ಊರಿಗೆ ರಾಜ್ಯಾಧ್ಯಕ್ಷನಾದರೂ ಕ್ಷೇತ್ರಕ್ಕೆ ಮಗ ಎಂದು ತೋರಿಸಿಕೊಟ್ಟ ನಳಿನ್ ಗೆ ಅಭಿನಂದನೆ!!
ಮಂಗಳೂರಿನಿಂದ ಮೈಸೂರಾಗಿ ಬೆಂಗಳೂರಿಗೆ ಹೋಗುವ ರಾತ್ರಿ ರೈಲು ಮೊದಲು ವಾರಕ್ಕೆ ನಾಲ್ಕು ದಿನ ಮಾತ್ರ ಇತ್ತು. ನಾವು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯವರು ಸಂಸದ ನಳಿನ್ ಕುಮಾರ್ ಕಟೀಲ್, ರೈಲ್ವೆ ಸಚಿವರಿಗೆ, ರೈಲ್ವೆ ಬೋರ್ಡಿಗೆ ಪತ್ರಗಳನ್ನು ಬರೆದು ಕಾಲಕಾಲಕ್ಕೆ ಫಾಲೋಅಪ್ ಮಾಡಿದ ಪರಿಣಾಮ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಸತತ ಪ್ರಯತ್ನಗಳನ್ನು ಮಾಡಿದ ಕಾರಣ ಆ ರೈಲು ಈಗ ವಾರಕ್ಕೆ ಆರು ದಿನ ಅದೇ ರೂಟ್ ನಲ್ಲಿ ಹೋಗಿ ಬರುತ್ತಿದೆ. ಕೆಲವರಿಗೆ ಒಂದು ರೈಲು ಸಮರ್ಪಕವಾಗಿ ಒಂದು ರೂಟ್ ನಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದರೆ ಅದನ್ನು ತಮ್ಮ ಕಡೆಯೂ ಎಳೆದುಕೊಳ್ಳುವ ಆಸೆ ಹೆಚ್ಚಾಗುತ್ತದೆ. ಮೊದಲಾಗಿ ಈ ರೈಲನ್ನು ಕುಂದಾಪುರದ ತನಕ ವಿಸ್ತರಿಸುವ ಪ್ರಯತ್ನಕ್ಕೆ ಕುಂದಾಪುರ ರೈಲ್ವೆ ಸಮಿತಿಯವರು ಮುಂದಾಗಿಬಿಟ್ಟರು. ಆಗ ಕಾರವಾರದವರು ಸುಮ್ಮನಿರುತ್ತಾರೆಯೇ, ಅವರು ನಮ್ಮ ಊರಿನ ತನಕ ಬಂದು ಹೋಗಲಿ ಎಂದು ಪೀಠಿಕೆ ಹಾಕಿದರು. ಕೊನೆಗೆ ಈ ರೈಲು ಕಾರವಾರದಿಂದ ಮುಂದಕ್ಕೆ ಹೋಗಿ ವಾಸ್ಕೋ ತನಕ ಹೋಗಬಹುದು ಎಂದು ಅನಿಸಲು ಶುರುವಾಯಿತು. ಹೀಗಿರುವಾಗ ರೈಲ್ವೆಯವರು ಸರಾಸರಿ ಲೆಕ್ಕ ಹಾಕಿದರೋ ಏನೋ ಭಟ್ಕಳದ ತನಕ ವಾರದ ಮೂರು ದಿನ ವಿಸ್ತರಿಸೋಣ ಎಂದು ನಿಶ್ಚಯಿಸಿಬಿಟ್ಟರು. ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಾತ್ರಿಯ ಎರಡು ರೈಲುಗಳಲ್ಲಿ ಇದು ಪ್ರಮುಖ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಮೊದಲಿಗೆ ಮೂರು ದಿನ ಇದ್ದದ್ದು ನಳಿನ್ ಅವರಿಂದ ಈಗ ಆರು ದಿನವಾದರೂ ಓಡುತ್ತಿದೆ. ಈಗ ಕಾರವಾರದ ತನಕ ವಿಸ್ತರಣೆ ಮಾಡಿದರೆ ನಮಗೇನು ನಷ್ಟ ಎಂದರೆ ಮಂಗಳೂರಿನವರಿಗೆ ಈಗ ಇರುವ ಮೀಸಲಾತಿ ಕೋಟಾ ಕಡಿಮೆ ಆಗುತ್ತಾ ಬರುತ್ತದೆ. ಇದರ ನಡುವೆ ಇನ್ನೊಂದು ಆಯಾಮದಲ್ಲಿ ಕೆಲವರು ಒತ್ತಡ ಹಾಕಲು ಶುರು ಮಾಡಿದರು. ಅದೇನೆಂದರೆ ಈ ರೈಲನ್ನು ಕಾರವಾರ ಕಡೆಯಿಂದ ಬರುವಾಗ ಮಂಗಳೂರು ಜಂಕ್ಷನ್ ನಿಂದ ಪಡೀಲ್ ಆಗಿ ಮೈಸೂರು, ಬೆಂಗಳೂರಿಗೆ ತಿರುಗಿಸುವುದು ಎಂದು ಷಡ್ಯಂತ್ರ ನಡೆಯಿತು. ಒಂದು ವೇಳೆ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರೆ ಮಂಗಳೂರು ನಗರದವರು ಬೆಂಗಳೂರಿನಿಂದ ಊರಿಗೆ ಬಂದು ಹೋಗುವಾಗ ತುಂಬಾ ಕಷ್ಟ ಪಡಬೇಕಾಗುತ್ತಿತ್ತು. ಅದೇನೆಂದರೆ ಒಂದೋ ಅಂತವರು ಬಂಟ್ವಾಳದಲ್ಲಿ ಇಳಿಯಬೇಕಿತ್ತು ಅಥವಾ ಹತ್ತಬೇಕಿತ್ತು ಅಥವಾ ಸುರತ್ಕಲ್ ನಲ್ಲಿ ಹತ್ತಬೇಕಿತ್ತು ಅಥವಾ ಇಳಿಯಬೇಕಿತ್ತು. ಯಾಕೆಂದರೆ ಪಡೀಲಿಗೆ ಬಂದರೆ ಅಲ್ಲಿ ಇಳಿಯಲು, ಹತ್ತಲೂ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ. ಇದನ್ನೆಲ್ಲಾ ನಾವು ಸಹಿಸಿಕೊಂಡರೆ ಮಂಗಳೂರು ನಗರದವರಿಗೆ ತುಂಬಾ ತೊಂದರೆಯಾಗುತ್ತದೆ ಎನ್ನುವ ಮನವಿಯನ್ನು ನಾವು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುಂದೆ ಇಟ್ಟೆವು. ಯಾವುದೇ ಕಾರಣಕ್ಕೂ ಈ ವಿಸ್ತರಣೆಯನ್ನು ಅಥವಾ ರೂಟ್ ಬದಲಾಯಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಲು ಬಿಡಲೇಬಾರದು ಎಂದು ಆಗ್ರಹಿಸಿದೆವು. ಒಂದು ಕಡೆ ಸೀಟು ಕೋಟಾ ಮತ್ತೊಂದೆಡೆ ರೈಲ್ವೆ ನಿಲ್ದಾಣಗಳ ಬದಲು ಸಮಸ್ಯೆ ತಪ್ಪಿಸಲು ಈ ರೈಲು ಈಗ ಹೇಗಿದೆಯೋ ಮುಂದೆಯೂ ಹಾಗೆ ಓಡಲಿ, ಬೇಕಾದರೆ ಕಾರವಾರದಿಂದ ಪಡೀಲ್ ಆಗಿ ಬೆಂಗಳೂರಿಗೆ ಹೋಗಬೇಕು ಎನ್ನುವ ಹಟ ಯಾರಿಗಾದರೂ ಇದ್ದರೆ ಅವರಿಗೆ ಬೇರೆ ಪ್ರತ್ಯೇಕ ರೈಲು ಓಡಲಿ, ಅದಕ್ಕೆ ನಮ್ಮ ಬೆಂಬಲ ಇದೆ. ಆದರೆ ಈಗ ಇರುವ ರೈಲನ್ನು ವಿಸ್ತರಿಸುವ ಅಥವಾ ರೂಟ್ ಬದಲಾವಣೆಯಿಂದ ನಿತ್ಯ 300 ರಿಂದ 500 ಜನರ ತನಕ ಮಂಗಳೂರು ನಗರ ರೈಲು ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಯಾವುದೇ ಬದಲಾವಣೆಯನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಸಂಸದ ನಳಿನ್ ಬಂದರು.
