ಈ ದೇಶದಲ್ಲಿ ಕಾಳಿಚರಣ್ ಸುಲಭವಾಗಿ ಬಂಧನವಾಗುತ್ತಾರೆ, ಓವೈಸಿ ಅಲ್ಲ!!
ಈ ದೇಶದಲ್ಲಿ ಎರಡು ರೀತಿಯ ಮನಸ್ಥಿತಿಗಳು ರಚನೆಯಾಗಿ ಬಹುಶ: ಏಳೆಂಟು ವರ್ಷಗಳಾಗಿರಬಹುದು. ಒಂದು ಹಿಂದೂ ಪರ ಮಾತನಾಡುವುದು ಮತ್ತು ಅವರನ್ನು ಮೋದಿಯವರ ಪರ ಎಂದು ಬ್ರಾಂಡ್ ಮಾಡುವುದು ಇನ್ನೊಂದು ಹಿಂದೂ ವಿರೋಧಿ ಮಾತನಾಡುವುದು ಮತ್ತು ಅವರು ತಾವು ಪ್ರಗತಿಪರರು ಎಂದು ಅಂದುಕೊಳ್ಳುವುದು. ಹಿಂದೂತ್ವ ಈ ದೇಶದ ಸನಾತನ ಸಂಸ್ಕೃತಿ ಮತ್ತು ಅದರ ಪುನರುತ್ಥಾನ ಮತ್ತೆ ಆಗಬೇಕು ಎನ್ನುವುದು ಸಾಧು, ಸಂತರ ಅಭಿಲಾಷೆ. ಅದೇ ರೀತಿಯಲ್ಲಿ ನಾವು ಹಿಂದೂಗಳಲ್ಲ, ನಮಗೆ ಇಲ್ಲಿ ಹೆದರಿಕೆ ಆಗುತ್ತಿದೆ ಎಂದು ಸುಳ್ಳೆ ಗುಲ್ಲೆಬ್ಬಿಸುವ ಜನರು ಇನ್ನೊಂದು ಕಡೆ ಇದ್ದಾರೆ. ಭಾರತ ಬಲ ಪಂಥಿಯ ಮತ್ತು ಎಡಪಂಥಿಯ ನಡುವೆ ಯಾವತ್ತೋ ವಿಭಜನೆಯಾಗಿದೆ. ಈಗ ಮೋದಿ ಬಂದ ನಂತರ ಬಲಪಂಥಿಯ ಶಕ್ತಿ ಹೆಚ್ಚಾಗಿದೆ ಎಂದು ಎಡಚರರು ಅಂದುಕೊಂಡಿದ್ದಾರೆ. ಅದಕ್ಕೆ ಆಗಾಗ ಮುಸ್ಲಿಂ ರಕ್ಷಕರು ಎಂದು ಕರೆಸಿಕೊಂಡವರು ಹಿಂದೂ ವಿರೋಧಿ, ದೇಶ ವಿರೋಧಿ ಹೇಳಿಕೆಗಳನ್ನು ಕೊಟ್ಟು ತಮ್ಮ ಬಿಲ ಸೇರಿಕೊಳ್ಳುತ್ತಾರೆ. ಇಲ್ಲದಿದ್ದರೆ ತಮ್ಮ ಅಸ್ತಿತ್ವವೇ ಮುಗಿದುಹೋಗುತ್ತೆ ಎನ್ನುವ ಆತಂಕ ಅವರದ್ದು. ಅವರಿಗೆ ಬಂಧನವಾಗುವುದು ಬಿಡಿ, ಅವರನ್ನು ಯಾಕೆ ಹಾಗೆ ಹೇಳಿದ್ದಿಯಪ್ಪ ಎಂದು ಕೇಳುವ ಧೈರ್ಯ ಕೂಡ ಯಾರೂ ಮಾಡುತ್ತಿಲ್ಲ. ಉದಾಹರಣೆಗೆ ಹೈದ್ರಾಬಾದಿನ ಓವೈಸಿ ಉತ್ತರ ಪ್ರದೇಶದ ಲಕ್ನೋಗೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಬಗ್ಗೆ ಏನೂ ಆಗುವುದಿಲ್ಲ. ಅದೇ ಕಾಳಿಚರಣ್ ಎನ್ನುವ ಸಂತರು ಮಧ್ಯಪ್ರದೇಶದಲ್ಲಿ ಮಾತನಾಡಿದರೆ ಅವರನ್ನು ಚತ್ತೀಸ್ ಗಡದ ಪೊಲೀಸರು ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ. ಒಂದು ರಾಜ್ಯದ ಪೊಲೀಸರು ಇನ್ನೊಂದು ರಾಜ್ಯಕ್ಕೆ ಬಂದು ಯಾರನ್ನಾದರೂ ಬಂಧಿಸಿ ಕರೆದುಕೊಂಡು ಹೋಗಬೇಕಾದರೆ ಅದಕ್ಕೆ ಪೂರ್ವ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ ಇಲ್ಲಿ ಹಾಗೆ ಮಾಡೇ ಇಲ್ಲ. ಚತ್ತೀಸ್ ಗಡದಲ್ಲಿ ಇರುವುದು ಕಾಂಗ್ರೆಸ್ ಸರಕಾರ, ಅದೇ ಮಧ್ಯಪ್ರದೇಶದಲ್ಲಿ ಇರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ. ಹಾಗಿದ್ದರೂ ಚತ್ತೀಸ್ ಗಡ ಸರಕಾರದ ಧೈರ್ಯ ಮೆಚ್ಚಲೇಬೇಕು. ಹಾಗೆ ನೋಡಿದರೆ ಓವೈಸಿ ಯುಪಿಯಲ್ಲಿ ಏನು ಮಾತನಾಡಿದರೂ ಉತ್ತರ ಪ್ರದೇಶ ಸರಕಾರ ಏನೂ ಮಾತನಾಡದೇ ಕಳುಹಿಸಿಕೊಟ್ಟಿದೆ. ಮೋಹನದಾಸ ಕರಮಚಂದ್ ಗಾಂಧಿಯವರ ಬಗ್ಗೆ, ಅವರ ನಿಲುವುಗಳ ಬಗ್ಗೆ ಅವರು ಸ್ವಾತಂತ್ರ್ಯ ದೊರಕಿದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಈ ದೇಶದಲ್ಲಿ ಒಮ್ಮತ ಇಲ್ಲ. ಇರಲೇಬೇಕೆಂಬ ನಿಯಮಗಳು ಕೂಡ ಇಲ್ಲ. ಹಾಗಂತ ಅದನ್ನು ಪ್ರಶ್ನಿಸಿದ ಕೂಡಲೇ ಅಂತವರು ಬಂಧಿತರಾಗುತ್ತಾರೆ ಎಂದರೆ ನಮಗೆ 15 ನಿಮಿಷ ಕೊಡಿ. ಈ ದೇಶದ ಪೊಲೀಸರು ಸೈಲೆಂಟಾಗಿರಿ. ನಾವು ಏನು ಮಾಡುತ್ತೇವೆ ಎಂದು ನೋಡಿ ಎಂದು ಹೇಳಿದ್ದು ಭಯೋತ್ಪಾದಕ ಹೇಳಿಕೆ ಅಲ್ಲವೇ? ಅದನ್ನು ಹೇಳಿದ ಓವೈಸಿಯನ್ನು ಬಂಧಿಸುವ ಧೈರ್ಯ ಯಾವ ಸರಕಾರಕ್ಕೂ ಇಲ್ಲವೇ? ಈಗ ಕಾಳಿಚರಣ್ ಗಾಂಧಿಜಿಯವರ ಬಗ್ಗೆ ಹೇಳಿದ ವಿಷಯ ಇತಿಹಾಸದಲ್ಲಿ ದಾಖಲಾಗಿರುವಂತಹ ಸಂಗತಿಯೇ ಆಗಿದೆ. ಅದರಲ್ಲಿ ವಿಶೇಷ ವ್ಯತ್ಯಾಸ ಇಲ್ಲ. ಅತ್ತ ಕಾಳಿಚರಣ್ ಅವರನ್ನು ಬಂಧಿಸಿದ ಬಳಿಕ ಎಡಪಂಥಿಯರು ಹಾಲು ಕುಡಿದಷ್ಟೇ ಖುಷಿ ಅನುಭವಿಸಿದ್ದಾರೆ. ಅದೇ ಜನ ಒಂದು ವೇಳೆ ಓವೈಸಿಯ ಹೇಳಿಕೆಯ ಆಧಾರದಲ್ಲಿ ಆತನನ್ನು ಬಂಧಿಸಿದ್ದರೆ ವಿರೋಧ ಮಾಡುತ್ತಿದ್ದರು. ಈಗ ಅವರೇ ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಡುವೆ ಸರಿಯಾಗಿ ಎಡಪಂಥಿಯವೂ ಅಲ್ಲದ, ಇತ್ತ ಬಲಪಂಥಿಯವೂ ಆಗಲು ಮನಸ್ಸಿಲ್ಲದ ಕಾಂಗ್ರೆಸ್ ಪಕ್ಷ ಮಾತ್ರ ಏನೋ ಮಾಡಲು ಹೋಗಿ ಮೈಮೇಲೆ ಇರುವೆ ಬಿಟ್ಟುಕೊಟ್ಟಿದೆ. ಇದರೊಂದಿಗೆ ಇನ್ನೊಂದು ವಿಷಯವನ್ನು ನಾವು ಮೆಚ್ಚಲೇಬೇಕು. ಅದೇನೆಂದರೆ ತಮ್ಮ ಬಂಧನವಾದ ನಂತರವೂ ಕಾಳಿಚರಣ್ ಅವರು ತಮ್ಮ ಹೇಳಿಕೆಯ ಬಗ್ಗೆ ಅಚಲರಾಗಿದ್ದಾರೆ. ತಾವು ಹಾಗೆ ಹೇಳಿಯೇ ಇಲ್ಲ. ಸುಮ್ಮನೆ ತಮ್ಮನ್ನು