ಮೂಡಾ ಟಿಪಿಎಂನಿಂದ ಹೋಗಲಿದೆ ಬಿಜೆಪಿ ಮರ್ಯಾದೆ!!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಎನ್ನುವ ಸರಕಾರದ ಅಧೀನ ಸಂಸ್ಥೆಯ ಬಗ್ಗೆ ನೀವು ಕೇಳಿರುತ್ತೀರಿ. ಅದನ್ನು ಮೂಡಾ ಎಂದು ಕರೆಯುತ್ತಾರೆ. ಇದೇನು ಡಿಸಿ ಆಫೀಸ್ ಅಥವಾ ಪಾಲಿಕೆ ಇದ್ದ ಹಾಗೆ ಸರಕಾರಿ ಕಚೇರಿ ಅಲ್ಲ. ಈ ನಿಯಮ, ಮಂಡಳಿ, ಅಕಾಡೆಮಿ ಇದ್ದ ಹಾಗೆ ಒಂದು ಪ್ರಾಧಿಕಾರ ಅಷ್ಟೇ. ಆದರೆ ಮೂಡಾ ಹವಾ ಎಷ್ಟರಮಟ್ಟಿಗೆ ಇದೆ ಎಂದರೆ ಅದರ ಟಿಪಿಎಂ ತನ್ನನ್ನು ತಾನು ಜಿಲ್ಲಾಧಿಕಾರಿ ಲೆವೆಲ್ಲು ಎಂದುಕೊಂಡಿದ್ದಾರೆ. ಅಷ್ಟು ಅಹಂ ತುಂಬಿಸಿಕೊಂಡಿದ್ದಾರೆ. ಅಂತಹ ಒಬ್ಬ ಯಕಶ್ಚಿತ್ ಟೌನ್ ಪ್ಲಾನಿಂಗ್ ಮೆಂಬರ್ ಅಥವಾ ಟಿಪಿಎಂ ಕಥೆಯನ್ನು ಇವತ್ತು ಹೇಳಲೇಬೇಕಾಗಿದೆ. ಈಗ ಇರುವ ಟಿಪಿಎಂ ಮಾಡುತ್ತಿದ್ದ ಭ್ರಷ್ಟಾಚಾರವನ್ನು ದಕ್ಷಿಣ ಕನ್ನಡದ ಭಾರತೀಯ ಜನತಾ ಪಾರ್ಟಿಯ ಮುಖಂಡರು ವಿಪಕ್ಷದಲ್ಲಿದ್ದಾಗ ಎಷ್ಟು ವಿರೋಧಿಸುತ್ತಿದ್ದರು ಎಂದರೆ ಕಾಂಗ್ರೆಸ್ ಸರಕಾರ ಇರುವಾಗಲೇ ಅವರನ್ನು ಇಲ್ಲಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಯಾಕೆಂದರೆ ಆ ಟಿಪಿಎಂ ಮೂಡಾದಲ್ಲಿ ಇದ್ದಷ್ಟು ನಮಗೆ ಡ್ಯಾಮೇಜ್ ಎನ್ನುವ ಭಾವನೆ ಇತ್ತು. ಈಗ ಅದೇ ಟಿಪಿಎಂ ಮತ್ತೆ ಬಂದು ಮೂಡಾದಲ್ಲಿ ವಕ್ಕರಿಸಿದ್ದಾರೆ. ಅವರ ಪುರಾಣ ಗೊತ್ತಿದ್ದವರು ಮನಸ್ಸಿನಲ್ಲಿ ಎಷ್ಟು ಶಪಿಸಿರುತ್ತಾರೋ ದೇವರಿಗೆ ಗೊತ್ತು. ಅಷ್ಟಕ್ಕೂ ಟಿಪಿಎಂ ಕೆಲಸವೇನು ಎನ್ನುವುದನ್ನು ಗೊತ್ತಿಲ್ಲದವರಿಗೆ ಮೊದಲು ಹೇಳಿಬಿಡ್ತೀನಿ.
