• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಝೀರೋ ಟ್ರಾಫಿಕ್ ಎಂದರೆ ವಾಹನಗಳ ಮೆರವಣಿಗೆ ಹೋಗುವುದಲ್ಲ!!

Hanumantha Kamath Posted On December 7, 2020


  • Share On Facebook
  • Tweet It

ಝೀರೋ ಟ್ರಾಫಿಕ್ ನಲ್ಲಿ ರೋಗಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಎಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವುದು ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಪ್ರಾರಂಭದಲ್ಲಿ ಹೃದಯ, ಕಿಡ್ನಿ ಹೀಗೆ ಝೀರೋ ಟ್ರಾಫಿಕ್ ನಲ್ಲಿ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ನಂತರ ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನೈ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಮೊನ್ನೆಯಷ್ಟೇ ಸುಹಾನಾ ಎನ್ನುವ 22 ವರ್ಷದ ಯುವತಿಯನ್ನು ಎಂಬ್ಯುಲೆನ್ಸ್ ನಲ್ಲಿ ನಾಲ್ಕು ಗಂಟೆಯಲ್ಲಿ ಪುತ್ತೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಚಾಲಕ ಹನೀಫ್ ಅವರ ಸಾಧನೆ ಮೆಚ್ಚುವಂತದ್ದೇ. ಆದರೆ ಕರೆದುಕೊಂಡು ಹೋದ ರೀತಿಯ ಬಗ್ಗೆ ನನ್ನ ಆಕ್ಷೇಪವಿದೆ. ಒಂದು ಎಂಬುಲೆನ್ಸ್ ಸೈರನ್ ಹಾಕುತ್ತಾ ಬರುತ್ತಿದ್ದರೆ ಎಂತಹ ಅರ್ಜೆಂಟಿನ ವ್ಯಕ್ತಿಯಾಗಿದ್ದರೂ ಅವರು ಒಂದು ಕ್ಷಣ ತಮ್ಮ ವಾಹನವನ್ನು ಪಕ್ಕಕ್ಕೆ ಹಾಕಿ ನಿಲ್ಲಿಸಿಬಿಡುತ್ತಾರೆ. ಎಂಬುಲೆನ್ಸ್ ಹೋದ ನಂತರವೇ ಮುಂದಕ್ಕೆ ಹೋಗುತ್ತಾರೆ. ಎಂಬುಲೆನ್ಸ್ ಗೆ ದಾರಿ ಕೊಡದ ಮುಠಾಳರು ನಮ್ಮಲ್ಲಿ ಯಾರೂ ಇಲ್ಲ. ಪ್ರತಿ ಎಂಬುಲೆನ್ಸ್ ನಲ್ಲಿರುವ ರೋಗಿಯ ಪ್ರಾಣ ಕೂಡ ಮುಖ್ಯವೇ ಆಗಿದೆ.

\ಆದರೆ ಮೊನ್ನೆ ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಸುಹಾನಾ ಅವರನ್ನು ಕರೆದುಕೊಂಡ ಎಂಬುಲೆನ್ಸ್ ನ ಅವತಾರವನ್ನು ನೀವು ನೋಡಬೇಕಿತ್ತು. ಅಕ್ಷರಶ: ಅದು ವಾಹನಗಳ ಮೆರವಣಿಗೆಯೇ ಆಗಿತ್ತು. ನೀವು ಆ ವಿಡಿಯೋ ನೋಡಿರಬಹುದು. ಎಂಬುಲೆನ್ಸ್ ಎದುರಿಗೆ ಹಿಂದೆ ಒಟ್ಟು 15 ವಾಹನಗಳು ಇದ್ದವು. ಅವು ಅಂಬುಲೆನ್ಸ್ ನಷ್ಟೇ ವೇಗವಾಗಿ ಹೋಗಬೇಕು. ಒಂದು ವಾಹನದ ವೇಗ ಹೆಚ್ಚು ಕಡಿಮೆ ಆದರೆ ಎಲ್ಲಾ ವಾಹನಗಳು ಕೂಡ ತೊಂದರೆಗೆ ಒಳಗಾಗಿ ಅಪಘಾತವಾಗುವುದು ಪಕ್ಕಾ ಆಗಿತ್ತು. ನೀವು ಒಂದು ಕ್ಷಣ ಊಹಿಸಿ. ಝೀರೋ ಟ್ರಾಫಿಕ್ ಎಂದರೆ ರಸ್ತೆಯಲ್ಲಿ ಯಾವುದೇ ವಾಹನಗಳನ್ನು ಓಡಾಡಲು ಬಿಡದೆ ಅಂಬುಲೆನ್ಸ್ ಹಾದು ಹೋಗುವ ತನಕ ರಸ್ತೆಯನ್ನು ಕ್ಲಿಯರ್ ಮಾಡಿಕೊಡುವುದು. ಅದು ಪೊಲೀಸ್ ಇಲಾಖೆಯ ಅನುಮತಿ ಪಡೆದು ನಂತರವೇ ಆಗುವುದು. ಇಲ್ಲಿಯೂ ಆ ಪ್ರಕ್ರಿಯೆ ಎಲ್ಲಾ ಮುಗಿಸಿರಬಹುದು. ಆದರೆ ಅದು ಒಂದು ಸೌಲಭ್ಯ ವಿನ: ಆಚರಣೆ ಅಲ್ಲ. ಜೀರೋ ಟ್ರಾಫಿಕ್ ನಲ್ಲಿ ಹೋಗುವ ಅಂಬುಲೆನ್ಸ್ ಚಾಲಕನ ಎದುರು ದೊಡ್ಡ ಸವಾಲಿರುತ್ತದೆ. ಯಾಕೆಂದರೆ ಒಂದು ಅಮೂಲ್ಯ ಪ್ರಾಣವನ್ನು ಉಳಿಸಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಅವನು ಇರುತ್ತಾನೆ. ಅದರೊಂದಿಗೆ ಅಂಬುಲೆನ್ಸ್ ನಲ್ಲಿದ್ದ ರೋಗಿಯ ಕುಟುಂಬದವರನ್ನು ಕೂಡ ಅಷ್ಟೇ ಸುರಕ್ಷಿತವಾಗಿ ತಲುಪಿಸಬೇಕು.

