ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ಲ ಕೇಜ್ರಿವಾಲ್!!
ನಾನು ಜನಸಾಮಾನ್ಯ. ನನಗೆ 3-4 ಕೋಣೆಯ ಸಣ್ಣ ಮನೆ ಸಾಕು. ಸರಕಾರದ ಬಂಗ್ಲೆ ಬೇಡಾ. ಸರಕಾರದ ಗಾಡಿ ಬೇಡಾ. ನನ್ನ ಬಳಿ ನನ್ನದೇ ಪುಟ್ಟ ಗಾಡಿ ಇದೆ. ಸರಕಾರದ ಸುರಕ್ಷತೆ ಬೇಡಾ. ಜನಸಾಮಾನ್ಯರಾಗಿ ನಾನು ಸುರಕ್ಷತೆ ಪಡೆದುಕೊಳ್ಳುವುದು ಯಾಕೆ? ನಾವು ಸರಕಾರದ ಒಂದು ರೂಪಾಯಿ ಕೂಡ ವೇಸ್ಟ್ ಮಾಡಲ್ಲ. ಸರಕಾರದ ಕೆಲಸ ದೇವರ ಕೆಲಸ. ಹೀಗೆ ನಿಮ್ಮೆದುರು ಹತ್ತು ವರ್ಷಗಳ ಹಿಂದೆ ಗೋಳೋ ಎಂದು ಅಳುತ್ತಾ ಸಿಎಂ ಆಗುವುದಾದರೆ ಇಂತವರು ಸಿಎಂ ಆಗಬೇಕಪ್ಪ ಎಂದು ದೆಹಲಿ ಜನ ಅಂದುಕೊಳ್ಳುತ್ತಿದ್ದಂತೆ ದೆಹಲಿಯ ಅತೀ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಆಯ್ಕೆಯಾಗಿದ್ದರು. ದೆಹಲಿಯ ಜನ ಬಹಳ ಸಿಂಪಲ್ ಆಗಿರುವ ಮುಖ್ಯಮಂತ್ರಿ ನಮಗೆ ಸಿಕ್ಕಿದ್ರು ಎಂದು ಖುಷಿಪಟ್ಟರು. ಮತ್ತೊಂದೆಡೆ ಜನಸಾಮಾನ್ಯರು ನಮ್ಮ ಹಾಗೆ ಸರಳ ಜೀವನ ನಡೆಸುವ ಒಬ್ಬ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಎಂದು ಹೆಮ್ಮೆಪಟ್ಟುಕೊಂಡರು. ಆರಂಭದಲ್ಲಿ ಕೇಜ್ರಿವಾಲ್ ಹಾಗೆ ಇದ್ದರು. ಅವರಿಗೆ ಜನ ತಮ್ಮನ್ನು ಆಯ್ಕೆ ಮಾಡಿರುವುದರ ಹಿಂದಿನ ವಾಸ್ತವ ಅರಿವಿದ್ದ ಕಾರಣ ಮೇಲ್ನೋಟಕ್ಕೆ ಎಲ್ಲರಿಗೂ ಸರಳವಾಗಿ ಕಾಣುವಂತೆ ನಡೆದುಕೊಂಡರು. ಆದರೆ ಮೂರನೇ ಬಾರಿ ದೆಹಲಿಯ ಜನ ತಮಗೆ ಕೇಜ್ರಿವಾಲ್ ಸಿಎಂ ಆಗಲಿ ಎಂದು ನಿರ್ಧರಿಸುತ್ತಿದ್ದ ಹಾಗೆ ಕೇಜ್ರಿ ನಿಧಾನವಾಗಿ ತಮ್ಮ ವರಸೆಯನ್ನು ಬದಲಿಸುತ್ತಾ ಹೋದರು. ಅದಕ್ಕೆ ಈಗ ಸಾಕ್ಷ್ಯ ಸಿಗುತ್ತಿದೆ.
