ರಾಜಕಾರಣಿಗಳ ಕೃಪೆ ಇದೆ!
ಚುನಾವಣೆಗಳು ಮುಗಿಯುತ್ತಿದ್ದಂತೆ ನಾಯಿಕೊಡೆಗಳಂತೆ ಮಂಗಳೂರಿನ ತುಂಬೆಲ್ಲ ನಿಷೇಧಿತ ಫ್ಲೆಕ್ಸ್ ಗಳದ್ದೇ ಹಾವಳಿ ಜೋರಾಗಿಬಿಟ್ಟಿದೆ. ನಾಯಿ, ಬೆಕ್ಕು, ಕೋತಿಗಳು ಕೂಡ ತಮ್ಮದು ಕೂಡ ಒಂದು ಇರಲಿ ಎಂದು ಫ್ಲೆಕ್ಸ್ ಗಳನ್ನು ಮಾಡಿಸಿ ಹಾಕುತ್ತಿದ್ದಾರೆ. ಅದರಲ್ಲಿ ಬಿಲ್ಡರ್ಸ್ , ಶಾಲೆ, ಕಾಲೇಜುಗಳ ಜಾಹೀರಾತು, ಮಾರ್ಕು ಉತ್ತಮ ಪಡೆದವರಿಗೆ ಶಿಕ್ಷಣ ಸಂಸ್ಥೆಗಳು ಅಭಿನಂದಿಸುವ ಜಾಹೀರಾತು, ಸಿನೆಮಾಗಳ ಫ್ಲೆಕ್ಸ್ ಹೀಗೆ ಧಾರಾಕಾರವಾಗಿ ಫ್ಲೆಕ್ಸ್ ಗಳದ್ದೇ ಕಾರುಬಾರು. ಯಾರೂ ಕೇಳುವವರಿಲ್ಲ ಎನ್ನುವ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಗೆಳೆಯನನ್ನು ಅಭಿನಂದಿಸುವ ಫೆಕ್ಸ್ ಕೂಡ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಅದು ಕೂಡ ಪೊಲೀಸ್ ಠಾಣೆಯ ಸಮೀಪವೇ ಹಾಕುವ ಮೂಲಕ ಅಧಿಕಾರಿ ವರ್ಗವನ್ನೇ ಕೈಲಾಗದವರು ಎನ್ನುವ ರೀತಿಯಲ್ಲಿ ಅಣಕಿಸಲಾಗುತ್ತಿದೆ. ಒಂದು ರೀತಿಯಲ್ಲಿ ಇಡೀ ರಾಜ್ಯದಲ್ಲಿ ಫ್ಲೆಕ್ಸ್ ನಿಷೇಧ ಇದ್ದರೂ ಮಂಗಳೂರಿನಲ್ಲಿ ಮಾತ್ರ ಇದಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲ. ಪಾಲಿಕೆಯ ಎದುರುಗಡೆಯೇ ಫ್ಲೆಕ್ಸ್ ಗಳ ರಾಶಿ ನಿಂತಿರುತ್ತದೆ. ಫ್ಲೆಕ್ಸ್ ಗಳನ್ನು ಹಾಕುವುದನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವತ್ತೋ ನಿಷೇಧಿಸಿರುವುದನ್ನು