗತಿ ಸಾಧಿಸುತ್ತಿದ್ದಾರೋ ಏನೋ ಬೇರೆ ವಿಷಯ. ಆದರೆ ಮಂಗಳೂರಿನಲ್ಲಿ ಡ್ರಗ್ಸ್ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರ ನಿಗೂಢ ಮೌನ ಮಾತ್ರ ಆಶ್ಚರ್ಯ ಉಂಟು ಮಾಡುತ್ತಿದೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ತರುಣ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಅದಾಗಿ ಈಗ ಬಹುತೇಕ ಎರಡು ತಿಂಗಳಾಗುತ್ತಾ ಬಂದಿದೆ. ಕಿಶೋರ್ ಹಾಗೂ ತರುಣ್ ಜೈಲು ಕಂಬಿಗಳ ಹಿಂದೆ ಇದ್ದಾರೆ. ಅವರು ಸುಳಿವು ಕೊಟ್ಟವರಲ್ಲಿ ಅನುಶ್ರೀ ಬಂದು ಪೊಲೀಸರ ಮುಂದೆ ಹಾಜರಾಗಿ ಬೆಂಗಳೂರಿಗೆ ಹೋಗಿದ್ದಾರೆ. ಈ ಯುವಕರಿಬ್ಬರು ಅನೇಕ ಸೆಲೆಬ್ರಿಟಿಗಳ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದರೆ ಅನುಶ್ರೀಯ ನಂತರ ಯಾವ ಸೆಲೆಬ್ರಿಟಿಯನ್ನು ಕೂಡ ಪೊಲೀಸರು ಕರೆದು ವಿಚಾರಿಸಿಲ್ಲ. ಇನ್ನೊಂದೆಡೆ ಅನುಶ್ರೀಯ ವಿಚಾರದಲ್ಲಿ ಸಾಫ್ಟಾಗಿ ಇರಲು ಕರಾವಳಿಯ ಶಾಸಕರೊಬ್ಬರು ಕರೆ ಮಾಡಿದ್ದಾರೆ ಎಂದು ಕೂಡ ಕೆಲವು ದಿನ ಸುದ್ದಿಯಾಗಿತ್ತು. ಆದರೆ ಅದು ಯಾರೆಂದು ಯಾರಿಗೂ ಗೊತ್ತಾಗಿಲ್ಲ. ಅವರು ಇರಬಹುದಾ? ಇವರು ಇರಬಹುದಾ ಎನ್ನುವುದರಲ್ಲಿಯೇ ದಿನ ಕಳೆಯಿತು. ಈ ನಡುವೆ ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ದೀಪಾವಳಿ ಎನ್ನುವ ಸಣ್ಣ ನ್ಯೂಸ್ ರಾಜ್ಯ ಮಾಧ್ಯಮಗಳಲ್ಲಿ ಹೀಗೆ ಬಂದು ಹಾಗೆ ಹೋಗಿದೆ ಬಿಟ್ಟರೆ ಮಂಗಳೂರಿನ ಡ್ರಗ್ಸ್ ಕೇಸಿನ ಬಗ್ಗೆ ಪೊಲೀಸರು ಯಾವ ಪ್ರಗತಿ ಸಾಧಿಸಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ.
ಒಂದು ವೇಳೆ ಕಿಶೋರ್ ಹಾಗೂ ತರುಣ್ ಗಣ್ಯರ ಹೆಸರನ್ನು ಬಾಯಿ ಬಿಟ್ಟಿದ್ದರೆ ಅವರ ತನಿಖೆ ಆಗಿದೆಯಾ? ತನಿಖೆಯಲ್ಲಿ ಗಣ್ಯರು ಅಮಾಯಕರು ಎಂದು ಗೊತ್ತಾಯಿತಾ? ಅಥವಾ ಗಣ್ಯರೊಂದಿಗೆ ಪೊಲೀಸರು ಏನಾದರೂ ಅಪವಿತ್ರ ಮೈತ್ರಿ ಮಾಡಿಕೊಂಡರಾ? ಏನೂ ಗೊತ್ತಾಗುತ್ತಿಲ್ಲ. ಹಿಂದಿನಿಂದಲೂ ಮಂಗಳೂರಿನಲ್ಲಿ ಈ ಡ್ರಗ್ಸ್ ಪ್ರಕರಣಗಳು ಸುದ್ದಿ ಮಾಡುತ್ತಲೇ ಇವೆ. ಮಾಜಿ ಮೇಯರ್ ಒಬ್ಬರ ಮಗ ತನ್ನ ಗೆಳೆಯರೊಂದಿಗೆ ಸೇರಿ ಕೆಲವು ಯುವತಿಯರಿಗೆ ಈ ಡ್ರಗ್ಸ್ ರುಚಿಯನ್ನು ಹತ್ತಿಸಿದ್ದ ಎಂದು ಸಾಕಷ್ಟು