ಟಿಕೆಟ್ ಸಿಗದಿದ್ದರೆ ಅಳುವುದು ಯಾಕೆ?
Posted On April 12, 2023
ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದವರು ಈ ವಾರ ಕಾಣಸಿಗುತ್ತಾರೆ. ಕಷ್ಟಕಾಲದಲ್ಲಿ ಪಕ್ಷ ಕೈ ಕೊಟ್ಟಿದೆ ಎಂದು ಅಳುವವರು ಈಗ ಸಿಗುತ್ತಾರೆ. ಈ ಪಕ್ಷದಲ್ಲಿ ಅವಕಾಶ ಸಿಗದಿದ್ದರೆ ಬೇರೆ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುವವರು ಈಗ ಕೈಗೊಂದು ಕಾಲಿಗೊಂದು ಸಿಗುತ್ತಾರೆ. ನನ್ನ ಬೆಂಬಲಿಗರನ್ನು ಕೇಳಿ ಸ್ಪರ್ಧಿಸುತ್ತೇನೆ, ನನ್ನ ಕ್ಷೇತ್ರದ ಮತದಾರರ ಮಾತೇ ಅಂತಿಮ ಅಂದು ಹೇಳುತ್ತಾ ಬಂಡಾಯದ ಸಭೆ ಮಾಡುವವರು ಜಿಲ್ಲೆಗೆ ಇಬ್ಬರು ಸಿಕ್ಕೇ ಸಿಗುತ್ತಾರೆ. ಹಾಗಾದ್ರೆ ಜನಸೇವೆ ಮಾಡಲು ಈ ಪರಿ ನಾಟಕ ಬೇಕಾ ಎನ್ನುವ ಆಶ್ಚರ್ಯ ಈ ಕಾಲದಲ್ಲಿ ಯಾರಿಗೂ ಆಗುವುದಿಲ್ಲ. ಯಾಕೆಂದ್ರೆ ರಾಜಕೀಯ ಎಂದರೆ ತಮ್ಮ ವ್ಯಾಪಾರ, ವ್ಯವಹಾರಕ್ಕೆ ದೊಡ್ಡ ಮಾಲ್ ಸಿಕ್ಕಿದ ಹಾಗೆ ಎನ್ನುವ ವಾತಾವರಣ ಸೃಷ್ಟಿಯಾಗಿ ದಶಕಗಳು ಕಳೆದು ಹೋಗಿದೆ. ಅಧಿಕಾರಕ್ಕೆ ಬರಲು ಯಾರನ್ನು ಯಾವ ಪಕ್ಷದಿಂದ ಎತ್ತಾಕಿಕೊಂಡು ಬರಬೇಕು ಎಂದು ಬಳ್ಳಾರಿಯ ಮಣ್ಣಿನಲ್ಲಿ ಚಿನ್ನ ನೋಡಿದವರು ಯಾವಾಗ ಮೊದಲ ಬಾರಿಗೆ ಅಬ್ಬರಿಸಿದರೋ ಆಗಲೇ ಕರ್ನಾಟಕದ ರಾಜಕೀಯ ಅಕ್ಷರಶ: ಬ್ಲ್ಯಾಕ್ ಅಂಡ್ ವೈಟ್ ನಿಂದ ತ್ರಿಡಿಗೆ ಬಂದು ಆಗಿತ್ತು. ಹಾಗಂತ ಅದರ ಮೊದಲು ಭ್ರಷ್ಟಾಚಾರ ಇರಲಿಲ್ಲವಾ? ಎಂದು ನೀವು ಕೇಳಬಹುದು. ಇತ್ತು, ಇಷ್ಟೇ ಅಥವಾ ಇದಕ್ಕಿಂತ ಹೆಚ್ಚೇ ಇರಬಹುದು. ಇದಕ್ಕೆ ಅಂದಿನ ಪ್ರಧಾನಿ ರಾಜೀವ್ ಹೇಳಿದ ಮಾತೇ ಸಾಕ್ಷಿ. ದೆಹಲಿಯಿಂದ ಒಂದು ರೂಪಾಯಿ ಕಳುಹಿಸಿದರೆ ಕಟ್ಟಕಡೆಯ ಫಲಾನುಭವಿಗಳಿಗೆ ಸಿಗುವಾಗ 15 ಪೈಸೆ ಮಾತ್ರ ಉಳಿಯುತ್ತದೆ ಎಂದು ಸತ್ಯವನ್ನೇ ಹೇಳಿದ್ರು ರಾಜೀವ್.
