ಒಗ್ಗಟ್ಟಿನಿಂದ ಬಿಜೆಪಿ ಹೋರಾಡಲೇ ಇಲ್ಲ!
ಭಾರತೀಯ ಜನತಾ ಪಾರ್ಟಿಯ ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಪರಾಮರ್ಶೆ ಒಂದೊಂದಾಗಿ ಹೊರಗೆ ಬರುತ್ತಿದೆ. ಕೇಂದ್ರದಲ್ಲಿ ಮೋದಿಯವರು ಮಾಡಿದಷ್ಟು ಕೆಲಸವನ್ನು ರಾಜ್ಯದಲ್ಲಿ ಬಿಜೆಪಿ ನಾಯಕರು ಮಾಡಿಲ್ಲದಿರುವುದೇ ಸೋಲಿಗೆ ಒಂದು ಕಾರಣ ಎಂದು ಸಿಟಿ ರವಿ ಹೇಳಿದ್ದರೆ, ಬಿಜೆಪಿಯ ಕೆಲವು ಪಾಳೆಗಾರರು ಸಿದ್ಧರಾಮಯ್ಯ ಜೊತೆ ಚೆನ್ನಾಗಿ ಇದ್ದದ್ದೇ ಸೋಲಿಗೆ ಕಾರಣ ಎಂದು ಪ್ರತಾಪ ಸಿಂಹ ಹೇಳಿದ್ದಾರೆ. ಮುಸ್ಲಿಮರು ತಮ್ಮಿಂದ ಹಣ ಪಡೆದು ಕಾಂಗ್ರೆಸ್ಸಿಗೆ ವೋಟ್ ಹಾಕಿದ್ರು ಎಂದು ಎಂಟಿಬಿ ಹೇಳಿಬಿಟ್ಟಿದ್ದಾರೆ. ಹೀಗೆ ತರಹೇವಾರಿ ಹೇಳಿಕೆಗಳು ಹೊರಗೆ ಬರುತ್ತಾ ಇವೆ. ಒಟ್ಟಿನಲ್ಲಿ ಬಿಜೆಪಿ ಯಾಕೆ ಸೋತಿತು ಎನ್ನುವುದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳು ಇರುವುದು ನಿಜ. ಇನ್ನು ಒಳಗಿನವರೇ ಬಾಯಿಬಿಟ್ಟು ಹೇಳುತ್ತಿರುವುದರಿಂದ ಅಂತಹ ಘಟನೆಗಳು ನಡೆಯದಿರಬಹುದಾದ ಸಾಧ್ಯತೆಗಳು ದಟ್ಟವಾಗಿದೆ. ಹಾಗಾದರೆ ಹಿಂದಿನ ಕಲಬೆರಕೆ ಬಿಜೆಪಿ ಸರಕಾರದಲ್ಲಿ ಆಗಿರುವುದಾದರೂ ಏನು?
ಆಪರೇಶನ್ ನಾಲ್ಕು ವರುಷಗಳ ಬಳಿಕ ರಿಸಲ್ಟ್!
ಸ್ವಾರ್ಥ ತುಂಬಿದ ಕೆಲವು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆತಂದು ಅವರನ್ನು ಸಚಿವರನ್ನಾಗಿಸಿ ನಾಲ್ಕು ವರ್ಷ ಅವರಿಗೆ ಏನು ಬೇಕೋ ಅದನ್ನು ಮಾಡಲು ಅವಕಾಶ ಕೊಟ್ಟು, ಅವರು ಮಾಡಿದ್ದನ್ನು ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳುವ ಮೂಲಕ ರಾಜ್ಯದ ಮೂಲ ಬಿಜೆಪಿ ನಾಯಕರು ವಲಸಿಗರಿಂದಲೇ ತಾವು ಅಧಿಕಾರಕ್ಕೆ ಬಂದಿರುವುದು ಎಂಬ ದಾಸ್ಯಭಾವವನ್ನು ಹೊಂದಿಬಿಟ್ಟಿದ್ದರು. ಅದರಿಂದಲೇ ಸರಕಾರಕ್ಕೆ ಆಗಿರುವ ಡ್ಯಾಮೇಜ್ ಚಿಕ್ಕದ್ದಲ್ಲ. ಹಾಗೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ ಶಾಸಕರು ಸರಕಾರವನ್ನು ಏನೋ ತಂದರು. ಆದರೆ ಅದೇ ಹೊತ್ತಿನಲ್ಲಿ ಅವರು ಸಿದ್ದು ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ಚೆನ್ನಾಗಿಯೇ ಇದ್ದರು. ಇದರಿಂದಲೇ ಅವರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ, ಕಾರ್ಯಕರ್ತರ ನಡುವೆ ಗೊಂದಲ ಏರ್ಪಾಡಾಗಿತ್ತು. ವಲಸೆ ಬಂದವರು ಅತ್ತ ಕಾಂಗ್ರೆಸ್ಸಿಗರೂ ಆಗದೇ, ಇತ್ತ ಬಿಜೆಪಿಗರೂ ಆಗದೇ ಅವರವರ ಕ್ಷೇತ್ರದಲ್ಲಿಯೇ ಎರಡು ದೋಣಿಗಳ ಮೇಲೆ ಕಾಲಿಟ್ಟು ಬಿಟ್ಟಿದ್ದರು. ಅವರು ಮುಂದಿನ ಚುನಾವಣೆಯ ಹೊತ್ತಿನಲ್ಲಿ ಮೂಲ ಪಕ್ಷಕ್ಕೆ ಹೋಗುತ್ತಾರೆ, ನೋಡುತ್ತೀರಿ ಎನ್ನುವ ವಾತಾವರಣವನ್ನು ಕೂಡ ಸೃಷ್ಟಿಸಲಾಯಿತು. ಇನ್ನು ಗೊಂದಲ ಬಿಜೆಪಿಯಲ್ಲಿ ಕೂಡ ಇತ್ತು. ಕೆಲವು ಅತೃಪ್ತ ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಿಂದ ಬೆಂಬಲಿಸಿದರು. ಕೆಲವರು ಮೌನವಾಗಿಯೇ ಕಾಂಗ್ರೆಸ್ಸಿಗೆ ಎದ್ದು ಹೋದರು. ಅಂತವರನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಎಲ್ಲವೂ ಮೋದಿ ಬಂದು ಹೋದ ಮೇಲೆ ಸರಿಯಾಗುತ್ತೆ ಎಂದೇ ರಾಜ್ಯ ನಾಯಕರು ಭಾವಿಸಿಬಿಟ್ಟಿದ್ದರು. ಮೋದಿಜಿಯವರು ರಾಜ್ಯಕ್ಕೆ ಕೊಟ್ಟ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಿಂತ ಜಾಸ್ತಿ ಮೋದಿ ಭಾಷಣ ಮಾಡಿ ಹೋದ ಕೂಡಲೇ ನಾವು ಗೆಲ್ಲುತ್ತೇವೆ ಎಂಬ ಯೋಚನೆಯಲ್ಲಿ ಇಲ್ಲಿನ ನಾಯಕರು ಇದ್ದುಬಿಟ್ಟರು. ಇನ್ನು ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಅವರಿಗೆ ಹೆಸರು ಬರುತ್ತೋ, ಇವರಿಗೆ ಬರುತ್ತೋ ಎನ್ನುವ ಗುಂಪುಗಾರಿಕೆಯಲ್ಲಿ ಒಂದು ತಂಡವಾಗಿ ಆಡಲು ಮಾನಸಿಕ ಸಿದ್ಧತೆಯನ್ನು ರಾಜ್ಯ ನಾಯಕರು ತೋರಿಸಿಯೇ ಇಲ್ಲ.
ಒಗ್ಗಟ್ಟಿನಿಂದ ಬಿಜೆಪಿ ಹೋರಾಡಲೇ ಇಲ್ಲ!
ಒಂದು ಕಾಲದಲ್ಲಿ ಬಿಜೆಪಿ ಎಂದರೆ ಪಕ್ಷವಾಗಿ ಕೆಲಸ ಮಾಡಿ ಅಧಿಕಾರಕ್ಕೆ ಬರುವ ಉತ್ಸಾಹ ಇತ್ತು. ಈ ಬಾರಿ ತಾನು ಹೇಗಾದರೂ ಗೆದ್ದರೆ ಸಾಕು ಎಂಬ ಮನಸ್ಥಿತಿ ಬಂದು ಬಿಟ್ಟಿತ್ತು. ಸಿಎಂ, ರಾಜ್ಯಾಧ್ಯಕ್ಷರು ಬಿಟ್ಟು ಯಾರೂ ಕ್ಷೇತ್ರ ಬಿಟ್ಟು ತುಂಬಾ ಓಡಾಡಲು ಧೈರ್ಯ ತೋರಿಲ್ಲ. ಸ್ವಪಕ್ಷಿಯರೇ ಕಾಲು ಎಳೆಯುತ್ತಾರಾ ಎಂಬ ಆತಂಕ ಒಳಗೊಳಗೆ ಎಲ್ಲರಲ್ಲಿಯೂ ಇತ್ತು. ಯಾರೂ ಹೊರಗೆ ಇದನ್ನು ತೋರಿಸದೇ ಇದ್ದರೂ ಹಲವೆಡೆ ಬಂಡಾಯ ಅಕ್ಷರಶ: ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ಭರಪೂರವಾಗಿತ್ತು. ಕೇಂದ್ರ, ರಾಜ್ಯದ ಅನುದಾನದಿಂದ ರಾಜ್ಯದ ಬಹುತೇಕ ಕಡೆ ಅಭಿವೃದ್ಧಿಗಳು ಸಾಕಷ್ಟು ನಡೆದು ಹೋಗಿತ್ತು. ಆದರೆ ಅಭಿವೃದ್ಧಿ ಎದುರು ಕಾಂಗ್ರೆಸ್ ಹೆಣೆದ 40% ಅಭಿಯಾನ ಬಿಳಿ ಹಾಳೆಯ ಮೇಲೆ ನೀಲಿ ಶಾಯಿಯನ್ನು ಚೆಲ್ಲಿದಂತೆ ಕಾಣುತ್ತಿತ್ತು. ಅದರ ವಿರುದ್ಧ ಬಿಜೆಪಿ ಸ್ವಯಂಘೋಷಿತ ಪರಾಂಪರಾಗತ ಸಚಿವರು, ನಾಯಕರು ಏಕಮನಸ್ಸಿನಿಂದ ಹೋರಾಡಲೇ ಇಲ್ಲ. ಇದರಿಂದ ಜನರಿಗೆ ಬಿಜೆಪಿಯ ಮೇಲೆ ಸಣ್ಣ ಡೌಟು ಇತ್ತು. ಕಾಂಗ್ರೆಸ್ ಪಂಚ ಗ್ಯಾರಂಟಿಗಳು ಅನುಷ್ಟಾನಕ್ಕೆ ಬರಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಾ ಬಂದರೂ ನಾವು ಹಿಂದಿನ ಬಾರಿ ನುಡಿದಂತೆ ನಡೆದಿದ್ದೇವೆ ಎಂದು ಸಿದ್ದು ಹೇಳುತ್ತಾ ಬಂದದ್ದನ್ನು ಜನ ಹೆಚ್ಚಾಗಿ ನಂಬಿದರು. ಅಂತಿಮವಾಗಿ ಜನ ಉಚಿತವಾಗಿ ಸಿಗುವತ್ತ ವಾಲಿದರೆ ವಿನ: ಅದನ್ನು ಕೊಡಲು ಸಾಧ್ಯಾನಾ ಎಂದು ಯೋಚಿಸಲೇ ಇಲ್ಲ.
ಒಟ್ಟಿನಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ಕೆಲವು ನಾಯಕರು ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡು ಆರಾಮವಾಗಿರುತ್ತಾರೆ. ಇಲ್ಲದೇ ಹೋದರೆ ವಿಪಕ್ಷದಲ್ಲಿದ್ದಾಗ ಯಾರ ವಿರುದ್ಧ ಸಿದ್ದು ಆರೋಪ ಹಾಕುತ್ತಿದ್ದರೋ ಅವರ ಮೇಲೆ ಈಗ ತನಿಖೆ ಮಾಡಲು ಮುಂದಾಗಬೇಕು. 40% ಕಮೀಷನ್, ಪಿಎಸ್ ಐ ಹಗರಣ , ಬಿಟ್ ಕಾಯಿನ್ ಹಗರಣ ಎಂದು ಅಬ್ಬರಿಸುತ್ತಿದ್ದ ಸಿದ್ದು, ಡಿಕೆಶಿ ಈಗ ಸೂಕ್ತ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಲು ಮುಂದಾಗಬೇಕು. ಆದರೆ ಸಿದ್ದು, ಡಿಕೆಶಿ ಮಾಡಲ್ಲ. ಯಾಕೆಂದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದು ಅವರ ರಿಡೂ ವಾಚ್, ಅರ್ಕಾವತಿ ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ಬಗ್ಗೆ ಏನೂ ಮಾಡಲೇ ಇಲ್ಲ. ನಾಗರಿಕರಿಗೆ ಇದು ಮನವರಿಕೆ ಆಗಿತ್ತಾ? ಇದೆಲ್ಲವೂ ನಡೆಯುತ್ತಾ ಇರುತ್ತದೆ ಎಂದುಕೊಂಡ್ರಾ? ಒಟ್ಟಿನಲ್ಲಿ ಮತದಾರ ಮಾತ್ರ ನೀವು ರಾಜ್ಯದಲ್ಲಿ ಏನೂ ಬೇಕಾದರೂ ಮಾಡಿ, ನಮಗೆ ಏನು ಫ್ರೀ ಕೊಡುತ್ತೀರಿ ಎಂದು ಹೇಳಿ ಎಂದುಬಿಟ್ಟ. ಸಿಕ್ಕಿದ್ದು ಮಕ್ಕಳ ಪುಣ್ಯ ಎನ್ನುವುದಕ್ಕೆ ಕೊನೆಗೆ ಗೆಲುವಾಯಿತು!
Leave A Reply