ವಕ್ಫ್ ಆಸ್ತಿ ಏನೂ ಈ ದೇಶಕ್ಕೆ ಔರಾಂಗಜೇಬ್ ತಂದದ್ದಲ್ಲ!!
ವಕ್ಫ್ ಆಸ್ತಿ ಎನ್ನುವ ಶಬ್ದ ಕೇಳಿದರೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ಅತ್ತು ಕರೆದು ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಿರುವ ರಾಜ್ಯ ಸರಕಾರ ನಿರೀಕ್ಷೆಯಂತೆ ಅದರಲ್ಲಿ ಇರುವ ಹೆಸರುಗಳನ್ನು ಬಹಿರಂಗಪಡಿಸಿದೆ. ಈಗ ಹೆಸರು ಇರುವ ಎಲ್ಲಾ ವ್ಯಕ್ತಿಗಳ ಆಸ್ತಿಗಳನ್ನು ಸರ್ವೇ ಮಾಡಿ ಅದರಲ್ಲಿ ಅವರು ಕಬಳಿಸಿರುವ ಜಾಗ ಎಷ್ಟು? ಅದನ್ನು ಇಷ್ಟು ವರ್ಷ ಅವರು ಬಳಸಿರುವುದರಿಂದ ಅವರಿಗೆ ಆಗಿರುವ ಲಾಭ ಎಷ್ಟು? ಎಷ್ಟು ಹಣವನ್ನು ಅವರು ಅದರಲ್ಲಿ ಮಾಡಿದ್ದಾರೆ? ಈಗ ಅವರು ಸರ್ವೇಗೆ ಒಪ್ಪುತ್ತಾರಾ? ಅಷ್ಟಕ್ಕೂ ಆ ಎಲ್ಲಾ ಜಾಗಗಳೂ ಅವರ ಹೆಸರಿನಲ್ಲಿಯೇ ಇದ್ದಾವೆಯೇ? ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್ ಮುಖಂಡ, ಶಾಸಕ ಹ್ಯಾರಿಸ್ ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಆದರೆ ಎಲ್ಲಾ ಕಬಳಿಕೆಯ ಆಸ್ತಿಗಳು ಹ್ಯಾರಿಸ್ ಹೆಸರಿನಲ್ಲಿ ಮಾತ್ರವೇ ಇಲ್ಲ. ಅವರ ತಾಯಿಯಿಂದ ಹಿಡಿದು ಆಪ್ತ ಸಹಾಯಕರ ತನಕ ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿದೆ. ಈಗ ಅದನ್ನೆಲ್ಲಾ ಪರಿಶೀಲಿಸುತ್ತಾ ಹೋದರೆ ಒಬ್ಬೊಬ್ಬರು ಹೊಡೆದ ಆಸ್ತಿ ಎಲ್ಲೆಲ್ಲಿ ಇದೆ ಎಂದು ನೋಡುವುದಕ್ಕೆ ವರ್ಷಗಳೇ ಹಿಡಿಯಲಿದೆ. ಯಾಕೆಂದರೆ ಬ್ರಹ್ಮಾಂಡ ಭ್ರಷ್ಟಾಚಾರದ ಒಳ ಹೊಕ್ಕು ಅದರ ತನಿಖೆಯನ್ನು ಮಾಡಲು ಅನ್ವರ್ ಮಾಣಿಪ್ಪಾಡಿಯವರಿಗೆ ವರ್ಷಗಳೇ ತಗುಲಿವೆ. ಹಾಗಿರುವಾಗ ಇಂತಹ ಘಟಾನುಘಟಿ ನಾಯಕರ ಜಾತಕದ ಮೂಲ ಹುಡುಕಿ ಹೋಗುವುದೆಂದರೆ ಅದು ಗಂಗೆಯನ್ನು ಭಗೀರಥ ಭೂಮಿಗೆ ತಂದಂತೆ. ಇನ್ನು ಜಾಫರ್ ಶರೀಫ್ ಹಾಗೂ ಧರಂ ಸಿಂಗ್ ಅವರು ನಿಧನರಾಗಿದ್ದಾರೆ. ಅವರ ಹೆಸರುಗಳು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇವರ ಕುಟುಂಬ ವರ್ಗ ಆ ಆಸ್ತಿಯನ್ನು ನೋಡಿಕೊಳ್ಳುತ್ತಿದೆಯಾ, ಹಾಗಾದರೆ ಇವರ ಹೆಸರಿನ ಆಸ್ತಿ ಯಾರ ಹೆಸರಿಗೆ ಹೋಗಿದೆ? ಅವರಿಂದ ಎಲ್ಲಿಯಾದರೂ ಬೇರೆಯವರ ಹೆಸರಿಗೆ ಶಿಫ್ಟ್ ಆಗಿದೆಯಾ? ಅದನ್ನು ಕೂಡ ನೋಡಬೇಕು. ಇನ್ನು ಮಲ್ಲಿಕಾರ್ಜುನ ಖರ್ಗೆಯವರು ಕೂಡ ವಕ್ಫ್ ಆಸ್ತಿ ಕಬಳಿಸಿದ್ದಾರೆ ಎಂದು ಮಾಣಿಪ್ಪಾಡಿ ವರದಿ ಹೇಳಿದೆ. ಖರ್ಗೆಯವರು ಈ ರಾಜ್ಯದ ಮಾತ್ರವಲ್ಲ, ಈ ದೇಶದ ಪ್ರಭಾವಿ ರಾಜಕಾರಣಿ. ಈಗಂತೂ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇವರನ್ನೆಲ್ಲ ವಿಚಾರಿಸಿ ಅವರ ವಿರುದ್ಧ ತನಿಖೆ ಮಾಡಲು ಸಾಧ್ಯವೇ? ಅವರಿಗೆ ಒಂದು ನೋಟಿಸು ಕೊಡಲು ಹೋದರೆ ಎಲ್ಲೆಲ್ಲಿಂದ ಕಾಲ್ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದಾನಂದ ಗೌಡ ಮುಖ್ಯಮಂತ್ರಿಯಾಗಿರುವಾಗ ಸದನದಲ್ಲಿ ಮಂಡಿಸಿ ಅಂತಿಮ ಪರಿಹಾರ ಕಾಣಬೇಕಾದ ವರದಿ ಈಗ ಬಸವರಾಜ್ ಬೊಮ್ಮಾಯಿಯವರ ಮುಖ್ಯಮಂತ್ರಿ ಅವಧಿ ಮುಗಿಯುತ್ತಾ ಬಂದರೂ ಏನೂ ಆಗಿಲ್ಲ ಎಂದರೆ ಅದರ ಬೇರುಗಳು ಎಲ್ಲೆಲ್ಲಿ ಹರಡಿಕೊಂಡಿವೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಖರ್ಗೆಯಂತವರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳದೇ ಬೇರೆಯವರ ವಿರುದ್ಧ ಮಾತ್ರ ಏನಾದರೂ ಮಾಡಲು ಹೋದರೆ ಇವರಿಗೆ ತಿಮಿಂಗಿಲ ಹಿಡಿಯಲು ಧೈರ್ಯ ಇಲ್ಲ. ಇವರು ಚಿಕ್ಕ ಮೀನುಗಳಿಗೆ ಮಾತ್ರ ಬಲೆ ಬೀಸಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತದೆ. ಇನ್ನು ವಕ್ಫ್ ಆಸ್ತಿ ನುಂಗಿದವರು ಬಹುತೇಕ ಎಲ್ಲಾ ಜಾತ್ಯಾತೀತ ಪಕ್ಷಗಳಲ್ಲಿಯೂ ಇದ್ದಾರೆ. ಉದಾಹರಣೆಗೆ ಸಿಎಂ ಇಬ್ರಾಹಿಂ. ಇವರು ಈಗ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರು. ಮಾತನಾಡುವುದು ದೊಡ್ಡ ದೊಡ್ಡ ವೇದವಾಕ್ಯಗಳು. ಆದರೆ ಇವರು ಕೂಡ ವಕ್ಫ್ ಆಸ್ತಿ ನುಂಗಿ ನೀರು ಕುಡಿದಿರುವ ಫಲಾನುಭವಿ ಎಂದು ಹೇಳಲಾಗುತ್ತದೆ. ಇನ್ನು ಇದರ ಹಿಂದೆ ಚುನಾವಣಾ ಲೆಕ್ಕಾಚಾರಗಳು ಕೂಡ ಇದೆ. ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರ ವಿರುದ್ಧ ನೇರವಾಗಿ ಕ್ರಮ ತೆಗೆದುಕೊಂಡರೆ ಆಗ ಭಾರತೀಯ ಜನತಾ ಪಾರ್ಟಿಯ ಸರಕಾರ ಒಕ್ಕಲಿಗ ವಿರೋಧಿ ಸರಕಾರ ಎಂದು ಕುಮಾರಸ್ವಾಮಿಯವರು ಹೇಳಿಕೆ ಕೊಡುತ್ತಾರೆ. ನಿಮ್ಮ ಅಧ್ಯಕ್ಷರ ವಿರುದ್ಧ, ಅವರು ತಪ್ಪು ಮಾಡಿರುವ ಬಗ್ಗೆ ಕ್ರಮ ತೆಗೆದುಕೊಂಡರೆ ಅದು ಒಕ್ಕಲಿಗ ವಿರೋಧಿ ಹೇಗೆ ಆಗುತ್ತದೆ ಎಂದು ಕೇಳಿದರೆ ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಮತ್ತು ನಮ್ಮ ಮತಬ್ಯಾಂಕ್ ಆಗಿರುವ ಮುಸ್ಲಿಮರಿಗೆ ನಮ್ಮ ಪಕ್ಷದ ಬಗ್ಗೆ ಗೌರವ ಕಡಿಮೆ ಮಾಡಲು ಕಾಂಗ್ರೆಸ್ಸಿನ ಕೆಲವು ಮುಖಂಡರು ಬಿಜೆಪಿ ಸರಕಾರದೊಂದಿಗೆ ಸೇರಿ ಹೀಗೆ ಮಾಡುತ್ತಿದ್ದಾರೆ ಎಂದು ಕೂಡ ಕುಮಾರಸ್ವಾಮಿ ಹೇಳುತ್ತಾರೆ. ಇದರಿಂದ ಏನಾಗುತ್ತದೆ? ಬಿಜೆಪಿ ಒಕ್ಕಲಿಗ ವಿರೋಧಿ ಎನ್ನುವ ಹಣೆಪಟ್ಟಿ ಬರುತ್ತದೆ. ಸರಿಯಾಗಿ ನೋಡಿದರೆ ವಕ್ಫ್ ಆಸ್ತಿಗೂ, ಒಕ್ಕಲಿಗರಿಗೂ ಸಂಬಂಧವೇ ಇಲ್ಲ. ಇನ್ನು ಚುನಾವಣೆಗೆ ಬೆರಳೆಣಿಕೆಯ ತಿಂಗಳುಗಳು ಇರುವಾಗ ಏನೂ ಕಾರಣವಿಲ್ಲದೇ ಒಕ್ಕಲಿಗ ವಿರೋಧಿ ಎನ್ನುವ ಪಟ್ಟ ಸುಮ್ಮನೆ ತೆಗೆದುಕೊಳ್ಳುವುದು ಯಾಕೆ ಎನ್ನುವ ಪ್ರಶ್ನೆ ರಾಜ್ಯ ಸರಕಾರದ ಮುಂದೆ ಇದೆ. ಹಾಗೆ ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗದೇ ಬಿಜೆಪಿಯ ರಾಜ್ಯ ಸರಕಾರ ಒದ್ದಾಡುತ್ತಿರುವಾಗ ಇತ್ತ ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕಬಳಿಸಿರುವ ವಕ್ಫ್ ಆಸ್ತಿಯನ್ನು ಮರಳಿ ವಕ್ಫ್ ಬೋರ್ಡಿಗೆ ತರಲು ರಾಜ್ಯ ಸರಕಾರ ಪ್ರಯತ್ನ ಮಾಡುತ್ತಿಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದಾರೆ. ಇನ್ನು ಒಂದು ವೇಳೆ ಏನಾದರೂ ಮಾಡಿ ಯಾರ ವಿರುದ್ಧವಾದರೂ ಕ್ರಮ ತೆಗೆದುಕೊಳ್ಳಲು ಮುಂದಾಗಿ ಒಂದಿಷ್ಟು ಆಸ್ತಿ ವಕ್ಫ್ ಬೋರ್ಡಿಗೆ ಹಿಂತಿರುಗಿತು ಎಂದೇ ಇಟ್ಟುಕೊಳ್ಳೋಣ. ಖುಷಿಯಾಗುವ ಮುಸ್ಲಿಮರು ಬಿಜೆಪಿಗೆ ಏನು ವೋಟ್ ಹಾಕಲ್ಲ. ಹಾಗಿರುವಾಗ ಏನು ಮಾಡಿ ಏನು ಪ್ರಯೋಜನ. ಬೆಸ್ಟ್ ಎಂದರೆ ವರದಿಯನ್ನು ಕೈಯಲ್ಲಿ ಹಿಡಿದು ಆಗಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮುಸ್ಲಿಂ ಮುಖಂಡರನ್ನು ಹೆದರಿಸುತ್ತಾ ಇರಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.