ಅಧಿಕಾರಿಗಳು ಮರೆತಿರುವಂತೆ ಕಾಣುತ್ತಿದೆ. ಒಂದು ಕಡೆಯಲ್ಲಿ ನಿಷೇಧಿತ ಫ್ಲೆಕ್ಸ್ ಗಳ ಭರಾಟೆಗಳು ಜಾಸ್ತಿಯಾಗುತ್ತಿದ್ದರೂ ಅದರಿಂದ ಪಾಲಿಕೆಗೆ ಆದಾಯ ಎನ್ನುವುದು ಚಿಲ್ಲರೆಗಿಂತ ಕಡಿಮೆ. ನೀವು ಫ್ಲೆಕ್ಸ್ ಗಳನ್ನು ಹಾಕಲು ಅನುಮತಿಯನ್ನು ಪಡೆದುಕೊಳ್ಳುವಾಗ ಅದರಲ್ಲಿ ನಿಷೇಧಿತ ವಸ್ತುಗಳನ್ನು ಬಳಸುವುದಿಲ್ಲ ಮತ್ತು ಕನಿಷ್ಟ ಫ್ಲೆಕ್ಸ್ ಗಳನ್ನು ಹಾಕುತ್ತೇವೆ ಮತ್ತು ಕೆಲವೇ ದಿನಗಳಿಗೆ ಮಾತ್ರ ಎಂದು ಮುಚ್ಚಳಿಕೆ ಬರೆದು ಅದಕ್ಕೆ ತಗಲುವ ಚಿಲ್ಲರೆ ಮೊತ್ತವನ್ನು ಕಟ್ಟಿ ಹೋಗುತ್ತೀರಿ. ಹತ್ತು ಫ್ಲೆಕ್ಸ್ ಗಳಿಗೆ ಅನುಮತಿ ನಾಲ್ಕು ದಿನಕ್ಕೆ ಸಿಕ್ಕಿದರೂ ಅಲ್ಲಿ ವಾಸ್ತವದಲ್ಲಿ ಹತ್ತರ ಬದಲು ನೂರು ಫ್ಲೆಕ್ಸ್ ಗಳನ್ನು ವಾರಗಟ್ಟಲೆ ಹಾಕಲಾಗಿರುತ್ತದೆ. ಇದನ್ನು ನೋಡುವವರು ಯಾರೂ ಇಲ್ಲವೇ ಎಂದು ನೀವು ಕೇಳುತ್ತಿರಿ. ಇದ್ದಾರೆ. ಆದರೆ ಅವರು ಕಣ್ಣಿಗೆ ಪಟ್ಟಿ ಕಾಣಿದ್ದಾರೆ. ಅವರಿಗೆ ಫ್ಲೆಕ್ಸ್ ರಚಿಸುವವರು ನೋಟಿನ ಪಟ್ಟಿ ಮಾಡಿ ಕಣ್ಣಿಗೆ ಲೈಟ್ ಆಗಿ ಕಟ್ಟಿಬಿಟ್ಟಿದ್ದಾರೆ. ನೋಟಿನ ಪರಿಮಳವನ್ನು ಆಘ್ರಾಣಿಸುತ್ತಾ ಅಧಿಕಾರಿಗಳು ಸುಮ್ಮನೆ ಮಲಗಿಬಿಟ್ಟಿದ್ದಾರೆ. ಇಲ್ಲದೆ ಹೋದರೆ ಪಾಲಿಕೆಯ ಕಟ್ಟಡದ ಹೊರಗೆ ಬೇಕಾಬಿಟ್ಟಿ ಫ್ಲೆಕ್ಸ್ ಗಳು ತಮ್ಮ ಸಾಮ್ರಾಜಜ್ಯ ಕಟ್ಟಿದರೂ ಆ ಕಡೆ ಮುಖ ಕೂಡ ತಿರುಗಿಸದೇ ಅಧಿಕಾರಿಗಳು ಮೌನವಾಗಿದ್ದಾರೆ ಎಂದರೆ ಇದರ ಅರ್ಥ ಏನು?
ನಿರ್ಗಮಿತ ಕಮೀಷನರ್ ತಯಾರಾಗಿದ್ರು!
