ಮಲ್ಯನಿಗೆ ಸಾಲ ಕೊಡಿಸಿದ್ದು ಯಾರು ಎಂದು ಲಂಡನ್ ನ್ಯಾಯಾಲಯ ಉತ್ತರ ಕೊಟ್ಟಿದೆ!
ನೀವು ರಾತ್ರಿ ಅಂಗಡಿ ಬಾಗಿಲು ತೆರೆದಿಟ್ಟು ಮನೆಗೆ ಹೋದರೆ ಯಾವ ಕಳ್ಳ ಆದರೂ ಅಂಗಡಿಯನ್ನು ದೋಚದೇ ಇರುತ್ತಾನಾ? ದರೋಡೆಕೋರರ ಕೈಯಲ್ಲಿ ಬ್ಯಾಂಕಿನ ಕೀ ಕೊಟ್ಟು ಇಟ್ಟುಕೊಳ್ಳಿ ಎಂದರೆ ಯಾವ ದರೋಡೆಕೋರ ಆದರೂ ಸುಮ್ಮನೆ ಕೂರುತ್ತಾನಾ? ಬೆಕ್ಕಿನ ಮುಂದೆ ಒಂದು ಬೌಲ್ ಹಾಲಿಟ್ಟು ಕಾಯುತ್ತಾ ಇರು, ಈಗ ಬರುತ್ತೇನೆ ಎಂದರೆ ಯಾವ ಬೆಕ್ಕು, ಎಷ್ಟು ಹೊತ್ತು ನಿಷ್ಟೆ ಇಟ್ಟುಕೊಳ್ಳಬಹುದು. ಹಾಗಿರುವಾಗ ಮೋಜು, ಮಸ್ತಿಯಲ್ಲಿಯೇ ದಿನ ಕಳೆದ ವಿಜಯ ಮಲ್ಯನಿಗೆ ಎಷ್ಟು ಕೋಟಿ ರೂಪಾಯಿ ಸಾಲ ಬೇಕು ಎಂದು ಕೇಳಿದರೆ ಅವನು ಕಡಿಮೆ ಕೇಳುತ್ತಾನೆಯೇ? ಹೆಣ್ಣು, ಹೆಂಡದ ಜಾಹೀರಾತಿನಲ್ಲಿ ಮಗ್ನನಾಗಿದ್ದ ವಿಜಯ ಮಲ್ಯನಿಗೆ ಎಂಜಾಯ್ ಮಾಡು ಎಂದು ಹೇಳಿ ಸಾವಿರಗಟ್ಟಲೆ ಕೋಟಿ ರೂಪಾಯಿ ಸಾಲ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆಗೆ ಭಾರತದಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರು ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಟ ನಡೆಸುತ್ತಿದ್ದವು. ಸಾಲ ಕೊಟ್ಟಿದ್ದು ಕಾಂಗ್ರೆಸ್ ಸರಕಾರ ಎಂದು ಬಿಜೆಪಿ ಮುಖಂಡರು ಅನೇಕ ಬಾರಿ ವಿವಿಧ ವೇದಿಕೆಗಳಲ್ಲಿ ಹೇಳಿದ್ದರು. ಆದರೆ ಮಲ್ಯನನ್ನು ಭಾರತಕ್ಕೆ ಕರೆದುಕೊಂಡು ಬನ್ನಿ ಎಂದು ಕಾಂಗ್ರೆಸ್ ಬಿಜೆಪಿಗೆ ಪಂಥಾಹ್ವಾನ ನೀಡುತ್ತಾ ಇತ್ತು. ಆದರೆ ಈ ಬಗ್ಗೆ ವಿಚಾರಣೆ ಲಂಡನ್ ನ್ಯಾಯಾಲಯದಲ್ಲಿಯೂ ನಡೆಯುತ್ತಿತ್ತು. ಪ್ರಕರಣ ಏನೆಂದರೆ ಮಲ್ಯನನ್ನು ಗಡಿಪಾರು ಮಾಡಬೇಕೆಂಬ ಭಾರತದ ಮನವಿಯನ್ನು ಪುರಸ್ಕರಿಸಬೇಕಾ, ಬೇಡ್ವಾ ಎನ್ನುವುದು ಅಲ್ಲಿನ ನ್ಯಾಯಾಲಯದ ಮುಂದಿರುವ ಪ್ರಶ್ನೆ. ದಯವಿಟ್ಟು ಭಾರತಕ್ಕೆ ಕಳುಹಿಸಿಕೊಡಬೇಡಿ ಎಂದು ಮಲ್ಯ ಅಲ್ಲಿನ ನ್ಯಾಯಾಲಯಕ್ಕೆ ದಂಬಾಲು ಬೀಳುತ್ತಿದ್ದರೆ, ಹಾಗೆಲ್ಲ ಸುಮ್ಮನೆ ಕಳುಹಿಸಬೇಕೋ, ಬೇಡ್ವೋ ಎಂದು ತೀರ್ಮಾನ ಮಾಡಲು ಆಗುವುದಿಲ್ಲ. ವಿಚಾರಣೆ ಮಾಡುತ್ತೇವೆ ಎಂದು ಅಲ್ಲಿನ ನ್ಯಾಯಾಲಯ ಹೇಳಿತ್ತು. ಹಾಗೆ ವಿಚಾರಣೆ ನಡೆದ ಬಳಿಕ ಅಲ್ಲಿನ ನ್ಯಾಯಾಲಯ ಕೇಳುತ್ತಿರುವ ಪ್ರಶ್ನೆ ” ವಿಜಯ ಮಲ್ಯ ಹೇಗೆ ತಪ್ಪಿತಸ್ಥನಾಗುತ್ತಾನೆ?” ಇದು ಮಲ್ಯ ಮಟ್ಟಿಗೆ ಸಣ್ಣ ರಿಲೀಫ್ ಎಂದು ಆತ ಅಂದುಕೊಂಡರೂ ಭಾರತದ ಮಟ್ಟಿಗೆ ಅನೇಕ ಆಯಾಮಗಳನ್ನು ತೆರೆದಿಡುವಂತಹ ಪ್ರಶ್ನೆ ಕೂಡ ಆಗಿದೆ.
