ನೈಜ ಬಿಪಿಎಲ್ ಕಾರ್ಡು ಮತ್ತು ಸರಕಾರದ ಮೂರ್ಖತನದ ಪರಮಾವಧಿಯೋ!
ಒಬ್ಬ ವ್ಯಕ್ತಿಗೆ ಬಿಪಿಎಲ್ ಕಾರ್ಡ್ ಅಂದರೆ ಬಡತನ ಮಟ್ಟಕ್ಕಿಂತ ಕೆಳಗಿನ ಕಾರ್ಡ್ ಹೇಗೆ ದೊರಕುತ್ತದೆ? ಒಂದೋ ಆತ ಅದಕ್ಕೆ ಅರ್ಹನಾಗಿರಬೇಕು ಅಥವಾ ಅವನು ಯಾರಿಗೆ ಏನು ಕೊಡಬೇಕೊ ಅದನ್ನು ಕೊಟ್ಟು ಹಿಂಬಾಗಿಲಿನಿಂದ ಪಡೆದುಕೊಂಡಿರಬೇಕು. ಒಂದು ವೇಳೆ ಆತ ಅರ್ಹನಾಗಿದ್ದುಕೊಂಡು ಪಡೆದಿದ್ದರೆ ಅದರಿಂದ ಏನೂ ತೊಂದರೆ ಇಲ್ಲ. ಅದೇ ಅವನು ಗ್ರಾಮಕರಣೀಕರಿಗೋ, ಆಹಾರ ನಿರೀಕ್ಷಕರಿಗೋ, ತಹಶೀಲ್ದಾರರಿಗೋ ಏನಾದರೂ ಕೊಟ್ಟು ಟೇಬಲ್ ಕೆಳಗಿನಿಂದ ಪಡೆದುಕೊಂಡಿದ್ದರೆ ಆಗ ಸಮಸ್ಯೆ ಉದ್ಭವವಾಗುತ್ತದೆ. ಅದೇ ಈಗ ಜನಸಾಮಾನ್ಯರ ಮುಂದೆ ಬೃಹದಾಕಾರವಾಗಿ ಬೆಳೆದು ನಿಂತು ಅವರ ಅನ್ನದ ತಟ್ಟೆಗೆ ಸಂಚಕಾರ ತಂದಿರುವುದು. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡಿನಿಂದ ಅರ್ಹ ಫಲಾನುಭವಿಗಳಿಗೆ ಏನು ಸಮಸ್ಯೆ ಎಂದು ನೀವು ಕೇಳಬಹುದು. ಸಮಸ್ಯೆ ಇದೆ. ಸರಕಾರ ಮೂರುವರೆ ಲಕ್ಷದಷ್ಟು ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪತ್ತೆ ಹಚ್ಚಿದ್ದೇವೆ. ಅದನ್ನು ರದ್ದುಗೊಳಿಸುತ್ತೇವೆ ಎಂದು ಹೇಳುತ್ತಾ ಬರುತ್ತಿದೆ. ಸರಿ, ಅದನ್ನು ರದ್ದುಗೊಳಿಸಿ, ಅದರಿಂದ ಏನು ತೊಂದರೆ ಎಂದು ನೀವು ಕೇಳಬಹುದು. ಇಲ್ಲಿ ತೊಂದರೆ ಇರುವುದು ಅನರ್ಹರ ಕಾರ್ಡು ರದ್ದು ಮಾಡದೇ ಹೊಸ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡು ಕೊಡುವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಇದರಿಂದ ಇವತ್ತು ಬಿಪಿಎಲ್ ಕಾರ್ಡು ಸಿಗುತ್ತೆ, ನಾಳೆ ಬಿಪಿಎಲ್ ಕಾರ್ಡು ಸಿಗುತ್ತೆ ಎಂದು ಆಸೆಯಿಂದ ಕಾಯುತ್ತಾ ಕುಳಿತವರ ಆಸೆಯ ಮೇಲೆ ತಣ್ಣೀರು ಹಾಕಿದಂತೆ ಆಗಿದೆ. ನಾವು ಅನರ್ಹ ಬಿಪಿಎಲ್ ಕಾರ್ಡು ರದ್ದು ಮಾಡದೇ ಹೊಸ ಬಿಪಿಎಲ್ ಕಾರ್ಡು ಕೊಡಲ್ಲ ಎಂದು ಸರಕಾರ ಹೇಳುತ್ತಿರುವುದೇ ಹೊಸ ಫಜೀತಿಗೆ ಕಾರಣ.
