ಹೆಣ್ಣು ಕಾಮದ ಸರಕಲ್ಲ!
ನಟಿಯ ಎದುರು *** ಮಾಡಿದವನಿಗೆ ಹೂ ಹಾರ ಹಾಕಿ ಸ್ವಾಗತ!!
ಒಂದು ಹೆಣ್ಣು ಬಸ್ಸಿನಲ್ಲಿ ಹೋಗುವಾಗ ತನ್ನ ಪಕ್ಕದಲ್ಲಿ ಕುಳಿತ ಗಂಡಸೊಬ್ಬ ಅಶ್ಲೀಲವಾಗಿ ವರ್ತಿಸುತ್ತಿದ್ದಾನೆ ಮತ್ತು ದೇಹವನ್ನು ಸ್ಪರ್ಶಿಸಿ ಕೀಟಲೆ ಮಾಡುತ್ತಿದ್ದಾನೆ ಎಂದು ಹೇಳಿ ಆ ಬಗ್ಗೆ ದೂರು ಕೊಟ್ಟಿದ್ದಾಳೆ ಎಂದರೆ ಅದು ಆಕೆ ಪ್ರಚಾರಕ್ಕಾಗಿ ಮಾಡುತ್ತಿದ್ದಾಳೆ ಎಂದು ಅಂದುಕೊಳ್ಳುವಷ್ಟು ನಮ್ಮ ದೇಶದ ನಾಗರಿಕರ ನೈತಿಕತೆ ಇಳಿದಿಲ್ಲ. ಒಂದು ವೇಳೆ ಇಂತಹ ಘಟನೆ ಯಾವುದಾದರೂ ಅರಬ್ ದೇಶದಲ್ಲಿ ಆಗಿದಿದ್ದರೆ ಇಷ್ಟು ಹೊತ್ತಿಗೆ ಆ ಕಾಮುಕ ಜನ್ಮದಲ್ಲಿ ಆ ಬಗ್ಗೆ ಯೋಚಿಸಲಾರದ ಸ್ಥಳಕ್ಕೆ ತಲುಪಿಬಿಡುತ್ತಿದ್ದ. ಆದರೆ ಕೇರಳದ ಕೊಚ್ಚಿಯಲ್ಲಿ ಹೀಗೆ ಮಾಡಿ ಜೈಲು ಸೇರಿದ ಗಂಡಸೊಬ್ಬ ಬಿಡುಗಡೆಯಾಗಿ ಹೊರಗೆ ಬಂದ ಬಳಿಕ ಅವನಿಗೆ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ನೀಡಲಾಗಿದೆ. ಅವನಿಗೆ ಸ್ವಾಗತ ನೀಡಿರುವುದು ಅಖಿಲ ಕೇರಳ ಪುರುಷರ ಸಂಘ.
ದೂರು ಕೊಡುವ ಧೈರ್ಯ?
ಹಾಗಾದರೆ ನಮ್ಮ ಭಾರತದಲ್ಲಿ ಅದರಲ್ಲಿಯೂ ದೇವರ ಸ್ವಂತ ನಾಡು ಕೇರಳದಲ್ಲಿ ಯುವತಿಯರ ಪರಿಸ್ಥಿತಿ ಹೇಗೆ ಇರಬೇಡಾ. ಒಂದು ಹೆಣ್ಣು ಬಸ್ಸಿನಲ್ಲಿ ಹೋಗುವುದು ಎಂದರೆ ಅವಳು ಸುಲಭವಾಗಿ ದಕ್ಕುತ್ತಾಳೆ ಎಂದು ಅರ್ಥವೆ? ಅವಳ ಹತ್ತಿರ ಕುಳಿತುಕೊಳ್ಳುವ ಅವಕಾಶ ಸಿಗುತ್ತದೆ ಎಂದರೆ ಅವಳನ್ನು ಮುಟ್ಟಲು ಅನುಮತಿ ಸಿಕ್ಕಿದೆ ಎಂದು ತಿಳಿದುಕೊಳ್ಳಬೇಕೆ? ಅದರೊಂದಿಗೆ ಆಕೆಯ ಸನಿಹದಲ್ಲಿ ಕುಳಿತು ಪ್ಯಾಂಟಿನ ಜಿಪ್ ತೆಗೆದು ಖಾಸಗಿ ಅಂಗಗಳನ್ನು ಹೊರಗೆ ಹಾಕಿ ಹಸ್ತಮೈಥುನಕ್ಕೆ ಮುಂದಾಗುವುದನ್ನು ಸ್ವಸ್ಥ ಸಮಾಜ ಒಪ್ಪಲು ಸಾಧ್ಯವೇ? ಅವಳು ಈ ಬಗ್ಗೆ ತನ್ನ ಗೋಳನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಧೈರ್ಯ ತೋರಿದ್ದಾಳೆ ಎಂದರೆ ಅವಳು ಪ್ರಚಾರಕ್ಕಾಗಿ ಮಾಡುತ್ತಿದ್ದಾಳೆ ಎಂದು ಆರೋಪಿಸುವವರಿಗೆ ಏನು ಹೇಳುವುದು. ಹೀಗೆ ಚಲಿಸುವ ಬಸ್ಸಿನಲ್ಲಿ ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತು ಕೆಟ್ಟದಾಗಿ ನಡೆದುಕೊಂಡವನ ಹೆಸರು ಸಾವದ್. ಅವನ ಹೆಸರು ಸಾವದ್ ಎನ್ನುವ ಕಾರಣಕ್ಕೆ ಅವನು ತಪ್ಪು ಮಾಡಿಲ್ಲ ಎಂದು ಹೇಳುವುದು ಕೇರಳದಲ್ಲಿ ಮಾತ್ರವೇ? ಅಷ್ಟಕ್ಕೂ ಸಾವದ್ ವಿರುದ್ಧ ದೂರು ದಾಖಲಿಸಲು ಧೈರ್ಯ ತೋರಿದ ಹೆಣ್ಣಮಗಳ ಹೆಸರು ನಂದಿತಾ ಶಂಕರ್. ಆಕೆ ಕೇರಳದ ನಟಿ.
ಹೆಣ್ಣು ಕಾಮದ ಸರಕಲ್ಲ!
ಒಬ್ಬಳು ನಟಿ ಎಂದ ತಕ್ಷಣ ಅವಳು ಸಾರ್ವಜನಿಕ ಸ್ವತ್ತು ಎಂದು ಅಂದುಕೊಳ್ಳಬಾರದು. ಅವಳು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿಭಿನ್ನ ರೀತಿಯ ಫೋಟೋಗಳನ್ನು ಹಾಕಿರಬಹುದು. ಎಂತೆಂತಹ ಪಾತ್ರಗಳನ್ನು ಬೆಳ್ಳಿತೆರೆಯಲ್ಲಿ ಅಭಿನಯಿಸಿರಬಹುದು. ಹಾಗಂತ ಅವಳು ಸಿಕ್ಕಿದ ಕೂಡಲೇ ಅವಳು ಕೈಹಾಕಲು