ಗಣೇಶ್ ಕುಲಾಲ್ ಅಂತವರು ಇವತ್ತಿನ ದಿನಗಳಲ್ಲಿ ಇರುತ್ತಾರಾ?
ಪಕ್ಷಕ್ಕಾಗಿ ದುಡಿಯುವವರಿಗೆ, ತಮ್ಮ ನಿಸ್ವಾರ್ಥ ಜನಪರ ಸೇವೆಯಿಂದ ಪಕ್ಷದ ಇಮೇಜ್ ಹೆಚ್ಚಿಸುವವರಿಗೆ, ಒಂದು ರೂಪಾಯಿ ಪ್ರತಿಫಲಾಪೇಕ್ಷೆ ಮಾಡದೇ ತಮ್ಮ ಕಿಸೆಯಿಂದ ಹಣ ವ್ಯಯಿಸಿ ಬಡವರ, ಅಸಹಾಯಕರ ಸೇವೆ ಮಾಡುತ್ತಾ ಬರುತ್ತಿರುವವರಿಗೂ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇದ್ದಾಗ ಉತ್ತಮ ಸ್ಥಾನಮಾನ ನೀಡಲಾಗುತ್ತದೆ ಎಂಬ ಸಂದೇಶ ಹೋಗಬೇಕಾದರೆ ತಕ್ಷಣ ಬಿಜೆಪಿ ಮುಖಂಡರು ಒಂದು ಒಳ್ಳೆಯ ಕೆಲಸ ಮಾಡಬೇಕು. ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಯಾರು ಎನ್ನುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇಯರ್ ಬಿಡಿ, ಅದು ನೀವು ಏನೂ ಬೇಕಾದರೂ ಮಾಡಿ, ಎಂತವರಿಗೆ ಬೇಕಾದರೂ ಕೊಡಿ. ಅದು ನಿಮ್ಮ ಗ್ರಹಚಾರ. ಆದರೆ ಮುಂದಿನ ಒಂದು ವರ್ಷ ಆರೋಗ್ಯ ಸ್ಥಾಯಿ ಸಮಿತಿಗೆ ಒಳ್ಳೆಯ ಕೆಲಸಗಾರರನ್ನು ನೇಮಿಸುವ ಇಚ್ಚೆ ನಿಮಗೆ ಇದೆ ಎಂದರೆ ಈಗಲೇ ಬಿಜೆಪಿಯ ಇಬ್ಬರು ಶಾಸಕರು ಒಂದು ಒಳ್ಳೆಯ ನಿರ್ಧಾರಕ್ಕೆ ಬರಬೇಕು.
ಗಣೇಶ್ ಕುಲಾಲ್ ಅಂತವರು ಇವತ್ತಿನ ದಿನಗಳಲ್ಲಿ ಇರುತ್ತಾರಾ?
ಗತಿಯಿಲ್ಲದವರಿಗೂ ಒಂದು ಒಳ್ಳೆಯ ಅಂತ್ಯ ಸಂಸ್ಕಾರ ಸಿಗಬೇಕು ಎನ್ನುವುದರಿಂದ ಹಿಡಿದು ವಾರ್ಡಿನ ಪ್ರತಿ ಸಮಸ್ಯೆಯನ್ನು ಪರಿಹರಿಸಿ, ತಾನು ಟೆಂಪೊ ಚಾಲಕನಾದರೂ ಅದರಲ್ಲಿ ದುಡಿಯುವ ಸ್ವಲ್ಪ ಹಣವನ್ನು ಸಮಾಜಕ್ಕೆ ವಿನಿಯೋಗಿಸಿ, ಪಕ್ಷದ ಹೆಸರನ್ನು ಇಡೀ ವಾರ್ಡಿನಲ್ಲಿ ಎತ್ತರಕ್ಕೆ ಏರಿಸಿ ತಾವು ಮಾತ್ರ ಸ್ಮಶಾನದಲ್ಲಿ ಕೈಗೆ ಗ್ಲೌಸ್ ಧರಿಸದೇ ಏಕಾಂಗಿಯಾಗಿಯಾದರೂ ಯಾವುದೋ ದಿಕ್ಕುದೆಸೆಯಿಲ್ಲದ ಹೆಣ ಸುಡುವುದರಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು, ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುತ್ತಿರುವ ಅಪ್ಪಟ ಜನಸೇವಕನೇ ಗಣೇಶ್ ಕುಲಾಲ್. ಇವತ್ತು ನಾನು ಬಿಜೆಪಿಯ ಮುಖಂಡರಿಗೆ ಚಾಲೆಂಜ್ ಹಾಕುತ್ತೇನೆ. ನೀವು ನಿಜವಾಗಿಯೂ ಜನಸೇವೆ ಮಾಡುವ, ಭ್ರಷ್ಟಾಚಾರದ ಸನಿಹಕ್ಕೂ ಸುಳಿಯದೇ, ನೈತಿಕತೆ ಎನ್ನುವ ಶಬ್ದಕ್ಕೆ ಅನ್ವರ್ಥನಾಮವಾಗಿರುವವರಿಗೆ ಏನಾದರೂ ಉತ್ತಮ ಸ್ಥಾನಮಾನ ಕೊಟ್ಟು ಪಕ್ಷದ ವರ್ಚಸ್ಸು ಹೆಚ್ಚಿಸಬೇಕೆಂಬ ಇಚ್ಚೆ ಹೊಂದಿದರೆ ಮೊದಲು ಗಣೇಶ್ ಕುಲಾಲ್ ಅವರಿಗೆ ಕನಿಷ್ಟ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿಯಾದರೂ ಮಾಡಿ. ಅವರಿಗೆ ಸ್ಟ್ಯಾಂಡಿಂಗ್ ಕಮಿಟಿ ಚೇರ್ ಮೆನ್ ಮಾಡಿದರೆ ಅವರಿಗೆ ಏನೂ ಲಾಭವಿಲ್ಲ. ಆದರೆ ಮಂಗಳೂರು ನಗರಕ್ಕೆ ತುಂಬಾ ಲಾಭ ಇದೆ. ಏನೆಂದರೆ ಗಣೇಶ್ ಕುಲಾಲ್ ಯಾರ ಬಳಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡದೇ ಇರುವುದರಿಂದ ಅವರು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದರೆ ನಗರದ ಸ್ವಚ್ಚತೆ ಬಗ್ಗೆ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸಬಹುದು. ಯಾಕೆಂದರೆ ಗಣೇಶ್ ಕುಲಾಲ್ ಅವರ ಬಳಿ ನೈತಿಕತೆ ಇದೆ. ಅವರು ಗುತ್ತಿಗೆದಾರರಿಗೆ ಚಾಟಿ ಬೀಸಿ ಕೆಲಸ ಮಾಡಿಸಬಹುದು. ಯಾರ ಕೈ, ಬಾಯಿಗೆ ತ್ಯಾಜ್ಯದ ವಾಸನೆ ಬಡಿಯುತ್ತಿರುವುದೋ ಅಂತವರಿಗೆ ಮಾತನಾಡಲು ಕಷ್ಟ. ಕೆಲವರ ಬಾಯಲ್ಲಂತೂ ತ್ಯಾಜ್ಯವೇ ತುಂಬಿರುವುದರಿಂದ ಅಂತವರಿಗೆ ಬಾಯಿ ತೆರೆಯುವುದು ಅಸಾಧ್ಯ. ಆದರೆ ಗಣೇಶ್ ಕುಲಾಲ್ ಅವರಿಗೆ ಅಂತಹ ಯಾವುದೇ ಋಣ ಅಥವಾ ಹಂಗು ಇಲ್ಲ. ಅವರು ನಿಸ್ವಾರ್ಥತೆ ಮತ್ತು ನಿರ್ಭಿತಿಯಿಂದ ಕೆಲಸ ಮಾಡಬಲ್ಲರು.
ನಿಮ್ಮ ಸನ್ಮಾನ ಸಾಕು, ಅಧಿಕಾರ ಕೊಡಿ!
ಸರಿಯಾಗಿ ನೋಡಿದರೆ ಈ ಜನಸೇವೆಯ ಬ್ಯುಸಿಯಲ್ಲಿ ಗಣೇಶ್ ಕುಲಾಲ್ ಅವರಿಗೆ ತಮ್ಮ ದೈನಂದಿನ ಉದ್ಯೋಗ ಮಾಡುವುದು ಕೂಡ ಕಷ್ಟಸಾಧ್ಯವಾಗಿದೆ. ಇನ್ನು ಅವರ ಒಳ್ಳೆಯತನಕ್ಕೆ ಅಲ್ಲಲ್ಲಿ ಕರೆದು ಶಾಲು ಹಾಕಿ ಸನ್ಮಾನ ಮಾಡಿ ಕಳುಹಿಸುತ್ತಾರೆ. ಆದರೆ ಅದು ಸಾಕಾಗುವುದಿಲ್ಲ. ಅವರ ಕೈಯಲ್ಲಿ ಅಧಿಕಾರ ಕೊಡಬೇಕು. ಆಗುತ್ತಾ, ಬಿಜೆಪಿ ಮನಸ್ಸು ಮಾಡುತ್ತಾ ಅಥವಾ ಇಂತವರು ಕೆಲಸ ಮಾಡಲು ಮಾತ್ರ, ಅಧಿಕಾರ ಬೇರೆಯವರಿಗೆ ಮೀಸಲು ಎನ್ನುವ ಜನಸಾಮಾನ್ಯರ ವಾದವನ್ನು ನಿಜ ಮಾಡುತ್ತಾ? ಉತ್ತರ ಕ್ಷಣಗಳ ಒಳಗೆ ಸಿಗಲಿದೆ!
Leave A Reply