ಮೇಕೆದಾಟು: ಈಗಲೇ ಸ್ಪಷ್ಟಪಡಿಸಿ!
ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷವೊಂದು ಯಕಶ್ಚಿತ್ ಒಂದು ಪ್ರಾದೇಶಿಕ ಪಕ್ಷದ ಎದುರು ಮಂಡಿಯೂರುವುದು ಎನ್ನುವುದಕ್ಕೆ ಮೇಕೆದಾಟು ಯೋಜನೆಯೇ ಸಾಕ್ಷಿ. ಇ.ಂ.ಡಿ.ಯಾ ಎನ್ನುವ ವಿಪಕ್ಷಗಳ ಮೈತ್ರಿಕೂಟ ಗೆದ್ದರೆ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇದರಿಂದ ತಮಿಳುನಾಡಿನಲ್ಲಿರುವ ಡಿಎಂಕೆ ಮತದಾರರಿಗೆ ಖುಷಿಯಾಗಬಹುದು. ಅವರು ತಮ್ಮ ಪಕ್ಷದ ದೂರದೃಷ್ಟಿಯನ್ನು ಕೊಂಡಾಡಬಹುದು. ಆದರೆ ಇಲ್ಲಿ ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರದೇ ಇದ್ದರೆ ಬೆಂಗಳೂರಿಗೆ ಬೆಂಗಳೂರೇ ನೀರಿಗಾಗಿ ಹಾಹಾಕಾರಗೈಯಲಿದೆ. ಅಷ್ಟಕ್ಕೂ ಕಾಂಗ್ರೆಸ್ ಕಳೆದ ಬಾರಿ ವಿಪಕ್ಷದಲ್ಲಿದ್ದಾಗ ತನ್ನ ಚುನಾವಣಾ ಪ್ರಚಾರಕ್ಕೆ ಕಾವು ನೀಡಿದ್ದೇ ಮೇಕೆದಾಟು ಯೋಜನೆಯನ್ನು ಅನುಷ್ಟಾನಕ್ಕೆ ತಂದೇ ತರುತ್ತೇವೆ ಎನ್ನುವ ಹೋರಾಟದಿಂದ. ನನ್ನ ನೀರು ನನ್ನ ಹಕ್ಕು ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾಡಿದ ಪಾದಯಾತ್ರೆಯಿಂದ ನಿಜವಾಗಿಯೂ ಸಂಚಲನ ಸೃಷ್ಟಿಯಾಗಿತ್ತು. ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಮರುಕಳಿಸಲು ಅದು ಕೂಡ ಒಂದು ಕಾರಣವಾಗಿತ್ತು. ಭಾರತೀಯ ಜನತಾ ಪಾರ್ಟಿ ಈ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಸ್ವಲ್ಪ ಸಪ್ಪೆ ಎನಿಸಿದ್ದು ಹೌದು.
ಈಗಲೇ ಸ್ಪಷ್ಟಪಡಿಸಿ!
