ಬಿಜೆಪಿಯಿಂದ ಮುಂಬೈ ಉತ್ತರಕ್ಕೆ ಅಚ್ಚರಿಯ ಆಯ್ಕೆ!
ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಭಾರತೀಯ ಜನತಾ ಪಾರ್ಟಿಯ ಮಾಜಿ ಮುಖಂಡ ದಿವಂಗತ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್ ಅವರ ಹೆಸರು ಕೈಬಿಟ್ಟ ಬಿಜೆಪಿ ವರಿಷ್ಠರು ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಇಡೀ ಜಗತ್ತಿನ ಗಮನ ಸೆಳೆದಿದ್ದ ಮುಂಬೈ 26/11 ದಾಳಿ ಪ್ರಕರಣದಲ್ಲಿ ಸರಕಾರಿ ವಕೀಲರಾಗಿದ್ದ ಉಜ್ವಲ್ ನಿಕ್ಕಂ ಅವರನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಲಾಗಿದೆ.
2011 ರಲ್ಲಿ ಮುಂಬೈನಲ್ಲಿ ನಡೆದ ದಾಳಿಯ ಪ್ರಕರಣದಲ್ಲಿ ಉಜ್ವಲ್ ನಿಕ್ಕಂ ಅವರು ಸರಕಾರಿ ವಕೀಲರಾಗಿ ಎಲ್ಲರ ಕೇಂದ್ರಬಿಂದು ಆಗಿದ್ದರು. ಆದರೆ ಪೂನಂ ಮಹಾಜನ್ ಅವರು ಹತ್ತು ವರ್ಷಗಳಿಂದ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಇವರು ಬಿಜೆಪಿ ಯುವಮೋರ್ಚಾದ ಮಾಜಿ ಅಧ್ಯಕ್ಷರೂ ಹೌದು. ಆದರೆ ಇತ್ತೀಚೆಗೆ ಸಂಘಟನಾತ್ಮಕವಾಗಿ ಅಷ್ಟೇನೂ ಸಕ್ರಿಯವಾಗಿಲ್ಲದ ಕಾರಣದಿಂದ ಅವರನ್ನು ಲೋಕಸಭಾ ಸ್ಥಾನದಿಂದ ಪಕ್ಷ ಕೈಬಿಡುವ ಸೂಚನೆಯನ್ನು ಪಕ್ಷ ನೀಡಿತ್ತು.
ಈ ನಡುವೆ ಪರಂಪರಾಗತವಾಗಿ ಕಾಂಗ್ರೆಸ್ ಪ್ರಬಲವಾಗಿರುವ ಕ್ಷೇತ್ರದಲ್ಲಿ ಬಿಜೆಪಿಗೆ ಇನ್ನೊಬ್ಬ ಪ್ರಬಲ ಅಭ್ಯರ್ಥಿಯ ಅವಶ್ಯಕತೆಯೂ ಇತ್ತು. ಯಾಕೆಂದರೆ ಪೂನಂ ಮಹಾಜನ್ ಗೆಲ್ಲುವ ಮೊದಲು ಅಲ್ಲಿ ಖ್ಯಾತ ಸಿನೆಮಾ ತಾರೆ ಸುನೀಲ್ ದತ್ ಪುತ್ರಿ ಪ್ರಿಯಾ ದತ್ ಎರಡು ಬಾರಿ ಗೆದ್ದು ಸಂಸದರಾಗಿದ್ದರು. ಕೊನೆಗೂ ಬಿಜೆಪಿಗೆ ಯೋಗ್ಯ ಅಭ್ಯರ್ಥಿ ಸಿಕ್ಕಿದ್ದಾರೆ. ಲೋಕಸಭಾ ಅಭ್ಯರ್ಥಿ ಆಗಲು ನಿಕ್ಕಂ ಕೊನೆಗೂ ಹಲವು ಸುತ್ತಿನ ಮಾತುಕತೆಯ ಬಳಿಕ ಒಪ್ಪಿಗೆ ನೀಡಿದ್ದು ಬಿಜೆಪಿಗೆ ಸಮಾಧಾನ ತಂದಿದೆ.
ಈ ಕ್ಷೇತ್ರದಲ್ಲಿಈ ಬಾರಿ ಕಾಂಗ್ರೆಸ್ ಧಾರಾವಿ ಶಾಸಕಿ ವರ್ಷಾ ಗಾಯಕ್ವಾಡ್ ಅವರನ್ನು ಕಣಕ್ಕೆ ಇಳಿಸಿದೆ. ಮುಂಬೈ ಉತ್ತರಕ್ಕೆ ಮೇ 20 ರಂದು ಐದನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
Leave A Reply