ನಮ್ಮ ರಾಜ್ಯದಲ್ಲಿ ಎಷ್ಟೋ ಸರಕಾರಿ ನೌಕರರೇ ಬಿಪಿಎಲ್ ಕಾರ್ಡು ಮಾಡಿಸಿದ್ದಾರೆ. ಕಾರು ತೆಗೆದುಕೊಂಡವರು, ಕಾರು ತೆಗೆದುಕೊಳ್ಳುವ ಸಾಮರ್ತ್ಯ ಇರುವವರು, ಮೂರು ಎಕರೆಗಿಂತ ಜಾಸ್ತಿ ಜಮೀನು ಹೊಂದಿರುವವರು, ವರ್ಷಕ್ಕೆ ಒಂದೂಕಾಲು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯ ಇರುವವರು ಈ ಬಿಪಿಎಲ್ ಕಾರ್ಡು ಮಾಡಿಸಿ ಇಟ್ಟುಕೊಂಡಿರುತ್ತಾರೆ. ಹೆಂಡತಿಯ ಕುತ್ತಿಗೆ ತುಂಬಾ ಬಂಗಾರ ಇರುತ್ತದೆ. ಗಂಡನ ಕಿಸೆಯಲ್ಲಿ ಬಿಪಿಎಲ್ ಕಾರ್ಡು ಇರುತ್ತದೆ. ಕೆಲವರು ಕಾರಿನಲ್ಲಿಯೇ ಬಂದು ಬಿಪಿಎಲ್ ಕಾರ್ಡು ಮಾಡಿಸಿಕೊಂಡು ಹೋಗಿರುತ್ತಾರೆ. ಈಗ ಇವರೆಲ್ಲ ಆ ಬಿಪಿಎಲ್ ಕಾರ್ಡುಗಳನ್ನು ಸರೆಂಡರ್ ಮಾಡಿಸದೇ ಹೊಸ ಬಿಪಿಎಲ್ ಕಾರ್ಡು ನಾವು ಕೊಡಲ್ಲ ಎನ್ನುವ ಸರಕಾರದ ವಾದದಲ್ಲಿಯೇ ಲೋಪ ಇದೆ ಮತ್ತು ಇದು ಅವೈಜ್ಞಾನಿಕ ಎನ್ನುವುದನ್ನು ಯಾರು ಬೇಕಾದರೂ ಸಾಬೀತುಮಾಡಬಲ್ಲರು. ಅದು ಹೇಗೆ ಎನ್ನುವುದನ್ನು ವಿವರಿಸುತ್ತೇನೆ, ಕೇಳಿ.
