ಏನು ಮಾಡುವುದು ಈಗ ಸಿದ್ದುಜಿ?
ಕೆಲವೊಮ್ಮೆ ಏನೂ ದೊಡ್ಡದು ಆಗುವುದಿಲ್ಲ ಎಂದು ಅಂದುಕೊಂಡಿದ್ದ ಪ್ರಕರಣಗಳು ದೈತ್ಯ ರೂಪವನ್ನು ಪಡೆದುಕೊಂಡು ಇಟ್ಟವರ ಬುಡಕ್ಕೆ ಬರುವಂತಹ ಸಾಧ್ಯತೆ ಇರುತ್ತದೆ. ಸದ್ಯ ಕರ್ನಾಟಕದಲ್ಲಿ ಆಗಿರುವುದು ಕೂಡ ಅದೇ. ಹುಬ್ಬಳ್ಳಿ ಜಿಲ್ಲೆಯ ಚನ್ನಪೇಟೆಯ ಶ್ರೀಕಾಂತ್ ಪೂಜಾರಿ ಎನ್ನುವ ಕರಸೇವಕನ ಬಂಧನಕ್ಕೆ ಪೊಲೀಸರು ಮುಂದಾದಾಗ ಅವರಿಗೂ ಈ ವಿಷಯ ಈ ಪ್ರಮಾಣದಲ್ಲಿ ದೊಡ್ಡದಾಗುತ್ತದೆ ಎಂದು ಅನಿಸಿರಲಿಲ್ಲ. ಆದರೆ ಬಂಧನದ ವಿಷಯ ಹೊರಬೀಳುತ್ತಿದ್ದಂತೆ ಲೋಕಸಭಾ ಚುನಾವಣೆಗೆ ವಿಷಯದ ಬೇಟೆಯಲ್ಲಿದ್ದ ಭಾರತೀಯ ಜನತಾ ಪಾರ್ಟಿ ಈ ವಿಷಯವನ್ನು ಹೇಗೆ ಮೇಲೆತ್ತಿತು ಎಂದರೆ ಕಾಂಗ್ರೆಸ್ ಮೈಸನ್ 5 ಡಿಗ್ರಿ ಸೆಲ್ಸಿಯಸ್ ನಲ್ಲಿ ಥರಗುಟ್ಟಲು ಶುರುವಾಯಿತು. ಕಾಂಗ್ರೆಸ್ಸಿನಲ್ಲಿದ್ದ ಹಿಂದೂಗಳಿಗೆನೆ ತಮ್ಮ ಪಕ್ಷ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಲು ಮುಂದಾಗಿದೆ ಎನ್ನುವುದು ತಲೆಯ ಒಳಗೆ ಹೊಕ್ಕಾಗಿತ್ತು. ಒಬ್ಬ ಸಿದ್ದುವನ್ನು ಬಿಟ್ಟು ಬೇರೆ ಸಚಿವರೆಲ್ಲಾ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಲು ಶುರು ಮಾಡಿದರು. ಇಂತಹ ವಿಷಯಗಳು ಬಂದಾಗ ಮಾಧ್ಯಮದೆದುರು ಮಾತನಾಡುವ ಒಂದು ಶಬ್ದ ಕೂಡ ತುಂಬಾ ರಿಸ್ಕ್ ಎಂದು ಅರಿವಿರುವ ಡಿಕೆಶಿ ಸೈಲೆಂಟ್ ಆಗಿಬಿಟ್ಟರು. ಪರಂ ಎಂದಿನ ರೇಡಿಮೇಡ್ ವಾಕ್ಯ ಹಿಡಿದು ಇಂತಹ ವಿಷಯವನ್ನೇಲ್ಲಾ ಮೀಡಿಯಾ ದೊಡ್ಡದು ಮಾಡಬಾರದು ಎನ್ನುವ ಅರ್ಥದ ಮಾತುಗಳನ್ನು ಆಡಿದರು. ತಾವು ಯಾರು ಏನು ಮಾತನಾಡಿದರೂ ಒಂದೊಂದು ಶಬ್ದದಿಂದಲೇ ಹಿಂದೂಗಳ ನೂರು ನೂರು ವೋಟ್ ಗಳು ಕೈತಪ್ಪಿಬಿಡುತ್ತದೆ ಎನ್ನುವ ಹೆದರಿಕೆಯಿಂದ ಕಾಂಗ್ರೆಸ್ ಮುಖಂಡರು ಮುಖದ ಮೇಲೆ ಬಟ್ಟೆ ಹಾಕ್ಕೊಂಡು ಏನೂ ಗೊತ್ತಿಲ್ಲದವರಂತೆ ಆಡಲು ಶುರು ಮಾಡಿದರು. ಆದರೆ ರಾಜಕೀಯ ಇನ್ಸಿಂಗ್ಸಿನ ಕೊನೆಯ ಪಂದ್ಯವನ್ನು ಆಡುತ್ತಿರುವ ಸಿದ್ದು ಮಾತ್ರ ಇದನ್ನು ಡಿಫೆಂಡ್ ಮಾಡಲು ನಿಂತುಬಿಟ್ಟರು.
