• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ತೀರಾ ಅಕ್ಕಿ, ಮಜ್ಜಿಗೆ, ಮೊಸರಿನ ತನಕ ಸರಕಾರಗಳು ಬರಬಾರದು!

Hanumantha Kamath Posted On July 19, 2022
0


0
Shares
  • Share On Facebook
  • Tweet It

ತೀರಾ ಅಕ್ಕಿ, ಮಜ್ಜಿಗೆ, ಮೊಸರಿನ ತನಕ ಸರಕಾರಗಳು ಬರಬಾರದು. ಇಂತಹ ವಸ್ತುಗಳಿಗೆ ಈಗಾಗಲೇ ಇರುವ ಬೆಲೆ ಕಡಿಮೆ ಏನಲ್ಲ. ಹಾಗಿರುವಾಗ ಜಿಎಸ್ ಟಿ ಹೆಸರಿನಲ್ಲಿ ಇನ್ನಷ್ಟು ತೆರಿಗೆ ಹಾಕುವುದು ಸದ್ಯ ಅಗತ್ಯವಿರಲಿಲ್ಲ. ಸರಕಾರಗಳು ವ್ಯಾಪಾರಕ್ಕೆ ಕುಳಿತುಕೊಳ್ಳಬಾರದು. ಆದರೆ ನಿರ್ಮಲ ಸೀತಾರಾಮನ್ ಈಗ ಹೊಸದಾಗಿ ಹಾಕಿರುವ ಜಿಎಸ್ ಟಿಯಲ್ಲಿ ಪ್ಯಾಕ್ ಮಾಡಿರುವ ಅಕ್ಕಿ, ಮಜ್ಜಿಗೆ, ಮೊಸರು ಸೇರಿಕೊಂಡಿದೆ. ಈ ವಸ್ತುಗಳು ಸೀದಾ ಕೆಳಮಟ್ಟದ ಜನಸಾಮಾನ್ಯರಿಗೂ ತಲುಪುತ್ತದೆ. ಅವರಿಗೆ ಬೆಲೆಯೇರಿಕೆ ಬೇಗೆಯ ನಡುವೆ ಮತ್ತೆ ಒಂದಿಷ್ಟು ರೂಪಾಯಿ ಹೆಚ್ಚಾದರೂ ಅದು ಹೊರೆಯೇ. ಸರಕಾರಗಳು ತೆರಿಗೆ ಹಾಕುವುದು ಸಾಮಾನ್ಯ. ಬ್ರಿಟಿಷರು ಉಪ್ಪಿಗೆ ತೆರಿಗೆ ಹಾಕಿದಾಗ ದೇಶದಲ್ಲೆಡೆ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಅದನ್ನು ಉಪ್ಪಿನ ಸತ್ಯಾಗ್ರಹ ಎಂದು ಕರೆಯಲಾಯಿತು. ಬ್ರಿಟಿಷರು ಈ ಹೋರಾಟಕ್ಕೆ ಬೆಚ್ಚಿದ್ದರು. ನಂತರ ಆದ ಇತಿಹಾಸ ನಮಗೆ ಗೊತ್ತೆ ಇದೆ. ಆದರೆ ಮಹಾತ್ಮಾ ಗಾಂಧಿಯವರು ಸ್ಮರಿಸುತ್ತೇವೆ ಎಂದು ಹೇಳುತ್ತಾ ಬಂದಿರುವ ಮೋದಿ ಸರಕಾರ ಉಪ್ಪಿನ ಸತ್ಯಾಗ್ರಹದ ಚರಿತ್ರೆಯನ್ನು ನೆನಪಿಸಿಕೊಂಡರೂ ಅಕ್ಕಿ, ಮೊಸರು, ಮಜ್ಜಿಗೆ ಮೇಲೆ ತೆರಿಗೆ ಹಾಕುತ್ತಿರಲಿಲ್ಲ. ಈಗ ಮಾತನಾಡಿದರೆ ಅದು ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಮಾತ್ರ ಎಂದು ಭಾರತೀಯ ಜನತಾ ಪಾರ್ಟಿಯ ಮುಖಂಡರು ಹೇಳಬಹುದು. ಆದರೆ ಇವತ್ತಿನ ದಿನಗಳಲ್ಲಿ ಕೂಲಿ ಕೆಲಸ ಮಾಡುವ ಸಾಮಾನ್ಯ ಕುಟುಂಬವೊಂದು ಕೂಡ ಶನಿವಾರ ವಾರದ ಸಂಬಳ ಸಿಕ್ಕಿದ ನಂತರ ಜಿನಸಿ ಅಂಗಡಿಗೆ ಹೋಗಿ ಮುಂದಿನ ವಾರದ ಅಷ್ಟೂ ಜಿನಸು ವಸ್ತುಗಳನ್ನು ಖರೀದಿಸುವಾಗ ಅದರಲ್ಲಿ ಐದು ಕೆಜಿ ಅಕ್ಕಿ ಬ್ಯಾಗ್ ಅನ್ನೇ ಖರೀದಿಸುತ್ತಾರೆ. ಯಾಕೆಂದರೆ ಅಕ್ಕಿಯನ್ನು ಲೂಸು ತೆಗೆದುಕೊಂಡು ಹೋಗಿ ಮರುದಿನ ಬೆಳಿಗ್ಗೆ ಅದರಲ್ಲಿರುವ ಕಲ್ಲು ತೆಗೆದು ಸ್ವಚ್ಚ ಮಾಡಿ ನಂತರ ಅನ್ನ ಮಾಡುವಷ್ಟು ಪುರುಸೊತ್ತು ಯಾವ ಜನಸಾಮಾನ್ಯನಿಗೂ ಇರುವುದಿಲ್ಲ. ಅದನ್ನು ಮಾಡಲು ಕುಳಿತರೆ ಆತ ಕೆಲಸಕ್ಕೆ ಹೋಗಲು ಸಮಯ ಉಳಿಯಲಿಕ್ಕಿಲ್ಲ. ಆದ್ದರಿಂದ ಎಷ್ಟೋ ಮಂದಿ ಲೂಸ್ ಅಕ್ಕಿಗಿಂತ ಎರಡು ರೂಪಾಯಿ ಜಾಸ್ತಿಯಾದರೂ ಪರವಾಗಿಲ್ಲ, ಪ್ಯಾಕ್ ಮಾಡಿದ ಕ್ಲೀನ್ಡ್ ಅಕ್ಕಿಯನ್ನೇ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಇನ್ನು ಗೋಧಿ ಮೇಲೆ ಕೂಡ 5% ಜಿಎಸ್ ಟಿ ಹಾಗೂ ಆಸ್ಪತ್ರೆಯ ಬೆಡ್ ಮೇಲೆ ಜಿಎಸ್ ಟಿ ವಿಧಿಸಲಾಗಿದೆ. ಕೇಂದ್ರ ಸರಕಾರ ಲಕ್ಸುರಿ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದರೆ ಪರವಾಗಿಲ್ಲ. ಯಾಕೆಂದರೆ ಶ್ರೀಮಂತರು, ಅನುಕೂಲಸ್ಥರು ಇಂತಹ ತೆರಿಗೆಯನ್ನು ಭರಿಸಲು ಸಮರ್ಥರಾಗಿರುತ್ತಾರೆ. ಅದರಿಂದ ಜನಸಾಮಾನ್ಯರಿಗೆ ಹೊರೆ ಇರುವುದಿಲ್ಲ. ಆದರೆ ಈ ಬಾರಿ ಇವರು ನೇರ ಬಡವರ ಹೊಟ್ಟೆಗೆ ಕೈ ಹಾಕಿರುವುದು ಆಶ್ಚರ್ಯ ಉಂಟು ಮಾಡುತ್ತದೆ. ಇದು ಅಗತ್ಯವಿರಲಿಲ್ಲ ಎನ್ನುವುದಕ್ಕೆ ಕಾರಣಗಳನ್ನು ನೋಡೋಣ.

ಮೊದಲನೇಯದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಅವರು ಈ ಆರ್ಥಿಕ ವರ್ಷದಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜಿಎಸ್ ಟಿ ಸಂಗ್ರಹವಾಗಿದೆ ಎಂದು ಇತ್ತೀಚೆಗೆ ಹೇಳಿದ್ದರು. ಅಂದಾಜು 1.40 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿರುವ ಮಾಹಿತಿಯನ್ನು ನೀಡಿದ್ದರು. ಹೀಗೆ ಒಂದು ದೇಶ ತನ್ನ ನಿರೀಕ್ಷೆಗಿಂತ ಹೆಚ್ಚು ತೆರಿಗೆ ಮಾಡಿದ ಬಳಿಕವೂ ಮತ್ತೆ ಕೂಡ ರಕ್ತ ಹೀರಿದಂತೆ ಮೊಸರು, ಮಜ್ಜಿಗೆ, ಅಕ್ಕಿಗೆ ಕೈ ಹಾಕುತ್ತದೆ ಎಂದರೆ ಸರಕಾರವನ್ನು ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ವ್ಯಾಪಾರಿಗಳು ನಡೆಸುತ್ತಿದ್ದಾರಾ ಎಂಬ ಭಾವನೆ ಉದ್ಭವವಾಗುತ್ತದೆ. ನೀವು ದೇಶ ನಡೆಸಲು ನೂರು ಲಕ್ಷ ಕೋಟಿ ನಿರೀಕ್ಷೆ ಮಾಡುವಾಗ 150 ಲಕ್ಷ ಕೋಟಿ ರೂಪಾಯಿ ಒಳಹರಿವು ಇರುತ್ತದೆ ಎಂದಾದರೆ ಮತ್ತೆ 200 ಲಕ್ಷ ಕೋಟಿ ರೂಪಾಯಿ ಬರಲಿ ಎಂದು ಸಿಕ್ಕಿದ್ದಕ್ಕೆಲ್ಲಾ ಕೈ ಹಾಕುವುದು ಸರಿಯಲ್ಲ. ಇದರಿಂದ ಏನಾಗುತ್ತದೆ ಎಂದರೆ ಎಷ್ಟೇ ಮೋದಿಯವರ ಮೇಲೆ ಪ್ರೀತಿ ಇದ್ದರೂ, ಎಷ್ಟೇ ರಾಹುಲ್ ಮೇಲೆ ತಾತ್ಸಾರ ಇದ್ದರೂ ಮಮತಾ ತರದವರೋ ಇನ್ಯಾರೋ ಪ್ರಧಾನಿಯಾಗಲಿ ಎಂದು ದೇಶದ ಕೆಳವರ್ಗದ ನೈಜ ಮತದಾರ ಒಮ್ಮೆ ನಿರ್ಧರಿಸಿ ಬಿಟ್ಟರೆ ನಂತರ ಮುಗಿಯಿತು. ಈಗ ಮೊಸರು, ಮಜ್ಜಿಗೆ, ಲಸ್ಸಿ ಜನಸಾಮಾನ್ಯರ ಪಾನೀಯ ಎಂದೇ ಪರಿಗಣಿಸಲಾಗಿದೆ. ಮದ್ಯದ ಮೇಲೆ ಪ್ರತಿ ವರ್ಷ ಬಜೆಟ್ ನಲ್ಲಿ ತೆರಿಗೆಯನ್ನು ಏರಿಸುತ್ತಲೇ ಬರಲಾಗಿದೆ. ಸಿಗರೇಟು ವಿಷಯದಲ್ಲಿಯೂ ಇದೇ ನಿಲುವು ಸರಕಾರಕ್ಕೆ ಇದೆ. ಇದರಿಂದ ಅಂತಹ ಪರಿಣಾಮ ಆಗುವುದಿಲ್ಲ. ಕಳೆದ ಬಾರಿ ಪೆಟ್ರೋಲ್, ಡಿಸೀಲ್ ದರ ನೂರಹತ್ತರ ಗಡಿ ತಲುಪಿದಾಗ ಸಹಜವಾಗಿ ಜನರಲ್ಲಿ ಆಕ್ರೋಶ ಇತ್ತು. ಆದರೆ ಕೇಂದ್ರ ಈ ಬಗ್ಗೆ ತುರ್ತು ಕ್ರಮ ಅನುಸರಿಸಿ ಏಳರಿಂದ ಹತ್ತು ರೂಪಾಯಿ ಕಡಿತವಾಗುವಂತೆ ನೋಡಿಕೊಂಡಿತು. ಆದರೆ ಈಗ ಅಕ್ಕಿ, ಗೋಧಿ ವಿಷಯ. ದಕ್ಷಿಣ ಭಾರತದಲ್ಲಿ ಅಕ್ಕಿ, ಉತ್ತರ ಭಾರತದಲ್ಲಿ ಗೋಧಿ ಜನಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ವಸ್ತುಗಳನ್ನು ಪ್ಯಾಕ್ ಮಾಡಿದ ರೀತಿಯಲ್ಲಿ ಮಾರುವ ಕಂಪೆನಿಗಳು ಉತ್ತಮ ಆದಾಯವನ್ನು ಗಳಿಸುತ್ತಿವೆ, ಅದರ ಪಾಲು ಸರಕಾರಕ್ಕೆ ನೀಡಲಿ ಎಂದು ವಿತ್ತ ಸಚಿವರ ವಾದ ಇರಬಹುದು. ಆದರೆ ತಮ್ಮ ಮೇಲೆ ಹೆಚ್ಚುವರಿ ತೆರಿಗೆ ಬಿದ್ದರೆ ಈ ಕಂಪೆನಿಗಳು ಅದನ್ನು ಜನರ ಮೇಲೆ ದಾಟಿಸುತ್ತವೆ. ಆಗ ತೆರಿಗೆ ಹೆಚ್ಚಳದ ಆಕ್ರೋಶ ಬುಗಿಲೆದ್ದು ಸರಕಾರ ಅನಿವಾರ್ಯವಾಗಿ ಮಣಿಯಲೇಬೇಕಾಗುತ್ತದೆ ಎನ್ನುವುದು ಆ ಕಂಪೆನಿಗಳಿಗೆ ಗೊತ್ತೇ ಇದೆ.