ಈಗ ಹಿಂದಿನ ಕಾಲದ ಹಾಗೆ ನಿಮ್ಮ ಬಳಿ ರೇಶನ್ ಕಾರ್ಡು ಇದ್ದ ಮಾತ್ರಕ್ಕೆ ನಿಮಗೆ ರೇಶನ್ ಅಂಗಡಿಯಲ್ಲಿ ಸಿಗುವ ಸವಲತ್ತುಗಳು ಎಲ್ಲವೂ ಸಿಗುವುದಿಲ್ಲ. ಉದಾಹರಣೆಗೆ ನೀವು ರೇಶನ್ ಅಂಗಡಿಗೆ ಹೋಗುವಾಗ ನಿಮ್ಮ ಕಾರ್ಡು ಅಲ್ಲಿ ತೋರಿಸುತ್ತಿರಿ. ನಂತರ ನೀವು ನಿಮ್ಮ ಬೆರಳಚ್ಚು ಅಲ್ಲಿ ನೀಡಬೇಕು. ಅಲ್ಲಿ ಅದು ಕಂಪ್ಯೂಟರ್ ಮೂಲಕ ಸರ್ವರ್ ಸಂಪರ್ಕ ಹೊಂದಿದ್ದು, ಅಲ್ಲಿ ಎಂಟ್ರಿ ಆಗಿ ನಂತರ ನಿಮ್ಮ ಮೊಬೈಲಿಗೆ ಓಟಿಪಿ ನಂಬರ್ ಬರುತ್ತದೆ. ಅದನ್ನು ನೀವು ಅಲ್ಲಿ ಕೊಟ್ಟ ನಂತರ ನಿಮಗೆ ಬಿಪಿಎಲ್ ನಲ್ಲಿರುವ ಸವಲತ್ತುಗಳು ಸಿಗುತ್ತದೋ ಅಥವಾ ಎಪಿಎಲ್ ಕಾರ್ಡು ಫಲಾನುಭವಿಗಳೋ ಎಂದು ನಿರ್ಧಾರವಾಗುತ್ತದೆ. ಒಂದು ವೇಳೆ ನೀವು ಎಪಿಎಲ್ ಎಂದಾದಲ್ಲಿ ಅಲ್ಲಿಯೇ ನಿಮ್ಮ ಸವಲತ್ತುಗಳನ್ನು ರದ್ದು ಮಾಡುವುದು ಎನು ದೊಡ್ಡ ಕೆಲಸವಾಗುವುದಿಲ್ಲ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ನೀವು ಬಿಪಿಎಲ್ ಕಾರ್ಡು ತಂದು ಸರೆಂಡರ್ ಮಾಡದೇ ಇದ್ದರೆ ಅದರ ಸೌಲಭ್ಯ ನಿಮಗೆ ಸಿಗುತ್ತಲೇ ಇರುತ್ತದೆ ಎಂದು ಹೇಳುವುದೇ ಮೂರ್ಖತನ. ನಾವು ಮಿನಿ ವಿಧಾನಸೌಧದಲ್ಲಿ ಅಥವಾ ಈಗಿನ ಆಡಳಿತ ಭವನದಲ್ಲಿ ಕುಳಿತು ಏನೂ ಮಾಡಲಿಕ್ಕೆ ಆಗಲ್ಲ ಎಂದು
ಅಧಿಕಾರಿಗಳು ಹೇಳಲು ಸಾಧ್ಯವಿಲ್ಲ. ಎಲ್ಲವೂ ಆಗುತ್ತದೆ. ಆದರೆ ಅದು ಮಾಡದೇ ನೈಜ ಬಿಪಿಎಲ್ ಕಾರ್ಡು ಹೊಂದಲು ಬಯಸುವವರನ್ನು ಕೂಡ ನಡುಬೀದಿಯಲ್ಲಿ ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿರುವುದು ಯಾಕೆ? ಇದರಿಂದ ಏನಾಗಿದೆ ಎಂದರೆ ಎಷ್ಟೋ ಮಂದಿಯ ಬಳಿ ಈಗ ಅತ್ತ ಬಿಪಿಎಲ್ ಕಾರ್ಡು