ಮೂಡಾ ಅಡಿಯಲ್ಲಿ ಮಂಗಳೂರು ನಗರ ದಕ್ಷಿಣ, ಉತ್ತರ, ಉಳ್ಳಾಲ ಮತ್ತು ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿ ಯಾರಾದರೂ ಹೊಸ ಮನೆ ಕಟ್ಟಿಸಲು, ಲೇಔಟ್ ಮಾಡಿಸಲು ಅಥವಾ ತಮ್ಮ ಜಾಗ ಮಾರಲು ಮೂಡಾ ಅತ್ಯಗತ್ಯ. ಮೊದಲಿಗೆ ಜಾಗವನ್ನು ಏಕನಿವೇಶನವನ್ನಾಗಿ ಬದಲಾಯಿಸುವುದರಿಂದ ಹಿಡಿದು ಅದನ್ನು ಮಾರುವ ತನಕ ಮೂಡಾಕ್ಕೆ ನಾವು ಅವಲಂಬಿತರಾಗಿರಬೇಕಾಗುತ್ತದೆ. ಅದರಲ್ಲಿ ಝೋನಲ್ ಪ್ರಮಾಣಪತ್ರ, ಡೆವಲಪವೆಂಟ್ ಸ್ಕೆಚ್ ಕೂಡ ಒಳಗೊಂಡಿರುತ್ತದೆ. ಇದೆಲ್ಲವನ್ನು ನೀವು ಯಾವುದಾದರೂ ಮಧ್ಯವರ್ತಿಗಳು ಅಂದರೆ ಬ್ರೋಕರ್ ಗಳನ್ನು ಹಿಡಿದು ಮಾಡಿದರೆ ಕೆಲಸ ಸುಲಭವಾಗಿ ಆಗುತ್ತದೆ. ಅದೇ ನೀವು ನೇರವಾಗಿ ಹೋದರೆ ನಿಮ್ಮ ಕೆಲಸ ಆಗುವಾಗ ನಿಮಗೆ ಹೃದಯ ಬಾಯಿಗೆ ಬರುತ್ತದೆ. ಏನಾದರೂ ಒಂದು ತಪ್ಪು ಹುಡುಕಿಕೊಂಡು ನಿಮಗೆ ನಿಮ್ಮದೇ ಜಾಗದ ಬಗ್ಗೆ ಜಿಗುಪ್ಸೆ ಬರುವಂತೆ ಈ ಟಿಪಿಎಂ ಮಾಡಿಬಿಡುತ್ತಾರೆ. ಹಾಗಂತ ಇವರಾಗಿ ನಿಮ್ಮ ಬಳಿ ಕೈಚಾಚುವುದಿಲ್ಲ. ಅದಕ್ಕಾಗಿಯೇ ತಮ್ಮ ಚೇಲಾಗಳನ್ನು ಇವರು ಕಚೇರಿಯಲ್ಲಿ ನೇಮಿಸಿಕೊಂಡಿದ್ದಾರೆ. ಅವರು ಇವರ ಚೇಂಬರ್ ಹೊರಗೆ ಇರುತ್ತಾರೆ. ಪ್ರತಿ ಕೆಲಸಕ್ಕೂ ಇಂತಿಷ್ಟೇ ಎಂದು ಭ್ರಷ್ಟಾಚಾರದ ಫೀಸ್ ಇವರೇ ತಯಾರು ಮಾಡಿಕೊಂಡಿದ್ದಾರೆ. ಏಕನಿವೇಶನ ಮಾಡುವವರು ಐದು ಸೆಂಟ್ಸ್ ಆದರೆ 2000 ರೂಪಾಯಿ, ಐದರಿಂದ ಏಳು ಸೆಂಟ್ಸ್ ತನಕ 2,500 ರೂಪಾಯಿ, 10 ಸೆಂಟ್ಸ್ ತನಕ 3000 ರೂಪಾಯಿ ತನಕ ಹಣ ನಿಮ್ಮಿಂದ ಪೀಕಿಸಿಕೊಳ್ಳುತ್ತಾರೆ. ಅದನ್ನು ಕೊಟ್ಟರೆ ಮಾತ್ರ ಫೈಲ್ ಮುಂದಕ್ಕೆ ಹೋಗುತ್ತದೆ. ಸರಿಯಾಗಿ ನೋಡಿದರೆ ಮೂಡಾದ ಕೆಲಸಗಳನ್ನು ಆನ್ ಲೈನ್ ನಲ್ಲಿ ಕೂಡಾ ಮಾಡಬಹುದು. ಆದರೆ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದರೆ ಕೆಲಸ ಬೇಗ ಆಗುತ್ತದಾ? ಕನಿಷ್ಟ 2 ರಿಂದ 3 ಗಂಟೆಯ ತನಕ ಕಾಯಬೇಕು. ಮಧ್ಯಮ ವರ್ಗದವರು ಎಲ್ಲಿಯಾದರೂ ಕೆಲಸಕ್ಕೆ ಹೋಗುವವರಾದರೆ ಆ ದಿನ ರಜೆನೆ ಹಾಕಿ ಇಲ್ಲಿ ಕ್ಯೂ ನಿಲ್ಲಬೇಕು. ಎಷ್ಟೋ ಸಲ 2-3 ಗಂಟೆ ಕ್ಯೂ ನಿಂತ ನಂತರ ಇವತ್ತಾಗಲ್ಲ, ನಾಳೆ ಬನ್ನಿ ಎಂದು ಟಿಪಿಎಂ ಜೋರು ಮಾಡಿ ಕಳುಹಿಸಿಬಿಡುತ್ತಾರೆ. ಒಬ್ಬ ಬಡಪಾಯಿ ರಿಕ್ಷಾ ಚಾಲಕ ಇಡೀ ದಿನ ದುಡಿದು ನಾಲ್ಕು ಕಾಸು ದುಡಿಯಲು ಹೊರಡುವವರು ಇಲ್ಲಿ ಬಂದು ಕ್ಯೂ ನಿಂತರೆ ದುಡಿಯುವ ಸ್ವಲ್ಪ ಆದಾಯಕ್ಕೂ ಕೊಕ್ಕೆ ಬೀಳುತ್ತದೆ. ಅದಕ್ಕೆ ಕಾರಣ ಈ ಟಿಪಿಎಂ. ಕೆಲವೊಮ್ಮೆ ದಾಖಲೆಗಳಲ್ಲಿ ಏನೂ ತಪ್ಪು ಇಲ್ಲದಿದ್ದರೂ ಇದು ನೋಟರಿ ಮಾಡಿಕೊಂಡು ಬಂದಿದ್ದೀರಿ. ಇದು ಬೇಡಾ, ಸರ್ಟಿಫೈ ಮಾಡಿಕೊಂಡು ಬನ್ನಿ ಎಂದು ಕಳುಹಿಸಿಕೊಡಲಾಗುತ್ತದೆ. ಇದರಿಂದ ನೀವು ಸರ್ಟಿಫೈ ಮಾಡಿಕೊಂಡು ಬರುವಷ್ಟರಲ್ಲಿ ಇನ್ನೊಂದೆರಡು ತಿಂಗಳು ಹಿಡಿಯುತ್ತದೆ. ಈ ಎಲ್ಲದರಿಂದ ನೀವು ಬೇಸತ್ತು ಅವರು ಬೇಡಿದಷ್ಟು ಲಂಚವನ್ನು ಅವರ ಮುಖದ ಮೇಲೆ ಬಿಸಾಡಿ ಹಾಳಾಗಿ ಹೋಗ್ಲಿ ಎಂದು ಮನಸ್ಸಿನಲ್ಲಿ ಶಪಿಸುತ್ತಾ ಕೆಲಸ ಮಾಡಿಸಿಕೊಂಡು ಬರುತ್ತೀರಿ. ಇದು ಸರಕಾರಿ ಕಚೇರಿ ಅಲ್ಲದಿದ್ದರೂ ಇಲ್ಲಿ ಇರುವಷ್ಟು ಭ್ರಷ್ಟಾಚಾರ ಬೇರೆ ಯಾವ ಕಚೇರಿಯಲ್ಲಿಯೂ ಇರಲು ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಪರ್ಯಾಯ ಹೆಸರು ಮೂಡಾ ಮತ್ತು ಮೂಡಾದ ತಂದೆಯಂತೆ ವರ್ತಿಸುವುದು ಇಲ್ಲಿನ ಟಿಪಿಎಂ. ಇವರು ಕಚೇರಿಗೆ ಬರುವುದಕ್ಕೆ ಬೆಳಿಗ್ಗೆ ನಿರ್ದಿಷ್ಟ ಸಮಯ ಎನ್ನುವುದು ಇಲ್ಲ. ಮೂಡಾ ಕಮೀಷನರ್ ಹತ್ತು ಗಂಟೆಯ ಒಳಗೆ ಬಂದರೂ ಟಿಪಿಎಂ ಹನ್ನೊಂದುವರೆಗೆ ಬರುತ್ತಾರೆ. ಅಲ್ಲಿಯ ತನಕ ಜನ ಇವರ ಹೆಣ ಕಾದಂತೆ ಅಲ್ಲಿ ಕಾಯಬೇಕಾಗುತ್ತದೆ. ಅದೇ ಸಂಜೆ ನಾಲ್ಕೂವರೆ-ಐದು ಗಂಟೆಯಾಗುತ್ತಿದ್ದಂತೆ ಇವರು ಏನೇ ಆಗಲಿ ಅಲ್ಲಿ ನಿಲ್ಲುವುದಿಲ್ಲ.
ಮೊನ್ನೆ ನನಗೆ ಇಲ್ಲಿ ಜನ ಕ್ಯೂನಲ್ಲಿ ನಿಂತು ಟಿಪಿಎಂಗಾಗಿ ಕಾಯುತ್ತಿರುವ ಫೋಟೋ ಮತ್ತು ಮಾಹಿತಿ ಸಿಕ್ಕಿದ ಕೂಡಲೇ ನಾನು ಶಾಸಕ ವೇದವ್ಯಾಸ ಕಾಮತ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಅವರು ತಕ್ಷಣ ಕಮೀಷನರ್ ಅವರಿಗೆ ಇದನ್ನು ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಕಮೀಷನರ್ ಅಲ್ಲಿ ಟಿಪಿಎಂ ಅವರಿಗೆ ಗರಂ ಮಾಡಿದ್ದಾರೆ. ಸೋಮವಾರದಿಂದ ಎಲ್ಲವೂ ಸರಿಯಾಗುತ್ತೆ ಎನ್ನುವ ನಿರೀಕ್ಷೆ ಇದೆ. ಈಗ ಇರುವ ಪ್ರಶ್ನೆ ಏನೆಂದರೆ ಈ ಟಿಪಿಎಂ ಉಪದ್ರವ ಸಹಿಸದೇ ಇಲ್ಲಿಂದ ಎತ್ತಂಗಡಿ ಮಾಡಿಸಿದ್ದು ಬಿಜೆಪಿ. ಈಗ ಅವರನ್ನು ಮತ್ತೆ ಮೂಡಾಕ್ಕೆ ಕರೆಸಿದ್ದು ಬಿಜೆಪಿ. ಹುಟ್ಟುಗುಣ ಸುಟ್ಟರೂ ಬಿಡುವುದಿಲ್ಲ ಎನ್ನುವಂತೆ ಈ ಟಿಪಿಎಂ ಹೀಗೆ ಜನರನ್ನು ಸತಾಯಿಸುತ್ತಾ ಇದ್ದರೆ ಅದರಿಂದ ಏನು ಆಗುತ್ತೋ, ಬಿಡುತ್ತೋ? ಒಂದಂತೂ ಕ್ಲಿಯರ್ ಆಗುತ್ತೆ. ಅದೇನೆಂದರೆ ಕಾಂಗ್ರೆಸ್ಸಿಗೂ, ಬಿಜೆಪಿಗೂ ವ್ಯತ್ಯಾಸ ಏನೂ ಇಲ್ಲ. ಇದು ಬೇಕಾ?
Leave A Reply