ವಿಚ್ಚೇದಿತ ಮುಸ್ಲಿಂ ಮಹಿಳೆಯರಿಗೂ ಜೀವನಾಂಶದ ಹಕ್ಕಿದೆ – ಸುಪ್ರೀಂ ಕೋರ್ಟ್
ಗಂಡನಿಂದ ವಿಚ್ಚೇದನಕ್ಕೆ ಒಳಗಾಗಿರುವ ಮುಸ್ಲಿಂ ಮಹಿಳೆ ಜೀವನಾಂಶವನ್ನು ಪಡೆಯಲು ಹಕ್ಕು ಹೊಂದಿದ್ದಾಳೆ ಎಂದು ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಮಹತ್ತರ ತೀರ್ಪನ್ನು ನೀಡಿದೆ. ಅಪರಾಧಿಕ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ಜೀವನ ನಿರ್ವಹಣೆಗೆ ವಿಚ್ಚೇದಿತ ಮಹಿಳೆ ಪರಿತ್ಯಕ್ತ ಪತಿಯಿಂದ ಹಣವನ್ನು ಪಡೆದುಕೊಳ್ಳಲು ಹಕ್ಕು ಹೊಂದಿದ್ದಾಳೆ. ಇದರಲ್ಲಿ ಯಾವುದೇ ಧರ್ಮ ಹೊರತಾಗಿಲ್ಲ. ಎಲ್ಲಾ ಧರ್ಮದ ಮದುವೆಯಾದ ಮತ್ತು ಮದುವೆಯಾಗದೇ ಒಟ್ಟಿಗಿದ್ದ ಮಹಿಳೆಯರು ಏಕಪ್ರಕಾರವಾಗಿ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಜಸ್ಟೀಸ್ ಬಿ ವಿ ನಾಗರತ್ನ ಹಾಗೂ ಜಸ್ಟೀಸ್ ಅಗಸ್ಟೈನ್ ಜಾರ್ಜ್ ಮಾಸಿಹ ಹೇಳಿದ್ದಾರೆ.
ಜೀವನಾಂಶವನ್ನು ವಿಚ್ಚೇದಿತ ಪತ್ನಿಗೆ ನೀಡುವುದು ಅಂದರೆ ದಾನ ನೀಡುವುದಲ್ಲ, ಅದು ಅವರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಹಿಳೆಯನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಲಿಂಗ ಸಮಾನತೆಯ ಸೂತ್ರವನ್ನು ಅಳವಡಿಸಿ ಇದನ್ನು ಯಾವುದೇ ಧರ್ಮದ ಸೂತ್ರಕ್ಕೆ ಕಟ್ಟು ಹಾಕದೇ ಪರಿಶೀಲಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
“ಕೆಲವು ಗಂಡಂದಿರಿಗೆ ಪತ್ನಿಯಾದವಳು ಓರ್ವ ಗೃಹಿಣಿಯಾಗಿ ತಮ್ಮ ಮೇಲೆ ಎಲ್ಲಾ ರೀತಿಯಲ್ಲಿ ಅವಲಂಬಿತಳಾಗಿದ್ದಾಳೆ ಎನ್ನುವ ಅರಿವೇ ಇರುವುದಿಲ್ಲ. ಆದ್ದರಿಂದ ಇನ್ನಾದರೂ ಭಾರತೀಯ ಪುರುಷರು ಗೃಹಿಣಿಯ ತ್ಯಾಗ ಮತ್ತು ಅರ್ಪಣಾ ಮನೋಭಾವವನ್ನು ಪುರಸ್ಕರಿಸಿ ಆಕೆಗೂ ಉತ್ತಮ ಬಾಳು ಸಿಗಲು ಯೋಚಿಸಬೇಕು” ಎಂದು ನ್ಯಾಯಪೀಠ ಹೇಳಿದೆ.
Leave A Reply