ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಸ್ವಾತಂತ್ರ್ಯ ಆಚರಿಸಿ- ಮಾಜಿ ಯೋಧರು
ಸುರತ್ಕಲ್ ವಲಯದ ಪೂರ್ವ ಸೈನಿಕರ ಬಳಗದ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗಣೇಶ್ ಪುರ ದೇವಸ್ಥಾನದಿಂದ ಕೃಷ್ಣಾಪುರ ಮಾರ್ಗವಾಗಿ ಸುರತ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕದ್ರಿ ಸೈನಿಕರ ಸ್ಮಾರಕದವರೆಗೆ ಮಾಜಿ ಯೋಧರು ಬುಲೆಟ್ ರ್ಯಾಲಿ ನಡೆಸಿ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿದರು. ಸುಮಾರು 50 ರಾಯಲ್ ಎನ್ ಫೀಲ್ಡ್ ಮತ್ತು ಬುಲೆಟ್ ಬೈಕ್ ಗಳಲ್ಲಿ ನಡೆದ ರ್ಯಾಲಿಯ ತರುವಾಯ ಮಾತನಾಡಿದ ಮಾಜಿ ಯೋಧ ಎಂ ಭದ್ರಯ್ಯ ಅವರು ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ರಾಷ್ಟ್ರ ಜಾಗೃತಿಯನ್ನು ಮಾಡುವ ಮೂಲಕ ಪ್ರತಿಯೊಬ್ಬರು ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕು ಎಂದು ಕರೆ ನೀಡಿದರು.
ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾದ ಮದ ಅಡಗಿಸಬೇಕಾದರೆ ಅವರಿಗೆ ಆರ್ಥಿಕ ಹೊಡೆತ ಕೊಡುವುದು ಒಂದೇ ದಾರಿ. ಅದನ್ನು ಭಾರತ ಮಾಡಿ ಚೀನಾದ ಬೆನ್ನೆಲುಬು ಮುರಿಯಬೇಕು. ಚೀನಾ ತನ್ನ ವ್ಯವಹಾರಿಕ ಉದ್ದೇಶಕ್ಕಾಗಿ ಭಾರತವನ್ನು ಅವಲಂಬಿಸಿದೆ, ಆದ್ದರಿಂದ ಚೀನಾಕ್ಕೆ ಬುದ್ಧಿ ಕಲಿಸಬೇಕಾದರೆ ಚೀನಾದ ಎಲ್ಲಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಬೇಕು. ಏಟಿಗೆ ಎದಿರೇಟು ಕೊಡಲು ನಾವು ಸಿದ್ಧರಾಗಬೇಕು ಎಂದು ಹೇಳಿದರು.
ಸಾಂಧರ್ಬಕವಾಗಿ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್, ಪೂರ್ವ ಸೇನಾನಿ ಶ್ರೀಕಾಂತ್ ಶೆಟ್ಟಿ ಮಾತನಾಡಿದರು. ನಿವೃತ್ತ ಯೋಧರಾದ ಭಗವಾನ್ ದಾಸ್, ಭಾಸ್ಕರ್ ರೈ, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಮಹೇಶ್ ಮೂರ್ತಿ, ನವೋದಯ ಯುವಕ ಮಂಡಲದ ಅಧ್ಯಕ್ಷ ಧರ್ಮೇಂದ್ರ ಗಣೇಶ್ ಪುರ, ಜಿಕೆ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
Leave A Reply