ಮೊದಲನೇಯದಾಗಿ ಮಲ್ಯ ಈಗ ಕಳ್ಳ ಎಂದುಕೊಂಡರೂ ಆತನ ಕಳ್ಳತನಕ್ಕೆ ಸಹಕರಿಸಿದ್ದು ಯಾರು? ನಂಬರ್ 1. ಬ್ಯಾಂಕುಗಳು. ಬ್ಯಾಂಕುಗಳು ಆ ಪರಿ ಸಾಲ ಕೊಡದೇ ಇದ್ದರೆ ಮಲ್ಯನಿಗೆ ಅಷ್ಟು ಸಾವಿರ ಕೋಟಿ ಸಾಲ ಹೇಗೆ ಸಿಗುತ್ತಿತ್ತು? ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಒಂದು ಮನೆ ಕಟ್ಟುತ್ತೇನೆ ಎಂದು ಹತ್ತು ಲಕ್ಷ ಸಾಲ ಕೇಳಲು ಹೋದರೆ ಬ್ಯಾಂಕಿನ ಮ್ಯಾನೇಜರ್ ಆ ಪ್ರಾಮಾಣಿಕ ಗ್ರಾಹಕನನ್ನು ಕೆಕ್ಕರಿಸಿ ನೋಡಿ ಕಳ್ಳನನ್ನು ಟ್ರೀಟ್ ಮಾಡಿದ ಹಾಗೆ ಮಾಡುತ್ತಾರೆ. ಅದೇ ಒಬ್ಬ ಶ್ರೀಮಂತ ಕಳ್ಳ ಬಂದು ಕೋಟಿ ಸಾಲ ಕೇಳಿದರೆ ಜ್ಯೂಸ್ ಕೊಟ್ಟು ಹಣ ಕೊಡುತ್ತವೆ. ಹಾಗಾದರೆ ಮಲ್ಯನಿಗೆ ಸಾಲ ಕೊಡುವುದರಲ್ಲಿ ಯಾರ ತಪ್ಪು ಇದೆ? ನಂಬರ್ 2. ಮಲ್ಯನನ್ನು ನೋಡಿದ ಕೂಡಲೇ ಬ್ಯಾಂಕುಗಳು ಆ ಪ್ರಮಾಣದ ಸಾಲ ಕೊಟ್ಟವಾ? ಉತ್ತರ: ಇಲ್ಲ, ಮಲ್ಯನಿಗೆ ಕೇಳಿದಷ್ಟು ಸಾಲ ಕೊಡುವಂತೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಆಗಿನ ವಿತ್ತ ಸಚಿವ ಚಿದಂಬರಂ ಲಿಖಿತ ಪತ್ರ ನೀಡಿದ್ದರು. ಇದು ಕೂಡ ತನಿಖೆಯಿಂದ ಬಹಿರಂಗಗೊಂಡಿದೆ. ಆಗಲೇ ಮೂರನೇ ಪ್ರಶ್ನೆ ಉದ್ಭವವಾಗಿರುವುದು. ನಂಬರ್ 3. ಒಬ್ಬ ಪ್ರಧಾನಿ ಮತ್ತು ವಿತ್ತ ಸಚಿವರು ಲಿಖಿತ ಪತ್ರ ಅಥವಾ ಮೌಖಿಕವಾಗಿ ಹೇಳಿದ ಕೂಡಲೇ ಭಾರತೀಯ ಬ್ಯಾಂಕುಗಳು ಅಷ್ಟು ಸಾಲ ಕೊಡಲೇಬೇಕೆಂಬ ಅನಿವಾರ್ಯತೆ ಇದೆಯಾ? ಉತ್ತರ: ಅನಿವಾರ್ಯತೆ ಇದೆಯೋ, ಇಲ್ವೋ, ಬೇರೆ ವಿಷಯ. ಆದರೆ ಭಾರತದಂತಹ ದೇಶದಲ್ಲಿ ಇಲ್ಲ ಕೊಡಲ್ಲ ಎಂದು ಪ್ರಧಾನಿ, ವಿತ್ತ ಸಚಿವರ ಆದೇಶಕ್ಕೆ ಎದುರು ಹೇಳುವ ಶಕ್ತಿ ಯಾವ ಬ್ಯಾಂಕಿನ ಆಡಳಿತ ಮಂಡಳಿಗೆ ಇದೆ. ಹಾಗೆ ಕೊಟ್ಟುಬಿಟ್ಟಿದ್ದಾರೆ. ಹಾಗಾದರೆ ಇಲ್ಲಿ ಮಲ್ಯ ಮಾತ್ರ ತಪ್ಪಿತಸ್ಥ ಅಲ್ಲ ಎನ್ನುವುದು ಅಲ್ಲಿನ ನ್ಯಾಯಾಲಯದ ಆದೇಶ.