ಸುದ್ದಿಯಾಗಿತ್ತು. ಅದರಲ್ಲಿ ಒಬ್ಬಳು ಯುವತಿ ಸಾವಿನ ದವಡೆಯಿಂದ ಆಚೆ ಹೋಗಿ ಈಚೆ ಬಂದಂತೆ ಆಗಿದ್ದಳು. ಸಂಜೆ 6 ಗಂಟೆಯಾಗುತ್ತಿದ್ದಂತೆ ಅವಳಿಗೆ ಡ್ರಗ್ಸ್ ಸಿಗದೇ ಇದ್ದರೆ ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತಿದ್ದಳು. ಅವಳಿಗೆ ಆಸ್ಪತ್ರೆಯಲ್ಲಿ ಮಂಚಕ್ಕೆ ಕಟ್ಟಿ ಚಿಕಿತ್ಸೆ ನೀಡಲಾಗಿತ್ತು. ನಂತರ ಆಕೆ ಹುಶಾರಾದಳು. ಇದು ಕೇವಲ ಹುಡುಗಿಯರ ವಿಷಯ ಅಲ್ಲ. ಎಷ್ಟೋ ಸಂಭಾವಿತ ಮನೆತನದ ಹುಡುಗರು ಕೂಡ ಡ್ರಗ್ಸ್ ಜಾಲಕ್ಕೆ ಬಿದ್ದು ವಿದ್ಯಾಭ್ಯಾಸ ಹಾಳು ಮಾಡಿ ಬದುಕಿದ್ದಾಗಲೇ ನರಕವನ್ನು ನೋಡಿ ಬಂದಿದ್ದಾರೆ. ಕೆಲವರು ನರಕದಲ್ಲಿಯೇ ಇದ್ದಾರೆ. ಕೆಲವರು ಹೊರಗೆ ಬಂದು ಬೇರೆಯವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಆದರೆ ಡ್ರಗ್ಸ್ ಎನ್ನುವುದು ಮಾತ್ರ ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಒಂದು ಸವಾಲಾಗಿಯೇ ಇವತ್ತಿಗೂ ಕಾಣಿಸುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಹೀಗೆ ಆಗುವುದು. ಮಾಧ್ಯಮಗಳ ಅಬ್ಬರ ಜೋರು ಇದ್ದಾಗ ಪೊಲೀಸರು ಹೆಚ್ಚು ಕ್ರಿಯಾಶೀಲರಂತೆ ವರ್ತಿಸುತ್ತಾರೆ. ವಾರಗಟ್ಟಲೆ ಮಾಧ್ಯಮಗಳು ಅದೇ ವಿಷಯ ತೋರಿಸುತ್ತವೆ, ಬರೆಯುತ್ತವೆ. ಅದರ ನಂತರ ಹೆಚ್ಚಿನವರು ಮಾಧ್ಯಮಗಳಿಗೆ ಬೇರೆ ವಿಷಯವೇ ಇಲ್ವಾ ಎಂದು ಮೂದಲಿಸಲು ಶುರು ಮಾಡುತ್ತಾರೆ. ಇದರಿಂದಲೋ ಅಥವಾ ಬೇರೆ ವಿಷಯ ಸಿಕ್ಕಿದ ಕಾರಣವೋ ಮಾಧ್ಯಮಗಳು ಕೆಲವು ದಿನಗಳ ನಂತರ ಬೇರೆ ವಿಷಯಗಳಿಗೆ ಜಂಪ್ ಹೊಡೆಯುತ್ತಾರೆ. ಅದರ ನಂತರ ಹಿಂದಿನ ವಿಷಯ ಥಂಡಾ ಹೊಡೆಯುತ್ತದೆ. ಇದರಿಂದ ಪ್ರಕರಣ ಕೂಡ ಹಳ್ಳ ಹಿಡಿಯುತ್ತದೆ. ಈ ನಡುವೆ ಕೆಲವು ದಿನ ಮೌನರಾಗಿದ್ದ ಡ್ರಗ್ಸ್ ಡೀಲರ್ಸ್ ನಂತರ ಮತ್ತೊಮ್ಮೆ ಚಿಗುರುತ್ತಾರೆ. ಇದರಿಂದ ತೊಂದರೆ ಯಾರಿಗೆ? ನಮ್ಮದೇ ಸಮಾಜಕ್ಕೆ. ಇವತ್ತಿಗೂ ಮಂಗಳೂರಿನ ಬಂದರು, ಸೆಂಟ್ರಲ್ ಮಾರ್ಕೆಟ್, ಭಟ್ಕಳ ಬಜಾರ್, ಹಳೆ ಮೀನು-ಮಾಂಸದ ಮಾರ್ಕೆಟ್ ಬಳಿ ಡ್ರಗ್ಸ್ ಮಾರುವ ಜಾಲವೇ ಇದೆ. ಪೊಲೀಸರು ಎರಡು ಪ್ಯಾಕೇಟ್ ಇದ್ದವರನ್ನು ಹಿಡಿಯುತ್ತಾರೆ. ಆದರೆ ಯಾವತ್ತೂ ಡ್ರಗ್ಸ್ ಜಾಲದ ಮೂಲಕ್ಕೆ ಹೋಗುವ ಪ್ರಯತ್ನ ಮಾಡುವುದೇ ಇಲ್ಲ.
