ಬಾಯಿಯಲ್ಲಿ ನವಜಾತ ಶಿಶು ಕಚ್ಚಿ ಓಡಿದ ನಾಯಿ!
ಪಶ್ಚಿಮ ಬಂಗಾಲದ ಸೋನಾಮುಖಿಯಲ್ಲಿ ನಡೆದ ಘಟನೆ ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಭಾಜಪಾ ಮುಖಂಡ ಅಮಿತ್ ಮಾಳವೀಯ ಅವರು ಫೋಟೋ ಹಾಕಿ ನೀಡಿರುವ ಮಾಹಿತಿ ನಿಜಕ್ಕೂ ತುಂಬಾ ನೋವು ತರುವಂತದ್ದು. “ಉತ್ತಮ ವೈದ್ಯಕೀಯ ಸೌಲಭ್ಯ ಇದೆ ಎಂದು ಎದೆಯುಬ್ಬಿಸಿ ಹೇಳಿಕೊಂಡು ಬರುತ್ತಿರುವ ಮಮತಾ ಬ್ಯಾನರ್ಜಿಯವರೇ, ನಿಮ್ಮ ರಾಜ್ಯದಲ್ಲಿ ಗರ್ಭಿಣಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ ಆಗುವ ಪರಿಸ್ಥಿತಿ ಬಂದಿದೆ. ಆಕೆಗೆ ಅಲ್ಲಿ ಯಾವುದೇ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿಗಳು ಇರದೇ ಆಕೆ ಒದ್ದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ದುರಾದೃಷ್ಟವಶಾತ್ ತಾಯಿಯಿಂದ ಮಗು ಭೂಮಿಗೆ ಬರುವಾಗ ಅಲ್ಲಿ ಬೀದಿಬದಿ ನಾಯಿಯೊಂದು ಅಡ್ಡಾಡುತ್ತಿದ್ದು, ಅದು ಮಗುವನ್ನು ಬಾಯಿಯಲ್ಲಿ ಕಚ್ಚಿ ಓಡಿಹೋಗಿದೆ. ಇದು ನಿಜಕ್ಕೂ ಚಿಂತಾಜನಕವಾಗಿರುವ ಘಟನೆ” ಎಂದು ಅವರು ಬರೆದುಕೊಂಡಿದ್ದಾರೆ.
ನವೆಂಬರ್ 18 ರಂದು ಈ ಘಟನೆ ನಡೆದಿದೆ. ಆರು ತಿಂಗಳ ಅವಧಿಪೂರ್ವ ಹೆರಿಗೆ ಆಗಿದ್ದು, ಗರ್ಭಿಣಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಮೂತ್ರ ತರಲು ವೈದ್ಯರು ಸೂಚಿಸಿದಾಗ ಆಕೆ ಶೌಚಾಲಯಕ್ಕೆ ಹೋಗಿದ್ದಳು. ಆಕೆಯೊಂದಿಗೆ ಸಂಬಂಧಿಕ ಮಹಿಳೆಯೊಬ್ಬಳು ಇದ್ದಳು. ಶೌಚಾಲಯದಲ್ಲಿ ಅಚಾನಕ್ ಆಗಿ ಹೊಟ್ಟೆ ನೋವು ಜಾಸ್ತಿಯಾಗಿ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಆಕೆಯ ಜೊತೆಗಿದ್ದ ಮಹಿಳೆ ವೈದ್ಯರನ್ನು ಮತ್ತು ಆಸ್ಪತ್ರೆಯ ಸಿಬ್ಬಂದಿಗಳನ್ನು ಕರೆಯಲು ಓಡಿದ್ದಾಳೆ. ಆದರೆ ಆಕೆಯ ಮನವಿಗೆ ಯಾರೂ ಕೂಡ ಸೂಕ್ತವಾಗಿ ಸ್ಪಂದಿಸಲಿಲ್ಲ. ಆಕೆ ಮತ್ತೊಮ್ಮೆ ಓಡಿ ಶೌಚಾಲಯಕ್ಕೆ ಬಂದಾಗ ಮಗು ಕಾಣೆಯಾಗಿತ್ತು. ಮಗು ಎಲ್ಲಿ ಎಂದು ಅತ್ತಿತ್ತ ಹುಡುಕಿದಾಗ ನಾಯಿಯೊಂದು ಬಾಯಿಯಲ್ಲಿ ಕಚ್ಚಿ ಓಡುತ್ತಿರುವುದು ಎಲ್ಲರಿಗೂ ಕಂಡುಬಂದಿದೆ. ಇನ್ನು ಅಲ್ಲಿರುವ ಜನರು ಹೇಳುವ ಪ್ರಕಾರ ಆ ನಾಯಿ ಈ ಘಟನೆ ಆದ ನಂತರವೂ ಅಲ್ಲಿಯೇ ಸುತ್ತಾಡುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.
Leave A Reply