ಕೂದಲೆಳೆ ಎಂದವರು ಈಗ 15 ಸಾವಿರ ಅಂತರದ ಗೆಲುವು ಎನ್ನುತ್ತಿರುವುದೇಕೆ?
ರಾಜ್ಯದಲ್ಲಿ ಮೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಅತೀ ಹೆಚ್ಚು ಕುತೂಹಲ ಎಲ್ಲಾ ಕಡೆ ಕಾಣುತ್ತಿರುವುದು ಚೆನ್ನಪಟ್ಟಣದ ಬಗ್ಗೆ. ಸಂಡೂರು ಮತ್ತು ಶಿಗ್ಗಾವಿಯಲ್ಲಿ ಉಪಚುನಾವಣೆ ಆಗಿದೆಯೇ ಇಲ್ವೋ ಎನ್ನುವ ಮಟ್ಟಿಗೆ ಚನ್ನಪಟ್ಟಣ ಇಡೀ ರಾಜ್ಯವನ್ನು ಆವರಿಸಿಕೊಂಡು ಬಿಟ್ಟಿದೆ. ಇದೇ ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದ್ದು, ರಾಜ್ಯ ರಾಜಕೀಯದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಮತದಾನದ ದಿನ ಒಂದಿಷ್ಟು ನೀರಸ ಹೇಳಿಕೆ ನೀಡುತ್ತಿದ್ದ ಸಿ.ಪಿ.ಯೋಗೇಶ್ವರ್ ಈಗ ಸಡನ್ ಫಾರ್ಮಿಗೆ ಬಂದಂತೆ ಕಾಣುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಮುಂದೆ ತಾವೇ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿವೈ ಪ್ರಕಾರ ಅವರು ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ.
ಯೋಗೇಶ್ವರ್ ಅವರು ಭಾಜಪಾ ಶಾಸಕ ಎಸ್ ಟಿ. ಸೋಮಶೇಖರ್ ಜೊತೆ ತೆರಳಿ ಸಿಎಂ ಹಾಗೂ ಡಿಸಿಎಂ ಜೊತೆ ಕುಳಿತು ಹೋಬಳಿವಾರು ಲೆಕ್ಕ ಹೇಳಿದ್ದಾರೆ. ಯೋಗೇಶ್ವರ್ ಅಂಕಿ ಅಂಶಗಳ ಪ್ರಕಾರ ಏನಿಲ್ಲ ಎಂದರೂ ಹದಿನೈದು ಸಾವಿರ ಅಂತರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಆದರೆ ಇದು ವಾಸ್ತವದಲ್ಲಿ ನಿಜವಾಗುತ್ತಾ ಎನ್ನುವುದು ಈಗ ಇರುವ ಪ್ರಶ್ನೆ.
ಒಂದು ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ “ಕರಿಯ” ಹೇಳಿಕೆ ನೀಡದಿದ್ದರೆ ವಿಷಯವೇ ಬೇರೆ ಇರುತ್ತಿತ್ತು. ಆದರೆ ಆ ಹೇಳಿಕೆ ಒಕ್ಕಲಿಗ ಸಮುದಾಯವನ್ನು ಬೇಸರಕ್ಕೆ ಈಡು ಮಾಡಿದ್ದು, ಅದು ಎಷ್ಟರಮಟ್ಟಿಗೆ ಯೋಗೇಶ್ವರ್ ವಿರುದ್ಧ ಅಲೆಯಾಗಿ ಪರಿವರ್ತನೆಗೊಳ್ಳುತ್ತದೆ ಎನ್ನುವುದು ಈಗ ಇರುವ ವಿಷಯ. ಒಂದು ವೇಳೆ ಒಕ್ಕಲಿಗ ಸಮುದಾಯದ ಜನರು ಆ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಜಾತ್ಯತೀತ ಜನತಾದಳದ ಬೆನ್ನಿಗೆ ನಿಂತರೆ ಆಗ ನಿಜವಾದ ಫೈಟ್ ನಡೆದಿದೆ ಎಂದೇ ಲೆಕ್ಕ. ಹಾಗೆ ಆಗಿರುತ್ತಾ? ಯೋಗೇಶ್ವರ್ ಆರನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಾರಾ? ನಿಖಿಲ್ ಚುನಾವಣಾ ರಾಜಕಾರಣದಲ್ಲಿ ಚೊಚ್ಚಲ ಗೆಲುವು ದಾಖಲಿಸುತ್ತಾರಾ? 23 ಕ್ಕೆ ಉತ್ತರ ಸಿಗಲಿದೆ.
Leave A Reply