ಯಾರು ಯಾರನ್ನು ಹೆದರಿಸಲು ಹೊರಟಿದ್ದಾರೋ, ಬಿಡುತ್ತಾರೋ ಆದರೆ ಈ ವಕ್ಫ್ ಆಸ್ತಿ ವಿಚಾರ ಅಂದುಕೊಂಡಷ್ಟು ಸುಲಭವಾಗಿಲ್ಲ. ಬೇಕಾದರೆ ತಮಿಳುನಾಡಿನ ತ್ರಿಚಿ ಎನ್ನುವ ಜಿಲ್ಲೆಯ ತ್ರಿರುಚಿಧರಾಯಿ ಎನ್ನುವ ಗ್ರಾಮ ಇದೆ. ಅಲ್ಲಿ ಒಂದಿಷ್ಟು ಮುಸ್ಲಿಂ ಕುಟುಂಬಗಳು ಬಿಟ್ಟರೆ ಹೆಚ್ಚಿನವು ಹಿಂದೂ ಸಮುದಾಯವರು ವಾಸಿಸುವ ಗ್ರಾಮ ಎಂದೇ ಹೇಳಬಹುದು. ಆ ಗ್ರಾಮಕ್ಕೆ ಗ್ರಾಮವೇ ಈಗ ವಕ್ಫ್ ಬೋರ್ಡ್ ಆಸ್ತಿ ಎಂದು ಗುರುತಿಸಲ್ಪಟ್ಟಿದೆ. ಇದು ಅಲ್ಲಿ ವಾಸಿಸುವ ಹಿಂದೂ ಕುಟುಂಬಗಳಿಗೆ ಗೊತ್ತೆ ಇರಲಿಲ್ಲ. ಯಾಕೆಂದರೆ ಅವರೆಲ್ಲ ತಮ್ಮ ಹಣದಲ್ಲಿ ಅಲ್ಲಿ ಭೂಮಿಯನ್ನು ಖರೀದಿಸಿ ಕಾನೂನುಬದ್ಧವಾಗಿ ತಮ್ಮ ಹೆಸರಿನಲ್ಲಿ ಅದನ್ನು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಒಬ್ಬ ವ್ಯಕ್ತಿ ತಮ್ಮ ಭೂಮಿಯನ್ನು ಮಾರುವ ನಿಟ್ಟಿನಲ್ಲಿ ರಿಜಿಸ್ಟ್ರಾರ್ ಕಚೇರಿಗೆ ನೋಂದಾಯಿಸಲು ಹೋದಾಗಲೇ ಅವರಿಗೆ ತಾವು ವಾಸಿಸುವ ಮತ್ತು ತಾವು ಮಾರಲಿರುವ ಭೂಮಿ ತಮ್ಮ ಹೆಸರಿನಲ್ಲಿ ಇಲ್ಲ, ಅದೀಗ ವಕ್ಫ್ ಭೂಮಿ ಆಗಿದೆ ಎಂದು ಗೊತ್ತಾದದ್ದು. ಅದನ್ನು ಮತ್ತೆ ಹಿಂದಕ್ಕೆ ಪಡೆಯಲು ಒಂದು ವರುಷದ ಕಾಲಾವಧಿ ಇತ್ತಂತೆ. ಅದರೊಳಗೆ ವಕ್ಫ್ ಮಂಡಳಿಯಲ್ಲಿ ಪ್ರಕರಣ ದಾಖಲಿಸಿ ಹೋರಾಡಿ ಸಿಕ್ಕಿದರೆ ಅದೃಷ್ಟ ಎಂದು ಪಡೆಯಬೇಕು. ಆದರೆ ಈಗ ಕಾಲ ಮಿಂಚಿ ಹೋಗಿದೆ ಎಂದು ರಿಜಿಸ್ಟ್ರಾರ್ ಹೇಳಿದಾಗ ಆ ವ್ಯಕ್ತಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿತ್ತು. ಅಷ್ಟಕ್ಕೂ ವಕ್ಫ್ ಬೋರ್ಡಿನಲ್ಲಿ ಇರುವ ಈ ದೇಶದ 410 ಲಕ್ಷ ಕೋಟಿ ರೂಪಾಯಿ ಆಸ್ತಿ ಔರಾಂಗಜೇಬ್ ಏನೂ ತಂದದ್ದಲ್ಲ. ಅದು ಈ ದೇಶದ ಸನಾತನಿಗಳ ಭೂಮಿ. ಇಲ್ಲಿಯ ಭೂಮಿಯನ್ನೇ ಕೊಳ್ಳೆ ಹೊಡೆದು ಇಲ್ಲಿನ ಹಿಂದೂಗಳನ್ನೇ ನಿರ್ವಸಿತರನ್ನಾಗಿ ಮಾಡುವ ಯೋಜನೆ ಮುಂದುವರೆದು ಒಂದು ದಿನ ಹಿಂದೂಗಳು ಒಂದು ಸೆಂಟ್ಸ್ ಜಾಗಕ್ಕೆ ವಕ್ಫ್ ಬೋರ್ಡ್ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಾಗುವ ಪರಿಸ್ಥಿತಿ ಬರಬಹುದು!
Leave A Reply