ಈ ಬಾರಿ ಒಂದು ಅವಕಾಶ ಅವರಿಗೆ ಸಿಕ್ಕಿತ್ತು. ಕಿಶೋರ್ ಅಮನ್ ಹಾಗೂ ತರುಣ್ ನಂತಹ ತಿಮಿಗಿಂಲ ಎಂದು ಹೇಳಲಿಕ್ಕೆ ಆಗದಿದ್ದರೂ ತಿಮಿಂಗಿಲದ ಬಳಿ ಹೋಗಲು ದಾರಿ ತೋರಿಸಬಲ್ಲ ಮೀನುಗಳು ಸಿಕ್ಕಿದ್ದವು. ಆದರೆ ಪೊಲೀಸರು ಈ ಅವಕಾಶವನ್ನು ಸಮರ್ತವಾಗಿ ಬಳಸಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಬೆಂಗಳೂರಿನಿಂದ ಒತ್ತಡ ಬಂದ ಹಿನ್ನಲೆಯಲ್ಲಿ ಎರಡು ತಿಂಗಳ ಹಿಂದೆ ಇದ್ದ ಆಸಕ್ತಿ ಈಗ ಇಲ್ಲಿನ ಪೊಲೀಸರಿಗೆ ಇದ್ದಂತೆ ಕಾಣುತ್ತಿಲ್ಲ. ಇಲ್ಲಿ ಪೊಲೀಸರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಯಾರದ್ದೋ ಪುಡಿ ಆಸೆಗೆ ಒಳಪಟ್ಟು ಡ್ರಗ್ಸ್ ಜಾಲದ ಮೂಲಕ್ಕೆ ಹೋಗದೇ ತಿಮಿಂಗಿಲಗಳನ್ನು ಬಿಟ್ಟರೆ ಇದು ಮುಂದೆ ನಿಮಗೆ ಶಾಪವಾಗಿ ರಿವರ್ಸ್ ಹೊಡೆಯುತ್ತದೆ. ಯಾಕೆಂದರೆ ನಿಮಗೂ ಮಕ್ಕಳಿದ್ದಾರೆ. ಮುಂದೆ ಮೊಮ್ಮೊಕ್ಕಳು ಆಗಲಿದ್ದಾರೆ. ಈಗ ನಿಮ್ಮ ನಿರ್ಲಕ್ಷ್ಯ ಅಥವಾ ಆಸೆಬುರುಕತನ ನಿಮ್ಮ ಭವಿಷ್ಯದಲ್ಲಿ ನಿಮಗೆ ಖಂಡಿತ ಕಾಡಲಿದೆ. ಈ ಎಸಿಬಿಯವರು ಭ್ರಷ್ಟರ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಹಣ, ಚಿನ್ನ ಅದು ಇದು ಹಿಡಿಯುತ್ತಾರಲ್ಲ, ನಂತರ ಕೇಸು ಏನಾಗುತ್ತದೆ. ಆ ಭ್ರಷ್ಟರು ಮಂತ್ರಿಗಳಿಗೆ ಹಣ ನೀಡಿ ಮತ್ತೆ ಅದೇ ಸ್ಥಾನ ಅಥವಾ ಅದಕ್ಕಿಂತಲೂ ದೊಡ್ಡ ಸ್ಥಾನಕ್ಕೆ ಬಂದು ಕೂರುತ್ತಾರೆ. ಈ ಮೂಲಕ ಲಾಭ ಆಗಿದ್ದು ಮಂತ್ರಿಗೆ ಮಾತ್ರ. ಅದಕ್ಕೆ ಬಳಕೆಯಾಗಿದ್ದು ಎಸಿಬಿ. ಇಲ್ಲಿಯೂ ಹಾಗೆನಾ? ಡ್ರಗ್ಸ್ ಜಾಲದಲ್ಲಿ ಮಂಗಳೂರಿನ ಸಿಸಿಬಿ ಪೊಲೀಸರ ದಿವ್ಯ ಮೌನ ನೋಡುವಾಗ ಎಲ್ಲೋ ಲಾಭ ಆಗಿದೆ!
Leave A Reply