ಏನೂ ಬೊಂಬೆ ಅಲ್ಲ. ಸಾವದ್ ಮಾತ್ರ ಇದನ್ನು ಅರ್ಥ ಮಾಡಿಕೊಂಡಿಲ್ಲ. ಅವನಿಗೆ ನಟಿ ಎಂದರೆ ಕಾಮದ ಸರಕು ಎಂದು ಅನಿಸಿರಬಹುದು. ಅವನ ಬಾಳಿನಲ್ಲಿ ಹೆಣ್ಣಿಗೆ ಏನೂ ಪ್ರಾಧ್ಯಾನತೆ ಇಲ್ಲದೆ ಇರಬಹುದು. ಆದರೆ ಒಟ್ಟು ಸಮಾಜ ಇನ್ನು ಕೂಡ ಸವಾದ್ ನಂತೆ ಯೋಚಿಸುತ್ತಿಲ್ಲ. ಒಂದು ವೇಳೆ ಸವಾದ್ ಹಾಗೆ ಮಾಡಿದ್ದಾನೆ ಎಂದಾದರೆ ಅವನಿಗೆ ಶಿಕ್ಷೆ ಆಗಲೇಬೇಕು. ಆದರೆ ಕಾನೂನು ಅವನಿಗೆ ಎಂತಹ ಶಿಕ್ಷೆಯನ್ನು ಕೊಡುತ್ತದೆ ಎನ್ನುವುದಕ್ಕಿಂತ ಸಮಾಜ ಅವನಿಂದ ಅಂತರ ಕಾಪಾಡಿಕೊಂಡು ಅವನಿಗೆ ತಾನು ಮಾಡಿದ್ದು ತಪ್ಪು ಎಂದು ಅನಿಸುವಂತೆ ಇರಬೇಕು. ಅದು ಬಿಟ್ಟು ಅವನನ್ನು ಏಕಾಂಗಿಯಾಗಿ ಬಿಟ್ಟರೆ ಅವನು ಮಾನಸಿಕವಾಗಿ ನೊಂದುಕೊಳ್ಳುತ್ತಾನೆ. ಅವನ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ಯೋಚನೆಗಳು ಬರುತ್ತವೆ ಎಂದು ಹೇಳಿ ಅವನು ಜೈಲಿನಿಂದ ಹೊರಗೆ ಬಂದ ತಕ್ಷಣ ಹೂವಿನ ಹಾರ ಹಾಕಿ ಸ್ವಾಗತ ಕೋರುವುದು ಎಷ್ಟು ಸರಿ?
ಹಿತೈಷಿಗಳು ಎಂದರೆ ಹೀಗಾ?
ಪ್ರತಿಯೊಬ್ಬರಿಗೂ ಒಂದಿಷ್ಟು ಹಿತೈಷಿಗಳು ಇರುತ್ತಾರೆ. ಅವರು ಅಂತಹ ವ್ಯಕ್ತಿಯ ಹಿತಚಿಂತನೆಯನ್ನು ಮಾಡಬೇಕು ವಿನ: ಅವನು ಮಾಡಿದ ತಪ್ಪು ಕೆಲಸಕ್ಕೆ ಪ್ರೋತ್ಸಾಹ ನೀಡಬಾರದು. ಹಾಗಂತ ಅವನು ಹೀಗೆ ಮಾಡಿದ ತಕ್ಷಣ ಅವನನ್ನು ಮಾನಸಿಕವಾಗಿ ಹಂಗಿಸಿ ಅವನು ಸಾಯಬೇಕು ಎಂದು ಬಯಸುವಷ್ಟು ನಾವು ಕ್ರೂರಿಗಳಲ್ಲ. ಆದರೆ ಅವನಿಗೆ ಹೂ ಹಾರ ಹಾಕಿ ಸ್ವಾಗತಿಸುವಷ್ಟು ಆತ ದೊಡ್ಡ ಜನ ಅಲ್ಲ. ನಾವು ಎಲ್ಲಿ ತಪ್ಪಿದ್ದೇವೆ ಎಂದು ಅಖಿಲ ಕೇರಳ ಪುರುಷರ ಸಂಘ ಯೋಚಿಸಬೇಕು. ಅವರು ಪುರುಷರ ಪರ ಇರಲಿ, ತಪ್ಪಿಲ್ಲ. ಹಾಗಂತ ನಾಳೆ ಭಯೋತ್ಪಾದಕನೊಬ್ಬನಿಗೆ ಹೀಗೆ ಇವರು ಸ್ವಾಗತ ನೀಡಿದರೆ ಒಪ್ಪಲು ಸಾಧ್ಯವಾ
Leave A Reply