ಯಾವಾಗ ಇಡೀ ದೇಶ ಕೊರೊನಾದ ಕಪಿಮುಷ್ಟಿಯಲ್ಲಿ ನಲುಗುತ್ತಿತ್ತೋ ಆಗ ಕೇಜ್ರಿ ತಮ್ಮ ಮನೆಯನ್ನು ನವೀಕರಣ ಮಾಡುವುದರಲ್ಲಿ ನಿರತರಾಗಿದ್ದರು. ರೋಮ್ ಗೆ ಬೆಂಕಿ ಬಿದ್ದಾಗ ನ್ಯೂರೋ ಪಿಟೀಲು ಊದುತ್ತಿದ್ದನಂತೆ ಎಂಬ ಮಾತನ್ನು ನೀವು ಕೇಳಿರಬಹುದು. ದೇಶದ ರಾಜಧಾನಿಯಲ್ಲಿ ಕೊರೊನಾದ ಎಫೆಕ್ಟ್ ಭೀಕರವಾಗಿತ್ತು. ಆದರೆ ಕೇಜ್ರಿ ಮಾತ್ರ ತಮ್ಮ ಮನೆಯ ಗೋಡೆಗೆ ಯಾವ ಪೇಂಟ್ ಹೊಡೆಯೋಣ, ನೆಲಕ್ಕೆ ಯಾವ ಮಾರ್ಬಲ್ ಹಾಕೋಣ, ಬಾಗಿಲಿಗೆ ಯಾವ ಫಿನಿಶಿಂಗ್ ಕೊಡೋಣ ಎಂದು ಸ್ಕೆಚ್ ಹಾಕುತ್ತಿದ್ದರು. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಮನೆಯನ್ನು ರಿಪೇರಿ ಮಾಡುವುದು ತಪ್ಪಾ ಎಂದು ನೀವು ಕೇಳಬಹುದು. ಆದರೆ ರಿಪೇರಿಗೆ ತಗುಲಿದ ಖರ್ಚು ಗೊತ್ತಾದರೆ ಮಾತ್ರ ನೀವು ಹೌಹಾರಿ ಹೋಗುತ್ತೀರಿ. ಯಾಕೆಂದರೆ ಒಬ್ಬ ಜನಸಾಮಾನ್ಯರ ಸಿಎಂ ಎಂದು ಕರೆಸಿಕೊಂಡವರು ಖರ್ಚು ಮಾಡಿದ್ದು ಎಷ್ಟು ಗೊತ್ತಾ? ಬರೋಬ್ಬರಿ 45 ಕೋಟಿ. ಒಂದೆರಡು ಕೋಟಿಯಾಗಿದ್ದರೂ ಅದು ಆಪ್ ಎನ್ನುವ ಪಕ್ಷಕ್ಕೆ ದೊಡ್ಡ ಮೊತ್ತವೇ ಆಗಿರುತ್ತದೆ. ಯಾಕೆಂದರೆ ಅವರು ತನ್ನದೇ ಪುಟ್ಟ ಮನೆಯಲ್ಲಿ ಇರುತ್ತೇನೆ ಎಂದು ಹೇಳಿ ಅನುಕಂಪ ಗಿಟ್ಟಿಸಿ ಗೆದ್ದವರು. ಹಾಗಿರುವಾಗ ಇಷ್ಟು ಮೊತ್ತ ಬೇಕಿತ್ತಾ ಎನ್ನುವ ಪ್ರಶ್ನೆ ಯಾರಿಗಾದರೂ ಬರುತ್ತದೆ.
ಹೀಗೆ 45 ಕೋಟಿ ರೂಪಾಯಿಗಳು ಯಾಕೆ ಖರ್ಚಾಯಿತು ಎಂದು ನಿಮಗೆ ಅನಿಸಬಹುದು. ಇದು ಹಾಗೆ ಸುಮ್ಮನೆ ಹೇಳಿರುವ ಮೊತ್ತವಲ್ಲ. ಅದನ್ನು ವಿಂಗಡಿಸಿ ನೋಡಿದರೆ ಗೋಡೆ ರಿಪೇರಿಗೆ ತಗುಲಿದ್ದು ನಾಲ್ಕು ಕೋಟಿ ರೂಪಾಯಿ. ಅದೇ ಗೋಡೆಗೆ ಅಲಂಕಾರ ಮಾಡಲು ಪೋಲಾಗಿರುವುದು ಐದು ಕೋಟಿ ರೂಪಾಯಿ. ನೆಲಕ್ಕೆ ಮಾರ್ಬಲ್ ಹಾಕಲಾಗಿದೆ. ಅದಕ್ಕೆ ತಗಲಿದ್ದು ಆರು ಕೋಟಿ 20 ಲಕ್ಷ ರೂಪಾಯಿ. ಇದೆಲ್ಲಾ ಬೇಕಿತ್ತಾ? ಇನ್ನು ಕಿಚನ್, ಕಂಬಗಳು, ಬಾಗಿಲು ಪರದೆ, ಮಾರ್ಬಲ್ ಕಟ್ಟಿಂಗ್, ಇಂಟಿರಿಯಲ್ ಅಲಂಕಾರ ಎಲ್ಲವೂ ಪ್ರತ್ಯೇಕ. ಹೀಗೆ ಆಡಂಬರ, ಡಂಬಾಚಾರ್ ಮಾಡಲು ಇದೇ ಕೇಜ್ರಿಗೆ ಹೇಗೆ ಮನಸ್ಸು ಬರುತ್ತದೆ ಎನ್ನುವುದು ಅವರಿಗೆ ಗೊತ್ತು. ಅವರು ಈ ಬಾರಿ ಆತ್ಮಸಾಕ್ಷಿಯನ್ನು ಬದಿಗೊತ್ತಿ ರಾಜಕೀಯ ಮಾಡಬೇಕು ಎಂದು ಹೊರಟಿರುವಂತಿದೆ. ಯಾಕೆಂದರೆ ಇದೇ ಕೇಜ್ರಿ ಹಿಂದೆ ಹೀಗಿರಲಿಲ್ಲ. ಶೀಲಾ ದೀಕ್ಷಿತ್ ಅವರು ಸಿಎಂ ಆಗಿದ್ದಾಗ ತಮ್ಮ ಬಂಗ್ಲೆಗೆ ಏರ್ ಕಂಡೀಷನರ್ ಹಾಕಲು 25 ಲಕ್ಷ ರೂಪಾಯಿ ಪೋಲು ಮಾಡಿದರು ಎನ್ನುವ ವಿಷಯವನ್ನೇ ಹಿಡಿದುಕೊಂಡು ಕೇಜ್ರಿ ಹೋರಾಟ ಮಾಡಿದವರು. ಧರಣಿ ಕುಳಿತವರು. ರಾಜಕೀಯ ವ್ಯಕ್ತಿಗಳು ಮಾಡುವ ಜನಸಾಮಾನ್ಯರ ತೆರಿಗೆ ಹಣದ ಪೋಲು ವಿಷಯವನ್ನೇ ಇಟ್ಟುಕೊಂಡು ಕೇಜ್ರಿ ಪ್ರತಿಭಟನೆ ಮಾಡಿದ್ದು ಇಡೀ ದೆಹಲಿ ನೋಡಿದೆ. ಜನಪ್ರತಿನಿಧಿಗಳು ನಮ್ಮ ತೆರಿಗೆಯ ಹಣವನ್ನು ಬಹಳ ಸೂಕ್ಷ್ಮವಾಗಿ ಖರ್ಚು ಮಾಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಅಧಿಕಾರಕ್ಕೆ ಬರುವ ಮೊದಲು ಕೇಜ್ರಿ ಹೋರಾಟ ಮಾಡಿದ್ದು ಕೂಡ ನೂರಕ್ಕೆ ನೂರರಷ್ಟು ಸರಿ. ಆದರೆ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಆಗಬಾರದು. ನಾನು ಹೇಳುವುದು ಬೇರೆಯವರಿಗೆ, ನಮಗೆ ಅಲ್ಲ ಎಂದು ಹೇಳಿದರೆ ಅಂತವರನ್ನು ಜನ ನಂಬುವುದಿಲ್ಲ. ಈಗ ಮಾಧ್ಯಮಗಳೇ ಸಾಕ್ಷಿ ಸಮೇತ ಕೇಜ್ರಿ ಜಾತಕವನ್ನು ಬಯಲಿಗೆ ಎಳೆದಿವೆ. ಯಾಕೆಂದರೆ ಹೊರಗಿನಿಂದ ಸಂತನಂತೆ ಬದುಕುವುದು ಮತ್ತು ಒಳಗಿನಿಂದ ಬೇರೆಯದ್ದೇ ರೂಪ ಇಟ್ಟುಕೊಳ್ಳುವುದು ತುಂಬಾ ದಿನ ಮಾಡಲಾಗುವುದಿಲ್ಲ. ಯಾಕೆಂದರೆ ಕೇಜ್ರಿ ಇಷ್ಟು ಡೌಲಿಗೆ ಹಣ ಪಾವತಿಸಿದ್ದು ಸೆಪ್ಟೆಂಬರ್ 1 ರಿಂದ ಜೂನ್ 2021 ರ ಅವಧಿಯಲ್ಲಿ. ತಾನು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಬೆಕ್ಕು ಮಾತ್ರವಲ್ಲ, ಕೇಜ್ರಿ ಕೂಡ ಅಂದುಕೊಂಡಿದ್ದಾರೆ.!
Leave A Reply