ಗೃಹಕಚೇರಿಯ ಬಾಗಿಲಲ್ಲಿ ಕಾದು ತೆರಳಿದ ಅಭ್ಯರ್ಥಿ ಸುಧಾಕರ್!
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗ್ಡೆಯವರು ಅಲ್ಲಿನ ಹಾಲಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರನ್ನು ಭೇಟಿ ಮಾಡಲು ನಿರಾಕರಿಸಿ ಸುದ್ದಿಯಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇನ್ನೊಂದೆಡೆ ತುಮಕೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ವಿ.ಸೋಮಣ್ಣನವರಿಗೆ ಅಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಕೂಡ ಅಸಹಕಾರ ಧೋರಣೆ ಮುಂದುವರೆಸಿರುವ ಹಂತದಲ್ಲಿ ಈಗ ಚಿಕ್ಕಬಳ್ಳಾಪುರದಿಂದ ಇಂತಹುದೇ ಸುದ್ದಿ ವರದಿಯಾಗಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೆ ಸುಧಾಕರ್ ಅವರು ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಸಹಕಾರ ಕೋರಲು ಗೃಹ ಕಚೇರಿಗೆ ಆಗಮಿಸಿ ಹೊರಗೆ 45 ನಿಮಿಷ ಕಾದು ಕೊನೆಗೆ ವಾಪಾಸು ಹಿಂತಿರುಗಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಅಂದಾಜು 4.5 ಲಕ್ಷದಷ್ಟು ಮತದಾರರಿದ್ದಾರೆ. ಆದ್ದರಿಂದ ವಿಶ್ವನಾಥ್ ಅವರ ಸಹಕಾರ ಸುಧಾಕರ್ ಅವರಿಗೆ ಅತ್ಯಗತ್ಯವಾಗಿದೆ. ಆದರೆ ವಿಶ್ವನಾಥ್ ಅವರು ತಮ್ಮ ಪುತ್ರ ಅಲೋಕ್ ಅವರನ್ನು ಚಿಕ್ಕಬಳ್ಳಾಪುರದಿಂದ ಅಭ್ಯರ್ಥಿಯನ್ನಾಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಕೊನೆಗೆ ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಸುಧಾಕರ್ ಅವರಿಗೆ ಅಲ್ಲಿ ಟಿಕೆಟ್ ನೀಡಿದೆ. ಇದರಿಂದ ಕೆರಳಿರುವ ವಿಶ್ವನಾಥ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯಿಂದ ಮುಂದೆ ಬರುತ್ತಿಲ್ಲ. ಇನ್ನು ಸುಧಾಕರ್ ಅವರಿಗೆ ಪ್ರಚಾರಕ್ಕೆ ಹೋಗಿರುವ ಕಡೆ ವಿಶ್ವನಾಥ್ ಬೆಂಬಲಿಗರಿಂದ ಗೋ ಬ್ಯಾಕ್ ವಿರೋಧವೂ ಕಂಡುಬರುತ್ತದೆ.
ಆದ್ದರಿಂದ ನೇರವಾಗಿ ವಿಶ್ವನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸುಧಾಕರ್ ಅವರು ವಿಶ್ವನಾಥ್ ಅವರ ಗೃಹಕಚೇರಿಗೆ ತೆರಳಿದ್ದಾರೆ. ಆದರೆ ವಿಶ್ವನಾಥ್ ಅವರು ಮನೆಯಲ್ಲಿ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ವಿಶ್ವನಾಥ್ ಅವರನ್ನು ಫೋನಿನಲ್ಲಾದರೂ ಸಂಪರ್ಕಿಸಲು ಸುಧಾಕರ್ ಸಾಕಷ್ಟು ಪ್ರಯತ್ನಪಟ್ಟರೂ ಅವರ ಯತ್ನ ಫಲ ಕೊಡಲಿಲ್ಲ. ಕೊನೆಗೆ 45 ನಿಮಿಷ ಕಾದು ಅವರು ಹಿಂತಿರುಗಿದ್ದಾರೆ. ಫೋನು, ಮೇಸೆಜ್ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸುಧಾಕರ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
Leave A Reply