ಆದರೆ ಇಲ್ಲಿ ಇರುವ ಪ್ರಶ್ನೆ ಏನೆಂದರೆ ಅಂಬುಲೆನ್ಸ್ ಹಿಂದೆ ಮುಂದೆ ಡಜನ್ ನಷ್ಟು ಬೇರೆ ವಾಹನಗಳು ಬೇಕಾ? ಎಂಬುಲೆನ್ಸ್ ನವನಿಗೆ ವೇಗವಾಗಿ ಹೋಗುವುದು ಅನಿವಾರ್ಯ ಆದರೆ ಎಂಬುಲೆನ್ಸ್ ಜೊತೆಗಿದ್ದವರು ಎಲ್ಲರೂ ಎಷ್ಟು ಕಡಿಮೆ ಆಗುತ್ತೋ ಅಷ್ಟು ಕಡಿಮೆ ಹೊತ್ತಿನಲ್ಲಿ ಬೆಂಗಳೂರು ತಲಪುವ ಅವಸರದಲ್ಲಿರುತ್ತಾರೆ. ಮೊನ್ನೆ ಸುಹಾನಾ ಅವರನ್ನು ಹೊತ್ತ ಎಂಬುಲೆನ್ಸ್ ಎದುರಿಗೆ ಇದ್ದ ಒಂದು ಗಾಡಿಯಲ್ಲಿ ಕುಳಿತಿದ್ದವರು ಯಾವುದೋ ಚುನಾವಣೆಯಲ್ಲಿ ಗೆದ್ದವರಂತೆ ವಿಜೃಂಭಿಸುತ್ತಿದ್ದರು. ಕೆಲವೊಮ್ಮೆ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಫೈನಲ್ ನಲ್ಲಿ ಗೆದ್ದಂತೆ ಬೊಬ್ಬೆ ಹೊಡೆಯುತ್ತಿದ್ದರು. ಇವರ ಆವೇಶ ಹೇಗಿತ್ತು ಎಂದರೆ ಇವರು ಹೋಗುವ ರಭಸದಿಂದ ಒಂದಿಷ್ಟು ಹೆಚ್ಚು ಕಡಿಮೆ ಆದರೆ ರಸ್ತೆಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತಲೇ ನುಗ್ಗಿ ಬರುತ್ತಾರೇನೋ ಎಂದು ಅನಿಸುತ್ತಿತ್ತು. ಹಾಸನದಲ್ಲಿ ರಸ್ತೆ ಬದಿ ನಿಂತಿದ್ದ ಬಾಲಕನೊಬ್ಬನ ಸೈಕಲ್ಲಿಗೆ ಈ ಮೆರವಣಿಗೆಯಲ್ಲಿದ್ದ ಗಾಡಿ ಡಿಕ್ಕಿ ಹೊಡೆದು ಸೈಕಲ್ ಟಯರ್ ಒಡೆದುಹೋಗಿದೆ. ಅದೃಷ್ಟವಶಾತ್ ಬಾಲಕನಿಗೆ ಸಣ್ಣಪುಟ್ಟ ಗಾಯ ಬಿಟ್ಟರೆ ಹೆಚ್ಚಿನದೇನೂ ಆಗಿಲ್ಲ. ಅದೇ ಒಂದು ವೇಳೆ ಹೆಚ್ಚು ಕಡಿಮೆ ಆಗಿ ವಾಹನ ಬ್ರೇಕ್ ಫೇಲ್ ಆಗಿ ಜನರತ್ತ ನುಗ್ಗಿದ್ದರೆ ಒಂದು ಉಳಿಸಲು ಹೋಗಿ ನಾಲ್ಕು ಪ್ರಾಣಗಳೊಂದಿಗೆ ಕೈ ತೊಳೆಯಬೇಕಾಗಿತ್ತು. ಇಂತದ್ದು ಆಗಬಾರದು. ಆದರೆ ಆಗುವ ಮೊದಲು ನಾವು ಎಚ್ಚರವಹಿಸಬೇಕು.

