ಕೊಲ್ಕೊತ್ತಾ ಪ್ರಕರಣದ ತನಿಖೆಗೆ ಸಿಬಿಐ ಆಫೀಸರ್ ಸೀಮಾ ಪಹುಜಾ ನೇಮಕ! ಯಾರಿವರು?
ಕ್ರೈಂ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಇದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡ ಚಾಣಾಕ್ಷ ಅಧಿಕಾರಿ ಯಾರು ಎನ್ನುವ ಪ್ರಶ್ನೆ ಉದ್ಭವಿಸಿದರೆ ಅದಕ್ಕೆ ಸಂಶಯವೇ ಇಲ್ಲದೇ ಸಿಗುವ ಮೊದಲ ಉತ್ತರ ಸೀಮಾ ಪಹುಜಾ. ಇಂತಹ ಪ್ರಕರಣಗಳಲ್ಲಿ ಯಾವುದೇ ಸಂಶಯಗಳಿಗೆ ಆಸ್ಪದೆ ನೀಡದೇ ತನಿಖೆ ಮಾಡಬಲ್ಲ ಅಧಿಕಾರಿ ಸೀಮಾ ಪಹುಜಾ. ಅಂತಹ ಅಧಿಕಾರಿಯನ್ನೇ ಕೊಲ್ಕೋತ್ತಾದ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿ ಕಳುಹಿಸಿಕೊಡಲಾಗಿದೆ. ಯಾಕೆಂದರೆ ಕೊಲ್ಕೊತ್ತಾದ ಪ್ರಕರಣ ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾಗಿಲ್ಲ. ಅದರ ಬುಡದ ತನಕ ಹೋದರೆ ಮಾತ್ರ ಈ ಪ್ರಕರಣದ ಇಡೀ ಜಾಡು ಹಿಡಿಯಲು ಸಾಧ್ಯ. ಇಂತಹ ಸಂದ್ಧಿಗ್ನ ಪ್ರಕರಣಗಳಲ್ಲಿ 2007 ರಿಂದ 2018 ರ ನಡುವೆ ಕಾರ್ಯ ನಿರ್ವಹಿಸಿ ಅನುಭವ ಇರುವ ಸೀಮಾ ಈ ಪ್ರಕರಣಕ್ಕೂ ಸೂಕ್ತ ಎಂದು ಸಿಬಿಐ ಉನ್ನತ ಅಧಿಕಾರಿಗಳು ನಿರ್ಧರಿಸಿ ಈ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಇಂತಹ ಜಟಿಲ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ ಕಾರಣಕ್ಕೆ ಸೀಮಾ ಅವರಿಗೆ ಎರಡು ಬಾರಿ ಬಂಗಾರದ ಪದಕ ನೀಡಿ ಗೌರವಿಸಲಾಗಿದೆ.
ಶಿಮ್ಲಾದ ನಡೆದಿದ್ದ “ಗುಡಿಯಾ” ಪ್ರಕರಣದಲ್ಲಿ ವೈಜ್ಞಾನಿಕ ವಿಧಾನವನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿ ಇಲಾಖೆಯಲ್ಲಿ ಶಹಬ್ಬಾಷ್ ಗಿರಿ ಪಡೆದುಕೊಂಡಿದ್ದ ಸೀಮಾ ಸಿಬಿಐಯಲ್ಲಿ ಹಂತಹಂತವಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಒಂದು ಹಂತದಲ್ಲಿ ವೈಯಕ್ತಿಕ ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದ ಸ್ವಯಂ ನಿವೃತ್ತಿಯನ್ನು ಪಡೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದ ಸೀಮಾ ಅವರನ್ನು ಅಂದಿನ ಸಿಬಿಐ ನಿರ್ದೇಶಕರು ಉದ್ಯೋಗದಿಂದ ಹಿಂದೆ ಸರಿಯದಂತೆ ಮನ ಒಲಿಸಿದ್ದರು. ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದೇ ತನ್ನ ಕೆಲಸ ನಿರ್ವಹಿಸಿ ಕೈ ಹಾಕಿದ ಪ್ರಕರಣದಲ್ಲಿ ಯಶಸ್ಸು ಕಾಣುವುದೇ ಸೀಮಾ ಅವರ ಚಾಕಚಕ್ಯತೆ.
ಕೊಲ್ಕೊತ್ತಾ ಪ್ರಕರಣ ಇಡೀ ರಾಷ್ಟ್ರದಲ್ಲಿ ಸುದ್ದಿಯಾಗಿ, ವ್ಯಾಪಕ ಪ್ರತಿಭಟನೆಗಳು ನಡೆದು ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ಸಂದರ್ಭದಲ್ಲಿ ಒಬ್ಬರು ದಕ್ಷ ಅಧಿಕಾರಿಯ ಅವಶ್ಯಕತೆ ಇದ್ದೇ ಇತ್ತು. ಹತ್ರಾಸ್ ಪ್ರಕರಣದಲ್ಲಿಯೂ ಸೀಮಾ ಅವರೇ ಮುಂಚೂಣಿಯಲ್ಲಿ ನಿಂತು ಆರೋಪಿಗಳಿಗೆ ಸಿಬಿಐ ತನಿಖೆಯ ರುಚಿ ತೋರಿಸಿದ್ದರು. ಅಂತಹ ದಿಟ್ಟೆ ಈಗ ಕೊಲ್ಕೊತ್ತಾದ ಪ್ರಕರಣದಲ್ಲಿಯೂ ಸೂಕ್ತ ಕ್ರಮಗಳನ್ನು ಯಶಸ್ವಿಯಾಗಲಿ ಎನ್ನುವುದು ಎಲ್ಲಾ ಸಜ್ಜನರ ಪ್ರಾರ್ಥನೆ.
Leave A Reply