ಹೇಗೂ ಹಾವಿನ ಮೇಲೆ ಕಾಲಿಟ್ಟಾಗಿದೆ!
ಇದರಿಂದ ತಮಗೆ ಏನೂ ತೊಂದರೆ ಆಗದಂತೆ ಮತ್ತು ಹಾವಿನ ಕತೆ ಕೂಡ ಮುಗಿಯಬೇಕು ಎನ್ನುವ ಉದ್ದೇಶದಿಂದ ಸಿದ್ದು ಹೊಸ ವರಸೆ ತೆಗೆದುಬಿಟ್ಟರು. ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸುಗಳಿವೆ. ಆತನನ್ನು ಬಿಜೆಪಿಗರು ಬೆಂಬಲಿಸುವುದು ಸರಿಯಲ್ಲ, ಅಪರಾಧಿಯ ಬೆಂಬಲಕ್ಕೆ ಬಿಜೆಪಿ ನಿಂತಿದೆ ಎಂದುಬಿಟ್ಟರು. ಇಲ್ಲಿ ಸಿದ್ದು ಒಬ್ಬರು ವಕೀಲರಾಗಿ ಯೋಚಿಸಿದ್ದರೆ ಅವರು ಶ್ರೀಕಾಂತ್ ಪೂಜಾರಿಯವರನ್ನು ಅಪರಾಧಿ ಎನ್ನುತ್ತಿರಲಿಲ್ಲ. ಯಾಕೆಂದರೆ ಆತನ ಮೇಲಿರುವುದು ಆರೋಪ ಮಾತ್ರ. ಆರೋಪ ಸಾಬೀತಾಗುವ ತನಕ ಆತ ಆರೋಪಿ ಮಾತ್ರ. ಆದರೆ ಸಿದ್ದುಜಿಗೆ ಶ್ರೀಕಾಂತ್ ಪೂಜಾರಿಯನ್ನು ಹೇಗಾದರೂ ಮಾಡಿ ತಪ್ಪಿತಸ್ಥ ಎಂದು ಪ್ರೂವ್ ಮಾಡಲೇಬೇಕಿದ್ದ ಕಾರಣ ಅವರು ನ್ಯಾಯಾಲಯ ತೀರ್ಪು ಕೊಡುವ ಮೊದಲೇ ತಾವೇ ಅಪರಾಧಿ ಎಂದು ಹೇಳಿಬಿಟ್ಟರು. ಆದರೆ ಅಲ್ಲಿಯ ತನಕ ಸಿದ್ದು ಸಾಹೇಬ್ರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ಶ್ರೀಕಾಂತ್ ಅವರ ಮೇಲಿದ್ದ 16 ಕೇಸುಗಳಲ್ಲಿ 15 ಕೇಸು ಈಗಾಗಲೇ ಬಿದ್ದು ಹೋಗಿದೆ. ಅದರ ಅರ್ಥ ನ್ಯಾಯಾಲಯವೇ ಇಲ್ಲಿಯ ತನಕ ಯಾವುದೇ ಪ್ರಕರಣದಲ್ಲಿಯೂ ಶ್ರೀಕಾಂತ್ ಅವರನ್ನು ಅಪರಾಧಿ ಎಂದು ಘೋಷಿಸಿಲ್ಲ. ಆದರೆ ಸಿದ್ದು ಅವರಿಗೆ ಹೇಗಾದರೂ ಇದನ್ನು ಡಿಫೆಂಡ್ ಮಾಡಬೇಕಿತ್ತು. ಆದರಿಂದ ಪೊಲೀಸರ ಬಳಿ ಅರ್ಧಬರ್ಧ ಮಾಹಿತಿ ಪಡೆದ ಸಿದ್ದು ಮತ್ತೊಮ್ಮೆ ನಗೆಪಾಟಲಿಗೆ ಈಡಾಗಿ ಹೋದರು.
