ಕರ್ನಾಟಕದಲ್ಲಿ ಶಾಸಕರಿಗೆ ಸಂಬಳ ಕೊಡಲು ಹಣ ಇಲ್ವಾ?
ಗ್ಯಾರಂಟಿ ಯೋಜನೆ ಜಾರಿ ಮಾಡಿ ಖಜಾನೆ ಖಾಲಿಯಾಗಿದೆ. ಇದ್ರಿಂದಾಗಿ ಶಾಸಕರ ಸಂಬಳವನ್ನು ಕೊಡೋದಕ್ಕೂ ಆಗ್ತಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ, ನರಗುಂದದ ಶಾಸಕ ಸಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸರಕಾರದ ಖಜಾನೆ ಖಾಲಿಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ, ಸರಕಾರ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಅವರು ಆರ್ಥಿಕ ತಜ್ಞರಾಗಿ ಈ ಗ್ಯಾರಂಟಿಗಳ ವಿಷಯದಲ್ಲಿ ಹೀಗೆ ಬೇಕಾಬಿಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಘೋಷಣೆ ಕೂಗಬಾರದಿತ್ತು. ರಾಜ್ಯದ ಆರ್ಥಿಕತೆ ವಿಷಯದಲ್ಲಿ ಕಾಂಪ್ರಮೈಸ್ ಯಾಕೆ ಮಾಡಿಕೊಂಡರು ಎನ್ನುವುದು ಗೊತ್ತಾಗುತ್ತಿಲ್ಲ. ಬಡವರಿಗೆ ಭಾಗ್ಯಗಳನ್ನು ಕೊಡಲು ನಮ್ಮ ವಿರೋಧವಿಲ್ಲ. ಆದರೆ ಇದಕ್ಕೆ ತಗಲುವ ಖರ್ಚು ವೆಚ್ಚ, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಬೇಕಾಗುವ ಅನುದಾನ ಎಲ್ಲವನ್ನು ಲೆಕ್ಕ ಹಾಕಬೇಕಿತ್ತು ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಮಯದಲ್ಲಿ 25 ಸಾವಿರ ಕೋಟಿ ರೂಪಾಯಿ ಖಜಾನೆಯಲ್ಲಿತ್ತು. ಅದೀಗ ಖಾಲಿಯಾಗಿ 1 ಲಕ್ಷ 85 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಸ್ ಫ್ರೀ ಎಂದರು. ಈಗ 10 ಬಸ್ ಓಡುತ್ತಿದ್ದ ಕಡೆ ನಾಲ್ಕು ಮಾತ್ರ ಓಡುವ ಪರಿಸ್ಥಿತಿ ಇದೆ. ಬಸ್ ರಿಪೇರಿ ಮಾಡಲು ಹಣವಿಲ್ಲ. ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ ಎಂದು ಶಕ್ತಿ ಯೋಜನೆಯ ಗ್ರಹಚಾರವನ್ನು ಕೂಡ ಬಯಲಿಗಿಟ್ಟಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಡಿವೈಡ್ ಆಗುತ್ತದೆ. ಸೋಲಿನ ಹೊಣೆ ಹೊತ್ತು ಸಿದ್ಧರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ. ಯಾವುದೇ ಸಂದರ್ಭ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರಬಹುದು. ನಾವು ಮಾನಸಿಕವಾಗಿ ತಯಾರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave A Reply