ಗೂಗಲ್ ಮ್ಯಾಪ್ ಎಡವಟ್ಟು, ರಾತ್ರಿಯೀಡಿ ಕಾಡಿನಲ್ಲಿ ಕಳೆದ ಕುಟುಂಬ!

ಒಂದು ಕಾಲದಲ್ಲಿ ಎಲ್ಲಿಯಾದರೂ ಅಪರಿಚಿತ ಜಾಗಕ್ಕೆ ಹೋಗಬೇಕಾದರೆ ದಾರಿಯಲ್ಲಿ ಸಿಕ್ಕಿದವರನ್ನೆಲ್ಲಾ ಕೇಳಿ ಕೇಳಿ ಆ ಪ್ರದೇಶವನ್ನು ತಲುಪಬೇಕಾಗಿತ್ತು. ಇದರಿಂದ ಅನೇಕ ಬಾರಿ ಸಮಯವೂ ವ್ಯರ್ಥವಾಗುತ್ತಿತ್ತು. ಇನ್ನೊಂದಿಷ್ಟು ಸಲ ಅವರು ಹೇಳಿದ್ದು ಅರ್ಥವಾಗದೇ, ಗೊಂದಲಕ್ಕೆ ಬಿದ್ದು ಚಾಲಕರು ತಪ್ಪು ದಾರಿಯಲ್ಲಿಯೂ ಹೋಗುತ್ತಿದ್ದರು. ಆದರೆ ನಂತರ ಗೂಗಲ್ ಮ್ಯಾಪ್ ತರಹದ್ದು ಬಂದ ಬಳಿಕ ನಮ್ಮ ಮೊಬೈಲಿನಲ್ಲಿ ಲೋಕೇಶನ್ ಹಾಕಿ ಅದರ ಸೂಚನೆಯಂತೆ ದಾರಿಯನ್ನು ಕ್ರಮಿಸಬಹುದಿತ್ತು. ಆದರೆ ಗೂಗಲ್ ಮ್ಯಾಪ್ ಅನ್ನು ಪ್ರತಿ ಸಲ ನಂಬಬಹುದೇ ಎನ್ನುವ ಪ್ರಶ್ನೆ ಈಗ ಕೆಲವು ದಿನಗಳಿಂದ ನಿರಂತರವಾಗಿ ಉದ್ಭವವಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದಲ್ಲಿ ಮದುವೆ ಮಂಟಪಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಮೂವರು ಪ್ರವಾಹಕ್ಕೆ ಅರ್ಧ ಕೊಚ್ಚಿ ಹೋಗಿದ್ದ ಸೇತುವೆಯ ಮೇಲೆ ಗೂಗಲ್ ಮ್ಯಾಪ್ ನಂಬಿ ಹೋದ ಪರಿಣಾಮ ಅರ್ಧ ಸೇತುವೆಯ ಬಳಿಕ ಸೀದಾ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕರ್ನಾಟಕದ ಬೆಳಗಾವಿಯ ದಟ್ಟಾರಣ್ಯದ ನಡುವೆ ಕುಟುಂಬವೊಂದು ಭಯದಲ್ಲಿಯೇ ರಾತ್ರಿ ಕಳೆದ ಘಟನೆ ನಡೆದಿದೆ.
ಬಿಹಾರ ಮೂಲದ ರಣಜಿತ್ ದಾಸ್ ಎನ್ನುವವರ ಕುಟುಂಬ ಕಾರಿನಲ್ಲಿ ಗೋವಾಕ್ಕೆ ತೆರಳುತ್ತಿತು. ಅವರು ಕಾರಿನಲ್ಲಿ ಹೋಗುತ್ತಾ ದಾರಿ ತಿಳಿಯಲು ಗೂಗಲ್ ಮ್ಯಾಪ್ ಹಾಕಿದ್ದಾರೆ. ಅವರಿಗೆ ಅದು ಬೆಳಗಾವಿಯ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಸಮೀಪದ ದಾರಿ ತೋರಿಸಿದೆ. ಹೀಗೆ ಬಿಹಾರದ ಕುಟುಂಬ ಕಾರಿನಲ್ಲಿ ಬೆಳಗಾವಿಯ ಖಾನಾಪುರ ಭೀಮಗಢ ಅರಣ್ಯದ ಒಳಗೆ ಸುಮಾರು 7 ರಿಂದ 8 ಕಿ.ಲೋ ಮೀಟರ್ ದೂರ ಒಳಗೆ ಹೋಗಿದೆ. ಬೆಳಗಾವಿಯ ದಟ್ಟಾರಣ್ಯದ ಒಳಗೆ ಹೋಗುತ್ತಿದ್ದಂತೆ ಕತ್ತಲು ಕವಿದ ಕಾರಣ ಅವರಿಗೆ ವಾಪಾಸು ಬರಲು ಹೆದರಿಕೆ ಆಗಿದೆ. ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಕೂಡ ಸಿಗುವುದು ನಿಂತು ಹೋಗಿದೆ. ಕಾರಿನಲ್ಲಿ ಇಡೀ ಕುಟುಂಬ ಹೆದರಿಕೆಯಿಂದ ಇಡೀ ರಾತ್ರಿ ಕಳೆದಿದೆ.
ಒಂದಿಷ್ಟು ಬೆಳಕಾದ ಬಳಿಕ ನಾಲ್ಕು ಕಿಲೋ ಮೀಟರ್ ಹಿಂದಕ್ಕೆ ಬಂದ ಬಳಿಕ ಮೊಬೈಲ್ ನೆಟ್ ವರ್ಕ್ ಸಿಕ್ಕಿದೆ. ತಕ್ಷಣ ಸಹಾಯಕ್ಕಾಗಿ ಪೊಲೀಸರಿಗೆ (112) ನಂಬರಿಗೆ ಕರೆ ಮಾಡಿದ್ದಾರೆ. ಪೊಲೀಸರಿಗೆ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಡಿನಿಂದ ಕುಟುಂಬಸ್ಥರನ್ನು ಸುರಕ್ಷಿತವಾಗಿ ಗೋವಾಕ್ಕೆ ಹೋಗುವ ಮುಖ್ಯ ರಸ್ತೆಗೆ ತಂದು ತಲುಪಿಸಿದ್ದಾರೆ. ಜೀವ ಉಳಿದ ಖುಷಿಯಲ್ಲಿ ಆ ಕುಟುಂಬ ಪೊಲೀಸರಿಗೆ ಧನ್ಯವಾದ ಅರ್ಪಿಸಿ ತೆರಳಿದೆ.