ಸಿಕ್ಕಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿಲ್ಲ. ಗಾಂಧಿಯವರ ಬಗ್ಗೆ ಹಿಂದೆನೂ ತಮ್ಮ ಅಭಿಪ್ರಾಯ ಅದೇ ಇತ್ತು. ಈಗಲೂ ಅದೇ ಇದೆ. ಮುಂದೆನೂ ಅದೇ ಇದೆ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ನಮ್ಮ ಗೋಸುಂಬೆ ರಾಜಕಾರಣಿಗಳೇ ದಿನಕ್ಕೊಂದು ವೇಷವನ್ನು ಬದಲಾಯಿಸುತ್ತಲೇ ಇರುತ್ತಾರೆ. ತಾವು ಕೊಟ್ಟ ಹೇಳಿಕೆ ತಮಗೆ ಪ್ರಯೋಜನವಾದರೆ ತೆಪ್ಪಗೆ ಕುಳಿತುಕೊಂಡಿರುತ್ತಾರೆ. ಅದೇ ತಾವು ಕೊಟ್ಟ ಹೇಳಿಕೆ ವಿವಾದ ಉಂಟು ಮಾಡಿ ತಮಗೆ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಉಂಟು ಮಾಡಿದರೆ ತಕ್ಷಣ ತಾವು ಹಾಗೆ ಹೇಳಿದ್ದೇ ಅಲ್ಲ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎನ್ನುತ್ತಾರೆ. ಒಂದು ವೇಳೆ ತೀವ್ರ ಮುಜುಗರ ಪಡುವಂತಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿ ತಿಪ್ಪೆ ಸಾರಿಸಿಬಿಡುತ್ತಾರೆ. ಆದ್ದರಿಂದ ರಾಜಕಾರಣಿಗಳು ಹೇಳುವ ಮಾತುಗಳಲ್ಲಿ ಸತ್ವವೇ ಇರುವುದಿಲ್ಲ. ಅವರದ್ದೇನಿದ್ದರೂ ರಾಜಕೀಯ ಲಾಭದ ಲೆಕ್ಕಾಚಾರ. ಆದರೆ ಸಂತ, ಸ್ವಾಮೀಜಿ, ಸಾಧುಗಳು ಹಾಗಲ್ಲ. ಅದರಲ್ಲಿಯೂ ಕಾಳಿಚರಣ್ ಅವರು ಏನೋ ದೊಡ್ಡ ಹೇಳಿಕೆ ಕೊಟ್ಟು ಮಿಂಚುವ ಕೆಲಸವನ್ನು ಕೂಡ ಮಾಡಬೇಕಿಲ್ಲ. ಅವರ ಗುರಿ ಏನಿದ್ದರೂ ಹಿಂದೂರಾಷ್ಟ್ರವನ್ನು ಸ್ಥಾಪಿಸುವುದು. ಅದರಲ್ಲಿ ಅವರೇನೂ ಅಧಿಕಾರ ಪಡೆಯುವ ಹಂಬಲ ಇಟ್ಟುಕೊಂಡಿರುವುದಿಲ್ಲ. ಆ ನಿಟ್ಟಿನಲ್ಲಿ ಇಂತವರು ಅಧ್ಯಯನ ಮಾಡಿಯೇ ಹೇಳಿಕೆ ಕೊಡುತ್ತಾರೆ ಮತ್ತು ಅದಕ್ಕೆ ಬದ್ಧರಾಗಿರುತ್ತಾರೆ. ಕಾಳಿಚರಣ್ ಸ್ವಾಮಿಗಳು ಇವತ್ತಲ್ಲ ನಾಳೆ ಬಿಡುಗಡೆಯಾಗಬಹುದು ಆದರೆ ಅವರನ್ನು ಬಂಧಿಸಿ ತನ್ನ ಇಮೇಜು ಹಾಳು ಮಾಡಿಕೊಂಡಿರುವ ಕಾಂಗ್ರೆಸ್ ಚತ್ತೀಸ್ ಗಡದಲ್ಲಿ ಮಾಡಿರುವ ಕ್ರಮವನ್ನು ಎರಡೂ ಕೈಯಲ್ಲಿ ಉತ್ತರ ಪ್ರದೇಶದಲ್ಲಿ ತಿನ್ನಲಿದೆ. ಯಾಕೋ ಕಾಂಗ್ರೆಸ್ಸಿಗೆ ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕುವ ಖುಷಿ ಅವರಿಗೆ ಮಾತ್ರ ಗೊತ್ತು!
Leave A Reply