ಪ್ರಜ್ವಲ್ ಬ್ಯಾಂಕ್ ಖಾತೆ ಸೀಝ್ ಮಾಡಲು ಎಸ್ ಐಟಿ ನಿರ್ಧಾರ!
ಪೆನ್ ಡ್ರೈವ್ ಪ್ರಕರಣದ ಪ್ರಧಾನ ಆರೋಪಿ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಬರುವುದನ್ನು ಮುಂದೂಡುತ್ತಿರುವ ಈ ಸಂದರ್ಭದಲ್ಲಿ ಅವರನ್ನು ಎಲ್ಲಾ ಕಡೆಗಳಿಂದಲೂ ಆರ್ಥಿಕವಾಗಿ ಕಟ್ಟಿ ಹಾಕಲು ವಿಶೇಷ ತನಿಖಾ ದಳ ಮುಂದಾಗಿದೆ. ಒಬ್ಬ ಆರೋಪಿ ತನಿಖೆಯನ್ನು ಎದುರಿಸಲು ಮುಂದಾಗದ ಪರಿಸ್ಥಿತಿಯಲ್ಲಿ ಅವರಿಗೆ ಇರುವ ಹಣಕಾಸಿನ ಮೂಲಗಳನ್ನು ಬಂದ್ ಮಾಡಿದರೆ ಆಗ ಆ ವ್ಯಕ್ತಿ ಬೇರೆ ದಾರಿ ಕಾಣದೇ ತಾನಾಗಿಯೇ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಇದು ಬಹಳ ಹಳೆಯ ವಿಧಾನವಾದರೂ ಎಂದೆಂದಿಗೂ ಪರಿಣಾಮಕಾರಿಯಾಗಬಲ್ಲ ಸಾಧನವಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣನವರಿಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲಾಗಿದ್ದು, ಅವರಿಗೆ ಸೇರಿದ ಬ್ಯಾಂಕ್ ಅಕೌಂಟ್ ಗಳನ್ನು ಫ್ರೀಝ್ ಮಾಡುವ ಪ್ರಕ್ರಿಯೆಗೆ ಅಧಿಕಾರಿಗಳು ತಯಾರಾಗಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಜ್ವಲ್ ವಿದೇಶದಲ್ಲಿರುವುದರಿಂದ ಅವರ ಅಲ್ಲಿನ ಖರ್ಚಿಗೆ ಇಲ್ಲಿಂದ ಅವರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಿರುವ ಸಾಧ್ಯತೆಗಳಿರುತ್ತವೆ. ಹಾಗೆ ಯಾರಾದರೂ ಹಣ ಹಾಕಿದ್ದಾರಾ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎಸ್ ಐಟಿಗೆ ಅಧಿಕೃತವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಪ್ರಜ್ವಲ್ ಏಳು ಖಾತೆಗಳನ್ನು ಹೊಂದಿದ್ದು, ಅದರ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಪ್ರಜ್ವಲ್ ತಲೆಮರೆಸಿಕೊಂಡು ತಿಂಗಳಾಗುತ್ತಾ ಬಂದಿರುವುದರಿಂದ ಈ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಸದ್ಯ ಪೆನ್ ಡ್ರೈವ್ ಹಂಚಿರುವ ಹಿಂದಿನ ಕಾಣದ ಕೈಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪ್ರಕರಣ ಗರಿಗೆದರುತ್ತಿದ್ದಂತೆ ಎಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನದಂದು ವಿದೇಶಕ್ಕೆ ಹಾರಿರುವ ಪ್ರಜ್ವಲ್ ಯಾವಾಗ ಭಾರತಕ್ಕೆ ಮರಳುತ್ತಾರೆ ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲ. ಈಗಾಗಲೇ ಜರ್ಮನಿಯಿಂದ ರಿಟನ್ ಟಿಕೆಟ್ ಅವರು ಬುಕ್ ಮಾಡಿದ್ದರೂ ಅವರು ಅದನ್ನು ಬಳಸದೇ ಇರುವುದು ಮತ್ತಷ್ಟು ಊಹಾಪೋಹಾಕ್ಕೆ ಕಾರಣವಾಗಿದೆ. ಅವರಿಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನೂ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿ ರೆಡ್ ಕಾರ್ನರ್ ನೋಟಿಸ್ ನೀಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎನ್ನುವ ಮಾಹಿತಿ ದೊರಕಿದೆ.
Leave A Reply