ಚನ್ನಬಸಪ್ಪನವರು ತಾವು ಇಲ್ಲಿಂದ ವರ್ಗಾವಣೆ ಆಗುವ ಮೂರು ದಿನಗಳ ಮೊದಲು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವವರಿದ್ದರು. ಅದಕ್ಕಾಗಿ ಫೈಲ್ ತಯಾರು ಮಾಡಿ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇಲ್ಲಿ ನಿಮಗೆ ವಿಷಯ ಗೊತ್ತಿರುವಂತೆ ಪಾಲಿಕೆಯ ಕಮೀಷನರ್ ಯಾವುದೇ ಸೂಚನೆ ನೀಡಬೇಕಾದರೆ ಅಧಿಕಾರಿ ವರ್ಗ ಅದಕ್ಕೆ ಸೂಕ್ತ ಫೈಲ್ ತಯಾರು ಮಾಡಿ ಅದನ್ನು ಕಮೀಷನರ್ ಮುಂದೆ ಮಂಡಿಸುತ್ತಾರೆ. ಅಲ್ಲಿ ಕಮೀಷನರ್ ಸಹಿ ಹಾಕಿದ ಕೂಡಲೇ ಅಧಿಕಾರಿಗಳು ಸಿಬ್ಬಂದಿಗಳಿಗೆ ಸೂಚನೆ ನೀಡುತ್ತಾರೆ. ಆಗ ಸಿಬ್ಬಂದಿಗಳು ಲಾರಿ ಹಿಡಿದು ಫ್ಲೆಕ್ಸ್ ಕೀಳಲು ಹೊರಡುತ್ತಾರೆ. ಇದು ಇಲ್ಲಿಯ ತನಕ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಆದರೆ ಚನ್ನಬಸಪ್ಪನವರು ಫೈಲ್ ರೆಡಿ ಎಂದು ಸೂಚನೆ ಕೊಟ್ಟ ಬಳಿಕ ಅವರ ವರ್ಗಾವಣೆ ಆದೇಶ ಬಂತು. ಅದರ ನಡುವೆ ಒಂದು ದಿವಸ ಅವರು ಬೆಂಗಳೂರಿನಲ್ಲಿ ಇದ್ದರು. ಅದರ ನಂತರ ಬಂದಾಗ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತು. ಈ ನಡುವೆ ಅವರು ಸಹಿ ಹಾಕಲು ಆಗಲೇ ಇಲ್ಲ. ಇಲ್ಲದೇ ಹೋದರೆ ಇಷ್ಟು ಹೊತ್ತಿಗೆ ಅವರ ಆದೇಶ ಜಾರಿಗೆ ಬರುತ್ತಿತ್ತು. ಆದರೆ ಅವರು ಈಗ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ಹೊಸ ಕಮೀಷನರ್ ಬಂದಿದ್ದಾರೆ. ಅವರಾದರೂ ಇದನ್ನು ಒಂದು ವ್ರತದಂತೆ ಆಚರಿಸುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.
ರಾಜಕಾರಣಿಗಳ ಕೃಪೆ ಇದೆ!
ಚುನಾವಣೆ ಘೋಷಣೆ ಆದ ಕೂಡಲೇ ಸಮರೋಪಾದಿಯಲ್ಲಿ ಫ್ಲೆಕ್ಸ್ ವಿರುದ್ಧ ಸಮರ ಸಾರುವ ಪಾಲಿಕೆ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಮರೆತುಬಿಡುತ್ತದೆ. ಇದಕ್ಕೆ ಕಾರಣ ಏನು? ಸಿಂಪಲ್. ನೀತಿ ಸಂಹಿತೆ ಇರುವಾಗ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್ ಗಳ ಬಗ್ಗೆ ಉದಾಸೀನ ಮಾಡಿದರೆ ಇವರ ವಿರುದ್ಧ ಚುನಾವಣಾ ಆಯೋಗ ಚಾಟಿ ಬೀಸುತ್ತದೆ. ಆದರೆ ಈಗ ಕೇಳಲು ಯಾರಿಗೂ ಉಮೇದು ಇಲ್ಲ. ಇದ್ದರೆ ನಮಗೆ ಏನು ನಷ್ಟ ಎಂಬ ಮನೋಭಾವ ಬೆಳೆದಿರುತ್ತದೆ. ಇನ್ನು ಇದರಲ್ಲಿ ಎಲ್ಲಾ ರಾಜಕಾರಣಿಗಳ ಹಿಂಬಾಲಕರು ಫ್ಲೆಕ್ಸ್ ಗಳ ಉದ್ಯಮಗಳಲ್ಲಿ ಇರುವುದರಿಂದ ಯಾರೂ ಕೂಡ ಪರಸ್ಪರ ಆರೋಪ- ಪ್ರತ್ಯಾರೋಪ ಹಾಕುವುದಿಲ್ಲ. ಆದ್ದರಿಂದ ಮಂಗಳೂರಿನ ಸೌಂದರ್ಯಕ್ಕೆ ಕಪ್ಪುಚುಕ್ಕೆಗಳಾಗಿರುವ ಫ್ಲೆಕ್ಸ್ ಗಳು ಎಲ್ಲಾ ಕಡೆ ಎದ್ದು ನಿಂತಿವೆ. ಅಧಿಕಾರಿಗಳು ಗಾಂಧಿಜಿಯವರ ಮೂರು ಕೋತಿಗಳ ರೂಪದಲ್ಲಿ ಕಾಣಿಸುತ್ತಿದ್ದಾರೆ!
Leave A Reply