ಒಬ್ಬ ವ್ಯಕ್ತಿಯನ್ನು ಬ್ಯಾಂಕುಗಳು ಬ್ಲ್ಯಾಕ್ ಲಿಸ್ಟಿಗೆ ಹಾಕಿದ ಮೇಲೆ ಆತನಿಗೆ ಸಾವಿರಾರು ಕೋಟಿ ಸಾಲ ಕೊಡಿ ಎಂದು ದೇಶದ ಪ್ರಧಾನಿಯಾಗಿದ್ದವರು ಹೇಳಿದ ಕೂಡಲೇ ಕಣ್ಣು ಮುಚ್ಚಿ ಕೊಟ್ಟಿದ್ದು ಬ್ಯಾಂಕುಗಳ ತಪ್ಪೋ ಅಥವಾ ಆವತ್ತಿನ ಪ್ರಧಾನಿ ಮತ್ತು ವಿತ್ತ ಸಚಿವರ ತಪ್ಪೊ ಎಂದು ಲಂಡನ್ ನ್ಯಾಯಾಲಯ ಪ್ರಶ್ನಿಸಿದೆ. ನಿಜಕ್ಕೂ ಈಗ ದೇಶದಲ್ಲಿ ಚರ್ಚೆಯಾಗಬೇಕಿರುವುದು ಈ ವಿಷಯ. ಯಾಕೆಂದರೆ ದೇಶದ ತೆರಿಗೆ ಹಣವನ್ನು ಲೂಟಿ ಮಾಡಿ ಮಜಾ ಮಾಡಿದ ವಿಜಯ ಮಲ್ಯನಿಗೆ ಅಷ್ಟು ಹಣ ಸಾಲವಾಗಿ ಕೊಡಿಸಲು ಮನಮೋಹನ್ ಸಿಂಗ್ ಮೇಲೆ ಅದ್ಯಾವ ಒತ್ತಡ ಇತ್ತೋ ಯಾರಿಗೆ ಗೊತ್ತು. ಯಾಕೆಂದರೆ ಸಿಂಗ್ ಒಬ್ಬರು ಆರ್ಥಿಕ ತಜ್ಞರು. ಅವರು ಹೀಗೆ ಕಳ್ಳ, ಕುತಂತ್ರಿ, ಮೋಜುಗಾರನಿಗೆ 9000 ಕೋಟಿ ರೂಪಾಯಿ ಸಾಲ ನೀಡಲು ಪತ್ರ ಕೊಡುತ್ತಾರೆ ಎಂದು ಯಾರೂ ನಂಬಲು ಸಾಧ್ಯವಿಲ್ಲ. ಚಿದಂಬರಂ ಮಲ್ಯರಷ್ಟೇ ದೊಡ್ಡ ಭ್ರಷ್ಟರು. ಅವರು ಸೋನಿಯಾ ಹಾಗೂ ರಾಹುಲ್ ಜೊತೆ ಸೇರಿ ದೇಶದ ಬ್ಯಾಂಕುಗಳ ಹಣವನ್ನು ಮಲ್ಯನಿಗೆ ಕೊಡಿಸುವ ತರಹ ಸಂಚು ಹೂಡಿ ತಾವೇ ನುಂಗಿ ನೀರು ಕುಡಿದಿದ್ದಾರಾ, ಈ ಬಗ್ಗೆ ತನಿಖೆ ಆಗಬೇಕು. ಇಲ್ಲಿಯ ತನಕ ಮಲ್ಯನಿಗೆ ಹಣ ಕೊಟ್ಟಿದ್ದು ಯಾರು ಎಂದು ಕಾಂಗ್ರೆಸ್ ಅಡ್ಡಗೋಡೆಯ ದೀಪ ಇಟ್ಟಂತೆ ಪ್ರಶ್ನಿಸುತ್ತಿತ್ತು. ಅದಕ್ಕೆ ಲಂಡನ್ ನ್ಯಾಯಾಲಯ ಉತ್ತರ ಕೊಟ್ಟಿದೆ. ಹಾಲಿಗೆ ಹಾಲು, ನೀರಿಗೆ ನೀರು ಸರಿ ಹೋಗಿದೆ!
Leave A Reply