ವಿಷಯ ಆದದ್ದು ಇಷ್ಟೇ. ಆದರೆ ಈಗ ತಮ್ಮ ಪ್ರಯತ್ನದಲ್ಲಿ ಸೋತಿರುವ ಕೆಲವರು ಏನು ತಂತ್ರ ಮಾಡುತ್ತಿದ್ದಾರೆ ಎಂದರೆ ಪಕ್ಷದ ರಾಜ್ಯಾಧ್ಯಕ್ಷರು ರೈಲು ವಿಸ್ತರಣೆಗೆ ಒಪ್ಪದೇ ಕಾರವಾರದ ಜನರಿಗೆ ಅನ್ಯಾಯ ಮಾಡಿದರು ಎನ್ನುವ ಗಾಳಿ ಸುದ್ದಿಯನ್ನು ಹರಡಿಸುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಎನ್ನುವುದು ನಿಜ. ಅದರೊಂದಿಗೆ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು ಎನ್ನುವುದನ್ನು ಯಾರೂ ಮರೆಯಬಾರದು. ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುವ ಗಾದೆ ನಿಜವಲ್ಲವೇ? ತಮ್ಮ ಲೋಕಸಭಾ ಕ್ಷೇತ್ರಕ್ಕೆ ಅನ್ಯಾಯ ಮಾಡಿ ಅವರು ಏನು ಸಾಧಿಸಿದಂತಾಗುತ್ತದೆ. ಒಂದು ವೇಳೆ ಇದೇ ರೈಲು ವಿಸ್ತರಣೆಯಾದರೆ ಅವರ ಕ್ಷೇತ್ರದ ನಾಗರಿಕರು ಸಂಕಷ್ಟಕ್ಕೆ ಬೀಳುವುದಿಲ್ಲವೇ? ದ.ಕ ಜಿಲ್ಲೆಯ ಜನಪ್ರತಿನಿಧಿಯಾಗಿ ನಳಿನ್ ತಮ್ಮ ಕ್ಷೇತ್ರದ ನಾಗರಿಕರ ಕಷ್ಟ-ಸುಖ ನೋಡಬಾರದೇ? ಹಾಗಂತ ನಳಿನ್ ಕುಮಾರ್ ಕಟೀಲ್ ಅವರು ಕಾರವಾರದ ಜನರಿಗೆ ಅನ್ಯಾಯ ಮಾಡಿಲ್ಲ. ಅಲ್ಲಿಂದ ಜಂಕ್ಷನ್ ಆಗಿ ಪಡೀಲ್ ಮೂಲಕ ಮೈಸೂರು ಆಗಿ ಬೆಂಗಳೂರಿಗೆ ಹೋಗಲು ಪ್ರತ್ಯೇಕ ರೈಲು ವ್ಯವಸ್ಥೆ ಮಾಡಲು ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಅವರು ತಿಳಿಸಿದ್ದಾರೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳಿಗೆ ನಳಿನ್ ವಿರುದ್ಧ ದ್ವೇಷ ಸಾಧಿಸುವ ಯಾವ ಸಣ್ಣ ಅವಕಾಶವೂ ಮಿಸ್ ಆಗಬಾರದು ಎನ್ನುವ ತವಕ. ನಳಿನ್ ಈ ವಿಸ್ತರಣೆ ಅಥವಾ ರೂಟ್ ಬದಲಾವಣೆಗೆ ಒಪ್ಪದೇ ದಕ್ಷಿಣ ಕನ್ನಡ ಜಿಲ್ಲೆಯ ಅಸಂಖ್ಯಾತ ರೈಲು ಪ್ರಯಾಣಿಕರ ಹಿತಾಸಕ್ತಿಯನ್ನು ರಕ್ಷಿಸಿದ್ದಾರೆ. ಒಬ್ಬ ಸಂಸದನಾಗಿ ತಾವು ಮಾಡಬೇಕಾದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರಿಗೆ ಜಿಲ್ಲೆಯ ನಾಗರಿಕರು ಯಾವತ್ತೂ ಋಣಿಯಾಗಿರಬೇಕು. ನಮ್ಮ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ವತಿಯಿಂದ ಅವರಿಂದ ಅನಂತ ಕೃತಜ್ಞತೆಗಳು. ಕೊನೆಯದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಇದ್ದ ಒಂದು ರೈಲನ್ನು ಅಂದು ಕಾರವಾರದ ತನಕ ವಿಸ್ತರಣೆಗೆ ಹೋರಾಟ ಮಾಡಿದ್ದೇ ನಮ್ಮ ಸಮಿತಿಯವರು. ಅದಕ್ಕಾಗಿ ನಾವು ಸಾಕಷ್ಟು ಶ್ರಮ ಪಟ್ಟಿದ್ದೆವು. ಅದೆಲ್ಲವನ್ನು ಮರೆತಿರುವ ಕೆಲವು ವಿಷ್ನ ಸಂತೋಷಿಗಳು ಈಗ ಎಲ್ಲವೂ ಮುಗಿದ ಮೇಲೆ ಬಂದು ಕಡ್ಡಿ ಅಲ್ಲಾಡಿಸುತ್ತಿದ್ದಾರೆ!
Leave A Reply