ಸ್ಪೆಶಲ್ ಗ್ಯಾಂಗ್ ಹೆಸರಿನಲ್ಲಿ ಬಿಜೆಪಿಗರ ಭರ್ಜರಿ ಭೋಜನ!!
Posted On July 15, 2021
ಭಾರತೀಯ ಜನತಾ ಪಾರ್ಟಿಯ ಆಡಳಿತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಂದ ಬಳಿಕ ಏನೋ ದೊಡ್ಡ ಬದಲಾವಣೆ ಆಗುತ್ತೆ ಎನ್ನುವ ಭ್ರಮೆ ತುಂಬಾ ಜನರಿಗೆ ಇತ್ತು. ಆದರೆ ಇವರು ಮಾಡುತ್ತಿರುವ ಅಧ್ವಾನಗಳನ್ನು ನೋಡುತ್ತಾ ಇದ್ದರೆ ಇವರು ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ಸಿನ ಹಿರಿಯಣ್ಣನಂತೆ ಕಾಣುತ್ತಿದ್ದಾರೆ. ಅದಕ್ಕೆ ಒಂದು ಸಿಂಪಲ್ ಉದಾಹರಣೆ ನಿಮಗೆ ಕೊಡುತ್ತೇನೆ. ಈಗ ಮಳೆಗಾಲ. ನಮಗೆ ಹೊರಗೆ ಮಳೆ ಬೀಳುತ್ತಿದೆ ಎಂದು ಕಾಣುತ್ತದೆ. ಆದರೆ ಪಾಲಿಕೆಯಲ್ಲಿ ಇರುವ ಆಡಳಿತ ಪಕ್ಷದವರಿಗೆ, ಸದಸ್ಯರಿಗೆ, ಇಂಜಿನಿಯರ್ ಗಳಿಗೆ, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಬೀಳುತ್ತಿರುವುದು ಮಳೆಯ ನೀರಲ್ಲ. ಹಣದ ಹೊಳೆ ಎಂದು ಅನಿಸುತ್ತದೆ. ಹೇಗೆ ವಿವರಿಸುತ್ತೇನೆ.
ಮಳೆಗಾಲದಲ್ಲಿ ಇಲ್ಲಿಯ ತನಕ ಎರಡು ತಿಂಗಳ ತನಕ ಪ್ರತಿ ವಾರ್ಡಿನಲ್ಲಿ ಒಂದು ಸ್ಪೆಶಲ್ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಗುತ್ತಿಗೆದಾರರಿಗೆ ಒಂದು ವಿನೂತನ ಗುತ್ತಿಗೆಯನ್ನು ಕೊಡುತ್ತಾ ಬರಲಾಗುತ್ತಿತ್ತು. ಅರವತ್ತು ವಾರ್ಡುಗಳು ಇರುವುದರಿಂದ ಅರವತ್ತು ಗ್ಯಾಂಗುಗಳ ನೇಮಕ ಆಗುತ್ತಿತ್ತು. ಅದರೊಂದಿಗೆ ರಾತ್ರಿಗೆ ದಕ್ಷಿಣಕ್ಕೊಂದು ಮತ್ತು ಉತ್ತರಕ್ಕೊಂದು ಪ್ರತ್ಯೇಕ ಗ್ಯಾಂಗ್ ಕೂಡ ಇರುತ್ತಿತ್ತು. ಈ ಗ್ಯಾಂಗುಗಳು ಏನು ಮಾಡಬೇಕು ಎನ್ನುವುದನ್ನು ಮೊದಲು ಹೇಳುತ್ತೇನೆ ನಂತರ ಇವರಿಗೆ ನಾವು