ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡುವವರು ಈ ವಿಷಯ ಗಮನಿಸಿ!
ವಸ್ತ್ರ ಸಂಹಿತೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಶೃಂಗೇರಿ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯಾ ಶ್ರೀ ಶಾರದಾ ಪೀಠದಲ್ಲಿರುವ ಶ್ರೀ ಶಾರದಾ ದೇವಿಯ ದರ್ಶನ ಹಾಗೂ ಶ್ರೀಗಳ ಪಾದಪೂಜೆಗೆ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಬರಲು ಆಡಳಿತಾಧಿಕಾರಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ಗಂಡಸರು ಧೋತಿ ಮತ್ತು ಶಲ್ಯ ಮತ್ತು ಉತ್ತರೀಯ ಧರಿಸಬೇಕು. ಹೆಂಗಸರು ಸೀರೆ – ರವಿಕೆ, ಸಲ್ದಾರ್ ಕಮೀಝ್, ದುಪ್ಪಟ, ಲಂಗ ದಾವಣಿ ತೊಟ್ಟು ಬರಬೇಕು ಎಂದು ಮಾಹಿತಿ ನೀಡಲಾಗಿದೆ. ಯಾರಾದರೂ ಈ ನಿಯಮ ಉಲ್ಲಂಘಿಸಿ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟು ಬಂದರೆ ಅರ್ಧ ಮಂಟಪದ ತನಕ ಬರಬಹುದಾಗಿದೆ. ಆ ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯರು ದೇವಸ್ಥಾನಗಳಿಗೆ ಬರುವಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದರೆ ಆಗ ಅಲ್ಲಿ ಸಕರಾತ್ಮಕ ಭಾವನೆ ಬರುವುದು ಮಾತ್ರವಲ್ಲ, ಎಲ್ಲಾ ಭಕ್ತರಿಗೂ ಏಕಾಗ್ರತೆ ಮತ್ತು ಶಾಂತಚಿತ್ತತೆ ಮನಸ್ಸಿನಲ್ಲಿ ಮೂಡುತ್ತದೆ.
Leave A Reply