ರಾಮ,ಹನುಮ ಜಪ ಮಾಡಲು ಈಗ “ಸಿದ್ಧ”
ಐದು ವರ್ಷಗಳಿಗೊಮ್ಮೆ ಚುನಾವಣೆ ಹತ್ತಿರ ಬರುವಾಗಲಾದರೂ ಹಿಂದೂ ದೇವರು ಕಾಂಗ್ರೆಸ್ಸಿನ ಕೆಲವರಿಗೆ ನೆನಪಾಗುತ್ತದೆಯಲ್ಲ. ಅದೇ ಹಿಂದೂಗಳ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು. ಇದೇ ಸಿದ್ದು ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದಾಗ ಹನುಮ ಜಯಂತಿಯಂದು ಗಡದ್ದಾಗಿ ಮಾಂಸಾಹಾರವನ್ನು ಸೇವಿಸುತ್ತಾ ಗಮ್ಮತ್ ಮಾಡುತ್ತಿದ್ದರು. ಆಗ ಪಕ್ಕದಲ್ಲಿ ಇದ್ದ ಸ್ಥಳೀಯ ಮುಖಂಡರೊಬ್ಬರು ಮಾಂಸಾಹಾರ ಸೇವಿಸದೇ ಅನ್ನ ಸಾರು ಊಟ ಮಾಡುತ್ತಿದ್ದಾಗ ಅವನಿಗೆ “ಯಾಕೋ ನಾನ್ ವೆಜ್ ತಿನ್ನಲ್ಲ” ಎಂದು ಸಿದ್ದು ಕೇಳಿದ್ದಾರೆ. ಅದಕ್ಕೆ ಅವನು ಇವತ್ತು ಹನುಮ ಜಯಂತಿ ಸರ್ ಎಂದಿದ್ದಾನೆ. ಅದಕ್ಕೆ ಸಿದ್ದು ” ಏಯ್ ಯಾವ ಜಯಂತಿ ಕಣ್ಲಾ, ನಿನಗೇನೂ ಹನುಮ ಹುಟ್ಟಿದ ತಾರೀಕು ಗೊತ್ತಾ” ಎಂದು ವ್ಯಂಗ್ಯ ಮಾಡಿ ಹೇಳಿದ್ದಾರೆ. ಇಂತಹ ಸಿದ್ದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಹನುಮಂತನ ಪರಾಕ್ರಮದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಗಳಿ ಬರೆದಿದ್ದಾರೆ. ಹನುಮಂತ ಸ್ವಾಮಿನಿಷ್ಟೆ, ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆ ಸರ್ವಕಾಲಕ್ಕೂ ಆದರಣೀಯ. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಶಾಶ್ವತವಾಗಿ ನೆಲೆಸಲು ಹನುಮ ಜಯಂತಿಯು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದಿದ್ದಾರೆ. ನಾಡಬಂಧುಗಳಿಗೆ ಹನುಮ ಜಯಂತಿಯ ಶುಭಾಶಯಗಳನ್ನು ಕೂಡ ಹಾರೈಸಿದ್ದಾರೆ.
