ನಾರಾಯಣ ಗುರು ವಿಷಯದಲ್ಲಿ ರಮಾನಾಥ ರೈ ಅವರನ್ನು ಎಳೆದಾಡಿದರಾ ಯೂತ್ ಕಾಂಗ್ರೆಸ್ಸಿಗರು?
ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಟ್ಯಾಬ್ಲೋದಲ್ಲಿ ಬಳಸುವ ಕುರಿತು ಎದ್ದಿರುವ ವಿವಾದದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಹಳೆಹುಲಿ, ಮಾಜಿ ಸಚಿವ ರಮಾನಾಥ ರೈ ಅವರನ್ನು ಎಳೆದಾಡಿ ಬೀಳಿಸಿದ ಘಟನೆ ಕಾಂಗ್ರೆಸ್ ಕಚೇರಿಯ ಒಳಗೆ ನಡೆದಿದೆ ಎನ್ನುವ ಮಾಹಿತಿ ಬರುತ್ತಿದೆ. ರಮಾನಾಥ ರೈ ಅವರಿಗೆ ಈಗ ವಯಸ್ಸಾಗಿರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಇವತ್ತಿಗೂ ಹೆಚ್ಚು ಪ್ರಸ್ತುತ ಇರುವ, ಆಕ್ಟಿವ್ ಆಗಿರುವ ಮಾಜಿ ಶಾಸಕರು ಇದ್ದಾರೆ ಎಂದರೆ ಅದು ಓನ್ ಅಂಡ್ ಓನ್ಲಿ ರೈ ಮಾತ್ರ. ಅವರು ಸೋತ ಮರುವಾರದಿಂದಲೇ ಹಿಂದಿನಷ್ಟೇ ಹೆಚ್ಚು ಆಸಕ್ತಿಯಿಂದ ಕಾಂಗ್ರೆಸ್ಸಿನ ಪ್ರತಿ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರನ್ನು ಬಿಟ್ಟರೆ ಉಳಿದ ಆರು ಮಾಜಿ ಶಾಸಕರು ಎಲ್ಲಿದ್ದಾರೆ ಎಂದು ಅವರವರ ಕ್ಷೇತ್ರದ ಕಾಂಗ್ರೆಸ್ಸಿಗರು ದುರ್ಬಿನು ಇಟ್ಟು ಹುಡುಕುತ್ತಿದ್ದಾರೆ. ಇನ್ನು ರೈ ಅವರ ಅನುಭವ ತೆಗೆದುಕೊಂಡರೂ ಅವರಷ್ಟು ಅಗಾಧ ಅನುಭವದ ಇನ್ನೊಬ್ಬ ಕಾಂಗ್ರೆಸ್ಸಿಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಸಕ್ರಿಯವಾಗಿಲ್ಲ. ಜನಾರ್ದನ ಪೂಜಾರಿ ಅವರು ತೆರೆಮರೆಗೆ ಸರಿದಾಗಿದೆ. ಮೊಯಿಲಿ ಕರಾವಳಿಯನ್ನು ಬಿಟ್ಟು ದಶಕಗಳೇ ಆಗಿವೆ. ಆಸ್ಕರ್ ಇಹಲೋಕ ತ್ಯಜಿಸಿದ್ದಾರೆ. ಆದ್ದರಿಂದ ಉಳಿದ ಎರಡನೇ ತಲೆಮಾರು ಎಂದರೆ ರೈ ಮತ್ತು ಸೊರಕೆ. ಸೊರಕೆ ಉಡುಪಿಗೆ ಸೀಮಿತರಾಗಿರುವುದರಿಂದ ಈಗ ಉಳಿದಿರುವವರು ರೈಗಳು.