ಹಾಗಾದರೆ ಶ್ರೀಕಾಂತ್ ಅವರನ್ನು ಹಳೆ ಪ್ರಕರಣದಲ್ಲಿ ಬಂಧಿಸಲೇಬಾರದಾ?
ಹಾಗೇನೂ ಇಲ್ಲ. ಈ ದೇಶದ ಯಾವುದೇ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣ ಕ್ಲೋಸ್ ಆಗದೇ ಇದ್ದರೆ ಅದನ್ನು ಶೀಘ್ರ ವಿಚಾರಣೆ ನಡೆಸಿ ಮುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಹಾಗೆ ಈ ಪ್ರಕರಣದಲ್ಲಿ ಆಗಿದೆ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಇಷ್ಟು ದಿನ ಯಾಕೆ ಕರೆದು ವಿಚಾರಿಸಿಲ್ಲ. ಇನ್ನೇನೂ ರಾಮ ಮಂದಿರದ ಉದ್ಘಾಟನೆಗೆ ಕೆಲವೇ ದಿನಗಳು ಇರುವಾಗ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ಹೋದಾಗಲೇ ಸಮಸ್ಯೆಗಳು ಆಗುವುದು. ಬಂಧಿಸಿದ ಪೊಲೀಸ್ ಅಧಿಕಾರಿ ಹಿಂದೂಯೇತರನಾಗಿರುವುದರಿಂದ ಅದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ಈ ಅಧಿಕಾರಿಗಳು ಕೂಡ ತಮ್ಮ ಮೇಲಿನವರನ್ನು ಖುಷಿಪಡಿಸಲು ಏನೇನೋ ಮಾಡಲು ಹೋಗುತ್ತಾರೆ. ಹೇಗೆ ಸರ್ ಎಂದು ಎದೆಯುಬ್ಬಿಸಿ ಹೇಳಿ ಶಹಬ್ಬಾಷ್ ಎಂದು ಹೇಳಿಸಿಕೊಳ್ಳುವ ಹಂಬಲ ಇರುತ್ತದೆ. ಅವರು ತಮ್ಮ ಲಾಭ ನೋಡುತ್ತಾರೆ ವಿನ: ಈ ಕ್ರಮದಿಂದ ಒಂದು ಸರಕಾರದ ಕುತ್ತಿಗೆಗೆ ಬರುತ್ತೆ ಎಂದು ಯೋಚಿಸುವುದಿಲ್ಲ. ಒಟ್ಟಿನಲ್ಲಿ ಸಿದ್ದು ಟ್ರಾಪ್ ಆಗಿಬಿಟ್ಟಿದ್ದಾರೆ. ಇದನ್ನು ಕೂಡ ಜೀರ್ಣಿಸಿಕೊಂಡು ಎಂತಹ ಕಾಲಕ್ಕೂ ಅಲ್ಪಸಂಖ್ಯಾತರಿಗೆ ಖುಷಿ ಮಾಡದೇ ಬಿಡುವುದಿಲ್ಲ ಎಂದು ಅವರು ನಿರ್ಧರಿಸಿರಬಹುದು, ಆದರೆ ಅವರ ಪಕ್ಷದ್ದೇ ಹಿಂದೂಗಳು ಏನು ಮಾಡಬೇಕು, ಅಲ್ವಾ!
Leave A Reply