ಇಂತವರಿಂದಲೇ ವೈದ್ಯರ ಮೇಲೆ ಸಂಶಯ ಬರುವುದು!!
ಸುಂದರ ಮುಖದ ಹಿಂದೆ ಕೆಟ್ಟ ಮನಸ್ಸಿದೆ ಎನ್ನುವುದು ಡಾ.ಪುಷ್ಪಿತಾ ಅವರಂತಹ ಗೋಮುಖ ವ್ಯಾಘ್ರವನ್ನು ನೋಡುವಾಗಲೇ ಅನಿಸುತ್ತದೆ. ಒಂದು ಕಡೆ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗ ಆದಾಯ ಇಲ್ಲದೆ ಪರಿತಪಿಸುತ್ತಿದೆ. ಸಾಲ ಕಟ್ಟಲಾಗದೇ ಕಿರಿಕಿರಿ ಅನುಭವಿಸುತ್ತಿದೆ. ಊಟಕ್ಕೂ ತೊಂದರೆಯಾದ ಕುಟುಂಬಗಳು ಇವೆ. ಮತ್ತೊಂದೆಡೆ ಯಾರೂ ಹಸಿವಿನಿಂದ ಬಳಲಬಾರದು ಎಂದು ಎಷ್ಟೋ ಸಂಘಸಂಸ್ಥೆಗಳು ಮುಂದೆ ಬಂದು ಊಟ, ತಿಂಡಿ, ಪಾನೀಯ, ಬಟ್ಟೆ ಬರೆ ಹಾಗೂ ದಿನಸಿ ವಸ್ತುಗಳನ್ನು ಪೂರೈಸುತ್ತಿವೆ. ಅಸಂಖ್ಯಾತ ಜನರು ಹೊಟ್ಟೆ ತುಂಬಿಸಿಕೊಂಡು ಕೊಟ್ಟವರಿಗೆ ಆರ್ಶೀವದಿಸುತ್ತಿದ್ದಾರೆ. ಇನ್ನು ಕೆಲವರು ತಾವು ಸ್ವತ: ಹೋಗಿ ಆಹಾರ ವಿತರಿಸಲು ಅಸಾಧ್ಯವಾಗಿರುವುದರಿಂದ ಇಂತಹ ಸಂಘಸಂಸ್ಥೆಗಳಿಗೆ, ಟ್ರಸ್ಟ್ ಗಳಿಗೆ ಆರ್ಥಿಕ ರೂಪದಲ್ಲಿ ಡೋನೇಶನ್ ನೀಡಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ಮತ್ತೊಂದು ವರ್ಗವಿದೆ. ಅವರು ಊಟದ ವಿಷಯದಲ್ಲಿ ಕಷ್ಟವನ್ನು ಅನುಭವಿಸುತ್ತಿಲ್ಲ. ಸಾಕಷ್ಟು ಅನುಕೂಲಸ್ಥರು ಆಗಿರುತ್ತಾರೆ. ಹಾಗಂತ ಯಾರಿಗೂ ಸಹಾಯ ಮಾಡಲು ಕೂಡ ಹೋಗುತ್ತಿಲ್ಲ. ಇಷ್ಟೇ ಆಗಿದ್ದರೆ ಸಮಾಜಕ್ಕೆ ಇಂತವರಿಂದ ಪ್ರಯೋಜನವೂ ಇಲ್ಲ, ನಷ್ಟವೂ ಇಲ್ಲ ಎಂದುಕೊಳ್ಳಬಹುದಿತ್ತು. ಆದರೆ ಇಂತವರಲ್ಲಿ ಕೆಲವರು ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಲು ಹೊರಟಿದ್ದಾರಲ್ಲ, ಅವರಿಗೆ ನರಕ ಎನ್ನುವುದು ಒಂದು ಇದ್ದರೆ ಅದರಲ್ಲಿ ಅಂದೆಂತಹ ಘೋರ ಶಿಕ್ಷೆ ಇರಬಹುದು ಎಂದು ಯೋಚಿಸುವಾಗಲೇ ಹೆದರಿಕೆಯಾಗುತ್ತದೆ. ಸರಕಾರ ಜನಸಾಮಾನ್ಯರಿಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿಕೊಟ್ಟ ಲಸಿಕೆಯಲ್ಲಿ ಗೋಲ್ ಮಾಲ್ ಮಾಡುತ್ತಾರಲ್ಲ, ಅಂತಹ ಇಬ್ಬರು ರಕ್ಕಸಿಯರ ಮನಸ್ಸು ಹೊಂದಿರುವ ಹೆಂಗಸರ ಹೆಸರು ಡಾ.ಎಂಕೆ ಪುಷ್ಪಿತಾ ಹಾಗೂ ಅವಳ ಸಹಾಯಕಿ ಪ್ರೇಮಾ.
ಇವರ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಬಂದಿದೆ. ಒಂದು ಬಾಟಲಿಯಲ್ಲಿ ಹತ್ತು ಜನರಿಗೆ ಕೊಡುವಷ್ಟು ಲಸಿಕೆ ಇರುವಾಗಲೂ ಇವರು ಅದರಲ್ಲಿ ಅರ್ಧದಷ್ಟನ್ನು ಉಳಿಸಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಲಸಿಕೆ ಕೊಡುವ ವಿಷಯದಲ್ಲಿ ಸಾಮಾನ್ಯವಾಗಿ ಯಾರು ಕೂಡ ವೈದ್ಯರ ಮೇಲೆ ಸಂಶಯ ಪಡುವುದಿಲ್ಲ. ಯಾಕೆಂದರೆ ಈ ಕೊರೊನಾ ಸಮಯದಲ್ಲಿ ಪಿಪಿಇ ಕಿಟ್ ಧರಿಸಿ, ತಮ್ಮ ಪ್ರಾಣದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರ ಬಗ್ಗೆ ಇಂತಹ ಸಮಯದಲ್ಲಿ ಅನುಮಾನ ಪಡುವಂತಹ ಮನಸ್ಸು ನಮ್ಮದು ಅಲ್ಲ. ಆದರೆ ವೈದ್ಯೋ ನಾರಾಯಣೋ ಹರಿ ಎನ್ನುವ ತಾತ್ಪರ್ಯಕ್ಕೆ ವಿರುದ್ಧವಾಗಿರುವ ಕೆಲವರು ಹೇಗೋ ವೈದ್ಯರಾಗಿಬಿಡುತ್ತಾರೆ. ಹಾಗೆ ವೈದ್ಯೆಯಾದವಳು ಡಾ. ಪುಷ್ಪಿತಾ. ಅವಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಂದ ಲಸಿಕೆಗಳನ್ನು ಕಡಿಮೆ ನೀಡಿ ಅಲ್ಲಿ ಉಳಿಸಿ ಪ್ರೇಮಾಳ ಮನೆಯಲ್ಲಿ ಜನರನ್ನು ಕರೆಸಿ ಅಲ್ಲಿ ಕೂಡ ಅರ್ಧರ್ಧ ಕೊಟ್ಟು ಐನೂರು ರೂಪಾಯಿ ತಲಾ ಒಬ್ಬರಿಂದ ಪಡೆಯುತ್ತಿದ್ದಳು. ಈಗ ಇಬ್ಬರೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇನ್ನೊಂದು ಕಡೆ ರೆಮ್ ಡೆಸಿವರ್ ಲಸಿಕೆಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ನಾನು ಕೇಳುವುದು ಇದೆಲ್ಲ ಮಾಡಲು ಕೆಲವರಿಗೆ ಹೇಗೆ ಮನಸ್ಸು ಬರುತ್ತದೆ. ಒಂದು ವೇಳೆ ಇಂತವರ ತಂದೆಯೋ, ತಾಯಿಯೋ, ತಂಗಿಯೋ, ಮಕ್ಕಳೋ ಹೀಗೆ ರೆಮಿಡೆಸಿವರ್ ಸಿಗದೇ ಪ್ರಾಣ ಬಿಟ್ಟಿದ್ದರೆ ಆಗ ಇಂತವರು ಹೀಗೆ ಕಾಳಸಂತೆಯಲ್ಲಿ ಮಾರಲು ನಿಂತಿರುತ್ತಿದ್ದರಾ? ಲಿಸಿಕೆ ತೆಗೆದುಕೊಳ್ಳುವ ಮೊದಲೇ ಪುಷ್ಪಿತಾ ಹೆತ್ತವರು ಪ್ರಾಣ ಬಿಟ್ಟಿದ್ದರೆ ಆಕೆ ಹೀಗೆ ಸರಕಾರವನ್ನು ಮೋಸಗೊಳಿಸಿ ಮನೆಯಲ್ಲಿ ಅಕ್ರಮವಾಗಿ ಮಾರುತ್ತಿದ್ದಳಾ? ನಾಳೆ ಪ್ರೇಮಾ ಮನೆಯಲ್ಲಿ ಯಾರಾದರೂ ಕೊರೊನಾದಿಂದ ಮೃತಪಟ್ಟರೆ ಅವಳು ಕೂಡ ಹೀಗೆ ಹಣ ಮಾಡಲು ನಿಂತಿರುತ್ತಿದ್ದಳಾ? ಯಾಕೆ ಹೀಗೆ ಮಾಡುತ್ತಾರೆ? ಒಂದಂತೂ ನಿಜ, ಇದು ದೇವರು ನಮಗೆ ಪರೀಕ್ಷಿಸುತ್ತಿರುವ ಸಮಯ. ಯಾರು ಮನುಷ್ಯರಲ್ಲಿ ದೇವರನ್ನು ಕಂಡು ಪಾಪದವರ ಹೊಟ್ಟೆ ತುಂಬಿಸಲು ಹೊರಡುತ್ತಾನೋ ಅವನಿಗೆ ಮುಂದೆ ಒಳ್ಳೆಯದಾಗುವುದರಲ್ಲಿ ಸಂಶಯವಿಲ್ಲ. ಅದೇ ಇಂತಹ ಸಮಯದಲ್ಲಿಯೂ ನಾಲ್ಕು ಕಾಸು ಯಾರಿಗಾದರೂ ಮೋಸ ಮಾಡಿ ಹಣ ಮಾಡೋಣ ಎಂದು ಸ್ಕೆಚ್ ಹಾಕಿದರೆ ಅಂತವರಿಗೆ ತುಂಬಾ ದಿನ ಉಳಿಗಾಲವಿರುವುದಿಲ್ಲ. ಈಗ ಪುಷ್ಪಿತಾ ಅಂತವರು ಸಿಕ್ಕಿಬಿದ್ದಿರಬಹುದು. ಆದರೆ ಹೀಗೆ ಬೆಡ್ ನಲ್ಲಿ ಹಣ ಮಾಡುವವರು, ಬೇರೆ ಬೇರೆ ರೀತಿಯಲ್ಲಿ ಹಣ ಸುಲಿಯಲು ಹೊಂಚು ಹಾಕುವವರು ಅಂತಹ ಹಣ ತಿನ್ನುವ ಮೊದಲೇ ಈ ಭೂಮಿಯಿಂದ ಎದ್ದುಹೋಗಬೇಕಾಗುತ್ತದೆ. ಸಾಧ್ಯವಾದರೆ ನಿಮ್ಮ ಕೈಯಲ್ಲಿ ಆಗುವಾದರೆ ನಾಲ್ಕು ಜನರಿಗೆ ಆಕ್ಸಿಜನ್ ಕೊಡಿಸಿ, ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಫ್ರೀಯಾಗಿ ವ್ಯವಸ್ಥೆ ಮಾಡಿ. ಬೆಡ್ ಕೊಡಿಸಲು ಪ್ರಯತ್ನ ಮಾಡಿ. ಊಟ, ತಿಂಡಿ ಸಿಗುವ ಕೆಲಸ ಮಾಡಿ. ಏನು ಮಾಡಲು ಆಗಲಿಲ್ಲದಿದ್ದರೆ ಸೋಂಕಿತರ ಮನೆಯವರಿಗೆ ಕರೆ ಮಾಡಿ ಮಾನಸಿಕ ಧೈರ್ಯ ತುಂಬಿ. ಹಣ ಕೊಡಲು ಆಗದವರು ಬೇರೆ ರೀತಿಯ ಸಹಾಯ ಕೂಡ ಮಾಡಬಹುದು. ಆದರೆ ಇಂತಹ ಹೊತ್ತಿನಲ್ಲಿಯೂ ಹಣ ಮಾಡಲು ನಿಲ್ಲಬೇಡಿ, ಅದು ಕೂಡ ಬೇರೆಯವರ ತಲೆ ಹೊಡೆದು ಹಣ ಮಾಡುವುದು ಇದೆಯಲ್ಲ. ಅದು ಪರಮ ಅಸಹ್ಯ. 130 ಕೋಟಿ ಜನಸಂಖ್ಯೆಯ ರಾಷ್ಟ್ರವೊಂದರಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಸಮರ ಸಾರಿ ಗೆಲ್ಲುವುದು ಇದೆಯಲ್ಲ, ಅದಕ್ಕೆ ನೂರು ಗುಂಡಿಗೆ ಬೇಕು. ಶ್ರೀಲಂಕಾದಂತಹ ಪುಟ್ಟ ರಾಷ್ಟ್ರಗಳಲ್ಲಿ ಕೊರೊನಾ ಗೆಲ್ಲುವುದು ಸುಲಭ. ಆದರೆ ಭಾರತದಲ್ಲಿ ಒಂದು ಕಡೆ ರಾಜಕೀಯ ಆರೋಪಗಳು, ಮತ್ತೊಂದೆಡೆ ಕಾಳಸಂತೆಕೋರರ ಹಾವಳಿ ಮತ್ತು ಇವರ ನಡುವೆ ಹಣ ಮಾಡಲೆಂದೆ ಇಂತಹ ಹುಳಗಳು. ಭಗವಂತ, ಇವರಿಗೆ ಬುದ್ಧಿ ಕೊಡಪ್ಪಾ!
Leave A Reply