ಅವರು ಗೆದ್ದಿದ್ದರೂ, ಸೋತಿದ್ದರೂ ಅವರ ಮಾತಿಗೆ ತೂಕವಿದೆ. ಅವರು ಕೂಡ ಯೂತ್ ಕಾಂಗ್ರೆಸ್ಸಿನಿಂದ ಮೇಲೆ ಬಂದವರು. ಅಚಾನಕ್ ಆಗಿ ಕಾಂಗ್ರೆಸ್ಸಿಗೆ ಬಂದು ಶಾಸಕರಾದವರು ಅಲ್ಲ. ಇಂತಹ ಒಬ್ಬ ನಾಯಕನಿಗೆ ಯುವ ಕಾಂಗ್ರೆಸ್ಸಿಗರು ಮಾಡಿರುವ ಅಗೌರವ ಚಿಕ್ಕದೇನಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಮಾನಾಥ ರೈ ಅವರು ನೀಡಿರುವ ಕೆಲವು ಹೇಳಿಕೆಗಳು ಜಿಲ್ಲೆಯಲ್ಲಿ ಉಳಿದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಂಕಷ್ಟ ತಂದಿರಬಹುದು. ಹಾಗಂತ ರೈ ಅವರನ್ನು ಸೈಡಿಗೆ ತಳ್ಳಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಷ್ಟವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಯಾವುದೇ ಪ್ರತಿಭಟನೆ ಇರಲಿ, ಹೋರಾಟ ಇರಲಿ ರೈಗಳು ಹೇಳುವುದನ್ನು ಯೂತ್ ಕಾಂಗ್ರೆಸ್ ಕೇಳದೇ ತಮ್ಮದೇ ಸರಿ ಎಂದು ಮುನ್ನುಗ್ಗಿದರೆ ಅದರಿಂದ ಅವರಿಗೆ ಆಗುವುದು ನಷ್ಟವೇ ವಿನ: ಬೇರೆ ಏನೂ ಇಲ್ಲ. ಇನ್ನು ಯಾವುದೇ ವಿಷಯ ಇರಲಿ, ಕಾಂಗ್ರೆಸ್ಸಿಗರು ಈ ಪ್ರತಿಭಟನೆ, ಹೋರಾಟದಲ್ಲಿ ಬಿಜೆಪಿಗೆ ಹೋಲಿಸಿದರೆ ಯಾವಾಗಲೂ ನಿಧಾನ. ಯಾಕೆಂದರೆ ಸ್ವಾತಂತ್ರ್ಯ ನಂತರ ಬಹುತೇಕ ವರ್ಷ ಅಧಿಕಾರದಲ್ಲಿಯೇ ಇದ್ದ ಕಾರಣ ಪ್ರತಿಭಟನೆ ಎನ್ನುವುದು ಅಷ್ಟು ಸುಲಭವಾಗಿ ರಕ್ತದಲ್ಲಿ ಬೆರೆತಿಲ್ಲ. ಆದ್ದರಿಂದ ಈ ಬಾರಿಯೂ ಈ ವಿಷಯವನ್ನು ರಾಜಕೀಯ ಮಾಡಲು ಹೋಗದೇ ವಿಧಿಯಿಲ್ಲ ಎಂದು ಮೇಲಿನಿಂದ ಸೂಚನೆ ಬಂದಿರಬಹುದು. ಆದರೆ ಹಳೆ ಪೀಳಿಗೆಗೆ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಸರಿಯಾಗಿ ಗೊತ್ತಿಲ್ಲದೆ, ಯುವ ಕಾಂಗ್ರೆಸ್ ಎದುರು ನಾಚಿಕೆ ಪಡುವಂತಹ ಪರಿಸ್ಥಿತಿ ಬಂದಿದೆ. ಆದರೆ ಯುವ ಕಾಂಗ್ರೆಸ್ ಈಗ ಈ ಬಿಜೆಪಿಯ ಹೋರಾಟದ ಶೈಲಿ, ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸುವುದು ಎಲ್ಲಾ ನೋಡಿ ತಾನು ಒಂದಿಷ್ಟು ಆಕ್ರಮಣಕಾರಿಯಾಗದೇ ಹೋದರೆ ಕರಾವಳಿಯಲ್ಲಿ ವಿಪಕ್ಷದಲ್ಲಿಯೇ ಗತಿ ಎಂದು ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿಯಲ್ಲಿದೆ.