ಅದೆಲ್ಲಾ ಆಗಿ ಕೊನೆಗೆ ದೇವೆಗೌಡರು ಸಂಸತ್ತಿನ ರಾಜ್ಯಸಭೆಯಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಂದ್ರ ಸರಕಾರವನ್ನು ದೀನರಾಗಿ ವಿನಂತಿಸಿದ್ದು ಎಲ್ಲವನ್ನು ಈ ರಾಜ್ಯ ನೋಡಿದೆ. ಈಗ ಏನಾಗಿದೆ? ಇದೇ ವಿಪಕ್ಷಗಳ ಮೈತ್ರಿಕೂಟದ ಸದಸ್ಯ ಪಕ್ಷ ಡಿಎಂಕೆ ಬಹಿರಂಗವಾಗಿ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡುಹೊಡೆದು ನಿಂತಿದೆ. ಇದನ್ನು ಹೇಗೆ ಎದುರಿಸಬೇಕು ಎಂದು ಗೊತ್ತಾಗದೇ ರಾಜ್ಯದ ಕಾಂಗ್ರೆಸ್ ಮುಖಂಡರು ಗೊಂದಲಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಕರ್ನಾಟಕದಿಂದ ಕಾಂಗ್ರೆಸ್ಸಿನ ಹೆಚ್ಚಿನ ಸಂಸದರು ಆಯ್ಕೆಯಾಗಿ ವಿಪಕ್ಷಗಳ ಮೈತ್ರಿಕೂಟ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಆಗ ಮೇಕೆದಾಟು ಯೋಜನೆ ಆಗುತ್ತೋ, ಬಿಡುತ್ತೋ ಎನ್ನುವುದನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಈಗಲೇ ಸ್ಪಷ್ಟಪಡಿಸಬೇಕು. ಇಲ್ಲದೇ ಹೋದರೆ “ಕೇಂದ್ರದಲ್ಲಿ ನಮ್ಮ ಮೈತ್ರಿಕೂಟದ ಪ್ರಮುಖ ಪಕ್ಷ ಡಿಎಂಕೆ. ಮೇಕೆದಾಟು ಅಣೆಕಟ್ಟು ಮಾಡಲು ಅವರು ಬಿಡುವುದಿಲ್ಲ. ಆದ್ದರಿಂದ ನಮಗೆ ಬೇರೆ ದಾರಿಯಿಲ್ಲ” ಎಂದು ಹೇಳಿ ಈಗ ಗ್ಯಾರಂಟಿಗಳಿಗೆ ಹಾಕಿದ ಹಾಗೆ ಕಂಡೀಷನ್ ಎಂಬ ಟೋಪಿ ಹಾಕುವ ಬದಲು ಈಗಲೇ ಹೇಳಿಬಿಡುವುದು ಒಳ್ಳೆಯದು.
ಮೇಕೆದಾಟು ಮಾಡಲು ಬಿಡುತ್ತಾರಾ?
ಮೇಕೆದಾಟು ಅಣೆಕಟ್ಟಿನಿಂದ ಹೆಚ್ಚಿನ ಪ್ರಯೋಜನ ಪಡೆಯುವವರು ರೈತರು ಕೂಡ ಹೌದು. ಕಾಂಗ್ರೆಸ್ ಈಗಲೇ ವಿಷಯ ಕ್ಲಿಯರ್ ಮಾಡಿದರೆ ಕೃಷಿಕರು ಕೂಡ ತಮ್ಮ ಬೆಂಬಲ ಯಾರಿಗೆಂದು ನಿರ್ಧರಿಸಿಬಿಡುತ್ತಾರೆ. ಮೇಕೆದಾಟು ಅಣೆಕಟ್ಟು ಅಸಂಖ್ಯಾತ ಜನರ ಜೀವನದ ಪ್ರಶ್ನೆಯೂ ಹೌದು. ಅದನ್ನು ಸ್ಟಾಲಿನ್ ಪ್ರಣಾಲಿಕೆಯಲ್ಲಿ ಸೇರಿಸಿ ಕರ್ನಾಟಕ ಕಾಂಗ್ರೆಸ್ಸಿಗೆ ಬಿಸಿತುಪ್ಪವನ್ನಾಗಿಸಿದ್ದಾರೆ. ಸ್ಟಾಲಿನ್ ಹವಾ ಹೇಗಿದೆ ಎಂದರೆ ಅವರು ಮಾಡಿ ಎಂದರೆ ಮೇಕೆದಾಟು ಅಣೆಕಟ್ಟು, ಬೇಡಾ ಎಂದರೆ ಅದು ಇಲ್ಲವೇ ಇಲ್ಲ. ಸ್ವಾತಂತ್ರ್ಯಪೂರ್ವದ ರಾಷ್ಟ್ರೀಯ ಪಕ್ಷದ ಅವಸ್ಥೆ ಸದ್ಯ ಹೀಗಿದೆ….
Leave A Reply