ನೀಡಬೇಕಾದ ಹಣವನ್ನು ನಿಮಗೆ ತಿಳಿಸುತ್ತೇನೆ. ಅದನ್ನು ಕೇಳಿ ನಿಮಗೆ ಈ ಪಾಲಿಕೆಯ ಮೇಲೆ ಅಸಹ್ಯ ಉಂಟಾಗುವುದರಲ್ಲಿ ಸಂಶಯವಿಲ್ಲ. ಮೊದಲಿಗೆ ಇವರ ಕೆಲಸ ನೋಡೋಣ. ಪ್ರತಿ ಸ್ಪೆಶಲ್ ಗ್ಯಾಂಗಿನಲ್ಲಿ ಎಂಟು ಜನರ ತಂಡವೊಂದನ್ನು ರಚಿಸಿ ಅವರಿಗೆ ಮಿನಿ ಲಾರಿ ಅದು ಇದು ಕೊಟ್ಟು ಚರಂಡಿಗಳ ಹೂಳು ತೆಗೆಯುವುದು, ನೆರೆ ಬಂದಾಗ ಜನರ ಸಹಾಯಕ್ಕೆ ಧಾವಿಸುವುದು, ಮರ ಅಡ್ಡ ಬಿದ್ದಾಗ ಅದನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವುದು ಹೀಗೆ ಕೆಲಸ ಇರುತ್ತದೆ. ಒಂದು ಗ್ಯಾಂಗಿನಲ್ಲಿ ಎಂಟು ಜನರು ಎಂದರೆ ಅರವತ್ತು ಗ್ಯಾಂಗಿನಲ್ಲಿ 480 ಜನರಾಯಿತು. ಮಂಗಳೂರಿನಲ್ಲಿ ಅರವತ್ತು ವಾರ್ಡಿನಲ್ಲಿ ಏಕಕಾಲಕ್ಕೆ ಬೆಳಿಗ್ಗೆ ಮರಗಳು ಬೀಳುವುದಿಲ್ಲ. ಏಕಕಾಲಕ್ಕೆ ಅರವತ್ತು ವಾರ್ಡಿನಲ್ಲಿ ಕೃತಕ ನೆರೆ ಬರುವುದಿಲ್ಲ. ಏಕಕಾಲದಲ್ಲಿ ಅರವತ್ತು ವಾರ್ಡುಗಳ ತೋಡುಗಳ ಹೂಳು ತೆಗೆಯಲಾಗುವುದಿಲ್ಲ. ಹಾಗಿದ್ದ ಮೇಲೆ ಅರವತ್ತು ಗ್ಯಾಂಗಿನ 480 ಸದಸ್ಯರು ಎಲ್ಲಿರುತ್ತಾರೆ? ಅವರು ಎಲ್ಲಿಯೂ ಇರುವುದಿಲ್ಲ. ಅವರು ಕೇವಲ ಕಾಗದಗಳಲ್ಲಿ ಇರುತ್ತಾರೆ. ಅವರ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತದೆ. ಅದನ್ನು ಪಾಲಿಕೆಯಲ್ಲಿ ಆಯಾ ವಾರ್ಡಿನ ಸದಸ್ಯರು, ಗುತ್ತಿಗೆದಾರರು, ಅಧಿಕಾರಿಗಳು ಹಂಚಿಕೊಂಡು ತಿನ್ನುತ್ತಾರೆ. ಈಗ ಹಣದ ಲೆಕ್ಕ ಹೇಳುತ್ತೇನೆ. ನೆನಪಿರಲಿ, ಇದು ನಮ್ಮ ನಿಮ್ಮ ತೆರಿಗೆಯ ಹಣ. ಒಂದೊಂದು ವಾರ್ಡಿನಲ್ಲಿ ಮೂರು ತಿಂಗಳಿಗೆ ಈ ಸ್ಪೆಶಲ್ ವಾರ್ಡುಗಳ ಹೆಸರಿನಲ್ಲಿ ಆಗುವ ಬಿಲ್ 3 ಲಕ್ಷ 26 ಸಾವಿರ ರೂಪಾಯಿಗಳು. ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟುವ ಅಥವಾ ಅನಾಹುತ ಆದರೆ ಅದನ್ನು ಪರಿಹರಿಸುವ ಹೆಸರಿನಲ್ಲಿ ಮೂರು ತಿಂಗಳಿಗೆ ಆಗುವ ಬಿಲ್ ಎರಡು ಕೋಟಿ ರೂಪಾಯಿಗಳಿಗೂ ಅಧಿಕ. ಅಷ್ಟಕ್ಕೂ ಈ ಗ್ಯಾಂಗುಗಳು ಅಗತ್ಯ ಇದೆಯಾ ಎಂದು ನೋಡಿದರೆ ಇದೆ. ಆದರೆ ಇಷ್ಟು ಪ್ರಮಾಣದಲ್ಲಿ ಇಲ್ಲ. ಹೆಚ್ಚೆಂದರೆ ಪಾಲಿಕೆಯ ಅರವತ್ತು ವಾರ್ಡುಗಳಲ್ಲಿ ಇಪ್ಪತ್ತು ವಾರ್ಡುಗಳಿಗೆ ಒಂದರಂತೆ ಬೆಳಿಗ್ಗೆ ಮೂರು ಗ್ಯಾಂಗುಗಳು ಮತ್ತು ಅದೇ ರೀತಿಯಲ್ಲಿ ರಾತ್ರಿ ಮೂರು ಗ್ಯಾಂಗುಗಳು ಇದ್ದರೆ ಸಾಕು. ರಸ್ತೆ ಕಳಪೆಯಾದಾಗ ರಿಪೇರಿ ಎಂದಾದರೆ ಕನಿಷ್ಟ ಅಲ್ಲಿ ಸ್ವಲ್ಪ ಕೆಲಸವಾದರೂ ನಡೆಯುತ್ತೆ. ಒಂದಿಷ್ಟು ಫೋಟೋ ತೆಗೆದು ಕೆಲಸ ಮಾಡಿದ್ದೇವೆ ಎನ್ನುವ ಸಾಕ್ಷಿಯಾದರೂ ಗುತ್ತಿಗೆದಾರರು ತೋರಿಸಬೇಕು. ಇಲ್ಲಿ ಏನಿದೆ? ಎಲ್ಲವೂ ಗಾಳಿಯಲ್ಲಿ ಮತ್ತು ಸುಳ್ಳು ದಾಖಲೆಗಳಲ್ಲಿ ಮಾತ್ರ.
ಹಾಗಂತ ಇದು ಪಾಲಿಕೆಯ ಹೊಸ ಐಎಎಸ್ ಕಮೀಷನರ್ ಅವರಿಗೆ ಗೊತ್ತಿಲ್ವಾ? ಅವರೇಕೆ ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ನಿಮಗೆ ಅನಿಸಬಹುದು. ಅವರ ಕಣ್ಣಿಗೆ ಯಶಸ್ವಿಯಾಗಿ ಮಣ್ಣೆರೆಚಲಾಗಿದೆ. ಅವರಿಗೆ ಹಿಂದಿನ ಕೆಲವು ದೃಷ್ಣಾಂತಗಳನ್ನು ವೈಭವಿಕರಣಗೊಳಿಸಿ “ಸರ್, ನೀವು ಬೇಡಾ ಎಂದು ಹೇಳಿ ನಾಳೆ ಎಲ್ಲಿಯಾದರೂ ಹೆಚ್ಚು ಕಡಿಮೆಯಾದರೆ ಆಗ ಕೆಟ್ಟ ಹೆಸರು ನಿಮಗೆ ಬರುವುದು. ನೀವು ಈಗ ತಾನೆ ಕಮೀಷನರ್ ಆಗಿರುವವರು. ಎರಡು ಮಳೆಗಾಲ ನೀವು ಇದೇ ಊರಿನಲ್ಲಿ ಇದ್ದರೆ ಅದೇ ಹೆಚ್ಚು. ಹಾಗಿರುವಾಗ ಸುಮ್ಮನೆ ಜನರ ಹಣ ಉಳಿಸಲು ಹೋಗಿ ಯಾಕೆ ರಿಸ್ಕ್ ತೆಗೆದುಕೊಳ್ಳುತ್ತೀರಾ” ಎಂದು ಹಳೆಯ ಅಲ್ಲಿಯೇ ಬೇರು ಬಿಟ್ಟಿರುವ ಅಧಿಕಾರಿಗಳು ಹೇಳಿ ಹೆದರಿಕೆ ಹುಟ್ಟಿಸುತ್ತಾರೆ. ಆಯುಕ್ತರು ದೂಸರಾ ಮಾತಿಲ್ಲದೆ ಓಕೆ ಅಂದಿರುತ್ತಾರೆ. ಸರಿಯಾಗಿ ನೋಡಿದರೆ ಈ ಸ್ಪೆಶಲ್ ಗ್ಯಾಂಗಿನವರು ತೆಗೆಯುತ್ತಾರೆ ಎಂದು ಭ್ರಮಿಸಿರುವ ಒಂದು ಮೀಟರ್ ಅಗಲದ ಚರಂಡಿಯ ಹೂಳುಗಳನ್ನು ಯಾರು ತೆಗೆಯಬೇಕು. ಸಂಶಯವೇ ಇಲ್ಲ, ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರ ಕೆಲಸವದು. ಅವರು ತೆಗೆಯುತ್ತಿಲ್ಲ. ತೆಗೆಯಿರಿ ಎಂದು ಜೋರು ಮಾಡಲು ಒಂದು ಕಾಲದಲ್ಲಿ ಸೈಕಲ್ ನಲ್ಲಿ ಹೋಗುತ್ತಿದ್ದ ಈಗ ಮೂರು ಫ್ಲಾಟ್ ಉಚಿತವಾಗಿ ದಕ್ಕಿಸಿಕೊಂಡಿರುವ ಯಾವುದೇ ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ನೈತಿಕತೆ ಇಲ್ಲ. ಹಾಗಿರುವಾಗ ಆಂಟೋನಿಯವರು ತೆಗೆಯಬೇಕಾದ್ದನ್ನು ಸ್ಪೆಶಲ್ ಗ್ಯಾಂಗಿನವರು ತೆಗೆದ ಹಾಗೆ ಮಾಡುತ್ತಾರೆ. ಆಂಟೋನಿಯವರ ಬಿಲ್ ತಿಂಗಳಿಗೆ ಎರಡು ಕೋಟಿ ರೂಪಾಯಿ ಹೋಗುತ್ತದೆ. ಇನ್ನು ಸ್ಪೆಶಲ್ ಗ್ಯಾಂಗಿನವರ ಬಿಲ್ ಎರಡೂವರೆ ಕೋಟಿ ಮೂರು ತಿಂಗಳಿಗೆ ಹೋಗುತ್ತದೆ. ನಾವು ಮಾತ್ರ ನಾಗರಿಕರು ಮಳೆ ಜೋರು ಬಂದಾಗ ನೀರುಳ್ಳಿ ಬಜೆ ತಿನ್ನುತ್ತಾ ಕಾಫಿ ಕುಡಿಯುತ್ತಾ ಎಂತಹ ಮಳೆ ಎನ್ನುತ್ತಾ ಆರಾಮವಾಗಿ ಇರುತ್ತೇವೆ. ಅತ್ತ ಪಾಲಿಕೆಯಲ್ಲಿ ನಮ್ಮ ಹಣದಲ್ಲಿ ಯಾರೋ ಹಬ್ಬ ಮಾಡುತ್ತಾರೆ. ಕಾಂಗ್ರೆಸ್ ಇದ್ದಾಗ ಇದು ಸಾಮಾನ್ಯವಾಗಿತ್ತು. ಅವರು ಭ್ರಷ್ಟರು ಎಂದು ಮೋದಿ ಮುಖ ನೋಡಿ ಇವುಗಳಿಗೆ ಮತ ನೀಡಿ ಗೆಲ್ಲಿಸಿ ಕಾರ್ಪೋರೇಟರ್ ಮಾಡಿದ್ದಕ್ಕೆ ನಮ್ಮ ಹಣೆ ನಾವೇ ಚಚ್ಚಬೇಕು!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply