ವೇಣು ಕಾಲ್ ಮಾಡಿದರೆ ಇಲ್ಲಾ ಎನ್ನಲು ಆಗುತ್ತಾ?
ಕರ್ನಾಟಕದ ಆನೆ ರಾಹುಲ್ ಸಂಸದರಾಗಿರುವ ವಯನಾಡಿಗೆ ಯಾಕೆ ಕಾಲಿಡಬೇಕಿತ್ತು?
ಆನೆಯಿಂದ ತುಳಿಯಲ್ಪಟ್ಟು ವಿಧಿವಶರಾಗಿರುವ ಆ ಆಜೀಶ್ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬಕ್ಕೆ ಸಂತಾಪವನ್ನು ಜಾಗೃತ ಅಂಕಣದ ಆರಂಭದಲ್ಲಿಯೇ ಸಲ್ಲಿಸುತ್ತಿದ್ದೇನೆ. ಆನೆ ತುಳಿದು ಸತ್ತದ್ದಕ್ಕೆ ಪರಿಹಾರ ಕೊಡಬಾರದು ಎಂದು ಯಾರೂ ಹೇಳುತ್ತಿಲ್ಲ, ಹೇಳಲೂಬಾರದು. ಆದರೆ ಈ ಪರಿಹಾರದ ಹಣವನ್ನು ಯಾರು ಕೊಡಬೇಕು ಮತ್ತು ಎಷ್ಟು ಕೊಡಬೇಕು ಮತ್ತು ಯಾಕೆ ಇದರಲ್ಲಿ ಒಲೈಕೆ ರಾಜಕಾರಣ ಅಡಗಿದೆ ಎನ್ನುವುದೇ ಈಗಿರುವ ವಿಷಯ.
ಆನೆಗಳು ಸ್ವಭಾವತ: ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತಲೇ ಇರುತ್ತವೆ. ನೂರಾರು ಕಿ.ಮೀ ನಡೆದು ಎಲ್ಲೆಲ್ಲಿಯೋ ಹೋಗಿ ನಂತರ ಹೋದ ದಾರಿಯಲ್ಲಿಯೇ ಎಷ್ಟೋ ತಿಂಗಳುಗಳ ಬಳಿಕ ಮರಳಿ ಬರುವುದು ಇದೆ. ಆನೆಗಳಿಗೆ ಗಡಿ ಎನ್ನುವುದು ಇರುವುದಿಲ್ಲ. ಇನ್ನು ಅವುಗಳಿಗೆ ವ್ಯಾಪ್ತಿ ಪ್ರದೇಶವನ್ನು ಹಾಕಿ ಇಷ್ಟರ ಒಳಗೆ ಸುತ್ತಬೇಕು ಎಂದು ಹೇಳಲು ನಾವು ಯಾರು? ಹಾಗೆ ಸಂಚರಿಸುವ ಆನೆಗಳು ಕೆಲವೊಮ್ಮೆ ಕಾಡಿನಿಂದ ನಾಡಿನ ಅಂಚಿಗೆ ಬರುತ್ತವೆ. ಅಲ್ಲಿ ವಾಸ ಮಾಡುತ್ತಿರುವ ಜನರಿಂದ ತನ್ನ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎನ್ನುವ ಆತಂಕದಿಂದ ಸ್ವರಕ್ಷಣೆಗೆ ದಾಳಿ ಮಾಡುವುದು ಇದೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಗಳು ಮೃತಪಟ್ಟರೆ ಆ ಕುಟುಂಬಗಳಿಗೆ ಆಯಾ ರಾಜ್ಯ ಸರಕಾರಗಳು ತಾವು ಇಷ್ಟು ಪರಿಹಾರ ಎಂದು ನಿಗದಿಗೊಳಿಸಿದ್ದನ್ನು ಕೊಟ್ಟುಬಿಡುತ್ತವೆ. ಅದು ನಡೆದು ಬಂದಿರುವ ಸಂಪ್ರದಾಯ.
ವೇಣು ಕಾಲ್ ಮಾಡಿದರೆ ಇಲ್ಲಾ ಎನ್ನಲು ಆಗುತ್ತಾ?
ಹೀಗೆ ಒಂದು ಐರಾವತ ಕರ್ನಾಟಕದ ಬಂಡಿಪುರದಿಂದ ನಡೆಯುತ್ತಾ ಕೇರಳದ ವಯನಾಡಿಗೆ ಹೋಗಿ ಅಲ್ಲಿ ಕಾಡಂಚಿನ ಮನೆಯ ಆವರಣಕ್ಕೆ ನುಗ್ಗಿ ಒಬ್ಬ ವ್ಯಕ್ತಿಯ ಅಂತ್ಯಕ್ಕೆ ಕಾರಣವಾಗಿದೆ. ಚುನಾವಣೆ ಹತ್ತಿರ ಇರುವುದರಿಂದ ಎಲ್ಲಿಯೋ ಇದ್ದ ಆ ಕ್ಷೇತ್ರದ ಸಂಸದರಿಗೆ ತಮ್ಮ ಕ್ಷೇತ್ರದ ನೆನಪಾಗಿದೆ. ಅವರು ಮೃತಪಟ್ಟವರ ಮನೆಗೆ ಧಾವಿಸಿ ಬಂದಿದ್ದಾರೆ. ಬಂದವರೇ ಆನೆ ಎಲ್ಲಿದು ಎಂದು ಕೇಳಿದ್ದಾರೆ. ತಕ್ಷಣ ಅಧಿಕಾರಿಗಳು ಅದು ನಮ್ಮ ರಾಜ್ಯದ್ದು ಅಲ್ಲ. ಕರ್ನಾಟಕದ್ದು ಎಂದು ಹೇಳಿದ್ದಾರೆ. ಆಗ ರಾಹುಲ್ ಪಕ್ಕದಲ್ಲಿಯೇ ಇದ್ದ ಕೆ.ಸಿ.ವೇಣುಗೋಪಾಲ್ ಹಾಗಾದರೆ ಈ ಕುಟುಂಬಕ್ಕೆ ಕರ್ನಾಟಕದ ಸರಕಾರ ಪರಿಹಾರ ನೀಡಬೇಕು ಎಂದು ನಿರ್ಧರಿಸಿ ತಕ್ಷಣ ಮೊಬೈಲ್ ತೆಗೆದು ಫೋನ್ ಮಾಡಿದ್ದಾರೆ. ವೇಣು ಕಾಲ್ ಮಾಡಿದರೆ ಸ್ವತ: ರಾಹುಲ್ ಕಾಲ್ ಮಾಡಿದ ಹಾಗೆ ಎಂದು ಅಂದುಕೊಂಡ ಅರಣ್ಯ ಸಚಿವ ಈಶ್ವರ ಸಾಹೇಬ್ರು ತಾವು ನಿಂತ ಕಡೆಯಿಂದಲೇ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಅವರು ಕಳೆದ ಬಾರಿ ಹಾಸನದಲ್ಲಿ ಹೀಗೆ ಆದಾಗ ಬೊಮ್ಮಾಯಿ ಹದಿನೈದು ಲಕ್ಷ ಪರಿಹಾರ ಘೋಷಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಹಾಗಾದರೆ ನಾವು ಕೂಡ ಅಷ್ಟೇ ನೀಡೋಣ ಎಂದ ಖಂಡ್ರೆ ತಕ್ಷಣ 15 ಲಕ್ಷದ ಚೆಕ್ ಅನ್ನು ಆಜೀಶ್ ಅವರಿಗೆ ತಲುಪಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಕಾಂಗ್ರೆಸ್ ವಿವಾದಗಳಿಗೆ ಡೋಂಟ್ ಕೇರ್!
ಕೇರಳದ ವ್ಯಕ್ತಿ ಮೃತಪಟ್ಟರೆ ಕರ್ನಾಟಕದ ಆನೆ ಎನ್ನುವ ಕಾರಣಕ್ಕೆ ನಾವು ಪರಿಹಾರ ನೀಡುವುದಾದರೆ ಕರ್ನಾಟಕದ ಗಡಿ ಸುಳ್ಯದ ಕಾಡಂಚಿನಲ್ಲಿ ಕೇರಳದ ಆನೆಗಳು ಮಾಡುವ ಧಾಂದಲೆ, ನಷ್ಟಕ್ಕೆ ಪರಿಹಾರ ಕೇರಳ ಸರಕಾರ ನೀಡುತ್ತಾ ಎಂದು ಸದ್ದು ಗೌಡರು ತಮ್ಮ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯ ಇಷ್ಟು ದೊಡ್ಡ ವಿವಾದ ಆಗುತ್ತದೆ ಎಂದು ಖಂಡ್ರೆಯವರಿಗೂ ಗೊತ್ತಿರಲಿಲ್ಲ. ಈಗ ಗೊತ್ತಾದ್ರೂ ಅವರು ಕೇರ್ ಮಾಡುವುದಿಲ್ಲ. ಯಾಕೆಂದರೆ ವೇಣು ಸೂಚನೆಯ ಹೊರತಾಗಿಯೂ ಪರಿಹಾರ ನೀಡದೇ ಹೋದರೆ ಖಂಡ್ರೆ ಲೋಕಸಭಾ ಚುನಾವಣೆಯ ಬಳಿಕ ಕ್ಯಾಬಿನೆಟ್ ನಲ್ಲಿ ಉಳಿಯುವುದಿಲ್ಲ. ಈಗ ಕರ್ನಾಟಕ ಅರ್ಜೆಂಟಲ್ಲಿ ಪರಿಹಾರ ನೀಡಿದ ನಂತರ ಕೇರಳ ಕೂಡ 15 ಲಕ್ಷ ಪರಿಹಾರ ನೀಡಲು ಮುಂದಾಗಿದೆ. ಆದರೆ ಈ ನಡುವೆ ಸಿಕ್ಕಿರುವ ಮಾಹಿತಿಯಂತೆ ಹಾಸನದಲ್ಲಿ ವರ್ಷದ ಹಿಂದೆ ಆನೆಯ ತುಳಿತಕ್ಕೆ ಮೃತಪಟ್ಟ ವ್ಯಕ್ತಿಗೆ ಪೂರ್ತಿ ಹದಿನೈದು ಲಕ್ಷ ರೂಪಾಯಿ ಪರಿಹಾರ ಇನ್ನೂ ಸಿಕ್ಕಿಲ್ಲ. ಆದರೆ ಹೋದ ವಾರ ಮೃತಪಟ್ಟ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕದ ಪರಿಹಾರ ತಕ್ಷಣ ದೊರಕಿದೆ. ಕರ್ನಾಟಕ ಕಾಂಗ್ರೆಸ್ ಪಾಲಿನ ಎಟಿಎಂ ಎನ್ನುವ ಭಾರತೀಯ ಜನತಾ ಪಾರ್ಟಿಯ ಆರೋಪಕ್ಕೂ ರಾಜ್ಯದ ಕಾಂಗ್ರೆಸ್ ನಡೆದುಕೊಳ್ಳುವುದಕ್ಕೂ ತಾಳೆಯಾಗುತ್ತಿದೆ!
Leave A Reply