ಸದ್ಯ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಬಸ್ಸು ಬೊಮ್ಮಾಯಿಯವರ ಮೇಲಿದೆ. ಯಾಕೆಂದರೆ ಇನ್ನು ಎಂಟು ತಿಂಗಳ ಬಳಿಕ ರಾಜ್ಯ ಚುನಾವಣೆಗೆ ಹೋಗಬೇಕಾಗಿದೆ. ಇಂತಹ ವಿಷಯಗಳು ಬಿಜೆಪಿಗೆ ಮತ್ತಷ್ಟು ಬೆವರು ಇಳಿಯುವಂತೆ ಮಾಡಬಹುದು. ಜಿಎಸ್ ಟಿ ಕೌನ್ಸಿಲ್ ಗೆ ಹೇಳಿ ಸರಿ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರೂ ಇದು ವಿಧಾನಸೌಧದ ಮೂರನೇ ಮಹಡಿಯಿಂದ ಮೊದಲ ಮಹಡಿಗೆ ಫೋನ್ ಮಾಡಿ ಹೇಳಿದಷ್ಟು ಸುಲಭವಲ್ಲ. ಇನ್ನು ನಿರ್ಮಲ ಅವರು ಕರ್ನಾಟಕದ ಸಿಎಂ ಹೇಳಿದ ಕೂಡಲೇ ಓಕೆ, ಬೊಮ್ಮಾಯಿಜಿ ಇವತ್ತು ಮಧ್ಯರಾತ್ರಿಯಿಂದಲೇ ಕಡಿಮೆ ಮಾಡುತ್ತೇನೆ. ನೀವು ಫೋನ್ ಮಾಡಿ ಹೇಳಿದ್ದು ಒಳ್ಳೆಯದಾಯಿತು ಎನ್ನಲ್ಲ. ಒಟ್ಟಿನಲ್ಲಿ ಕೆಲವರನ್ನು ತಲೆಯ ಮೇಲೆ ಕುಳ್ಳಿರಿಸಿದರೆ ಅಲ್ಲಿಯೇ ಕಿವಿಯೊಳಗೆ ಸುಸ್ಸು ಮಾಡುತ್ತಾರೋ ಎನ್ನುವ ಆತಂಕ ಜನರಲ್ಲಿ ಬರಬಾರದು!

0
Shares
  • Share On Facebook
  • Tweet It




Trending Now
ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
Hanumantha Kamath July 4, 2025
ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
Hanumantha Kamath July 4, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
  • Popular Posts

    • 1
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 2
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • 3
      ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • 4
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 5
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search