ಕೂಡ ಇಲ್ಲ. ಇತ್ತ ಬಿಪಿಎಲ್ ಕಾರ್ಡು ಕೂಡ ಸಿಕ್ಕಿಲ್ಲ ಎನ್ನುವ ಪರಿಸ್ಥಿತಿ ಇದೆ. ಏಕೆಂದರೆ ಎಪಿಎಲ್ ಕಾರ್ಡು ರದ್ದು ಮಾಡಿಸಿಕೊಳ್ಳದಿದ್ದರೆ ನಿಮಗೆ ಬಿಪಿಎಲ್ ಕಾರ್ಡು ಸಿಗುವುದಿಲ್ಲ. ಕೆಲವರು ಎಪಿಎಲ್ ಕಾರ್ಡು ರದ್ದು ಮಾಡಿಸಿ ಒಂದು ವರ್ಷ ಆಗಿದೆ. ಆದರೆ ಬಿಪಿಎಲ್ ಕಾರ್ಡು ಇನ್ನೂ ಸಿಕ್ಕಿಲ್ಲ. ಎಪಿಎಲ್ ಕಾರ್ಡು ಇದ್ದಾಗ ಕನಿಷ್ಟ 10 ಕಿಲೋ ಅಕ್ಕಿಯಾದರೂ ಸಿಗುತ್ತಿತ್ತು. ಈಗ ಯಾವ ಕಾರ್ಡು ಇಲ್ಲದೇ ಇರುವುದರಿಂದ ಏನೂ ಇಲ್ಲ. ಹಾಗಾದರೆ ಸರಕಾರ ಏನು ಹೊಸ ನಿಯಮ ತಂದರೂ ಕೊನೆಗೆ ಅನುಭವಿಸಬೇಕಾದರು ಜನಸಾಮಾನ್ಯರು. ಯಾರೋ ದೇವರು ಕೊಟ್ಟಿದ್ದು ಸಾಕಷ್ಟು ಇದ್ದ ಬಳಿಕವೂ ಬಿಪಿಎಲ್ ಕಾರ್ಡು ಮಾಡಿಸುವ ದುರಾಸೆಯಿಂದ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗೆ ಹಣ ಕೊಟ್ಟು ಮಾಡಿಸುತ್ತಾರೆ. ಅಂತಹ ಅಧಿಕಾರಿಗಳ ತಪ್ಪು ಇಲ್ಲಿ ಇಲ್ವಾ? ಅವರಿಗೆ ಶಿಕ್ಷೆ ಇಲ್ವಾ? ಇಲ್ಲ, ಯಾಕೆಂದರೆ ಆ ಅಧಿಕಾರಿ ಸಚಿವರಿಗೆ ಲಂಚ ಕೊಟ್ಟು ಆ ಹುದ್ದೆಗೆ ಬಂದಿರುತ್ತಾರೆ. ಇನ್ನು ಅಂತಹ ಬೇನಾಮಿ ಕಾರ್ಡು ಮಾಡಿಸಿದ್ದ ದುರಾಸೆಕೋರರಿಗೆ ಶಿಕ್ಷೆ ಇಲ್ವಾ? ಇಲ್ಲ, ಯಾಕೆಂದರೆ ಅವನು ಯಾವುದಾದರೂ ಪಕ್ಷದ ಕಾರ್ಯಕರ್ತನೋ, ಮುಖಂಡನೋ ಆಗಿರುತ್ತಾನೆ. ಅವನಿಗೆ ಶಿಕ್ಷೆ ಕೊಟ್ಟರೆ ಮುಂದೆ ವೋಟ್ ಬೇಡಲು ಹೋಗುವಾಗ ಅಂತವರು ರಪ್ಪನೆ ಬಾಗಿಲು ಹಾಕಿಬಿಡುತ್ತಾರೆ. ಇಡೀ ಏರಿಯಾದ ವೋಟ್ ಸಿಗದ ಹಾಗೆ ಮಾಡುತ್ತಾನೆ. ಆದ್ದರಿಂದ ತಪ್ಪು ಮಾಡಿದವರಿಗೆ ನಮ್ಮಲ್ಲಿ ಶಿಕ್ಷೆ ಇಲ್ಲ. ನೈಜ ಬಡವರಾಗಿ ಹುಟ್ಟಿದ್ದೇ ಇಲ್ಲಿ ಒಂದು ಶಿಕ್ಷೆ!
Leave A Reply