ಇಂತಹ ಸಮಯದಲ್ಲಿ ಪರಿಣಾಮಕಾರಿಯಾಗಿ ಹೋರಾಡದೇ ನೀರಿನಲ್ಲಿ ಬಿದ್ದರೆ ನಾವು ಕೈಗೆ ಬಂದ ಸುವರ್ಣ ಅವಕಾಶ ಚೆಲ್ಲಿದಂತೆ ಆಗಲ್ವಾ ಎಂದು ಯೂತ್ ಕಾಂಗ್ರೆಸ್ ಅಳಲು. ಒಂದಿಷ್ಟು ಜನರೇಶನ್ ಗ್ಯಾಪ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಕಾಡುತ್ತಿರುವುದು ಸುಳ್ಳಲ್ಲ. ಏಳೆಂಟು ಚುನಾವಣೆಯಲ್ಲಿ ಸ್ಪರ್ಧಿಸಿರುವ ರೈಗಳ ಎದುರು ಏಳೆಂಟು ವರ್ಷಗಳ ಹಿಂದೆ ಪಕ್ಷಕ್ಕೆ ಕಾಲಿಟ್ಟವರು ಹೋರಾಡುವಂತಾಗಿದೆ. ಯೂತ್ ಕಾಂಗ್ರೆಸ್ಸನ್ನು ಹಿಡಿಯುವುದು ಕಷ್ಟ, ಬಿಡುವುದು ಸಂಕಷ್ಟ ಎನ್ನುವ ನಡುವೆ ಕಾಂಗ್ರೆಸ್ ಹಿರಿಯರು ಒದ್ದಾಟಕ್ಕೆ ಬಿದ್ದಿದ್ದಾರೆ. ಒಟ್ಟಿನಲ್ಲಿ ಗಲಾಟೆಯ ನಡುವೆ ಪಾದಯಾತ್ರೆಯೋ, ಪ್ರತಿಭಟನೆಯೋ ನಡೆದು ಹೋಗಿದೆ. ಕೇರಳದಲ್ಲಿ ಕಮ್ಯೂನಿಷ್ಟರು ತಮ್ಮ ರಾಜಕೀಯವನ್ನು ಈಡೇರಿಸಲು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಬಳಸಿದ್ದು ದಕ್ಷಿಣ ಕನ್ನಡ ಕಾಂಗ್ರೆಸ್ಸಿಗರು ಅದನ್ನು ಈಗ ತಮ್ಮ ಬಟ್ಟಲಿನ ಅನ್ನದಂತೆ ನೋಡುತ್ತಿದ್ದಾರೆ. ಒಂದು ವೇಳೆ ನಿಜವಾಗಿಯೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲೆ ಕಾಂಗ್ರೆಸ್ಸಿಗರಿಗೆ ಗೌರವ, ಅಭಿಮಾನ ಇದ್ದಿದ್ದರೆ ಆವತ್ತು ಇದೇ ಕಮ್ಯೂನಿಷ್ಟರು ಯಾವುದೋ ಮೆರವಣಿಗೆಯ ಟ್ಯಾಬ್ಲೋ ಮಾಡಿ ಅದರ ಮೇಲೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ನಿಲ್ಲಿಸಿ ಅದಕ್ಕೆ ಯೇಸು ಕ್ರಿಸ್ತರಿಗೆ ಹೊಡೆದಂತೆ ಮೊಳೆ ಹೊಡೆಯುವ ಕಲಾಕೃತಿ ನಿಲ್ಲಿಸಿದ್ದರು. ಅದು ಸಾಕಷ್ಟು ವೈರಲ್ ಆಗಿತ್ತು. ಅದರ ವಿರುದ್ಧ ಕಾಂಗ್ರೆಸ್ಸಿಗರು ಯಾಕೆ ಪ್ರತಿಭಟಿಸಲಿಲ್ಲ. ಯಾಕೆಂದರೆ ಅದನ್ನು ಮಾಡಿದ್ದು ಕಮ್ಯೂನಿಸ್ಟರು. ಒಂದು ರೀತಿಯ ಸಹೋದರ ಸಂಬಂಧ ಇದ್ದ ಹಾಗೆ. ಆದ್ದರಿಂದ ವಿರೋಧಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿರಲಿಲ್ಲ. ಆಗ ಅದು ಅವರಿಗೆ ಕೇರಳದಲ್ಲಿ ಆದ ಘಟನೆ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್ಸಿಗರು ಇಲ್ಲಿ ಯಾಕೆ ದೊಡ್ಡದು ಮಾಡುವುದು ಎಂದು ತೆಪ್ಪಗೆ ಕುಳಿತುಕೊಂಡಿದ್ದರು. ಆದರೆ ಈಗ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರಕಾರ ಇದೆ. ರಾಜ್ಯದಲ್ಲಿಯೂ ಅದೇ ಸರಕಾರ ಇದೆ. ಇನ್ನು ಚುನಾವಣೆಗೆ ಒಂದು ವರ್ಷ ಮಾತ್ರ ಉಳಿದಿದೆ. ಬಿಲ್ಲವರು ಕರಾವಳಿಯ 17 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಇನ್ನು ಮಲೆನಾಡಿನ ಕಡೆಗೆ ಹೋದರೆ ಇವರನ್ನೇ ಈಡಿಗರು ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಇಷ್ಟು ರಾಜಕೀಯ ಮೈಲೇಜ್ ತರುವ ವಿಷಯವನ್ನು ಹಾಗೆ ಬಿಡಲು ಆಗುತ್ತಾ ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿರುವುದು ಅವರ ರಾಜಕೀಯ ಜಾಣ್ಮೆ ಮತ್ತು ಅದಕ್ಕಾಗಿ ರಮಾನಾಥ ರೈ ಅವರಂತಹ ಹಿರಿಯರು ತಮ್ಮದೇ ಪಕ್ಷದ ಕಚೇರಿಯಲ್ಲಿ ಅವಮಾನ ಅನುಭವಿಸಬೇಕಾಗಿರುವುದು ಕಾಂಗ್ರೆಸ್ಸಿನ ಕರ್ಮ!!
Leave A Reply