ಸುಹನಾಳನ್ನು ಕರೆದು ಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಸಂಖ್ಯೆ KA 51AB 7860 ಗೆ Insurance, TAX ಯಾವುದು ಇರಲಿಲ್ಲ ಇಂತಹ ವಾಹನದಲ್ಲಿ ರೋಗಿಯನ್ನು ಕರೆದುಕೊಂಡು ಹೋಗುವಾಗ ಏನಾದರೂ ಹೆಚ್ಚು ಕಮ್ಮಿ ಅದರೆ ಯಾರು ಗತಿ 0 ಟ್ರಾಫಿಕ್ ನಲ್ಲಿ ರೋಗಿಯನ್ನು ಕರದು ಕೊಂಡು ಹೋಗುವ ಮೊದಲು ಪೊಲೀಸರು ಅಂಬುಲೆನ್ಸ್ ನ ದಾಖಲೆಗಳನ್ನು ಪರಿಶೀಲಿಸುವುದು ಉತ್ತಮ . ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು. ಪ್ರತಿ ಝೀರೋ ಟ್ರಾಫಿಕ್ ಬಯಸುವವರು ಅಂಬುಲೆನ್ಸ್ ಮುಂಭಾಗ ಅನಗತ್ಯವಾಗಿ ವಾಹನಗಳ ಮೆರವಣಿಗೆ ಇಟ್ಟುಕೊಳ್ಳಬಾರದು. ಇದರಿಂದ ಎಂಬುಲೆನ್ಸ್ ಚಾಲಕನಿಗೂ ಕಿರಿಕಿರಿ. ಎದುರಿನ ವಾಹನದವ ಅಪ್ಪಿತಪ್ಪಿ ಒಂದು ಬ್ರೇಕ್ ಹೊಡೆದರೆ ಎನ್ನುವ ಟೆನ್ಷನ್. ಮುಂದೆ ಚಲಿಸುತ್ತಿರುವ ವಾಹನಗಳ ವೇಗವನ್ನು ನೋಡಿ ತಾನೂ ವಾಹನ ಬಿಡುವ ಒತ್ತಡ ಎಲ್ಲವೂ ಇರುತ್ತದೆ. ಇದು ಇವತ್ತು ಸಣ್ಣ ವಿಷಯದಂತೆ ಕಾಣಬಹುದು. ಆದರೆ ಇದನ್ನು ಪೊಲೀಸ್ ವರಿಷ್ಟಾಧಿಕಾರಿಯವರು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಅಂಬುಲೆನ್ಸ್ ಮುಂದಿದ್ದ ವಾಹನಗಳಲ್ಲಿ ಇದ್ದವರನ್ನು ಕರೆದು ಸರಿಯಾಗಿ ವಿಚಾರಿಸದಿದ್ದರೆ ಇಂತಹ ಘಟನೆಗಳು ಮುಂದುವರೆಯುತ್ತವೆ. ಇದು ಬೇರೆ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ನಲ್ಲಿ ಹೋಗುವ ಅವಕಾಶ ಪಡೆದವರು ಕೂಡ ಆ ಸೌಲಭ್ಯ ದುರುಪಯೋಗಪಡಿಸಿದಂತೆ ಆಗುತ್ತದೆ. ಒಬ್ಬರದ್ದು ನೋಡಿ ಇನ್ನೊಬ್ಬರು ಅನುಕರಿಸುವ ಸಾಧ್ಯತೆ ಇದೆ. ಹಾಗೆ ಆಗದೇ ಇರಲಿ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search