ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಪೊಲೀಸರು ಗೋಹತ್ಯೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಿದ ಹಾಗೆ ಈಗ ಮಾಡಬಾರದು!!
ಮಂಗಳೂರಿನ ಕುಳೂರು ಗೋಲ್ಡ್ ಫಿಂಚ್ ಮೈದಾನ ಇರುವುದು ನಗರದ ಮಧ್ಯಭಾಗದಲ್ಲಿಯೇ. ಅದೇನೂ ಗ್ರಾಮೀಣ ಭಾಗವಲ್ಲ. ಅಲ್ಲಿನ ಮನೆಯೊಂದರಿಂದ ಗೋಕಳ್ಳರು ಮೂರು ಗೋವುಗಳನ್ನು ಕದ್ದುಕೊಂಡು ಹೋಗಿದ್ದಾರೆ. ಆ ಮನೆಯವರು ಹಾಗೂ ಪರಿಸರ ಜನ ಬೊಬ್ಬೆ ಹಾಕಿದಾಗ ಅವರಿಗೆ ತಲವಾರು ತೋರಿಸಿದ್ದಾರೆ. ಹೀಗೆ ಎಲ್ಲರನ್ನು ಹೆದರಿಸಿ ಪಕ್ಕಾ ಉಗ್ರಗಾಮಿಗಳ ಶೈಲಿಯಲ್ಲಿ ಗೋವುಗಳನ್ನು ಗಾಡಿಯಲ್ಲಿ ತೆಗೆದುಕೊಂಡು ಹೋದ ಘಟನೆ ಶುಕ್ರವಾರ ಬೆಳಿಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ. ಈಗ ಯಾಕೆ ಯಾವ ಬುದ್ಧಿಜೀವಿ ಕೂಡ ಮಾತನಾಡುವುದಿಲ್ಲ ಎನ್ನುವುದು ಮೊದಲಿಗೆ ಕೇಳಬೇಕಾದ ಪ್ರಶ್ನೆ. ಈ ವಿಷಯ ಎಲ್ಲರಿಗೂ ಗೊತ್ತಾಗಿದ್ದರೂ ಕೇಸರಿ ಸಂಘಟನೆಯವರು ಮಾತ್ರ ಫೀಲ್ಡಿಗೆ ಇಳಿಯಬೇಕಾಗಿದೆ. ಆ ಮನೆಗೆ ಹಿಂದೂ ಸಂಘಟನೆಯ ನಾಯಕರು, ಕಾರ್ಯಕರ್ತರು ತೆರಳಿ ಆ ಮನೆಯವರಿಗೆ ಧೈರ್ಯ ತುಂಬಿದ್ದಾರೆ. 24 ಗಂಟೆಯೊಳಗೆ ಗೋಕಳ್ಳರನ್ನು ಬಂಧಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅದರ ನಂತರ ಆರೋಪಿಗಳಾದ ಮೂರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಗೋಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರ ತುರ್ತು ಕಾರ್ಯಾಚರಣೆ ನಿಜಕ್ಕೂ ಮೆಚ್ಚುವಂತದ್ದು. ನಿಜಕ್ಕೂ ಅಭಿನಂದನೀಯ ಕಾರ್ಯ. ಹಾಗಂತ ಬಿಸಿಯಾಗದೇ ಬೆಣ್ಣೆ ಕರಗದು ಎನ್ನುವಂತೆ ಗೋಕಳ್ಳತನದ ವಿಷಯದಲ್ಲಿ ಅಪರೂಪಕ್ಕೆ ಎನ್ನುವಂತೆ ಪೊಲೀಸರು ಈ ವೇಗದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕೆ ಒಂದು ಕಾರಣ ಹಿಂದೂ ಸಂಘಟನೆಗಳ ಪ್ರತಿಭಟನೆಯ ಎಚ್ಚರಿಕೆ ಎನ್ನಲು ಯಾವ ಹಿಂಜರಿಕೆಯೂ ಇಲ್ಲ. ಒಂದು ವೇಳೆ ಯಾವ ಕೇಸರಿ ಮುಖಂಡರೂ, ಕಾರ್ಯಕರ್ತರು ಗೋಕಳ್ಳತನವಾದ ಮನೆಗಳಿಗೆ ಹೋಗದೆ ಇದ್ದಿದ್ದರೆ, ಪೊಲೀಸ್ ಇಲಾಖೆಗೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವ ಎಚ್ಚರಿಕೆ ನೀಡದೆ ಇದ್ದಿದ್ದರೆ ಈ ಪ್ರಕರಣ ಕೂಡ ಹಳ್ಳಹಿಡಿಯುತ್ತಿತ್ತು. ಆದರೆ ಹಾಗೆ ಆಗಲು ಈ ಬಾರಿ ಹಿಂದೂ ಮುಖಂಡರು ಬಿಡಲಿಲ್ಲ. ಇನ್ನೊಂದು ಕಾರಣವೇನೆಂದರೆ ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ಅವರು ಗೋಕಳ್ಳತನದ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿಧಾನಗತಿಯ ಧೋರಣೆಯ ಕುರಿತು ಕಠೋರವಾಗಿ ಮಾತನಾಡಿರುವುದು. ಏನೇ ಆಗಲಿ, ಅರಗ ಜ್ಞಾನೇಂದ್ರ ಮೊನ್ನೆ ಫೋನಿನಲ್ಲಿ ಪೊಲೀಸ್ ಅಧಿಕಾರಿಗಳನ್ನು ಹಿಗ್ಗಾಮುಗ್ಗವಾಗಿ ತರಾಟೆಗೆ ತೆಗೆದುಕೊಂಡದ್ದು ಕೂಡ ಪರಿಣಾಮ ಬೀರಿದೆ. ಆ ವಿಷಯ ಒಂದಿಷ್ಟು ವಿವಾದ ಆಗಿರಲಿ, ಬಿಡಲಿ, ಏನೇ ಆಗಲಿ ರಾಜ್ಯದ ಗೃಹ ಸಚಿವರು ಮಾತ್ರ ಒಂದು ಹಂತಕ್ಕೆ ಸಂಯಮ ಕಳೆದುಕೊಂಡಿರುವುದು ಸತ್ಯವೇ ಆಗಿತ್ತು.
ಯಾಕೆಂದರೆ ರಾಜ್ಯ, ಕೇಂದ್ರದಿಂದ ಹಿಡಿದು ಗ್ರಾಮ ಪಂಚಾಯತ್ ತನಕ ಭಾರತೀಯ ಜನತಾ ಪಾರ್ಟಿಯದ್ದೇ ಆಡಳಿತ, ಜನಪ್ರತಿನಿಧಿಗಳು ಇದ್ದಾರೆ. ಇವರದ್ದೇ ಸರಕಾರ ಜಾರಿಗೆ ತಂದಿರುವ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನು ಇದೆ. ಇಷ್ಟು ಪ್ರಬಲ ಕಾನೂನು ಜಾರಿಗೆ ತಂದಿರುವಾಗ ಅದು ಸಮರ್ಪಕವಾಗಿ ಅನುಷ್ಟಾನ ಆಗುವುದಿಲ್ಲ ಎಂದರೆ ಹೇಗೆ? ಜನರು ಕೇಳುವುದಿಲ್ಲವೇ? ಅಲ್ಲಲ್ಲಿ ಅಕ್ರಮ ಗೋಹತ್ಯೆ ನಿರಂತರವಾಗಿ ನಡೆಯುತ್ತಿರುವಾಗ, ಅಕ್ರಮ ಗೋಸಾಗಾಟ ನಡೆಯುತ್ತಿದ್ದರೆ ಜನರು ಪ್ರಶ್ನಿಸುವುದು ಮೊದಲಿಗೆ ರಾಜ್ಯ ಸರಕಾರವನ್ನು ಎನ್ನುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸರಕಾರ ಇದ್ದಾಗ ಹೀಗೆ ಗೋಹತ್ಯೆ, ಅಕ್ರಮ ಗೋಸಾಗಾಟ ಆಗುತ್ತಿತ್ತು. ಈಗ ಬಿಜೆಪಿ ಸರಕಾರ ಬಂದ ನಂತರವೂ ಹೀಗೆ ಮುಂದುವರೆದರೆ ಬಿಜೆಪಿ ಸರಕಾರ ಬಂದದ್ದಕ್ಕೆ ಏನು ಪ್ರಯೋಜನ ಎಂದು ಕನಿಷ್ಟ ಬಿಜೆಪಿ ಮತದಾರರಾದರೂ ಕೇಳುವುದಿಲ್ಲವೇ? ಹಾಗಂತ ಕಾನೂನು ಜಾರಿಗೆ ತಂದವರು ಅದನ್ನು ತಾವೇ ರಸ್ತೆಯಲ್ಲಿ ನಿಂತು ಜಾರಿಗೆ ತರಲು ಆಗುತ್ತಾ? ಆ ಜವಾಬ್ದಾರಿ ಇರುವುದು ಪೊಲೀಸ್ ಇಲಾಖೆಯ ಮೇಲೆ. ಆದ್ದರಿಂದ ಇಂತಹ ಪ್ರಬಲ ಕಾನೂನು ಜಾರಿಗೆ ತರಬೇಕಾದ ಹೊಣೆ ಇರುವ ಪೊಲೀಸರು ಸುಮ್ಮನೆ ಕೈಕಟ್ಟಿ ಕುಳಿತರೆ ಏನು ಮಾಡುವುದು? ಒಂದು ಸರಕಾರದ ಅಧೀನದಲ್ಲಿರುವ ಪೊಲೀಸ್ ಇಲಾಖೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಮರ್ಥವಾಗಿ ಅನುಷ್ಟಾನ ಮಾಡುವ ಹೊಣೆ ಹೊತ್ತುಕೊಂಡಿದೆ. ಅದಕ್ಕಾಗಿ ಜನರ ತೆರಿಗೆಯ ಹಣದಲ್ಲಿ ಅವರಿಗೆ ಸಂಬಳ ಸಹಿತ ವಿವಿಧ ಭತ್ಯೆಗಳನ್ನು ನೀಡಲಾಗುತ್ತದೆ. ಆದರೆ ಅವರು ಇದನ್ನು ಮಾಡದೇ ಹೆಲ್ಮೆಟ್ ದಂಡ, ನೋಎಂಟ್ರಿ ಫೈನ್ ಮಾತ್ರ ಹಾಕುತ್ತಾ ಕುಳಿತು ಕೊಂಡರೆ ನಾಡಿಗೆ ಹೋಗುವ ಸಂದೇಶ ಏನು? ಇವರು ಬಂದರೂ ಪ್ರಯೋಜನವಿಲ್ಲ ಎಂದು ಕೇಸರಿ ಸಂಘಟನೆಗಳು ಅಂದುಕೊಳ್ಳುವುದಿಲ್ಲವೇ? ಭವಿಷ್ಯದಲ್ಲಿ ಆಗಾಗ ಕೇಸರಿ ಸಂಘಟನೆಗಳು ಪ್ರತಿ ಗೋಕಳ್ಳತನಕ್ಕೆ ಪ್ರತಿಭಟನೆಗೆ ಇಳಿದರೆ ಅದರಿಂದ ನಾಗರಿಕರು ಏನು ಅಂದುಕೊಳ್ಳುತ್ತಾರೆ? ಆದ್ದರಿಂದ ಪೊಲೀಸರು ಕಾಂಗ್ರೆಸ್ ಸರಕಾರ ಇದ್ದಾಗ ಇಂತಹ ವಿಷಯದಲ್ಲಿ ನಿರ್ಲಕ್ಷ್ಯ ತೋರಿರಬಹುದು. ಆದರೆ ಬಿಜೆಪಿ ಸರಕಾರ ಬಂದ ನಂತರ ಅವರು ಕಣ್ಣು, ಕಿವಿ, ಮೂಗು ಸ್ವಚ್ಚವಾಗಿಟ್ಟು, ಅಕ್ರಮ ಗೋಹತ್ಯೆಯ ವಿಷಯದಲ್ಲಿ ಚುರುಕಾಗಿ ಇದ್ದರೆ ಒಳ್ಳೆಯದು. ಇಲ್ಲದೇ ಹೋದರೆ ಜನರು ಆಕ್ರೋಶಿತಗೊಳ್ಳುತ್ತಾರೆ. ಅದು ಬಿಜೆಪಿ ಸರಕಾರ ವಿರುದ್ಧ ತಿರುಗುತ್ತದೆ. ಉಳಿದದ್ದು ಅರ್ಥವಾಗುವವರಿಗೆ ಅರ್ಥವಾಗುತ್ತದೆ!
Leave A Reply