ಹಾಗಾದರೆ ಆವತ್ತು ಯಾರೋ “ಇವತ್ತು ಹನುಮ ಜಯಂತಿ ಸರ್” ಎಂದಾಗ ನಿನಗೆ ಹನುಮ ಹುಟ್ಟಿದ ತಾರೀಕು ಗೊತ್ತಾ ಎಂದು ಕೇಳಿದ ಸಿದ್ದುವಿಗೆ ಈಗ ತಾರೀಕು ನೆನಪಾಯಿತಾ? ಹಾಗಾದರೆ ಈಗ ಜ್ಙಾನೋದಯವಾಯಿತಾ ಎನ್ನುವ ಪ್ರಶ್ನೆ ಮೂಡುತ್ತದೆ. ನಿಮಗೆ ಹನುಮಂತ ಅಥವಾ ಯಾವುದೇ ಹಿಂದೂ ದೇವರ ಬಗ್ಗೆ ಶ್ರದ್ಧೆ, ಭಕ್ತಿ, ಗೌರವ, ಆರಾಧನಾ ಮನೋಭಾವ ಇಲ್ಲದೆ ಹೋದರೆ ಅದು ಜೀವಮಾನವೀಡಿ ಇರಲೇಬಾರದು. ಅಧಿಕಾರಕ್ಕೆ ಬಂದ ಕೂಡಲೇ ಒಂದು ರೀತಿ, ಚುನಾವಣೆ ಹತ್ತಿರ ಬರುವಾಗ ಇನ್ನೊಂದು ರೀತಿ ಎಂದರೆ ಅದು ಸಮಯಸಾಧಕತನ ಅಲ್ಲದೇ ಮತ್ತೇನು? ನಿಮಗೆ ಹಿಂದೂಗಳ ಮತ ಬೇಕು. ಅವರ ಶ್ರದ್ಧಾ ಕೇಂದ್ರಗಳ ಬಗ್ಗೆ ಗೌರವವಿಲ್ಲ. ಮಾಂಸ ತಿಂದು ಬೇಕಾದರೂ ಹೋಗುತ್ತೇನೆ ಎನ್ನುತ್ತೀರಿ. ನಿನ್ನೆ ತಿಂದವರು ಇವತ್ತು ಹೋಗಲ್ವಾ ಎನ್ನುತ್ತೀರಿ. ಇರಲಿ, ಅದು ನಿಮ್ಮ ವೈಯಕ್ತಿಕ ತೆವಲು ಎಂದೇ ಅಂದುಕೊಳ್ಳೋಣ. ಆದರೆ ಹನುಮ ಜಯಂತಿಯ ದಿನ ಹನುಮ ಹುಟ್ಟಿದ ತಾರೀಕು ಗೊತ್ತಾ ಎಂದು ಛೇಡಿಸುವುದು, ಬೇರೆಯವರ ಭಾವನೆಗಳಿಗೆ ದಕ್ಕೆ ಮಾಡುವುದು ಇದೆಯಲ್ಲ, ಅದು ಹಿಂದೂ ಧರ್ಮ ಕಲಿಸಿದ ಪಾಠ ಅಲ್ಲ. ನನ್ನದು ಹಿಂದೂತ್ವ ಅಲ್ಲ, ಹಿಂದೂತ್ವದ ಮೇಲೆ ವಿಶ್ವಾಸ ಇಲ್ಲ ಎನ್ನುತ್ತಿರಿ. ಹಿಂದೂ ಧರ್ಮ ಮತ್ತು ಹಿಂದೂತ್ವ ಬೇರೆ ಬೇರೆ ಎನ್ನುತ್ತೀರಿ. ಹಾಗಾದರೆ ಹಿಂದೂ ಧರ್ಮದಲ್ಲಿ ನಮ್ಮ ದೇವರಾದ ಹನುಮಂತನ ಹುಟ್ಟಿದ ದಿನ ನಿಮಗೆ ಗೊತ್ತಿಲ್ಲ ಎನ್ನುವುದಾದರೆ ಈಗ ಪೋಸ್ಟರ್ ಹಾಕಿದ್ದು ಯಾಕೆ? ಸಿದ್ದು ಸ್ವಭಾವತ: ನಾಸ್ತಿಕ ಎನ್ನುವುದು ಅವರ ಸಂಗಡ ಇದ್ದವರಿಗೆ ಗೊತ್ತು. ಈ ಮನುಷ್ಯ ದೇವರನ್ನು ನಂಬುವುದಿಲ್ಲ. ಸರಿ, ಅಂತವರಿಗೆ ಕೂಡ ಹಿಂದೂ ಧರ್ಮದಲ್ಲಿ ಬಾಳಲು ಅವಕಾಶ ಇದೆ. ಅಂತವರಲ್ಲಿ ಕೆಲವರು ದೇವರನ್ನು ಹೀಗಳೆಯುವುದು, ಟೀಕಿಸುವುದು ಮಾಡುತ್ತಲೇ ಇರುತ್ತಾರೆ. ಆದರೆ ಕಾಂಗ್ರೆಸ್ಸಿನಲ್ಲಿರುವ ಓತಿಕ್ಯಾತಗಳು ಮಾತ್ರ ಸಮಯ ಬಂದಾಗ ತಮ್ಮ ಬಣ್ಣ ಬದಲಾಯಿಸುತ್ತವೆ.