ಆದರೆ ಒಬ್ಬ ಚುನಾಯಿತ ಜನಪ್ರತಿನಿಧಿ ತಿಂಗಳುಗಟ್ಟಲೆ ರೆಸಾರ್ಟ್ ನಲ್ಲಿ ಮಲಗಿ, ಕೋಟಿ ಕೋಟಿ ಬಾಚಿ, ಹೆಲಿಕಾಪ್ಟರ್ ನಲ್ಲಿ ಹತ್ತಿ ಇಳಿದು, ನಿತ್ಯ ಮಾಧ್ಯಮಗಳಲ್ಲಿ ಮಿಂಚಿದರಲ್ಲ ಅದರ ನಂತರ ರಾಜಕೀಯ ರಂಗುರಂಗಾಯಿತು. ಹಾಗಾದ್ರೆ ರೆಡ್ಡಿಗಳೇ ನಿಜವಾದ ಅತೀ ದೊಡ್ಡ ಶ್ರೀಮಂತರಾ? ಇಲ್ಲ, ಅವರಿಗಿಂತ ಹೆಚ್ಚು ಬಾಚಿಕೊಂಡು ಬೆಳೆದಿದ್ದ ಶ್ರೀಮಂತ ಗಣಿಧಣಿಗಳು ಕಾಂಗ್ರೆಸ್ ನಲ್ಲಿ ಆಗಲೇ ಇದ್ದರು. ಆದರೆ ಅವರು ಅದನ್ನು ಪ್ರದರ್ಶನಕ್ಕೆ ಇಟ್ಟಿರಲಿಲ್ಲ. ಯಾವಾಗ ಶಾಸಕನಾಗಿ ಆಯ್ಕೆಯಾದರೆ ಇಂತಹ ಅವಕಾಶಗಳು ಬಾಗಿಲು ಬಡಿಯುತ್ತವೆ ಎಂದು ಶಾಸಕರಿಗೆ ಅನಿಸಿತೋ ಶಾಸಕನಾಗುವುದೇ ಅಂತಿಮ ಧ್ಯೇಯವಾಗಿ ಹೋಯಿತು. ಹಾಗೆ ನೋಡಿದರೆ ತನ್ನ ಖಾಸಗಿ ಜೀವನವನ್ನು ಸಂಪೂರ್ಣ ಮರೆತು, ಸಂಘ, ಸಂಸ್ಥೆಗಳಿಗೆ, ಸಂಘಟನೆಗಳಿಗೆ ದೇಣಿಗೆ ನೀಡುತ್ತಾ, ಮಾಧ್ಯಮಗಳನ್ನು ಸಲಹುತ್ತಾ, ರಾತ್ರಿ ಬೆಳಿಗ್ಗೆ ಎನ್ನದೇ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಹೋಗಲು ಆಗದಿದ್ದಾಗ ಅವರು ಬೇಸರಗೊಂಡು ಎಷ್ಟು ವೋಟ್ ಹೋಯಿತು ಎಂದು ನೊಂದುಕೊಳ್ಳುತ್ತಾ, ಆರಾಮವಾಗಿ ನೈಂಟಿ ಹಾಕಲು ಕೂಡ ಸ್ವಾತಂತ್ರ್ಯವಿಲ್ಲದೇ, ಹೆಂಡತಿ, ಮಕ್ಕಳೊಂದಿಗೆ ಆದಿತ್ಯವಾರದ ಸಂಜೆಯಲ್ಲಿ ಸುತ್ತಾಡಲು ಸಾಧ್ಯವಿಲ್ಲದೆ, ವಿರೋಧಿಗಳು ಏನು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಯೋಚಿಸುತ್ತಾ, ಪಕ್ಷದೊಳಗಿನ ಹಿತಚಿಂತಕರು ಏನು ಮಸಲತ್ತು ಮಾಡುತ್ತಿದ್ದಾರೆ ಎಂದು ಚಿಂತಿಸುತ್ತಾ, ಹೈಕಮಾಂಡಿನ ಮುಖಂಡರನ್ನು ಸಂತೃಪ್ತಿಗೊಳಿಸಲು ಏನು ಮಾಡಬೇಕು ಎಂದು ಲೆಕ್ಕ ಹಾಕುತ್ತಾ, ಇಮೇಜು ಹೆಚ್ಚಿಸಲು ಹೇಗೆ ಇರಬೇಕು ಎಂದು ಪ್ಲಾನ್ ಮಾಡುತ್ತಾ, ಯಾರ ಕಾಲಿಗೆ ಯಾವಾಗ ಬೀಳಬೇಕು ಎಂದು ಬದುಕುವುದೇ ಜನಪ್ರತಿನಿಧಿಯ ಜೀವನ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಹಣ ತುಂಬಾ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎನ್ನುವ ತೂಗುಯ್ಯಾಲೆಯಲ್ಲಿ ಬದುಕುತ್ತಾ ಇರುವುದೇ ಚಿಂತೆಯಾಗಿರುವುದು ಯಾರಿಗೆ ತಾನೆ ಬೇಕು. ಆದರೆ ಹೆಚ್ಚಿನ ರಾಜಕಾರಣಿಗಳು ಅಧಿಕಾರದಲ್ಲಿ ಇರುವಷ್ಟು ದಿನವೂ ಆರೋಗ್ಯಕರವಾಗಿ ಇರುತ್ತಾರಲ್ಲ ಎಂದು ಅನಿಸಬಹುದು. ಅದಕ್ಕೆ ಕಾರಣ ಸೆಳೆತ. ಅಧಿಕಾರದ ಸೆಳೆತ. ಅನೇಕ ಮೈನಸ್ಸುಗಳು ಇದ್ದರೂ, ಖಾಸಗಿ ಜೀವನ ಕಳೆದು ಹೋಗಿದ್ದರೂ ಅಧಿಕಾರ ನಿಮ್ಮಲ್ಲಿ ಒಂದು ಹುಮ್ಮಸ್ಸನ್ನು ಮೂಡಿಸುತ್ತದೆ. ಆದರೆ ನೀವು ಆಡಳಿತ ಪಕ್ಷದಲ್ಲಿ ಇರಬೇಕು ಅಷ್ಟೇ.
ಅದಕ್ಕಾಗಿ ಒಬ್ಬ ಶಾಸಕ ತಾನು ಗೆದ್ದರೂ ತನ್ನ ಪಕ್ಷ ಅಧಿಕಾರದಲ್ಲಿ ಬರದೇ ಹೋದರೆ ತಾನು ಗೆದ್ದೇ ವೇಸ್ಟ್ ಆಯಿತು ಎಂದು ಅಂದುಕೊಳ್ಳುತ್ತಾನೆ. ಯಾಕೆಂದರೆ ಆಲದ ಮರದ ನೆರಳು ಸಿಗುವುದು ಗೆದ್ದವರಿಗೆ ಮಾತ್ರ. ಅದಕ್ಕಾಗಿ ಜಂಪಿಂಗ್ ರಾಜಕೀಯ ಶುರುವಾಗುವುದು. ಆದ್ದರಿಂದ ರಾಜಕಾರಣದ ವರ್ಚಸ್ಸನ್ನು ಸರಿತೂಗಿಸಲು ಮೋದಿ ಮಾಡಬಹುದಾದ ಬಹುದೊಡ್ಡ ಕೆಲಸವೆಂದರೆ ಪಿಂಚಣಿಯನ್ನು ತೆಗೆದು ಹಾಕುವುದು. ಯಾಕೆಂದರೆ ಅದು ಸೇವೆ ಮಾಡುವ ಕ್ಷೇತ್ರ. ಅಲ್ಲಿ ಯಾಕೆ ಪಿಂಚಣಿ. ಇನ್ನು ಸಂಬಳ ತೆಗೆದುಹಾಕಬೇಕು. ಕೆಲವು ಸೌಲಭ್ಯಗಳನ್ನು ಮಾತ್ರ ನೀಡಲಾಗುವುದು ಎಂದು ನಿಯಮ ಬರಬೇಕು. ಇನ್ನು ಎರಡು ಸಲ ಗೆದ್ದ ಶಾಸಕರಿಗೆ ಮತ್ತೆ ಅವಕಾಶ ಇಲ್ಲ. ಒಮ್ಮೆ ಸಚಿವರಾದ ಮೇಲೆ ಮತ್ತೆ ಅವಕಾಶ ಬೇರೆಯವರಿಗೆ ಬಿಟ್ಟುಕೊಡಬೇಕು. ಇನ್ನು ಸೇನೆಯಲ್ಲಿ ಕಡ್ಡಾಯವಾಗಿ ಮೂರು ವರ್ಷ ಸೇವೆ ಸಲ್ಲಿಸಿದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಕೊನೆಯದಾಗಿ ನೀವು ಒಮ್ಮೆ ಗೆದ್ದ ನಂತರ ಆ ಕುಟುಂಬದ ಇನ್ನೊಬ್ಬ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗೆ ನಿಯಮಗಳನ್ನು ಜಾರಿಗೆ ತಂದು, ಪರೀಕ್ಷೆಗಳನ್ನು ನಡೆಸಿ ಚುನಾವಣೆಗೆ ಇಳಿಸಬೇಕು. ಅದು ಬಿಟ್ಟು ಈಗಿನ ರೀತಿಯೇ ಹೋದರೆ ಮೋದಿ ಅಲ್ಲ ದೇವರೇ ಬಂದರೂ ಭ್ರಷ್ಟಾಚಾರ ಅಳಿಸುವುದು ಕಷ್ಟಸಾಧ್ಯ!!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply