ಕುಮಾರಸ್ವಾಮಿಯನ್ನು ಬೆಂಬಲಿಸಲು ಒಪ್ಪಿದ್ರಾ ಸುಮಲತಾ?
ಸದ್ಯ ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದರ ಹೊರತು ಸುಮಲತಾ ಅವರಿಗೆ ಬೇರೆ ಯಾವುದೇ ದಾರಿ ಉಳಿದಿಲ್ಲ. ಅವರು ಶನಿವಾರ ಮಂಡ್ಯದಲ್ಲಿ ತಮ್ಮ ಬೆಂಬಲಿಗರ ಸಭೆಯನ್ನು ಕರೆದು ಅಭಿಪ್ರಾಯ ಕೇಳಲು ಸಜ್ಜಾಗಿದ್ದಾರೆ. ಅದರ ಹಿಂದಿನ ದಿನ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂಸದೆ ಸುಮಲತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಲು ಸಹಕರಿಸುವಂತೆ, ಜೆಡಿಎಸ್ ಪರ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದರು. ಆದರೆ ಈ ವಿಷಯದಲ್ಲಿ ತಮ್ಮ ಬೆಂಬಲಿಗರ ನಿಲುವು ಮುಖ್ಯವಾಗಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಸುಮಲತಾ ಹೇಳಿದ್ದಾರೆ.
ಮಂಡ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕೆಂದು ಸುಮಲತಾ ಅವರು ನಿರಂತರ ಪ್ರಯತ್ನ ಮಾಡಿದ್ದರು. ಈ ಬಾರಿ ಕೈಬಿಟ್ಟರೆ ನಂತರ ಪುನ: ಉಳಿಸಿಕೊಳ್ಳುವುದು ಕಷ್ಟ ಎಂದು ಅವರು ಮೋದಿ, ಶಾ, ನಡ್ಡಾ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಮಂಡ್ಯವನ್ನು ಹಟ ಹಿಡಿದು ಪಡೆದುಕೊಂಡಿರುವ ಜಾತ್ಯಾತೀತ ದಳದ ನಾಯಕರಿಗೆ ಈಗ ಅದನ್ನು ಗೆಲ್ಲಬೇಕಾದರೆ ಸುಮಲತಾ ಅವರ ಅಗತ್ಯ ಇದ್ದೇ ಇದೆ. ಅದಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಕುಮಾರಸ್ವಾಮಿ ಕೂಡ ಸುಮಲತಾ ಅವರ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡುವಾಗ ತುಂಬಾ ಸೌಮ್ಯ ಶಬ್ದಗಳನ್ನು ಬಳಸುತ್ತಿದ್ದಾರೆ.
ಈಗ ಸುಮಲತಾ ಅವರು ಕೂಡ ತಮ್ಮ ಮುಂದೆ ಉದ್ಭವಿಸಿರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಪಕ್ಷೇತರರಾಗಿ ನಿಂತು ಸೋತರೆ ಆಗ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗಲಿದೆ. ಒಂದು ವೇಳೆ ಗೆದ್ದರೆ ಮತ್ತೆ ಸಂಸದರಾಗಿ ಮುಂದುವರೆಯಬಹುದು ಮತ್ತು ಅಗತ್ಯ ಇರುವಾಗ ಬಿಜೆಪಿಯನ್ನು ಬೆಂಬಲಿಸಬಹುದು. ಆದರೆ ಗೆಲ್ತಾರಾ ಎನ್ನುವುದು ಪ್ರಶ್ನೆ. ಏಕೆಂದರೆ ಕಳೆದ ಬಾರಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಸ್ತಿತ್ವದಲ್ಲಿತ್ತು. ಆಗ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಗುಟ್ಟಾಗಿ ಕೆಲಸ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಆದರೆ ಈಗ ರಣಕಣ ಹಾಗಿಲ್ಲ.
ಸಚಿವ ಚೆಲುವರಾಯ ಸ್ವಾಮಿ ಸಹಿತ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ತಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ ತಮ್ಮ ಮರ್ಯಾದೆ ಉಳಿಸಲೇಬೇಕಿದೆ. ಅದಕ್ಕಾಗಿ ಅವರು ಪೂರ್ಣ ಪ್ರಮಾಣದ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಒತ್ತಡ ಬಿಜೆಪಿ ಮುಖಂಡರ ಮೇಲಿದೆ. ಇದರ ನಡುವೆ ಸುಮಲತಾ ಅವರಿಗೆ ಎಷ್ಟು ಮತಗಳು ಬೀಳುತ್ತೆ ಎನ್ನುವುದೇ ಯಕ್ಷ ಪ್ರಶ್ನೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿ ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದಾಗ ಗೌರವಾನ್ವಿತ ಸ್ಥಾನಮಾನ ದೊರಕುವಂತೆ ನೋಡಿಕೊಳ್ಳುವುದರಲ್ಲಿ ಸುಮಲತಾ ರಾಜಕೀಯ ಜಾಣ್ಮೆ ಅಡಗಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಚಾರ.
Leave A Reply