ಉದಾಹರಣೆಗೆ ರಾಷ್ಟ್ರದ ಕಾಂಗ್ರೆಸ್ ನಾಯಕರನ್ನೇ ತೆಗೆದುಕೊಳ್ಳಿ. ಶ್ರೀರಾಮಚಂದ್ರ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದೇ ಅವರು ವಾದಿಸಿದ್ದರು. ರಾಮಸೇತು ಒಂದು ಕಾಲ್ಪನಿಕ ವಸ್ತು ಎಂದೇ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ರಾಮ ಮಂದಿರ ನಿರ್ಮಾಣದ ವಿರುದ್ಧ ವರ್ಷಗಟ್ಟಲೆ ನ್ಯಾಯಾಲಯದಲ್ಲಿ ಪ್ರಕರಣ ದೂಡುತ್ತಾ ಬಂದರು. ಕೊನೆಗೆ ಎಲ್ಲಾ ಕಡೆ ಸೋಲಾಗುತ್ತಿದ್ದಂತೆ ದಾರಿಗೆ ಬಂದರು. ಅದರಲ್ಲಿಯೂ ಚುನಾವಣೆ ಹತ್ತಿರ ಬಂದಾಗ ದೆಹಲಿಯ ಜನಪಥ್ 10 ರಲ್ಲಿ ಅಣ್ಣ ಮತ್ತು ತಂಗಿ ಹೇಗೆ ಬದಲಾಗುತ್ತಾರೆ ಎಂದರೆ ದೇವಸ್ಥಾನದ ಅರ್ಚಕರೇ ನಾಚಬೇಕು. ಹಾಗೆ ತಮ್ಮ ದಿರಿಸನ್ನು ಬದಲಾಯಿಸುತ್ತಾರೆ. ರಾಹುಲ್ ಜನಿವಾರ ಧರಿಸುತ್ತಾರೆ. ನಾಮ ಎಳೆದುಕೊಳ್ಳುತ್ತಾರೆ. ಎಲ್ಲವನ್ನು ಧರಿಸಿ ದೇವಸ್ಥಾನಗಳ ಹಿಂದೆ, ಮುಂದೆ ತಿರುಗುತ್ತಾರೆ. ಅದೇ ಚುನಾವಣೆ ಮುಗಿಯಿತಾ “ರಾಮ್ ಕೋನ್ ಹೇ” ಎನ್ನುತ್ತಾರೆ.
ಅಂತಹುದೇ ಒಂದು ಸ್ಯಾಂಪಲ್ ಮಂಗಳೂರು ನಗರ ದಕ್ಷಿಣದಲ್ಲಿದೆ. ಇಲ್ಲಿ ಒಬ್ಬರು ಮಾಜಿ ಶಾಸಕರಿದ್ದಾರೆ. ಸರಕಾರಿ ಅಧಿಕಾರಿಯಾಗಿಯೂ ಕೆಲಸ ಮಾಡಿದವರು. ಅವರಿಗೆ ಎಷ್ಟರಮಟ್ಟಿಗೆ ತಮ್ಮ ಮತದ ಓಲೈಕೆಯೆಂದರೆ ಒಳಗೊಳಗೆ ಹಿಂದೂಗಳ ಮೇಲೆ ಅಸಾಧ್ಯ ಮತ್ಸರ ಇದೆ. ತಮ್ಮ ಕೆಲಸದ ಅವಧಿಯಲ್ಲಿ ಒಮ್ಮೆ 17 ಮಂದಿ ಹಿಂದೂಗಳನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದರು. ಇಂತವರು ಕೂಡ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹನುಮ ಜಯಂತಿಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನಮಸ್ಕರಿಸುತ್ತಿದ್ದಾರೆ. ಎಲ್ಲವೂ ಚುನಾವಣೆಯ ಮಹಿಮೆ. ಈಗ ಸಿದ್ದುವಿಗೂ ರಾಮ ಬೇಕು. ರಾಮನವಮಿ ನೆನಪಾಗುತ್ತದೆ. ರಾಮನವಮಿಯ ಪೋಸ್ಟರ್ ಮಾಡಬೇಕು ಎಂದು ಅನಿಸುತ್ತದೆ. ಅದೇ ಇವರ ಕೈಯಲ್ಲಿ ಅಧಿಕಾರ ಕೊಟ್ಟರೆ ರಾಮನೂ ಬೇಡಾ, ಹನುಮನೂ ಬೇಡಾ ಎನ್ನುತ್ತಾರೆ!!
Leave A Reply